ಟೂ ಸ್ಟೇಟಸ್!

ಸ್ಟೇಟಸ್‌ಗಳು, ಫೋಟೋಗಳು ಅಥವಾ ಶೇರ್ ಮಾಡೋ ವಿಡಿಯೋಗಳು ನಮ್ಮ ವ್ಯಕ್ತಿತ್ವದ ಕನ್ನಡಿ...
ಟೂ ಸ್ಟೇಟಸ್!

ಕೆಲವರು ಯಾಕ್ಹಿಂಗಾಡ್ತಾರೋ ಗೊತ್ತಿಲ್ಲ. ಫೇಸ್ ಬುಕ್ ಒಂದು ಸಾಮಾಜಿಕ ತಾಣ ಎಂಬುದನ್ನೇ ಮರೆತಂತಿರುತ್ತದೆ ಅವರ ಸ್ಟೇಟಸ್. ತುಂಬಾ ಸಿಲ್ಲಿ ಅನಿಸುವ ಸ್ಟೇಟಸ್‌ಗಳನ್ನು ಹಾಕಿಬಿಡುತ್ತಾರೆ. ಹೆಸರೇ ಹೇಳುವಂತೆ ಫೇಸ್‌ಬುಕ್ ನಮ್ಮ ಮುಖಪುಸ್ತಕ.

ಇಲ್ಲಿ ನಾವು ಪೋಸ್ಟ್ ಮಾಡೋ ಸ್ಟೇಟಸ್‌ಗಳು, ಫೋಟೋಗಳು ಅಥವಾ ಶೇರ್ ಮಾಡೋ ವಿಡಿಯೋಗಳು ನಮ್ಮ ವ್ಯಕ್ತಿತ್ವದ ಕನ್ನಡಿ. ಇದು ಗೊತ್ತಿದ್ದೂ ಅನೇಕರು ಸಿಲ್ಲಿ ಅನಿಸುವ, ಇನ್ನೊಬ್ಬರನ್ನು ಅವಹೇಳನ ಮಾಡುವಸ ವೈಯಕ್ತಿಕವಾಗಿರಬೇಕಾದ ಸತ್ಯವನ್ನು ಬಹಿರಂಗಪಡಿಸುವ ಅಥವಾ ಕಿರಿಕಿರಯೆನಿಸುವ ವಸ್ತುವನ್ನು ಹಾಕಿಬಿಡುತ್ತಾರೆ.

'ಏನಾದರೂ ಸ್ಟೇಟಸ್ ಹಾಕಬೇಕೆಂದೆನಿಸುತ್ತಿದೆ. ಆದರೆ ಏನು ಹಾಕ್ಲಿ ಎಂಬುದೇ ತಿಳಿಯುತ್ತಿಲ್ಲ...' ಇದು ಮೊನ್ನೆ ನಾನು ಫೇಸ್‌ಬುಕ್ ತೆರೆದ ತಕ್ಷಣ ಕಣ್ಣಿಗೆ ಬಿದ್ದ ಸ್ಟೇಟಸ್. ಹೀಗೆ ಅರ್ಥವಿಲ್ಲದ ಸ್ಟೇಟಸ್ ಹಾಕುವ ಗೆಳೆಯ-ಗೆಳೆತಿಯರು ನಮ್ಮಲ್ಲಿನ ಶೇ.25 ಜಾಗ ಆಕ್ರಮಿಸಿದ್ದಾರೆ.

ಆದರೆ ಈ ರೀತಿಯ ಸ್ಟೇಟಸ್‌ಗೆ ಬರುವಷ್ಟು ಲೈಕ್ಸ್, ಕಮೆಂಟ್ಸ್ ಬೇರೆ ಯಾವುದೇ ಒಳ್ಳೆಯ ಸ್ಟೇಟಸ್‌ಗೆ ಸಿಗುವುದೇ ಇಲ್ಲ ಎಂಬುದು ಅಷ್ಟೇ ಸತ್ಯ. ಇನ್ನು ಕೆಲವರು 'ಇನ್ ರಿಲೇಷನ್‌ಶಿಪ್‌' ಅಂತ ಫೇಸ್ ಬುಕ್‌ನಲ್ಲಿ ಫೋಷಿಸಿಕೊಳ್ಳುವುದುಂಟು.

