

ಒಂದು ಜೋಕು. ಅಕೌಂಟೆಂಟ್ ಒಬ್ಬ ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ಬೆಳಬೆಳಗ್ಗೆಯೇ ಮತ ಹಾಕಿ ಭಾರಿ ಉತ್ಸಾಹದಿಂದ ಫೇಸ್ಬುಕ್ನಲ್ಲಿ ಫೋಟೋ ಹಾಕಿದ. ಆ ಕ್ಷಣ ಬಾಸ್ನ ಕಮೆಂಟ್ ಬಂತು. 'ಈಗಿನ್ನೂ ಎಂಟು ಗಂಟೆ. ಆಫೀಸಲ್ಲಿ ತುಂಬಾ ಕೆಲಸ ಇದೆ. ರಜೆ ಕ್ಯಾನ್ಸಲ್. ಕೂಡಲೇ ಹೊರಟು ಬಾ.'
ತುಂಬಾ ಕೆಲಸವಿರುವ ಆ ಬಾಸ್ ಕೂಡ ಬೆಳಗ್ಗೆ ಎಂಟು ಗಂಟೆಗೇ ಫೇಸ್ಬುಕ್ನಲ್ಲಿ ಕೂತಿದ್ದಾನೆ ನೋಡಿ!
ಕೆಲ ಸಮೀಕ್ಷೆಗಳ ಪ್ರಕಾರ 21ನೇ ಶತಮಾನದ ಅತ್ಯಂತ ವ್ಯಾಪಕ, ದುಬಾರಿ ಹಾಗೂ ಅಪಾಯಕಾರಿ ಚಟ ಫೇಸ್ಬುಕ್. 2014ಕ್ಕೆ ಈ ಚಟಕ್ಕೆ 10 ವರ್ಷ ತುಂಬಿತು. ಇಷ್ಟು ಸಣ್ಣಅವಧಿಯಲ್ಲಿ ಇದು ಜಗತ್ತಿನಾದ್ಯಂತ 130 ಕೋಟಿ ಜನರನ್ನು ತನ್ನ ತೆಕ್ಕೆಗೆಳೆದುಕೊಂಡಿದೆ. ಇವರಲ್ಲಿ ಅರ್ಧಕ್ಕರ್ಧ ಜನ ಪ್ರತಿದಿನ ಸರಾಸರಿ 20 ನಿಮಿಷಗಳನ್ನು ಫೇಸ್ಬುಕ್ನಲ್ಲಿ ಕಳೆಯುತ್ತಾರೆ. ಅಂದರೆ ಜಗತ್ತಿನಲ್ಲಿ ಪ್ರತಿದಿನ ಕನಿಷ್ಠ 22 ಕೋಟಿ ಗಂಟೆಗಳು ಫೇಸ್ಬುಕ್ನಲ್ಲಿ ವ್ಯರ್ಥವಾಗುತ್ತವೆ. 22 ಕೋಟಿ ಗಂಟೆ ಅಂದರೆ ಹೆಚ್ಚುಕಮ್ಮಿ 1 ಕೋಟಿ ಮಾನವ ದಿನ!
ಹಾಗಾದರೆ ಫೇಸ್ಬುಕ್ನಿಂದ ಏನೂ ಪ್ರಯೋಜನವಿಲ್ಲವೇ? ಇದೆ. ಅದು ನಮ್ಮ ಆಪ್ತರು ಎಷ್ಟೇ ದೂರದಲ್ಲಿದ್ದರೂ ಅವರ ಜೊತೆ ನಮ್ಮನ್ನು ಸುಲಭವಾಗಿ ಮತ್ತು ಬಹಳ ಕಡಿಮೆ ಖರ್ಚಿನಲ್ಲಿ ಸಂಪರ್ಕದಲ್ಲಿರಿಸುತ್ತದೆ. ಹೊಸ ಹೊಸ ಸ್ನೇಹಿತರನ್ನು ನೀಡುತ್ತದೆ. ಮನರಂಜನೆ ಕೊಡುತ್ತದೆ. ಸುದ್ದಿ ಕೊಡುತ್ತದೆ. ಬೇಸರಕ್ಕೆ ಒಳ್ಳೆಯ ಟೈಂಪಾಸ್.
ಆದರೆ ಇದಕ್ಕಿಂತ ಹೆಚ್ಚು ನಷ್ಟ ಫೇಸ್ಬುಕ್ನಿಂದ ನಮಗಾಗುತ್ತಿದೆ. ಅದರಲ್ಲಿ ನಮ್ಮಅಮೂಲ್ಯ ಸಮಯ ಹೇಗೆ ವ್ಯರ್ಥವಾಗಿ ಕಳೆದುಹೋಗುತ್ತಿದೆ ಎಂಬುದು ನಮಗೆ ಗೊತ್ತೇ ಆಗುವುದಿಲ್ಲ. ತುಂಬಾ ಕೆಲಸವಿದೆ ಎಂದು ಕಂಪ್ಯೂಟರ್ ಮುಂದೆ ಕುಳಿತರೂ ಮನಸ್ಸು ಒಂದ್ಸಲ ಫೇಸ್ಬುಕ್ ನೋಡೋಣ ಎಂದು ಎಳೆದುಕೊಂಡು ಹೋಗುತ್ತದೆ. ಒಮ್ಮೆ ಅದಕ್ಕೆ ಲಾಗಿನ್ ಆದರೆ ಕನಿಷ್ಠ ಅರ್ಧ ತಾಸು ಹೊರಬರಲು ಆಗುವುದಿಲ್ಲ. ಬಾಕಿಯಿದ್ದ ಕೆಲಸ ಹಾಗೇ ಉಳಿಯಿತು. ಹಾಗಾದರೆ ಇಷ್ಟು ಹೊತ್ತು ಫೇಸ್ಬುಕ್ನಲ್ಲಿ ಏನು ಸಾಧನೆ ಮಾಡಿದ್ಯಪಾ ಎಂದು ಕೇಳಿದರೆ ಹೇಳಲು ಏನೂ ಇರುವುದಿಲ್ಲ. ಸುಮ್ಮನೆ ಮೇಲೆ ಕೆಳಗೆ ಮೌಸ್ನ ರಿಂಗ್ ಸ್ಕ್ರಾಲ್ ಮಾಡಿದ್ದಷ್ಟೆ. ಒಂದಷ್ಟು ಲೈಕ್ ಒತ್ತಿ, ಕೆಲಸಕ್ಕೆ ಬಾರದ ನಾಲ್ಕು ಕಮೆಂಟ್ ಹಾಕಿ, ಯಾವತ್ತೋ ಮರೆತ ಹಳೆಯ ಗರ್ಲ್ಫ್ರೆಂಡ್ ಅಥವಾ ಬಾಯ್ಫ್ರೆಂಡ್ನ ಮುಖ ಅಚಾನಕ್ಕಾಗಿ ಕಾಣಿಸಿದ್ದರಿಂದ ಸ್ವಲ್ಪ ಹೊತ್ತು ಯದ್ವಾತದ್ವಾ ಫೀಲಿಂಗ್ನಲ್ಲಿ ಮುಳುಗಿ, ಫ್ರೆಂಡ್ ಹಾಕಿದ ಫೋಟೋಗೆ ಮೂವತ್ತಾರು ಕಮೆಂಟ್ ಬಂದಿದೆ... ನನ್ನ ಫೋಟೋಗೇಕೆ ಎಂಟು ಮಾತ್ರ ಬಂದಿದೆ ಎಂದು ಬೇಜಾರು ಮಾಡಿಕೊಂಡು, 1947-48ನೇ ಸಾಲಿನ ಯಾವುದೋ ಹಳೆಯ ಜೋಕನ್ನೇ ಹೊಸತು ಎಂಬಂತೆ ಮತ್ತೊಂದು ಸಲ ಓದಿಕೊಂಡು ಫೇಸ್ಬುಕ್ನಿಂದ ಹೊರಬಂದರೆ ಇನ್ನೂ ಕೆಲಸ ಮುಗಿಸಿಲ್ವಾ ಎಂದು ಇಂಟರ್ಕಾಮ್ನಲ್ಲಿ ಬಾಸ್ ಎಂಬ ಆಜನ್ಮಶತ್ರುವಿನ ಧ್ವನಿ ತಾರಾಮಾರಿ ಕಿರುಚುತ್ತಿರುತ್ತದೆ.
