ಸಲ್ಲಾಪ: ಮೂರು ದುಃಖಗಳು

ಸಲ್ಲಾಪ: ಮೂರು ದುಃಖಗಳು
Updated on: 

ಒಂದು ಮಳೆಗಾಲ. ದೊರೆ ವಂದಿಮಾಗಧ ಸೇವಕರ ಸಮೇತ ದೂರದೇಶದ ಪ್ರವಾಸದಲ್ಲಿದ್ದ. ಜತೆಗೆ ರಾಣಿಯರು ಬಂದಿರಲಿಲ್ಲ. ರಾಣಿಯನ್ನು ನೆನೆಯುತ್ತ ಕುಳಿತಿದ್ದ ಸಂದರ್ಭದಲ್ಲೇ ಆತನ ಸೇವಕನೊಬ್ಬ ಎಡವಿ ಬಿದ್ದು ಕೈಯಲ್ಲಿದ್ದ ಮದ್ಯದ ಪಾತ್ರೆಯನ್ನು ಚೆಲ್ಲಿಕೊಂಡು ರಾಜ ಕುಳಿತಿದ್ದ ರತ್ನಗಂಬಳಿಯನ್ನು ತೋಯಿಸಿ ಹಾಕಿದ. ಇದರಿಂದ ರೇಗಿದ ರಾಜ ಆತನನ್ನು ಎಳೆದೊಯ್ದು ಸಾಯಿಸಿಬಿಡಿ ಎಂದು ಅಪ್ಪಣೆ ಮಾಡಿದ. ಭಟರು ಆ ನಿಷ್ಪಾಪಿಯನ್ನು ಎಳೆದೊಯ್ದರು.

ರಾಜನ ಜತೆಗೊಬ್ಬ ಕವಿಯಿದ್ದ. ಅವನಿನ್ನೂ ತರುಣ. ವಧೆಯಾಗಲಿರುವ ಸೇವಕ ಇತ್ತೀಚೆಗಷ್ಟೇ ಮದುವೆಯಾಗಿದ್ದವನು ಎಂಬುದು ಅವನ ಮನಸ್ಸಿಗೆ ಬಂತು. ರಾಜನೂ ವಿರಹದಿಂದ ನವೆಯುತ್ತಿದ್ದಾನೆ ಎಂಬುದು ಅವನಿಗೆ ಗೊತ್ತಿತ್ತು. ಕೂಡಲೇ ರಾಜನ ಬಳಿ ಸಾರಿ ಈ ಶ್ಲೋಕವನ್ನು ಹೇಳಿದ:

ಪ್ರಾವೃತಸಮಯಪ್ರವಾಸೋ ಯೌವನದಿವಸೇ ತಥಾ ಚ ದಾರಿದ್ರ್ಯಮ್
ಪ್ರಥಮ ಸ್ನೇಹ ವಿಯೋಗ ಸ್ತ್ರೀಣ್ಯಪಿ ಗುರುಕಾಣಿ ದುಃಖಾನಿ

ಮಳೆಗಾಲದಲ್ಲಿ ಮನದನ್ನೆಯಿಂದ ದೂರವಾಗಿ ಪ್ರವಾಸದಲ್ಲಿರುವುದು, ತಾರುಣ್ಯದಲ್ಲಿ ಅದನ್ನು ಸವಿಯಲು ಸೂಕ್ತ ಧನವಿಲ್ಲದಿರುವುದು ಮತ್ತು ಮೊದಲ ಭೇಟಿಯಾದ ಕೂಡಲೇ ಪ್ರಿಯನನ್ನು ಅಗಲುವುದು-ಇವು ಮೂರು ಮಹಾ ದುಃಖಗಳು.

ಶ್ಲೋಕದ ಧ್ವನಿ ರಾಜನನ್ನು ತಟ್ಟಿತು. ಮಳೆಗಾಲದಲ್ಲಿ ರಾಣಿಯಿಂದ ದೂರವಿದ್ದು ಆತ ದುಃಖ ಅನುಭವಿಸಿದ್ದನಷ್ಟೆ. ಸದ್ಯವೇ ಮದುವೆಯಾದ ಸೇವಕನನ್ನು ಸಾಯಿಸಿ ಆತನ ನವಪತ್ನಿಗೆ ವೈಧವ್ಯ ಉಂಟುಮಾಡುವುದು ಸರಿಯೆ ಎಂಬ ಪ್ರಶ್ನೆ ಕಾಣಿತು. ಶಿಕ್ಷೆ ರದ್ದಾಯಿತು. ತರುಣನಾಗಿದ್ದು, ಬಡವನಾಗಿದ್ದ ಕವಿಗೆ ಸೂಕ್ತ ಧನವೂ ಸಂದಿತು.

-ಹರಿಹರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com