ನಾವೊಂದು ರಿಲೇಷನ್‌ಶಿಪ್‌ನಲ್ಲಿದ್ದೇವೆ ಅನ್ನುವುದು ತೀರಾ ಖಾಸಗಿ ವಿಚಾರ. ಅದನ್ನು ಸಾಮಾಜಿಕ ತಾಣಗಳಿಗೆ ಹಾಕಿಕೊಂಡು ಬೀಗುವ ಅವಶ್ಯವೇನಿರುತ್ತದೋ ನನಗಂತೂ ಅರ್ಥವಾಗದು. ಈ ರೀತಿ ಸ್ಟೇಟಸ್ ಹಾಕುವ ಮೂಲಕ ಅವರು ಸಂಬಂಧಗಳಿಗಿಂತ ಅದಕ್ಕೆ ಬರುವ ಕಮೆಂಟ್ಸ್‌ಗಳಿಗೇ ಹೆಚ್ಚು ಪ್ರಾಮುಖ್ಯ ಕೊಡುತ್ತಾರೆ ಎಂದು ಕೆಲವೊಮ್ಮೆ ಅನಿಸಿಬಿಡುತ್ತದೆ.

ಈ ರೀತಿ ವೈಯಕ್ತಿಕ ಬದುಕಿನ ತೀರಾ ಖಾಸಗಿ ವಿಚಾರಗಳನ್ನು ಸಾಮಾಜಿಕವಾಗಿ ಹಂಚಿಕೊಂಡರೆ ಇನ್ನೊಬ್ಬರನ್ನು ನಿಮ್ಮ ಖಾಸಗಿ ಜೀವನಕ್ಕೆ ಮಧ್ಯ ಪ್ರವೇಶಿಸಲು ಆಹ್ವಾನ ಕೊಟ್ಟಂತಾಗುವುದಿಲ್ಲವೇ?

ಇನ್ನು ಫ್ರಂಟ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಂದ ಬಳಿಕವಂತೂ ಚಿತ್ರವಿಚಿತ್ರ ಸೆಲ್ಫೀ ತೆಗೆಯೋದು ಬಹುತೇಕರಿಗೆ ಖಯಾಲಿ ಆಗಿಬಿಟ್ಟಿದೆ. ಈ ರೀತಿ ಹೇಗೇಗೋ ಇರುವ ತಮ್ಮ ಸೆಲ್ಫೀಗಳನ್ನು ಪೋಸ್ಟ್ ಮಾಡಿಬಿಡುತ್ತಾರೆ. ಎಷ್ಟೋ ಸೆಲ್ಫೀಗಳು ನೋಡುಗರ ಕಣ್ಣಲ್ಲಿ ಅಪಾರ್ಥ ಕಲ್ಪಿಸುವುದೂ ಉಂಟು. ಇಷ್ಟಾದರೂ ಇಂಥ ಸೆಲ್ಫಿಗಳನ್ನು ಅವರೆಲ್ಲ ಯಾಕೆ ಹಾಕ್ತಾರೆ ಅನ್ನುವುದು ಅರ್ಥವೇ ಆಗುವುದಿಲ್ಲ.

ಕೆಲವರ ಸ್ಟೇಟಸ್‌ಗಳು ಚಿಂತನೆಗೆ ಓರೆ ಹಚ್ಚುವುದೂ ಇದೆ. ಪ್ರತಿಭೆಗಳಿಗೆ ಫೇಸ್‌ಬುಕ್ಕನ್ನು ವೇದಿಕೆ ಮಾಡಿಕೊಳ್ಳುವವರೂ ಇರುತ್ತಾರೆ. ಇಂಥವರನ್ನೆಲ್ಲ ಕಂಡಾಗ ನಿಜಕ್ಕೂ ಖುಷಿಯೆನಿಸುತ್ತದೆ.

-ದೀಪ್ತಿ ಉಜಿರೆ, ಎಸ್‌ಡಿಎಂ ಕಾಲೇಜು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com