ಈ ಭಾಗ್ಯಕ್ಕಾ ಅಷ್ಟು ಹೊತ್ತು ಫೇಸ್ಬುಕ್ನಲ್ಲಿ ಕಳೆದಿದ್ದು?!
ಇತ್ತೀಚೆಗೆ ನಡೆಸಿದ ಜಾಗತಿಕ ಅಧ್ಯಯನವೊಂದರ ಪ್ರಕಾರ, ಫೇಸ್ಬುಕ್ ಖಾತೆ ಹೊಂದಿರುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಆಫೀಸಿಗೆ ಹೋದ ತಕ್ಷಣ ಕಂಪ್ಯೂಟರ್ನಲ್ಲಿ ಆಫೀಸಿನ ಲಾಗಿನ್ ಆಗುವುದಕ್ಕಿಂತ ಮುಂಚೆ ಫೇಸ್ಬುಕ್ಗೆ ಲಾಗಿನ್ ಆಗಿರುತ್ತಾರೆ. ಅಲ್ಲಿ ಕೆಲ ಹೊತ್ತು ಕಳೆದ ಮೇಲೆ ಕಚೇರಿ ಕೆಲಸ ಶುರುಮಾಡುತ್ತಾರೆ. ನಂತರವೂ ಎಷ್ಟೇ ಬ್ಯುಸಿಯಿದ್ದರೂ ಆಗಾಗ ಫೇಸ್ಬುಕ್ಕಿಗೆ ಬಂದು ಹೋಗುತ್ತಿರುತ್ತಾರೆ. ಮುಚ್ಚಿಟ್ಟ ಟ್ಯಾಬ್ನ ಕಂಸದಲ್ಲಿ ಒಂದು ಎಂಬ ಅಂಕಿ ಕಾಣಿಸಿದ ತಕ್ಷಣ (ನೋಟಿಫಿಕೇಶನ್) ಒಂದುಸಲ ಫೇಸ್ಬುಕ್ಕಿಗೆ ಹೋಗಿಬರುತ್ತಾರೆ. ಬದುಕಿನ ಪ್ರಯಾರಿಟಿ ಹೇಗೆ ಬದಲಾಗಿದೆ ಎಂಬುದನ್ನು ಗಮನಿಸಿ. ಹೊಟ್ಟೆಗೆ ಅನ್ನ ನೀಡುವುದು ಆಫೀಸು. ಆದರೆ, ಅದರ ಕೆಲಸಕ್ಕಿಂತ ನಮಗೆ ಫೇಸ್ಬುಕ್ ಮುಖ್ಯವಾಗಿದೆ.
ಕೆಲವರು ತಮಾಷೆಗೆ ಹೇಳುವಂತೆ ಫೇಸ್ಬುಕ್ನಿಂದ ಉದ್ಧಾರವಾಗಿರುವುದು ಅದನ್ನು ಕಂಡುಹಿಡಿದ ಮಾರ್ಕ್ ಜುಕರ್ಬರ್ಗ್ ಮತ್ತು ಅವನ ಕಂಪನಿಯ ನೌಕರರು ಮಾತ್ರ. ಇನ್ನುಳಿದವರಿಗೆಲ್ಲ ಅದರಿಂದ ನಷ್ಟವಾಗಿದ್ದೇ ಹೆಚ್ಚು. ಆದರೆ, ಅದೆಂಥಾ ಅಡಿಕ್ಷನ್ ಅಂದರೆ ಅದನ್ನು ಬಿಡಬೇಕು ಎಂದು ಮನಸ್ಸು ಎಷ್ಟೇ ಹೇಳಿದರೂ ಬಹಳ ಮಂದಿಗೆ ಬಿಡಲು ಆಗುತ್ತಿಲ್ಲ.
ಎಲ್ಲ ಚಟಗಳೂ ಹಾಗೇ ತಾನೆ?
ಇಷ್ಟಾಗಿಯೂ ಕೆಲವರು ಫೇಸ್ಬುಕ್ನಿಂದ ಏನೂ ನಷ್ಟವಿಲ್ಲ ಎಂದು ವಾದಿಸುತ್ತಾರೆ. ಅಂಥವರಿಗಾಗಿ, ಫೇಸ್ಬುಕ್ ಏಕೆ ಬಿಡಬೇಕು ಎಂಬುದಕ್ಕೆ ಇಲ್ಲೊಂದಿಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದೇನೆ. ಕೆಲವು ತಮಾಷೆಯಾಗಿ ಕಂಡರೂ ಅವು ನಿಜವೇ ಆಗಿವೆ. ಇನ್ನುಳಿದವು ಸೀರಿಯಸ್ಸಾಗಿರುವುದರಿಂದ ಖಂಡಿತ ನಿಜವಾಗಿವೆ. ಇದನ್ನು ಓದಿದ ನಂತರವೂ ನಿಮಗೆ ಫೇಸ್ಬುಕ್ ಬಿಡಬೇಕು ಎಂದು ಸ್ವಲ್ಪವೂ ಅನ್ನಿಸದಿದ್ದರೆ ಫೇಸ್ಬುಕ್ನಿಂದ ನೀವು ಇನ್ನೂ 'ಹಾಳಾಗುವುದು' ಬಾಕಿಯಿದೆ ಎಂದರ್ಥ!
ಎಲ್ಲರೂ ಮಜವಾಗಿದ್ದಾರೆ, ನಾನೊಬ್ಬ ಮಾತ್ರ ದ್ರಾಬೆ!
