
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮೊದಲ ಹೆಜ್ಜೆ ಇಟ್ಟಿದೆ.
ರಾಜ್ಯದ ಐದೂವರೆ ಕೋಟಿ ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹೊರತಂದಿರುವ ಮೊಬೈಲ್ ಒನ್ ಸೇವೆ ಮೂಲಕ ನಾಗರೀಕರು 4 ಸಾವಿರಕ್ಕೂ ಅಧಿಕ ಸವಲತ್ತುಗಳನ್ನು ಬೆರಳ ತುದಿಯಲ್ಲಿ ಪಡೆಯಬಹುದು. ದುಬಾರಿ ಸ್ಮಾರ್ಟ್‌ಫೋನ್‌ನಿಂದ ಹಿಡಿದು ಸಣ್ಣಪುಟ್ಟ ಮೊಬೈಲ್‌ನಲ್ಲಿಯೂ ಸರ್ಕಾರದ ಈ ಸೇವೆ ಕಾರ್ಯ ನಿರ್ವಹಿಸಲಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್ ಅಥವಾ ಬ್ರೌಸರ್ ಮೂಲಕ, ಸಾಮಾನ್ಯ ಬಳಕೆದಾರರು ಕರೆಗಳ ಮೂಲಕ ಈ ಸೇವೆ ಪಡೆಯಬಹುದಾಗಿದೆ. ಈ ಪ್ರಯತ್ನ ದೇಶದಲ್ಲೇ ಮೊದಲು.
ಮೊಬೈಲ್ ಒನ್‌ಗೆ ಪ್ರವೇಶ ಹೇಗೆ?
3 ಮಾರ್ಗವಿದೆ. ನೇರವಾಗಿ www.karnataka.gov.in ಗೆ ಭೇಟಿ ನೀಡಿ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು.
ಒಂದೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿ ಕರ್ನಾಟಕ ಮೊಬೈಲ್ ಒನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾದರೆ 1800425425425ಕ್ಕೆ ಕರೆ ಮಾಡಬೇಕು. ನಂತರ ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಅನುಗುಣವಾಗಿ ಬೇಕಾದ ಆ್ಯಪ್‌ನ ಲಿಂಕ್ ದೊರೆಯುತ್ತದೆ. ಆ್ಯಂಡ್ರಾಯ್ಡ್, ಆಪಲ್, ಬ್ಲಾಕ್ ಬೆರ್ರಿ, ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ಗಳ ಪ್ಲೇಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.
ಸಾಮಾನ್ಯ ಫೋನ್ ಬಳಕೆದಾರರಾದರೆ ಧ್ವನಿ ಆಧಾರದ ಸೇವೆಗೆ 161 ಡಯಲ್ ಮಾಡಬೇಕು. ನೋಂದಣಿ ಮಾಡಿದ ಬಳಿಕ ಮೊಬೈಲ್‌ಗೆ ಸಂದೇಶ ಬರುತ್ತದೆ. ಅಲ್ಲಿ ನೀಡುವ ಪಿನ್ ನಿಮ್ಮ ಲಾಗ್ ಇನ್ ಪಾಸ್‌ವರ್ಡ್ ಆಗಿರುತ್ತದೆ.
ಉಪಯೋಗ ಏನು?
ರಾಜ್ಯ ಹಾಗೂ ಕೇಂದ್ರ ಸರ್ಕಾರದ 500ಕ್ಕೂ ಅಧಿಕ ಸೇವೆಗಳು ಈ ಪೋರ್ಟ್‌ಲ್ ಅಥವಾ ಆಪ್‌ನಲ್ಲಿ ಲಭ್ಯವಿದೆ. ಉದಾಹರಣೆಗೆ ಸಕಾಲ, ಸಂಚಾರ ಪೊಲೀಸ್, ಆದಾಯ ತೆರಿಗೆ, ಪಾಸ್‌ಪೋರ್ಟ್, ವಿದ್ಯುತ್ ನೀರು ಬಿಲ್ ಪಾವತಿ, ಆಸ್ತಿ ತೆರಿಗೆ..
