ಮ್ಯಾಸ್ಲೋ ಮತ್ತು ಮಾನವನ ಅವಶ್ಯಕತೆಗಳ ಶ್ರೇಣಿ

ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ...
ಮ್ಯಾಸ್ಲೋ ಮತ್ತು  ಮಾನವನ ಅವಶ್ಯಕತೆಗಳ ಶ್ರೇಣಿ
Updated on: 

ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗಿ ಉದಯವಾಗುವ ಭಾಷೆ ಮುಂದೆ ಭಾವನಾತ್ಮಕವಾಗಿ ಜೀವನದೊಂದಿಗೆ ಬೆಸೆದುಕೊಳ್ಳುವ ಪರಿ ಬಹಳ ಆಸಕ್ತಿ ದಾಯಕ. ಮನುಷ್ಯನ ಅಭಿವೃದ್ಧಿಯ ಜೊತೆ ಜೊತೆಗೆ ಭಾವನಾತ್ಮಕ ಅವಶ್ಯಕತೆಗಳನ್ನೂ ಪೂರೈಸಬಲ್ಲದ್ದಾದ್ದರಿಂದ ಭಾಷೆಯ ಸುತ್ತಲೂ ಕೆಲವಾರು ವೃತ್ತಿ -ಪ್ರವೃತ್ತಿಗಳ ಉಗಮವಾಗಿ ಜನರು ಮನರಂಜೆನೆಗೂ,ಮಾಹಿತಿ/ವಿಷಯ ಪರಿಗ್ರಹಣೆಗೂ, ಇನ್ನಿತರ ಸೇವೆ ಸೌಲಭ್ಯಗಳಿಗೂ ಬಳಸುವುದರ ಪರಿಣಾಮವಾಗಿ ಜೀವಾವಶ್ಯಕತೆಗಳ ಎಲ್ಲ ಸ್ಥರಗಳಲ್ಲೂ ಭದ್ರ ಸ್ಥಾನ ಪಡೆಯುತ್ತದೆ ಹಾಗೂ ಜನರ ಅಭಿಮಾನ/ಸರಕಾರಗಳ ಮನ್ನಣೆ /ಪ್ರೋತ್ಸಾಹ ಇತ್ಯಾದಿಗಳು ಭಾಷೆಗೆ ಕಾಲಾಂತರದಲ್ಲಿ ದೊರೆಯುತ್ತದೆ. ಮನುಷ್ಯನ ಅವಶ್ಯಕತೆಗಳು ಮತ್ತು ಆದ್ಯತೆಗಳ ಬಗ್ಗೆ ನೋಡೋಣ.

ಮನುಷ್ಯನ ಅವಶ್ಯಕತೆಗಳನ್ನು ಮ್ಯಾಸ್ಲೋ ಎಂಬ ಮನೋವಿಜ್ಞಾನಿ ಕೆಳಗಿನ ಚಿತ್ರದಲ್ಲಿಯಂತೆ  ವಿವಿಧ ಸ್ತರಗಳಲ್ಲಿ ಶ್ರೇಣೀಕರಿಸಿದ್ದಾನೆ.(ದಯವಿಟ್ಟು ಕೆಳಗಿನಿಂದ ಮೇಲಕ್ಕೆ ಓದಿಕೊಳ್ಳಬೇಕು).

ಸ್ವ ಸಾಕ್ಷಾತ್ಕಾರ / ಆತ್ಮ ಸಾಕ್ಷಾತ್ಕಾರ.- ಕಲೋಪಾಸನೆ, ಆಧ್ಯಾತ್ಮ,ತತ್ವಜ್ಞಾನ,ವಿಜ್ಞಾನ, ಆವಿಷ್ಕಾರ. ಲೌಕಿಕ ಆಕರ್ಷಣೆಗಳನ್ನು ಮೀರಿದ ಮನೋಸ್ಥಿತಿಯ ಅನ್ವೇಷಣೆ.