ಪ್ರಾಬ್ಲಂ ಏನು ಅಂದರೆ, ಫೇಸ್ಬುಕ್ ನಮಗೆ ನಿಮ್ಮ ಬಗ್ಗೆಯೇ ಜಿಗುಪ್ಸೆ ಹುಟ್ಟಿಸಬಲ್ಲುದು. ನಿಮ್ಮೆಲ್ಲಾ ಫ್ರೆಂಡ್ಗಳೂ ಅದರಲ್ಲಿ ತಾವು ಹೋದ ಪ್ರವಾಸ, ಮಾಡಿದ ಪಾರ್ಟಿ, ಮಕ್ಕಳ ಬರ್ತ್ಡೇ, ಹೊಸ ಕಾರು ಹೀಗೆ ಖುಷಿಖುಷಿಯಾದ ಫೋಟೋ ಹಾಕುತ್ತಿರುತ್ತಾರೆ. ನಿಮ್ಮ ಬದುಕಿನಲ್ಲೂ ಈ ಕ್ಷಣಗಳು ಬಂದು ಹೋಗಿರುತ್ತವೆ. ಆದರೆ ಫ್ರೆಂಡ್ಸ್ ತುಂಬಾ ಇರುವುದರಿಂದ ಅವರಲ್ಲಿ ಒಬ್ಬರು ದಿನಕ್ಕೊಂದರಂತೆ ಇಂಥಾದ್ದನ್ನು ಹಾಕಿದರೂ ಸಾಕು, ಅವರೆಲ್ಲ ಮಜವಾಗಿದ್ದಾರೆ... ಆದರೆ ನಾನು ಮಾತ್ರ ಆಫೀಸಲ್ಲಿ ಕತ್ತೆಯಂತೆ ಕೆಲಸ ಮಾಡುತ್ತ ಲೈಫ್ ಎಂಜಾಯ್ ಮಾಡುತ್ತಿಲ್ಲ ಎಂಬ ಭ್ರಮೆ ನಿಮ್ಮಲ್ಲಿ ಶುರುವಾಗುತ್ತದೆ. ಹೀಗೆ ಅನ್ನಿಸತೊಡಗಿದರೆ ನಿಮಗೆ ಬೇಗ ವಯಸ್ಸಾಗುತ್ತದೆ.
ಫ್ರೆಂಡ್ಸ್ ಲಿಸ್ಟ್ನಲ್ಲಿ ಇರೋರೆಲ್ಲ ನಿಮಗೆ ಗೊತ್ತಾ?
ನೀವು ಫೇಸ್ಬುಕ್ ಖಾತೆ ತೆರೆದ ಆರಂಭದಲ್ಲಿ ನಿಮ್ಮ ನಿಜವಾದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಮಾತ್ರ ಅದರಲ್ಲಿ ಫ್ರೆಂಡ್ ಆದರು. ನಿಧಾನವಾಗಿ ಆಫೀಸಿನಲ್ಲಿರುವವರೆಲ್ಲ ಫ್ರೆಂಡ್ ಆದರು. ಆಮೇಲೆ, ಹತ್ತು ವರ್ಷದಿಂದೀಚೆಗೆ ಒಮ್ಮೆಯೂ ಭೇಟಿ ಮಾಡದ ಹೈಸ್ಕೂಲ್, ಕಾಲೇಜಿನ ಫ್ರೆಂಡ್ಗಳೆಲ್ಲ ಫ್ರೆಂಡಾದರು. ಕೊನೆಗೆ ಯಾರ್ಯಾರೋ ಫ್ರೆಂಡ್ ರಿಕ್ವೆಸ್ಟ್ ಕಳಿಸಲು ಶುರುಮಾಡಿದರು ಮತ್ತು ನೀವು ಅವುಗಳನ್ನೂ ಸ್ವೀಕರಿಸುತ್ತ ಹೋದಿರಿ. ಅವರೆಲ್ಲ ಯಾರೆಂಬುದೇ ನಿಮಗೆ ಗೊತ್ತಿಲ್ಲ. ವರ್ಷ ಕಳೆಯುವಷ್ಟರಲ್ಲಿ ನಿಮ್ಮ ಸ್ನೇಹಿತರ ಪಟ್ಟಿ ಸಾವಿರ ದಾಟಿತು. ಆದರೆ ಅದರಲ್ಲಿ 750 ಜನ ಈ ಲೈಫ್ನಲ್ಲಿ ನಿಮ್ಮನ್ನು ಭೇಟಿಯಾದವರಲ್ಲ ಮತ್ತು ಮುಂದೆ ಭೇಟಿಯಾಗುವವರೂ ಅಲ್ಲ. ಇವರೆಲ್ಲ ನಿಜಕ್ಕೂ ನಿಮಗೆ ಬೇಕಾ? ಇವರಲ್ಲೇ ಯಾರಾದರೊಬ್ಬರು ನಿಮ್ಮ ಸ್ಟೇಟಸ್ಗೆ ಕೆಟ್ಟದೊಂದು ಕಮೆಂಟ್ ಹಾಕಿದರೂ ನಿಮಗೆ ತುಂಬಾ ಬೇಜಾರಾಗುತ್ತದೆ.
ಲೈಫು ನಿಮ್ಮದು ಲೈಕೂ ನಿಮ್ಮದು!
ಏನಾದರೊಂದು ಸ್ಟೇಟಸ್ ಅಥವಾ ಹೊಸ ಫೋಟೋ ಹಾಕಿ, ಅದನ್ನು ನಿಮ್ಮ ಫ್ರೆಂಡ್ಸ್ ಲಿಸ್ಟ್ನಲ್ಲಿರುವ ನಿರ್ಧಿಷ್ಟ ಒಬ್ಬಿಬ್ಬರು ವ್ಯಕ್ತಿಗಳು ಲೈಕ್ ಮಾಡಬೇಕು ಅಥವಾ ಅದಕ್ಕೆ ಕಮೆಂಟ್ ಹಾಕಬೇಕು ಎಂದು ಚಡಪಡಿಕೆಯಿಂದ ನೀವು ಕಾಯುತ್ತೀರಾ? ಅವರು ಲೈಕ್ ಒತ್ತಿದರಾ ಇಲ್ಲವಾ ಎಂಬುದನ್ನು ಚೆಕ್ ಮಾಡಲು ಪದೇಪದೇ ಲಾಗಿನ್ ಆಗುತ್ತೀರಾ? ಇದು ನೀವು ಎಫ್ಬಿ ಬಿಡಬೇಕೆಂಬುದರ ಸೂಚನೆ. ಲೈಫು ನಿಮ್ಮದು ಸ್ವಾಮಿ. ಅದನ್ನು ಲೈಕ್ ಮಾಡಬೇಕಾದವರೂ ನೀವೇ. ಯಾರೋ ಮೂರನೇ ವ್ಯಕ್ತಿ ಅದನ್ನು ಮೆಚ್ಚಬೇಕು ಎಂದೇಕೆ ಬಯಸುತ್ತೀರಿ? ಅವರು ಲೈಕ್ ಮಾಡಲಿ ಬಿಡಲಿ, ನಿಮ್ಮ ಬದುಕನ್ನು ನೀವು ಲೈಕ್ ಮಾಡಿ. ವೈಯಕ್ತಿಕವಾಗಿ ನೀವೊಬ್ಬ ಅದ್ಭುತ ವ್ಯಕ್ತಿ. ಅದನ್ನು ನೆನಪಿಟ್ಟುಕೊಂಡು ಅದ್ಭುತವಾಗಿ ಬದುಕಿಬಿಡಿ. ಹೊರಗಿನ ಯಾರೋ ಒಬ್ಬರು ಒಂದು ಲೈಕ್ ಒತ್ತಿ ನಿಮ್ಮ ಆ ದಿನವನ್ನು ಸುಂದರವಾಗಿಸಬೇಕಿಲ್ಲ.