ಖಾಸಗಿ ಕಂಪನಿಗಳ ವ್ಯವಹಾರಕ್ಕೆ ಸಂಬಂಧಿಸಿ ಸಾಮಾನ್ಯ ಜನರಿಗೆ ನೆರವಾಗುವ 4 ಸಾವಿರಕ್ಕೂ ಅಧಿಕ ಸೇವೆಗಳೂ ದೊರೆಯಲಿದೆ. ಉದಾಹರಣೆಗೆ ಮೊಬೈಲ್ ಬಿಲ್ ಪಾವತಿ, ರೈಲು, ಬಸ್ ಟಿಕೆಟ್ ಬುಕಿಂಗ್, ಟ್ಯಾಕ್ಸಿ ಬುಕಿಂಗ್, ಬ್ಯಾಂಕಿಂಗ್, ರೈತರಿಗೆ ಕೃಷಿ ಉತ್ಪನ್ನಗಳ ಮಾಹಿತಿ.
ಮನೆಯ ವಿದ್ಯುತ್, ನೀರು, ಫೋನ್, ಬ್ರಾಡ್‌ಬ್ಯಾಂಡ್‌ಗಳ ಬಿಲ್ ಪಾವತಿಗೆ ಒಂದೇ ವೇದಿಕೆಯಿದ್ದಂತೆ. ಈ ಪೋರ್ಟಲ್‌ದೆ ಪ್ರವೇಶಿಸಿದರೆ ಎಲ್ಲವೂ ಸ್ಮಾರ್ಟ್ ಆಗಿ ಮುಗಿಯುತ್ತದೆ.
ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಈ ಆಪ್ ಮೂಲಕ ಕುಳಿತಲ್ಲೇ ಎಲ್ಲವನ್ನೂ ಪರಿಶೀಲಿಸಬಹುದು.
ಭವಿಷ್ಯದಲ್ಲಿ ಎಲ್ಲ ಸೇವೆಗಳನ್ನು ಈ ಮೊಬೈಲ್ ಒನ್ ವ್ಯಾಪ್ತಿಗೆ ತರಲು ಸರ್ಕಾರ ಉದ್ದೇಶಿಸಿದೆ.
ಸರ್ಕಾರವನ್ನು ಸುಲಭವಾಗಿ ಸಂಪರ್ಕಿಸಬಹುದು
ನಾಗರಿಕ ಸಮೀಕ್ಷೆ ಹಾಗೂ ಮಾಹಿತಿ ಸಂಗ್ರಹಣೆ ವಿಭಾಗದ ಮೂಲಕ ಸರ್ಕಾರವನ್ನು ಸಾಮಾನ್ಯ ನಾಗರಿಕರು ಸುಲಭವಾಗಿ ಸಂಪರ್ಕಿಸಬಹುದು. ನಿಮ್ಮ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಅಥವಾ ಇತರ ಮೂಲ ಸೌಕರ್ಯಗಳ ಕೊರತೆಯಿದ್ದರೆ ಫೋಟೋ ಕ್ಲಿಕ್ಕಿಸಿ ಈ ಆಪ್‌ನಲ್ಲಿ ಆಪ್‌ಲೋಡ್ ಮಾಡಬಹುದು. ಇಂಥ ದೂರುಗಳು ಸಂಬಂಧಪಟ್ಟ ಇಲಾಖೆಗೆ ಹೋಗಿ ಅಲ್ಲಿಂದ ನಿಗದಿತ ಸಮಯದಲ್ಲಿ ಸೂಕ್ತ ಉತ್ತರ ಬರಲಿದೆ. ಕೆಲ ಸೇವೆಗಳನ್ನು ಈ ಅಪ್ಲಿಕೇಶನ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿದೆ.
Advertisement