

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಅಡ್ವಾನ್ಸ್ಡ್ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ (AHAP)ನ ಮೊದಲ ಲೈವ್ ಜಂಪ್ ನ್ನು ಲಡಾಖ್‌ನ ನ್ಯೋಮಾ (Mudh DZ) ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸಿದೆ. ಅತ್ಯಂತ ಸವಾಲಿನ ಎತ್ತರ ಪ್ರದೇಶದಲ್ಲಿ ಈ ಪ್ಯಾರಾಚೂಟ್‌ನ ಕಾರ್ಯಾಚರಣಾ ಸಾಮರ್ಥ್ಯವನ್ನು ಈ ಮೂಲಕ ಪ್ರದರ್ಶಿಸಲಾಗಿದೆ.
ಸಮುದ್ರಮಟ್ಟದಿಂದ 16,000 ಅಡಿ ಎತ್ತರದಿಂದ ಜಂಪ್ ನಡೆಸಲಾಗಿದ್ದು, 15,500 ಅಡಿ ಎತ್ತರದಲ್ಲಿ ಪ್ಯಾರಾಚೂಟ್ ನ್ನು ತೆರೆಯಲಾಯಿತು. 13,700 ಅಡಿ ಎತ್ತರದಲ್ಲಿರುವ ನ್ಯೋಮಾ (Mudh DZ) ಪ್ರದೇಶದಲ್ಲಿ ಲ್ಯಾಂಡಿಂಗ್ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅತ್ಯಂತ ಎತ್ತರದ ಪ್ರದೇಶದಲ್ಲಿನ ಕಠಿಣ ಪರಿಸ್ಥಿತಿಗಳಲ್ಲೂ AHAP ವ್ಯವಸ್ಥೆಯ ಪರಿಣಾಮಕಾರಿತ್ವ ಹಾಗೂ ಯುದ್ಧತಂತ್ರದ ಬಳಕೆಯ ಸಾಮರ್ಥ್ಯವನ್ನು ಈ ಯಶಸ್ವಿ ಜಂಪ್ ಪ್ರದರ್ಶಿಸಿದೆ ಎಂದು ಸಚಿವಾಲಯ ತಿಳಿಸಿದೆ.ತೆಳುವಾದ ಗಾಳಿ ಹಾಗೂ ಸವಾಲಿನ ಭೂಪ್ರದೇಶವಿರುವ ಎತ್ತರದ ಪ್ರದೇಶಗಳಲ್ಲಿ ಪ್ಯಾರಾಚೂಟ್‌ನ ನಿಯೋಜನಾ ಕಾರ್ಯಕ್ಷಮತೆ, ರಚನಾತ್ಮಕ ಸ್ಥಿರತೆ ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಈ ಯಶಸ್ವಿ ಪ್ರಯೋಗ ದೃಢಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈನಿಕರನ್ನು ಸಾಮೂಹಿಕವಾಗಿ ಪ್ಯಾರಾಚೂಟ್ ಮೂಲಕ ಇಳಿಸಲು ಬಳಸುವ ಸ್ಟ್ಯಾಟಿಕ್-ಲೈನ್ ಪ್ಯಾರಾಚೂಟ್ ವ್ಯವಸ್ಥೆಯಾಗಿ AHAP ನ್ನು DRDOದ ಆಗ್ರಾದ ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADRDE) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.
ಈ ವ್ಯವಸ್ಥೆಯನ್ನು ಕಾನ್ಪುರದ ಆರ್ಡಿನೆನ್ಸ್ ಪ್ಯಾರಾಚೂಟ್ ಫ್ಯಾಕ್ಟರಿ (OPF)ನಲ್ಲಿ ತಯಾರಿಸಲಾಗಿದ್ದು, ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶ್ಯುರನ್ಸ್ (DGAQA) ಪರಿಶೀಲನೆ ನಡೆಸಿದೆ. ಕಾನ್ಪುರದ ಸೆಂಟರ್ ಫಾರ್ ಮಿಲಿಟರಿ ಏರ್‌ವರ್ತಿನೆಸ್ ಆ್ಯಂಡ್ ಸರ್ಟಿಫಿಕೇಶನ್ (CEMILAC), RCMA ಇದಕ್ಕೆ ಪ್ರಮಾಣೀಕರಣ ನೀಡಿದೆ.
AHAP ಹಲವು ರೀತಿಯ ನಿಯೋಜನಾ ವಿಧಾನಗಳನ್ನು ಹೊಂದಿದ್ದು, 18,000 ಅಡಿ ಎತ್ತರದವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಎತ್ತರ ಪ್ರದೇಶಗಳಲ್ಲಿ ಭಾರತೀಯ ರಕ್ಷಣಾ ಪಡೆಗಳ ಯುದ್ಧತಂತ್ರದ ಅಗತ್ಯಗಳಿಗೆ ಅನುಗುಣವಾಗಿ ಇಳಿಯುವ ವೇಗವನ್ನು ವ್ಯವಸ್ಥೆಯಲ್ಲಿ ಹೊಂದಿಸಲಾಗಿದೆ.
ಇಂತಹ ಎತ್ತರ ಪ್ರದೇಶಗಳಲ್ಲಿ ಸ್ಟ್ಯಾಟಿಕ್-ಲೈನ್ ಪ್ಯಾರಾಚೂಟ್ ಜಂಪ್ ನಡೆಸುವುದು ಸವಾಲಿನದ್ದಾಗಿದೆ. ಪ್ಯಾರಾಚೂಟ್ ತೆರೆಯುವ ಸಂದರ್ಭದಲ್ಲಿ ಉಂಟಾಗುವ ಹೆಚ್ಚಿನ ಆಘಾತ ಹಾಗೂ ಇಳಿಯುವಿಕೆಯ ವೇಗ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಸ್ವದೇಶಿ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಲೈವ್ ಜಂಪ್ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ ಡಿಒ, ರಕ್ಷಣಾ ಪಡೆಗಳು, ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (DPSUs) ಮತ್ತು ಕೈಗಾರಿಕಾ ವಲಯವನ್ನು ಅಭಿನಂದಿಸಿದ್ದಾರೆ. ಇದು ‘ಆತ್ಮನಿರ್ಭರ ಭಾರತ’ದತ್ತ ಮತ್ತೊಂದು ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.
ರಕ್ಷಣಾ ಕಾರ್ಯದರ್ಶಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ DRDO ಅಧ್ಯಕ್ಷ ರಾಜೇಶ್ ಕುಮಾರ್ ಸಿಂಗ್ ಅವರು ಕೂಡ AHAP ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ತಂಡಗಳನ್ನು ಅಭಿನಂದಿಸಿದ್ದಾರೆ.