  • ಗೌರವಾದರಗಳ ಹಂಬಲ/ಕಲೋಪಾಸನೆ/ಕಲಾಭಿವ್ಯಕ್ತಿ/ಸಾಮಾಜಿಕ ಘನತೆ- ನವರಸಗಳ ಅಭಿವ್ಯಕ್ತಿ/ಆದರ,ಪೋಷಣೆ/ಸಮಾಜದಲ್ಲಿ ತನ್ನದೇ ಗುರುತು ಮೂಡಿಸಬಲ್ಲ ಹಂಬಲ/ ಮನೋಸಂಕಲ್ಪ/ಸಂಗೀತ,ಸಾಹಿತ್ಯ/

  • ಸಂಬಂಧಗಳು/ಕುಟುಂಬ/ಸಮರ್ಪಣಾ ಭಾವ- ಬಹುಮಟ್ಟಿಗೆ ಭಾವನಾತ್ಮಕ ಮಜಲು. ಪ್ರೀತಿ, ಮಮತೆ, ಆದರ/ಗೌರವ/ರೀತಿ/ರಿವಾಜು/ಸಂಪ್ರದಾಯ/ಹೊಣೆ/ಜವಾಬುದಾರಿಕೆ/ಉತ್ತರದಾಯಿತ್ವ

  • ಸುರಕ್ಷಿತತೆಯ ಭಾವನೆ- ತಂಡಗಳು/ಗುಂಪುಗಳು/ವ್ಯಾವಹಾರಿಕ ಬೆಸುಗೆ/ಸಮಾಜಿಕ ಜೀವನ ಕ್ರಮ

  • ಮೂಲಭೂತ ಅವಶ್ಯಕತೆಗಳು- ಊಟ/ವಸತಿ/ಬಟ್ಟೆ/ಉದ್ಯೋಗಾಭಿಲಾಶೆ.

ಮನುಷ್ಯನ ಜೀವನ ಈ ಎಲ್ಲ ಅವಶ್ಯಕತೆಗಳನ್ನ ಲಭ್ಯ ಮಾಡಿಕೊಳ್ಳುವುದರ ಅನ್ವೇಷಣೆಯಲ್ಲಿ ಸಾಗಿರುತ್ತದೆ. ಭಾಷೆ ಈ ಅನ್ವೇಷಣೆಯಲ್ಲಿ ಪೂರಕವಾದ ಪಾತ್ರ ಧರಿಸಿದಲ್ಲಿ ಅದರ ಉಳಿವು ಹಾಗೂ ಬೆಳವಣಿಗೆ ಆಯಾಚಿತವಾಗಿ, ಸ್ವಾಭಾವಿಕವಾಗಿ, ಅಪ್ರಯತ್ನಪೂರ್ವಕವಾಗಿ ತಂತಾನೇ ಆಗುತ್ತಾ ಸಾಗುತ್ತದೆ.

ಸುಧಾರಣೆಯ ಹರಿಕಾರ ಬಸವಣ್ಣನವರು ಇದೇ ಸಂದೇಶವನ್ನು ಸರಳ ಕನ್ನಡದಲ್ಲಿ  ೧೨ನೇ ಶತಮಾನದಲ್ಲಿಯೇ ಈ ಕೆಳಗಿನ ವಚನದ ಮೂಲಕ ತಿಳಿಸಿರುವರು:

    ಬಡತನಕೆ ಉಂಬುವ ಚಿಂತೆ

ಉಂಬುವುದಾದರೆ ಉಡುವ ಚಿಂತೆ

ಉಡುವುದಾದರೆ ಹೆಂಡಿರ ಚಿಂತೆ

ಹೆಂಡಿರಾದರೆ ಮಕ್ಕಳ ಚಿಂತೆ

ಹೀಗೆ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಪುರಂದರ ದಾಸರು ಹೇಳಿದಂತೆ:

ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ

ಅಷ್ಟು ದೊರಕಿದರೆ ಮತ್ತಷ್ಟರಾಸೆ

ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ

ನಷ್ಟ ಜೀವನದಾಸೆ ಪುರಂದರಾ ವಿಠಲ.

ಮ್ಯಾಸ್ಲೋ ೨೦ ನೇ ಶತಮಾನದಲ್ಲಿ ಹೇಳಿದ್ದನ್ನು ಕನ್ನಡದ ಮಹಾನುಭಾವರು ಹಿಂದೆಯೇ ಸುಂದರವಾಗಿ ಹೇಳಿದ್ದಾರೆ, ಇರಲಿ.