ನಿಮಗೊಂದು ಖಾಸಗಿ ಬದುಕಿತ್ತು, ಅದು ಈಗಿಲ್ಲ
ನೀವಿನ್ನೂ ಫೇಸ್ಬುಕ್ಕಿಗೆ ಪ್ರವೇಶ ಮಾಡಿರದ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ಆಗ ನಿಮಗೊಂದು ಖಾಸಗಿ ಲೈಫಿತ್ತು. ನೀವು ಏನನ್ನು ಬೇಕಾದರೂ ಗುಟ್ಟಾಗಿ ಮಾಡಬಹುದಿತ್ತು. ಈಗ ಮನೆಯಲ್ಲಿ ಹಾ ಹೂ ಎಂದು ಖುಷಿಯಿಂದ ಕಿರುಚಿದರೂ ಹೆಂಡತಿ ಅದರ ಫೋಟೋ ತೆಗೆದು ಫೇಸ್ಬುಕ್ಕಿಗೆ ಹಾಕುತ್ತಾಳೆ! ಅದನ್ನು ಬಾಸ್ ನೋಡಿದರೆ ನಿಮಗೆ ಮುಜುಗರವಾಗುತ್ತದೆ. ಸ್ನೇಹಿತರ ಜೊತೆ ಪಾರ್ಟಿಗೆ ಹೋದಾಗ ಬಿಯರ್ ಮಗ್ ಹಿಡಿದುಕೊಂಡ ಚಿತ್ರವನ್ನು ಯಾವನೋ ಒಬ್ಬ ಎಫ್ಬಿಗೆ ಹಾಕುತ್ತಾನೆ. ಹೆಂಡತಿ ಅದನ್ನು ನೋಡಿ ಗಲಾಟೆ ಮಾಡುತ್ತಾಳೆ. ಫೇಸ್ಬುಕ್ ಎಂಬುದು ಸಂತೆಯಿದ್ದಂತೆ. ಈ ಸಂತೆಯಲ್ಲಿ ಏನನ್ನೂ ಖಾಸಗಿಯಾಗಿ ಮಾಡುವಂತಿಲ್ಲ. ಇದರ ಹೊರಗಿನ ಖಾಸಗಿ ಬದುಕನ್ನು ಕೂಡ ಯಾರಾದರೊಬ್ಬರು ಇಲ್ಲಿಗೆ ತಂದುಹಾಕಿ ನಿಮ್ಮನ್ನು ಬೆತ್ತಲು ಮಾಡುತ್ತಾರೆ.
ನಿಮ್ಮ ಮನಸ್ಸಲ್ಲೇನಿದೆ ಎಂಬುದು ಯಾವನಿಗೆ ಬೇಕಿದೆ?
ಎಫ್ಬಿ ಪುಟ ತೆರೆದಾಕ್ಷಣ ನಿಮಗೆ ಕಾಣುವುದು 'ವಾಟ್ಸ್ ಆನ್ ಯುವರ್ ಮೈಂಡ್' ಎಂಬ ಖಾಲಿ ಜಾಗ. ಅಂದರೆ ಆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲೇನು ನಡೆಯುತ್ತಿದೆ ಎಂಬುದನ್ನುಅಲ್ಲಿ ಬರೆಯಬೇಕೆಂದರ್ಥ. 'ಬೆಂಗಳೂರಿಂದ ಮೈಸೂರಿಗೆ ಹೋಗುತ್ತಿದ್ದೇನೆ. ಬಸ್ ತುಂಬಾ ರಶ್ ಇದೆ. ಇಷ್ಟೊಂದು ಜನ ಮೈಸೂರಿಗೆ ಹೋಗಿ ಏನ್ಮಾಡ್ತಾರೆ?' ಎಂದು ಬರೆದು ಹಾಕುತ್ತೀರಿ ಎಂದಿಟ್ಟುಕೊಳ್ಳಿ. ಯಾವನಿಗೆ ಬೇಕಿದೆ ಅದು? ನೀವು ಮೈಸೂರಿಗಾದರೂ ಹೋಗಿ, ಜೈಪುರಕ್ಕಾದರೂ ಹೋಗಿ, ಅದರಿಂದ ಯಾರಿಗೂ ಏನೂ ಆಗುವುದಿಲ್ಲ. ಬಸ್ಸಿನ ರಶ್ನಲ್ಲಿ ನೀವು ಬೆವರಿ ಒದ್ದೆಯಾದರೆ ಎಫ್ಬಿಯಲ್ಲಿ ಯಾರೂ ಅದನ್ನು ನೋಡಿ ನಿಮಗೆ ಕರ್ಚೀಫು ಕೊಡುವುದಿಲ್ಲ. ಅಷ್ಟೊಂದು ಜನ ಮೈಸೂರಿಗೆ ಹೋಗಿ ಏನು ಮಾಡುತ್ತಾರೆಂಬ ಅಧಿಕ ಪ್ರಸಂಗ ನಿಮಗೆ ಬೇಕಿಲ್ಲ. ಎಫ್ಬಿಯಲ್ಲಿ ಬರುವ ಬಹುಪಾಲು ಸ್ಟೇಟಸ್ಸುಗಳೆಲ್ಲ ಇಂಥವೇ. ಅದರಲ್ಲಿ ಟೈಂ ವೇಸ್ಟ್ ಮಾಡುವುದಕ್ಕೆ ಅರ್ಥವಿದೆಯೇ?
