NASAದಲ್ಲಿ ಮಿಂಚಿದ ಭಾರತೀಯ ಮೂಲದ Anil Menon; ಮೊದಲ ಬಾಹ್ಯಾಕಾಶ ಯಾನಕ್ಕೆ ಸಜ್ಜು, ಜುಲೈ 14ರಂದು ಉಡಾವಣೆ..!

2014ರಲ್ಲಿ ನಾಸಾಗೆ ಫ್ಲೈಟ್ ಸರ್ಜನ್ ಆಗಿ ಸೇರ್ಪಡೆಯಾದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ವೈದ್ಯಕೀಯ ಬೆಂಬಲ ನೀಡುತ್ತಿದ್ದರು.
Anil Menon
ಅನಿಲ್ ಮೆನನ್
Updated on

ವಾಷಿಂಗ್ಟನ್: ಭಾರತೀಯ ಮೂಲದ ನಾಸಾ (NASA) ಗಗನಯಾತ್ರಿ, ತುರ್ತು ವೈದ್ಯಕೀಯ ತಜ್ಞ ಹಾಗೂ ಅಮೆರಿಕದ ಸ್ಪೇಸ್ ಫೋರ್ಸ್ ಕರ್ನಲ್ ಅನಿಲ್ ಮೆನನ್ ಅವರು ತಮ್ಮ ಮೊದಲ ಬಾಹ್ಯಾಕಾಶ ಯಾನಕ್ಕೆ ಸಜ್ಜಾಗಿದ್ದಾರೆ.

ಜುಲೈ 14ರಂದು ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕಡೆಗೆ ಸುಮಾರು ಎಂಟು ತಿಂಗಳ ಮಿಷನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

49 ವರ್ಷದ ಅನಿಲ್ ಮೆನನ್ ಅವರು ಕಜಕಿಸ್ತಾನದ ಬೈಕೊನೂರ್ ಕಾಸ್ಮೋಡ್ರೋಮ್ನಿಂದ ರಷ್ಯಾದ ರೋಸ್ಕೋಸ್ಮೋಸ್ ಸೊಯುಜ್ MS-29 ಬಾಹ್ಯಾಕಾಶ ನೌಕೆಯಲ್ಲಿ ಉಡಾವಣೆಯಾಗಲಿದ್ದಾರೆ.

ಅವರೊಂದಿಗೆ ರಷ್ಯಾದ ಗಗನಯಾತ್ರಿಗಳಾದ ಪಿಯೊಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಸಹ ಈ ಮಿಷನ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಾಚರಣೆ ಸುಮಾರು ಎಂಟು ತಿಂಗಳು ನಡೆಯುವ ನಿರೀಕ್ಷೆಯಿದೆ.

ಅನಿಲ್ ಮೆನನ್ ಅವರು ಅಮೆರಿಕದ ಮಿನಿಯಾಪೊಲಿಸ್‌ನಲ್ಲಿ ಭಾರತೀಯ ಮತ್ತು ಉಕ್ರೇನಿಯನ್ ವಲಸಿಗ ಪೋಷಕರ ಪುತ್ರರಾಗಿದ್ದಾರೆ. ವೈದ್ಯಕೀಯ, ಸೇನಾ ಸೇವೆ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ. ಅಮೆರಿಕ ವಾಯುಪಡೆಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು, ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ ಕಾರ್ಯಾಚರಣೆಯ ಭಾಗವಾಗಿ ಅಫ್ಘಾನಿಸ್ತಾನದಲ್ಲೂ ಸೇವೆ ಸಲ್ಲಿಸಿದ್ದರು.

ಇದರ ಜೊತೆಗೆ, ಹಿಮಾಲಯನ್ ರೆಸ್ಕ್ಯೂ ಅಸೋಸಿಯೇಷನ್ ಮೂಲಕ ಎವರೆಸ್ಟ್ ಪರ್ವತಾರೋಹಿಗಳಿಗೆ ವೈದ್ಯಕೀಯ ನೆರವು ನೀಡುವ ಕೆಲಸದಲ್ಲೂ ಅವರು ತೊಡಗಿಸಿಕೊಂಡಿದ್ದರು.

ಭಾರತದೊಂದಿಗಿನ ಅವರ ಬಾಂಧವ್ಯವೂ ವಿಶೇಷವಾಗಿದೆ. ರೋಟರಿ ಅಂಬಾಸಿಡೋರಿಯಲ್ ಸ್ಕಾಲರ್ ಆಗಿ ಒಂದು ವರ್ಷ ಭಾರತದಲ್ಲಿದ್ದ ಅನಿಲ್ ಮೆನನ್, ದೇಶದ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Anil Menon
Artemis II Moon mission ಹಿಂದೆ ಇರುವ ಭಾರತೀಯ ಮೂಲದ ಅಧಿಕಾರಿ: ಈ ನಾಸಾ ವಿಜ್ಞಾನಿ ಅಮಿತ್ ಕ್ಷತ್ರಿಯಾ ಯಾರು?