`ಮ್ಯಾಸ್ಲೋ `ನ ಪಿರಮಿಡ್ಡನ್ನು ಗಮನಿಸಿ

ಈ ಎಲ್ಲ  ಹಂತಗಳ ಅವಶ್ಯಕತೆಗಳನ್ನು ಪುರೈಸಬಲ್ಲ ಸಂವಹವನಾ ಸಾಧನವಾಗಿದ್ದಲ್ಲಿ ಭಾಷೆ ಸುಸ್ಥಿತಿಯಲ್ಲಿರುತ್ತದೆ. ಇದನ್ನು  ಮಾತೃ ಭಾಷೆಯ ಮೂಲಕ ಸಾಧ್ಯ ಮಾಡಬೇಕಾದದ್ದು ಅಭಿಮಾನ ಇರಬೇಕಾದ ಆಳುವ ಸಂಸ್ಥೆಯ ಹೊಣೆ. ಹಿಂದಿನ ಮಹಾರಾಜರುಗಳು ಪಾಲಿಸಿ ಪೊಷಿಸಿದ್ದು ಇದೇ ಧ್ಯೇಯವನ್ನೇ. ಇಂದಿನ ಹಲವಾರು ದೇಶಗಳ (ಸ್ವೀಡನ್,ಡೆನ್ಮಾರ್ಕ್, ಜರ್ಮನಿ, ಜಪಾನ್,ಚೀನಾ, ಇಸ್ರೇಲ್,ರಷ್ಯಾ) ಸರಕಾರಗಳು ಮಾಡುತ್ತಿರುವುದೂ ಇದೇ- ಭಾಷೆಯ ಪೋಷಣೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ರೀತಿಯಲ್ಲಿ ನಮ್ಮ ಪುಢಾರಿಗಳು, ದೂರದೃಷ್ಟಿಯಿಲ್ಲದ ಸರಕಾರದ ಕಾರ್ಯವೈಖರಿ, ಕನ್ನಡದ ಹೆಸರಿನ ಸಂಸ್ಥೆಗಳಿಗೆ ಅನುದಾನ ನೀಡಿ ಕೈತೊಳೆದುಕೊಳ್ಳುವ ಬೇಜವಾಬ್ದಾರಿ ಧೋರಣೆ ಕನ್ನಡದ ಉಳಿವಿಗೆ ಪೂರಕವಾಗಿಲ್ಲದಿರುವುದು ಮೇಲುನೋಟಕ್ಕೇ ಕಂಡು ಬರುತ್ತಿದೆ.

ಕನ್ನಡ ಭಾಷೆಗೆ, ಈ ಎಲ್ಲ ಸ್ತರಗಳಲ್ಲೂ ತಂತಮ್ಮ ಅವಶ್ಯಕತೆಗಳನ್ನು ಅರಸುತ್ತಿರುವ ಕನ್ನಡ ಜನಗಳ ಅಭಿಲಾಷೆ ಪೂರೈಸುವ ಸಾಮರ್ಥ್ಯ ಇದೆಯೇ
ಎಂದು ಕೇಳಿದರೆ ನಿಸ್ಸಂದೇಹವಾಗಿ ಇದೆ ಎಂದು ಎದೆ ತಟ್ಟಿ ಹೇಳಿಕೊಳ್ಳಬಹುದು. ಆದರೆ ತಂತ್ರಜ್ಞಾನದ ವಿವಿಧ ಶಾಖೆಗಳಲ್ಲಿ ಆದ ಬೆಳವಣಿಗೆಯ ಸ್ಫೋಟ ಮತ್ತು ಜಾಗತೀಕರಣದ ಓಟ ಎರಡೂ ಪ್ರಾರಂಭವಾದ ಸಮಯಕ್ಕೇ ಕನ್ನಡದಲ್ಲಿ ಉನ್ನತ ಶಿಕ್ಷಣ ರೂಪಿಸುವ ಹೊಣೆಗಾರಿಕೆಯಿಂದ ನಮ್ಮ ವಿದ್ಯಾಲಯಗಳು ಮತ್ತು ಸರಕಾರ ಸೋತಿದ್ದರ ಪರಿಣಾಮವಾಗಿ ಇಂದು ಈ ವಿಷಯವಾಗಿ ಕನ್ನಡ ಹಿಂದಿದೆ ಎನ್ನಬಹುದಾದರೂ ಅದು ಸಾಮರ್ಥ್ಯ ಇಲ್ಲವೆಂದಲ್ಲ. ಈ ದಿಶೆಯಲ್ಲಿ ಆಗುತ್ತಿರುವ ಪ್ರಗತಿಪರ ಬದಲಾವಣೆಗಳನ್ನು ಮುಂದೆ ತಿಳಿಸುತ್ತೇನೆ
.