ಎಫ್ಬಿ ಬಿಟ್ಟುನೋಡಿ, ಎಲ್ಲದಕ್ಕೂ ಟೈಂ ಸಿಗುತ್ತದೆ
'ತುಂಬಾ ಬ್ಯುಸಿ ಕಣೋ. ಟೈಮೇ ಇಲ್ಲ. ದಿನಕ್ಕೆ ಇಪ್ಪತ್ತು ತಾಸು ಕೆಲಸ ಮಾಡಿದರೂ ಮುಗಿಯುತ್ತಿಲ್ಲ' ಎಂದು ಫೋನ್ನಲ್ಲಿ ಯಾರಿಗೋ ದೂರು ಕೊಡುತ್ತಿರುವವನು ಕೈಯಲ್ಲಿ ಫೇಸ್ಬುಕ್ ಬ್ರೌಸ್ ಮಾಡುತ್ತಿರುತ್ತಾನೆ. ಇವತ್ತು ಯಾವುದಕ್ಕೂ ಟೈಂ ಸಾಲುತ್ತಿಲ್ಲ ಎಂದು ಕಂಪ್ಲೇಂಟ್ ಮಾಡುವವರಲ್ಲಿ ಹೆಚ್ಚಿನವರ ಸಮಯ ಫೇಸ್ಬುಕ್ನಲ್ಲಿ ಸೋರಿಹೋಗುತ್ತಿದೆ. ದಿನಕ್ಕೆ ಆರು ಸಲ ಎಫ್ಬಿಗೆ ಲಾಗಿನ್ ಆಗಿ ಹತ್ತತ್ತು ನಿಮಿಷ ಅದರಲ್ಲಿ ಕಳೆದರೂ ಒಂದು ತಾಸು ಹಳ್ಳ ಹಿಡಿಯಿತು. ದಿನಕ್ಕೆ ಒಂದು ತಾಸು ಎಂಬುದು ಎಷ್ಟುಅಮೂಲ್ಯ ಗೊತ್ತಾ? ಆ ಒಂದು ತಾಸಿನಲ್ಲಿ ಇಪ್ಪತ್ತು ಪುಟ ಓದಬಹುದು, ಆಫೀಸಿನಲ್ಲಿ ನಿಮ್ಮ ಒಂದು ತಾಸಿಗೆ ಕನಿಷ್ಠ ಐನೂರು ರೂ. ಸಂಬಳವಿರುತ್ತದೆ, ಮನೆಯಲ್ಲಿ ಒಂದು ತಾಸಿನಲ್ಲಿ ಅರ್ಧಕ್ಕರ್ಧ ಮನೆಗೆಲಸ ಮುಗಿಸಬಹುದು. ಫೇಸ್ಬುಕ್ ಬಿಟ್ಟು ನೋಡಿ, ಎಲ್ಲ ಕೆಲಸಕ್ಕೂ ಟೈಂ ಸಿಗುತ್ತದೆ.
ಪ್ರೊಡಕ್ಟಿವಿಟಿ ಕಮ್ಮಿಯಾಗಿದ್ದಕ್ಕೆ ಕಾರಣ ಬೇರೇನೂ ಅಲ್ಲ!
ಎಫ್ಬಿ ಎಂಥಾ ಮಾಯೆಯೆಂದರೆ, ಅದು ಪದೇಪದೇ ನಿಮ್ಮ ಗಮನ ಬಯಸುತ್ತದೆ. ನೀವದಕ್ಕೆ ಅಡಿಕ್ಟ್ ಆಗಿದ್ದರೆ, ಏನೇ ಕೆಲಸ ಮಾಡುತ್ತಿದ್ದರೂ ಹದಿನೈದಿಪ್ಪತ್ತು ನಿಮಿಷಕ್ಕೊಮ್ಮೆ ಅದನ್ನು ನೋಡಲೇಬೇಕು ಅನ್ನಿಸುತ್ತದೆ. ಅಷ್ಟು ಸಮಯ ವ್ಯರ್ಥವಾಯಿತು ಅನ್ನುವುದಕ್ಕಿಂತ, ನೀವು ಮಾಡುತ್ತಿದ್ದ ಕೆಲಸದಲ್ಲಿ ಏಕಾಗ್ರತೆ ಭಂಗವಾಯಿತು. ಅದರಿಂದ ಖಂಡಿತ ಉತ್ಪಾದಕತೆ ಕಡಮೆಯಾಗುತ್ತದೆ. ಪದೇಪದೇ ಮನಸ್ಸು ಬೇರೆಯದೇನನ್ನೋ ಯೋಚಿಸುತ್ತಿದ್ದರೆ ಯಾವ ಕೆಲಸವನ್ನೂ ನೆಟ್ಟಗೆ ಮಾಡಲು ಸಾಧ್ಯವಿಲ್ಲ. ಆಗ ಆಫೀಸಿನಲ್ಲಿ ಹೆಚ್ಚೆಚ್ಚು ತಪ್ಪುಗಳಾಗುತ್ತವೆ. ಎಫ್ಬಿಯಲ್ಲಿ ಒಂದು ಫೋಟೋ ಹಾಕಿಬಿಟ್ಟರೆ ಮುಗಿಯಿತು, ಆವತ್ತಿಡೀ ದಿನ ಈಗ ಒಂದು ಲೈಕ್ ಬಂದಿರಬಹುದು... ಈಗ ಯಾರಾದರೂ ಕಮೆಂಟ್ ಮಾಡಿರಬಹುದು... ಎಂಬ ಯೋಚನೆ ಬರುತ್ತಲೇ ಇರುತ್ತದೆ. ಇದು ವಿದ್ಯಾರ್ಥಿಗಳು, ನೌಕರರು, ಗೃಹಿಣಿಯರೂ ಸೇರಿದಂತೆ ಯಾರಿಗೂ ಒಳ್ಳೆಯದಲ್ಲ. ಎಫ್ಬಿ ಬಿಟ್ಟರೆ ಪ್ರೊಡಕ್ಟಿವಿಟಿ ಹೆಚ್ಚುವುದರಲ್ಲಿ ಯಾವ ಡೌಟೂ ಇಲ್ಲ.
ಗ್ರಹಚಾರ ಕೆಟ್ಟರೆ ಕೆಲಸವೂ ಹೋಗಬಹುದು
ಎಫ್ಬಿಯಿಂದ ಅನೇಕರು ಕೆಲಸ ಕಳೆದುಕೊಂಡ ಉದಾಹರಣೆಗಳಿವೆ. ಇಡೀ ದಿನ ಅದರಲ್ಲೇ ಇರುತ್ತಾನೆ, ಏನೂ ಕೆಲಸ ಮಾಡುವುದಿಲ್ಲ ಎಂದು ಕಂಪನಿಯವರು ಕಿತ್ತುಹಾಕಬಹುದು. ಅಥವಾ, ಅಕಸ್ಮಾತ್ ಆಫೀಸಿನ ಯಾವುದಾದರೂ ರಹಸ್ಯವನ್ನು ನೀವು ಎಫ್ಬಿಯಲ್ಲಿ ಹಾಕಿ ಕೆಲಸ ಕಳೆದುಕೊಳ್ಳಬಹುದು. ಅಥವಾ, ಆಫೀಸಿನ ಪಾಲಿಸಿಗೆ ವಿರುದ್ಧವಾದ ಯಾವುದಾದರೂ ಕೆಲಸ ಮಾಡಿ, ಅದರ ಫೋಟೋವನ್ನು ನಿಮ್ಮ ಸ್ನೇಹಿತರ್ಯಾರಾದರೂ ಎಫ್ಬಿಯಲ್ಲಿ ಹಾಕಿರಬಹುದು. ಹೀಗೆ ಕೆಲಸ ಕಳೆದುಕೊಂಡು 'ನೌಕರಿ ಹೋಯ್ತು' ಎಂದು ಎಫ್ಬಿಯಲ್ಲಿ ಹಾಕಿದರೆ ಅದನ್ನೂ ನೂರು ಜನ ಲೈಕ್ ಮಾಡಿ ಲೈಫನ್ನು ದುರಂತ ಮಾಡಿಬಿಡುತ್ತಾರೆ! ಈಗೀಗ ಎಚ್ಆರ್ ವಿಭಾಗದವರು ಕಂಪನಿಯ ಎಲ್ಲಾ ನೌಕರರ ಎಫ್ಬಿ ಖಾತೆ ಮೇಲೆ ಕಣ್ಣಿಟ್ಟಿರುತ್ತಾರೆ. ಹೊಸತಾಗಿ ಕೆಲಸಕ್ಕೆ ಸೇರುವವರ ಪ್ರೊಫೈಲನ್ನೂ ಅವರು ಜಾಲಾಡುತ್ತಾರೆ. ಅದರಲ್ಲಿ ಈ ವ್ಯಕ್ತಿ ನಮ್ಮ ಕಂಪನಿಯ ಘನತೆಗೆ ಹೊಂದುವುದಿಲ್ಲ ಅನ್ನಿಸಿದರೆ ಮುಲಾಜಿಲ್ಲದೆ ಅರ್ಜಿತಿರಸ್ಕರಿಸುತ್ತಾರೆ.