2014ರಲ್ಲಿ ನಾಸಾಗೆ ಫ್ಲೈಟ್ ಸರ್ಜನ್ ಆಗಿ ಸೇರ್ಪಡೆಯಾದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ವೈದ್ಯಕೀಯ ಬೆಂಬಲ ನೀಡುತ್ತಿದ್ದರು. ಬಳಿಕ 2018ರಲ್ಲಿ ಸ್ಪೇಸ್‌ಎಕ್ಸ್ ಸಂಸ್ಥೆಗೆ ಸೇರಿ, ಸಂಸ್ಥೆಯ ವೈದ್ಯಕೀಯ ಕಾರ್ಯಕ್ರಮವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಸ್ಪೇಸ್‌ಎಕ್ಸ್‌ನ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನಗಳಿಗೆ ಸಿದ್ಧತೆ ನಡೆಸುವಲ್ಲಿ ಹಾಗೂ ಭವಿಷ್ಯದ ಚಂದ್ರ ಮತ್ತು ಮಂಗಳ ಮಿಷನ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಸ್ಟಾರ್‌ಶಿಪ್ ಉಡಾವಣಾ ವ್ಯವಸ್ಥೆಯ ಅಭಿವೃದ್ಧಿಗೂ ಕೊಡುಗೆ ನೀಡಿದರು.

2021ರ ಡಿಸೆಂಬರ್‌ನಲ್ಲಿ ನಾಸಾ ಗಗನಯಾತ್ರಿಯಾಗಿ ಆಯ್ಕೆಯಾದ ಅನಿಲ್ ಮೆನನ್, ಎರಡು ವರ್ಷಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಇದೀಗ ತಮ್ಮ ಮೊದಲ ಬಾಹ್ಯಾಕಾಶ ಯಾನಕ್ಕೆ ನಿಯೋಜನೆಗೊಂಡಿದ್ದಾರೆ.

ಅವರ ಪತ್ನಿ ಅನ್ನಾ ಮೆನನ್ ಕೂಡ ಗಗನಯಾತ್ರಿಯಾಗಿದ್ದು, 2024ರ ಸೆಪ್ಟೆಂಬರ್‌ನಲ್ಲಿ ಸ್ಪೇಸ್‌ಎಕ್ಸ್ ಪೊಲಾರಿಸ್ ಡಾನ್ ಖಾಸಗಿ ಬಾಹ್ಯಾಕಾಶ ಮಿಷನ್‌ನಲ್ಲಿ ಸುಮಾರು ಐದು ದಿನಗಳ ಕಾಲ ಭೂಮಿಯ ಕಕ್ಷೆಯಲ್ಲಿ ಸಂಚರಿಸಿದ್ದರು.

ಐಎಸ್‌ಎಸ್‌ನಲ್ಲಿ ಎಂಟು ತಿಂಗಳ ವಾಸದ ವೇಳೆ ಅನಿಲ್ ಮೆನನ್ ಹಲವು ಮಹತ್ವದ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ದೀರ್ಘಾವಧಿಯ ಬಾಹ್ಯಾಕಾಶ ವಾಸದಿಂದ ಮಾನವ ದೇಹದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ರಕ್ತದ ಹರಿವು, ರಕ್ತನಾಳಗಳ ರಚನೆ ಹಾಗೂ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಯಲ್ಲಿ ರಕ್ತದ ಸಂಯೋಜನೆಯಲ್ಲಿ ಆಗುವ ಬದಲಾವಣೆಗಳ ಕುರಿತು ಸಂಶೋಧನೆ ನಡೆಸಲಿದ್ದಾರೆ.

ಅಲ್ಲದೆ, ಬಾಹ್ಯಾಕಾಶ ನಿಲ್ದಾಣದಲ್ಲಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಳಸಿ ಇಂಟ್ರಾವೀನಸ್ (IV) ದ್ರವಗಳನ್ನು ತಯಾರಿಸುವ ತಂತ್ರಜ್ಞಾನವನ್ನೂ ಪರೀಕ್ಷಿಸಲಿದ್ದಾರೆ.

ಭವಿಷ್ಯದಲ್ಲಿ ಚಂದ್ರ, ಮಂಗಳ ಸೇರಿದಂತೆ ದೂರದ ಬಾಹ್ಯಾಕಾಶ ಯಾನಗಳಲ್ಲಿ ವೈದ್ಯಕೀಯ ಸಾಮಗ್ರಿಗಳ ಕೊರತೆ ಎದುರಾದರೆ ಈ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗಲಿದೆ ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ.

ಇದರ ಜೊತೆಗೆ, ಅಧುನಿಕ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (AI) ಹಾಗೂ ವೈದ್ಯಕೀಯ ಸಾಧನಗಳ ತಯಾರಿಕೆಗೆ ಅಗತ್ಯವಿರುವ ಸೆಮಿಕಂಡಕ್ಟರ್ ಸ್ಫಟಿಕಗಳನ್ನು ಬಾಹ್ಯಾಕಾಶದಲ್ಲೇ ಉತ್ಪಾದಿಸುವ ಕುರಿತು ಸಂಶೋಧನೆ ನಡೆಸಲಿದ್ದಾರೆ.

ಅದೇ ರೀತಿ, ಆಗ್ಮೆಂಟೆಡ್ ರಿಯಾಲಿಟಿ (AR) ಮತ್ತು ಕೃತಕ ಬುದ್ಧಿಮತ್ತೆ (AI) ನೆರವಿನಿಂದ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ನಡೆಸುವ ತಂತ್ರಜ್ಞಾನವನ್ನೂ ಪರೀಕ್ಷಿಸಲಿದ್ದಾರೆ. ಈ ಮೂಲಕ ಭವಿಷ್ಯದ ದೀರ್ಘಾವಧಿಯ ಬಾಹ್ಯಾಕಾಶ ಯಾನಗಳಲ್ಲಿ ಭೂಮಿಯ ವೈದ್ಯಕೀಯ ನೆರವಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ನಾಸಾ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com