ಹಂತ (ಶ್ರೇಣಿ)

ಕನ್ನಡದ ತಾಕತ್ತು (ಸಾಮರ್ಥ್ಯ/ಯೋಗ್ಯತೆ)

ಮೂಲಭೂತ (ಹಸಿವು/ಬಟ್ಟೆ/ವಸತಿ)

ಇಲ್ಲಿಯವರೆಗೆ ಬಹುತೇಕರು ಕನ್ನಡದಲ್ಲಿ ವ್ಯವಹಾರ ನಡೆದು ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಈಗಲೂ ಭಾಷೆ ಮರೆತು ಹೊಟ್ಟೆಹೊರೆದುಕೊಳ್ಳುವ ಪರಿಸ್ಠಿತಿ ಇಲ್ಲ. ಇಂಗ್ಲೀಷಿನ ಜೊತೆಯಲ್ಲಿ ಕನ್ನಡವನ್ನೂ ಕಲಿತು ವ್ಯವಹಾರದಲ್ಲಿ/ವಿದ್ಯಾಭ್ಯಾಸದಲ್ಲಿ ಬೇಕೆನಿಸಿದಲ್ಲಿ ಮಾತ್ರ ಇಂಗ್ಲೀಷ್ ಬಳಸಬಹುದು.

ಭದ್ರತೆ

ಕನ್ನಡಿಗರೆಂಬ ಬೆಚ್ಚನೆಯ ಭಾವ ನಮ್ಮನ್ನು ನಮ್ಮ ನಾಡಿನಲ್ಲಷ್ಟೇ ಅಲ್ಲ ಹೊರಗಡೆಯೂ ಒಂದುಗೂಡಿಸುವುದಲ್ಲದೆ ಒಗ್ಗಟ್ಟಿಗೆ ಸಹಕಾರಿ. ಈ ಬಾಂಧವ್ಯಗಳು ನಮ್ಮ ಕಷ್ಟ-ಸುಖಗಳಲ್ಲಿ ನಮ್ಮ ಕೈಹಿಡಿಯುವುದಿಲ್ಲವೇ ಯೋಚಿಸಿ. ಇದೇ ಭದ್ರತೆ ಇಲ್ಲವಾದಲ್ಲಿ ಅಭದ್ರತೆ/ಒಂಟಿಶನಿಯಾಗಿರಬೇಕಾದೀತು

ಕುಟುಂಬ/ಜವಾಬ್ದಾರಿ/ಸಮರ್ಪಣೆ

ವೈವಾಹಿಕ ಸಂಬಂಧಗಳು ಮೊದಲಾಗಿ ಒಂದೇ ಭಾಷೆ/ನಾಡಿನ ನಡೆ ನುಡಿಗಳ ಸಾಮ್ಯತೆ ,ಸಂಸ್ಕಾರಗಳು ಇರುವಲ್ಲಿ ಭಿನಾಭಿಪ್ರಾಯಗಳು ಕಡಿಮೆ ಇರಬಹುದು. ಕನ್ನಡನಾಡಿನ ಕುಟುಂಬ ನಿರ್ವಹಣಾ ವ್ಯವಸ್ಥೆ/ತ್ಯಾಗ ಬಲಿದಾನಗಳು ಜೀವನಕ್ಕೊಂದು ಚೌಕಟ್ಟನ್ನು ನೀಡುವುದಿಲ್ಲವೇ. ಇವೆಲ್ಲವೂ ಹರಿದು ಹೋಗಿರುವ ಸಮಾಜಗಳನ್ನು ನೋಡಿದರೆ ಆಗುವ ಅವ್ಯವಸ್ಥೆಯ ಅರಿವು ನಮಗಾಗುವುದು.

ನಮ್ಮ ಸಾಹಿತ್ಯ, ಸಂಸ್ಕೃತಿ ,ಪುರಾಣ, ಜನಪದ ಕಾವ್ಯಗಳು ಜೀವನಧರ್ಮವನ್ನು ತಿಳಿಸಿಕೊಡುವುದಷ್ಟೇ ಅಲ್ಲ, ನೈತಿಕ ತಳಹದಿಯನ್ನೂ ಹಾಕಿ ನಮ್ಮನ್ನು ಬೆಳೆಯಲು ಪ್ರೇರೇಪಿಸುತ್ತವೆ

ಸಾಮಾಜಿಕ ಸ್ಥಾನ ಮಾನ /ಕಲೆ/ಕಲೋಪಾಸನ / ಪೋಷಣೆ

ಕರ್ನಾಟಕ ಶಿಲ್ಪ/ಸಾಹಿತ್ಯ/ಸಂಗೀತ/ಜನಪದ/ಇತಿಹಾಸ/ಪರಂಪರೆ/ನಾಟ್ಯ/ನಾಟಕ ಎಲ್ಲ ವಿಭಾಗಗಳಲ್ಲಿ ಮನುಷ್ಯನ ಉನ್ನತ ಸ್ತರದ ಅವಷ್ಯಕತೆಗಳನ್ನು ಪೂರೈಸಬಲ್ಲಷ್ಟು ಹೇರಳ ಸಂಪತ್ತಿದೆ. ನೋಡುವ ಕಣ್ಣಿದ್ದರೆ /ಮನಸ್ಸಿದ್ದರೆ ಸಾಕು.