ಹಳೆ ಪ್ರೀತಿ, ನೋವು ಮರೆಯೋದು ಕಷ್ಟ
ಎಫ್ಬಿ ಒಂಥರಾ ಮದ್ಯವಿದ್ದಂತೆ. 'ಗುಂಡು' ಹಳೆಯದನ್ನು ನೆನಪಿಸಿ ಮನಸ್ಸು ಕೆಡಿಸುವಂತೆ ಎಫ್ಬಿ ಕೂಡ ನಾವು ಮರೆಯಬೇಕೆಂದಿರುವುದನ್ನು ಮತ್ತೆಮತ್ತೆ ನೆನಪಿಸಿ ಗೋಳು ಹೊಯ್ದುಕೊಳ್ಳುತ್ತದೆ. ಕೈಕೊಟ್ಟ ಪ್ರೇಮಿ ಅಲ್ಲಿ ಪದೇಪದೇ ಕಾಣಿಸುತ್ತಾನೆ/ಳೆ. ಅವನನ್ನೋಅವಳನ್ನೋ ಬ್ಲಾಕ್ ಮಾಡಿದಾಕ್ಷಣ ಸಮಸ್ಯೆ ಮುಗಿಯುವುದಿಲ್ಲ. ನಮ್ಮ ಫ್ರೆಂಡ್ಸ್ ಲಿಸ್ಟ್ನಲ್ಲಿರುವವರಿಗೆ ಆ ವ್ಯಕ್ತಿ ಫ್ರೆಂಡ್ ಆಗಿದ್ದರೆ ಮತ್ತೆ ನಮ್ಮ ಟೈಮ್ಲೈನ್ನಲ್ಲಿ 'ಕಾಡುವ ಭೂತ' ಪ್ರತ್ಯಕ್ಷವಾಗುತ್ತದೆ. ಅದಿಲ್ಲವಾದರೆ, ನಾವೇ ಕುತೂಹಲ ತಡೆಯಲಾರದೆ ನನ್ನನ್ನು ಬಿಟ್ಟು ಅವನು ಹೇಗಿದ್ದಾನೆ ನೋಡೋಣ ಎಂದು ಒಮ್ಮೆ ಅವನ ಟೈಮ್ಲೈನ್ನಲ್ಲಿ ಇಣುಕುತ್ತೇವೆ. ಮತ್ತೆ ಹಳೆಯ ನೆನಪುಗಳ ಸವಾರಿ ಶುರುವಾಗುತ್ತದೆ. ಏನನ್ನಾದರೂ ಮರೆಯಬೇಕೆಂದಿದ್ದರೆ ಅದಕ್ಕೆ ಮೊದಲ ಶತ್ರು ಫೇಸ್ಬುಕ್.
ಮುಖ ನೋಡದೆ ಎಷ್ಟು ದಿನವಾಯಿತು?
ಫ್ರೆಂಡ್ಸ್ ಜೊತೆ ಸದಾ ಕನೆಕ್ಟ್ ಆಗಿರಲು ಎಫ್ಬಿ ಒಳ್ಳೆಯ ತಾಣ ಅಂತ ನಾವಂದುಕೊಂಡಿದ್ದೇವೆ. ಆದರೆ, ನಿಧಾನವಾಗಿ ಸಂಬಂಧಗಳನ್ನು ಹಳಸಲು ಬಿಡುವುದೂ ಇದೇ ಫೇಸ್ಬುಕ್. ಇಂದು ಸ್ನೇಹಿತರಿಗೆ ಅಥವಾ ಸಂಬಂಧಿಗಳಿಗೆ ಏನನ್ನು ಹೇಳಬೇಕೆಂದರೂ ಎಫ್ಬಿಯಲ್ಲಿ ಮೆಸೇಜ್ ಹಾಕಿಬಿಟ್ಟರೆ ಮುಗಿಯಿತು ಎಂಬಂತಾಗಿದೆ. ಫೋನ್ ಮಾಡುವುದು ಅಥವಾ ಮುಖತಃ ಭೇಟಿ ಮಾಡುವುದು ಅಪರೂಪವಾಗುತ್ತಿದೆ. ಧ್ವನಿ ಹಾಗೂ ದೃಶ್ಯದಲ್ಲಿ ಸಿಗುವ ಆಪ್ತತೆ ಹಾಗೂ ಸಾಮೀಪ್ಯ ಎಫ್ಬಿ ಟೈಮ್ಲೈನ್ ಮೇಲೆ ನಾಲ್ಕು ಸಾಲು ಬರೆದು ಹಾಕಿದರೆ ಸಿಗುವುದಿಲ್ಲ. ಇವತ್ತು ಅಪ್ಪ ಅಮ್ಮನ ಜೊತೆಗೂ ಎಫ್ಬಿಯಲ್ಲೇ ಸಂಪರ್ಕ ಇಟ್ಟುಕೊಳ್ಳುವಷ್ಟರ ಮಟ್ಟಿಗೆ ಮಕ್ಕಳು ಮುಂದುವರಿದಿದ್ದಾರೆ. ಇದು ಸಂಬಂಧಿಗಳ ನಡುವೆ ಪ್ರೀತಿ ಉಳಿಸಿಕೊಳ್ಳುವ ವಿಷಯದಲ್ಲಿ ಅಪಾಯಕಾರಿ ಬೆಳವಣಿಗೆ.
ಅಜ್ಜ, ಅಜ್ಜಿ ಕೂಡ ಎಫ್ಬಿಗೆ ಬಂದಿದ್ದಾರೆ!
ಈಗ ನಿಮ್ಮ ಕುಟುಂಬದಲ್ಲಿ ನೀವು ಅಥವಾ ನಿಮ್ಮ ಅಕ್ಕ-ತಮ್ಮಂದಿರಷ್ಟೇ ಎಫ್ಬಿ ಬಳಸುತ್ತಿಲ್ಲ. ನಿಮ್ಮ ಅಜ್ಜ ಅಜ್ಜಿ, ಅಪ್ಪ ಅಮ್ಮ ಕೂಡ ಅಲ್ಲೊಂದು ಖಾತೆ ತೆರೆದಿದ್ದಾರೆ. ನಿಮಗೆ ಎಷ್ಟು ವಯಸ್ಸಾಗಿದ್ದರೂ, ನೀವು ಎಷ್ಟೇ ಗೌರವಯುತವಾದ ಹುದ್ದೆಯಲ್ಲಿದ್ದರೂ ಅಜ್ಜ ಅಜ್ಜಿಗೆ ನೀವಿನ್ನೂ ಮೊಮ್ಮಕ್ಕಳೇ. ಹಾಗಾಗಿ ತಮ್ಮ ಕಡತದಲ್ಲಿರುವ ನಿಮ್ಮ ಯಾವುದೋ ಹಳೆಯ ಚಿತ್ರಗಳನ್ನು ಆಗಾಗ ಎಫ್ಬಿಯಲ್ಲಿ ಅವರು ಬಿಡುಗಡೆ ಮಾಡುತ್ತಿರುತ್ತಾರೆ. ಅದು ನೀವು ಎರಡು ವರ್ಷದವರಾಗಿದ್ದಾಗ ದಿಗಂಬರರಾಗಿ ಓಡಾಡಿಕೊಂಡಿದ್ದ ಚಿತ್ರವೂ ಆಗಿರಬಹುದು. ಅವರಿಗದು ಮುದ್ದು ಮೊಮ್ಮಕ್ಕಳ ಚಿತ್ರ. ನಿಮಗದು ಮಹಾನ್ ಮುಜುಗರದ ವಿಷಯ. ಬೇಕಾ ಇದು?
ನಿಮ್ಮ ಮೇಲೊಂದು ಸ್ಪೈ ಕ್ಯಾಮೆರಾ ಇದೆ
ಮೊದಲೇ ಹೇಳಿದಂತೆ ಎಫ್ಬಿಯಲ್ಲಿರುವುದು ಅಂದರೆ ಸಂತೆಯಲ್ಲಿ ಓಡಾಡಿದಂತೆ. ಅಲ್ಲಿ ಯಾರು ನಿಮ್ಮನ್ನು ನೋಡುತ್ತಿದ್ದಾರೆಂಬುದು ಗೊತ್ತೇ ಆಗುವುದಿಲ್ಲ. ನಿಮ್ಮ ಅಜ್ಜ ಅಜ್ಜಿ ಅಥವಾ ಅಪ್ಪ ಅಮ್ಮ ನಿಮ್ಮ ಮೇಲೊಂದು ಕಣ್ಣಿಡಲೆಂದೇ ಅಲ್ಲಿ ಅಕೌಂಟ್ ಓಪನ್ ಮಾಡಿರಬಹುದು. ಅವರ ಸ್ಪೈ ಕ್ಯಾಮೆರಾ ನಿಮ್ಮ ಮೇಲೆ ಯಾವತ್ತೂ ತಿರುಗುತ್ತಿರುತ್ತದೆ. ನೀವೇನು ಮಾಡುತ್ತೀರಿ, ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ಏನೇನು ರಹಸ್ಯಗಳನ್ನು ಬಿಚ್ಚಿಡುತ್ತಿದ್ದಾರೆ ಎಂಬುದರಿಂದ ಹಿಡಿದು ನಿಮ್ಮ ಫ್ರೆಂಡ್ಸ್ ಲಿಸ್ಟ್ನಲ್ಲಿ ಯಾರ್ಯಾರು ಹುಡುಗರಿದ್ದಾರೆ, ಯಾರ್ಯಾರು ಹುಡುಗಿಯರಿದ್ದಾರೆ, ಯಾರ ಜೊತೆ ನೀವು ಹೆಚ್ಚು ಆಪ್ತರಾಗಿದ್ದೀರಿ, ಯಾವ ಪಾರ್ಟಿಯ ಫೋಟೋದಲ್ಲಿ ನೀವು ಯಾವ ಅವಸ್ಥೆಯಲ್ಲಿದ್ದೀರಿ ಎಂಬುದರವರೆಗೆ ಎಲ್ಲವನ್ನೂ ಅವರು ತನಿಖೆ ಮಾಡುತ್ತಾರೆ. ಅದರ ಪರಿಣಾಮ ಏನು ಎಂಬುದು ನಿಮಗೆ ಗೊತ್ತು.
ಟ್ಯಾಗುಕೋರರಿಂದ ಪಾರಾಗಲು ಏಕೈಕ ದಾರಿ
'ಟ್ಯಾಗೋರರ' ವಂಶಸ್ಥರು ಎಫ್ಬಿ ತುಂಬಾ ಏಡಿ ಮರಿಗಳಂತೆ ತುಂಬಿಕೊಂಡಿದ್ದಾರೆ. ಅವರು ನಿಮಗೆ ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಟ್ಯಾಗ್ ಮಾಡುತ್ತಿರುತ್ತಾರೆ. ನೀವು ಯಾವುದನ್ನು ಮನೆಯವರಿಂದ ಅಥವಾ ಬಾಸ್ಗಳಿಂದ ರಹಸ್ಯವಾಗಿಡಬೇಕು ಎಂದುಕೊಂಡಿರುತ್ತೀರೋ ಅಂತಹ ಫೋಟೋ ಅಥವಾ ಸ್ಟೇಟಸ್ಸುಗಳನ್ನು ಮರೆಯದೆ ನಿಮಗೆ ಟ್ಯಾಗ್ ಮಾಡುತ್ತಾರೆ. ನೀವೆಷ್ಟು ಬೈದರೂ, ಬೊಬ್ಬೆ ಹೊಡೆದರೂಅವರಿಗದು ತಾಗುವುದಿಲ್ಲ. ಮದುವೆಯಾದ ಹೊಸತರಲ್ಲಿ ಹಳೆಯ ಗರ್ಲ್ಫ್ರೆಂಡ್ ಜೊತೆ ಆಪ್ತವಾಗಿ ಕೂತಿರುವ ಫೋಟೋವನ್ನು ನಿಮಗೆ ಟ್ಯಾಗ್ ಮಾಡಿದರೆ ಗತಿ ಏನಾಗಬೇಡ. ಇಂಥ ಕಿಡಿಗೇಡಿ ಕೃತ್ಯಗಳಿಗೆ ಫೇಸ್ಬುಕ್ ಹೇಳಿ ಮಾಡಿಸಿದ ಜಾಗ. ಇದರಿಂದ ಬಚಾವಾಗಬೇಕು ಎಂದಾದರೆ ಎಫ್ಬಿ ತ್ಯಾಗ ಮಾಡುವುದೊಂದೇ ದಾರಿ.
ಹಳ್ಳಕ್ಕೆ ಬೀಳೋದಕ್ಕೆ ಫೇಸ್ಬುಕ್ಕೇ ಬೇಕಾ?