ರಾಜಕುಮಾರ್, ಎಸ್.ಎಲ್.ಭೈರಪ್ಪ, ಸಿ. ಅಶ್ವತ್,ಸಿ.ಎನ್.ಆರ್. ರಾವ್ ಇನ್ನೂ ಹಲವು ಉದಾಹರಣೆಗಳಿವೆ. ಇಂಗ್ಲೀಷಿನ ಜೊತೆಯಲ್ಲಿ ಕನ್ನಡವನ್ನೂ ಕೊಂಡೊಯ್ಯುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.


ರಾಷ್ಟ್ರ ಕವಿ ಗೊವಿಂದ ಪೈಗಳು ಹೇಳಿದಂತೆ `` ಎಮ್ಮ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ`` ಮೂರ್ಖತನಕ್ಕೆ ಏನು ಹೇಳಬೇಕು?


ಅತ್ಮ ಸಾಕ್ಷಾತ್ಕಾರ

ಭಾಷೆಯ ಮೂಲಕ ತಮ್ಮ ಅತ್ಮಸಾಕ್ಷಾತ್ಕಾರ ಬಯಸುವವರಿಗೆ ಕನ್ನಡದಲ್ಲಿ ರತ್ನದ ಗಣಿಯೇ ದೊರೆಯುತ್ತದೆ. ಪಂಪನಾದಿಯಾಗಿ ಕಾವ್ಯಗಳು, ಕುಮಾರವ್ಯಾಸನ ಭಾರತ,ರಾಮಾಯಣ ದರ್ಶನ,ಶರಣರ ವಚನಗಳು, ಹರಿದಾಸರ ಗೀತೆಗಳು, ಸಂಗೀತಗಾರರ ಪರಂಪರೆ, ಮುದ್ದಣನ ರಾಮಾಯಣಗಳು,ಜೈನ ಚರಿತಗಳು, ಚಾರ್ವಾಕರಾದಿಯಾಗಿ ಎಲ್ಲ ದರ್ಶನಗಳ ಕನ್ನಡ ಅವತರಣಿಕೆ, ವೈಜ್ಞಾನಿಕ ಗಣಿತ ಸಂಬಂಧೀ ಪುಸ್ತಕಗಳು, ಇವೆಲ್ಲಕ್ಕೂ ಮುಕುಟಪ್ರಾಯವಾಗಿ ನಮ್ಮ ಡಿ.ವಿ.ಜಿ ಯವರ ``ಮಂಕುತಿಮ್ಮನ ಕಗ್ಗ`` ದ ಜೀವನದರ್ಶನ ಹೀಗೆ ಏನು ಬೇಕು, ಏನು ಬೇಡ?

ಎಲ್ಲವು ಇದ್ದೂ ಇರದಂತಾಡುವ ಇಂದಿನ ಕನ್ನಡಿಗರಿಗೇನು ಹೇಳುವುದು.

ನಮ್ಮದೇ ಬರಹಕ್ಕೆ ಲಿಪಿಯೂ ಇದೆ!!

ಎಲ್ಲ ಬಗೆಯ ಅವಶ್ಯಕತೆಗಳನ್ನು ಪೂರೈಸಬಲ್ಲ ಶಕ್ತಿ ಕನ್ನಡಕ್ಕಿದೆಯೆಂದು ಮೇಲೆ ನೋಡಿದೆವು.

ಏನೆಲ್ಲ ಇದ್ದರೂ ಜನಗಳು ತಮ್ಮ ಬದುಕಿನಲ್ಲಿ ಆದ್ಯತೆ ನೀಡುವ / ಪ್ರಮುಖವೆಂದು ಭಾವಿಸುವ / ಜೀವನದ ಗುರಿ ಎಂದಿಟ್ಟುಕೊಳ್ಳುವ ಪರಿ ಬೇರೆ ಬೇರೆ ಹಾಗೂ ವೈವಿಧ್ಯಮಯ. ಅವರುಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು:

( ಚಿತ್ರ ನೋಡಿ)
-ಸುದರ್ಶನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com