ಫೇಸ್ಬುಕ್ ಲವ್ ಕೊಲೆಯಲ್ಲಿ ಅಂತ್ಯ. ಫೇಸ್ಬುಕ್ ಪ್ರೇಮಿಯ ಜೊತೆ ಓಡಿಹೋಗಿ ಮೋಸಹೋದ ಹುಡುಗಿ. ಕೆಲಸ ಕೊಡಿಸುತ್ತೇವೆಂದು ಫೇಸ್ಬುಕ್ನಲ್ಲಿ ವಂಚನೆ. ಹೀಗೆ ಇತ್ತೀಚೆಗೆ ವಾರಕ್ಕೊಂದಾದರೂ ಫೇಸ್ಬುಕ್ ಅವಾಂತರದ ಸುದ್ದಿಗಳು ಪತ್ರಿಕೆಗಳಲ್ಲಿರುತ್ತವೆ. ಸ್ವಲ್ಪ ಎಚ್ಚರ ತಪ್ಪಿದರೆ, ಯಾರಿಗ್ಗೊತ್ತು, ಮುಂದಿನ ಬಲಿ ನೀವೂ ಆಗಬಹುದು! ಎಫ್ಬಿಯಲ್ಲಿ ಹೆಚ್ಚು ವಂಚನೆ ನಡೆಯುವುದು ಪ್ರೀತಿಯ ವಿಷಯದಲ್ಲಿ. ಅನೇಕ ಮದುವೆಗಳು ಇದರಿಂದ ಮುರಿದುಬಿದ್ದಿವೆ. ಪ್ರೊಫೈಲಿಗೆ ಬೇರಾರದ್ದೋ ಸುಂದರ ಫೋಟೋ ಹಾಕಿ ಹುಡುಗರು / ಹುಡುಗಿಯರನ್ನು ಮಂಗ ಮಾಡಿ ಕೊನೆಗೆ ಭೇಟಿಯಾದಾಗ ನಲವತ್ತು ವರ್ಷದ ಆಂಟಿಯೋ ನಲವತ್ತೈದು ವರ್ಷದ ಅಂಕಲ್ಲೋ ಸಿಕ್ಕಿ ಎದೆ ಒಡೆಯುವಂತಹ ಘಟನೆಗಳು ಸಾಕಷ್ಟು ನಡೆದಿವೆ. ಇಂಟರ್ನೆಟ್ಗೆ ದುಡ್ಡು ಖರ್ಚುಮಾಡಿ, ಬದುಕಿನ ಬೆಲೆಬಾಳುವ ಒಂದಷ್ಟು ಸಮಯವನ್ನೂ ವ್ಯರ್ಥ ಮಾಡಿ ಹೀಗೆ ಮೋಸಹೋಗಿ ಎಂದು ಬ್ರಹ್ಮ ನಿಮ್ಮ ಹಣೆಯಲ್ಲಿ ಖಂಡಿತ ಬರೆದಿಲ್ಲ. ಜುಕರ್ಬರ್ಗ್ ಬರೆದಿದ್ದರೆ ಅದನ್ನು ಅಳಿಸಿಹಾಕಲು ನಿಮ್ಮಿಂದ ಸಾಧ್ಯವಿದೆ.
ಮಾಹಿತಿ ಸುನಾಮಿಯಲ್ಲಿ ಕೊಚ್ಚಿ ಹೋಗಬೇಡಿ
ಅತಿಯಾದ ಮಾಹಿತಿಯಿಂದ ಎಫ್ಬಿ ತುಂಬಿ ತುಳುಕುತ್ತಿದೆ. ನಿಮ್ಮ ಟೈಮ್ಲೈನ್ನಲ್ಲಿ ಬೇಕಾದ್ದಕ್ಕಿಂತ ಬೇಡವಾಗಿದ್ದೇ ಹೆಚ್ಚು ಕಾಣಿಸುತ್ತಿರುತ್ತದೆ. ಫ್ರೆಂಡ್ಸ್ ಲಿಸ್ಟ್ನಲ್ಲಿರುವ ಎರಡು ಸಾವಿರ ಜನರಲ್ಲಿ ಕನಿಷ್ಠ ಐನೂರು ಜನರು ದಿನಕ್ಕೊಂದರಂತೆ ಸ್ಟೇಟಸ್ ಅಪ್ಡೇಟ್ ಮಾಡಿದರೂ ಸಾಕು, ನಿಮಗದು ಉಸಿರುಗಟ್ಟಿಸುತ್ತದೆ. ತಾನೊಬ್ಬ ಅದ್ಭುತ ಕವಿ ಎಂದುಕೊಂಡು ಲಾಗಿನ್ ಮಾಡಿದಾಗಲೆಲ್ಲ ಒಂದೊಂದು ಕವನ ಗೀಚುವವರು, ಮಹಾನ್ ತತ್ವಜ್ಞಾನಿಯಂತೆ ದಿನಕ್ಕೊಂದು ಸಾಲು ಪ್ರವಚನ ಬರೆಯುವವರು, ತಮ್ಮ ಮಕ್ಕಳ ಫೋಟೋ ತಮಗಿಷ್ಟವಾದಂತೆ ಜಗತ್ತಿಗೂ ಇಷ್ಟವಾಗುತ್ತದೆ ಎಂಬ ಭ್ರಮೆಯಲ್ಲಿ ಬರೀ ಅವರ ಫೋಟೋಗಳನ್ನೇ ಹಾಕುವವರು, ಅವುಗಳಿಗೆ ನೀವು ಕಮೆಂಟ್ ಮಾಡದಿದ್ದರೆ ನಿಮ್ಮ ಬಗ್ಗೆ ಸಿಟ್ಟಾಗುವವರು, ಯಾವ್ಯಾವುದೋ ಗ್ರೂಪ್ಗಳಿಗೆ ನಿಮ್ಮನ್ನು ಸೇರಿಸುವವರು, ಎಲ್ಲೆಲ್ಲಿಂದಲೋ ವಿಡಿಯೋ ತಂದು ಹಾಕಿ ನೀವದನ್ನು ನೋಡಲೇಬೇಕೆಂದು ಒತ್ತಾಯಿಸುವವರು ಹೀಗೆ ಎಫ್ಬಿಯಲ್ಲಿ ಸಾಕಪ್ಪಾ ಸಾಕು ಎಂಬಷ್ಟು ಅನ್ವಾಂಟೆಡ್ ಚಟುವಟಿಕೆಗಳು ನಡೆಯುತ್ತಿರುತ್ತವೆ. ನೀವದಕ್ಕೆ ಅನಿವಾರ್ಯ ಬಲಿಪಶು.
ಎಫ್ಬಿಯಲ್ಲಿ ಕೃಷಿ ಮಾಡಿ ಯಾವ ಸೀಮೆ ಕೃಷಿಕರಾಗ್ತೀರಿ?
ಫೇಸ್ಬುಕ್ ಗೇಮ್ಸ್ಗಳನ್ನು ತುಂಬಾ ಜನ ಬಹಳ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ. ನಿಮಗೆ ಆ ಆಟಗಳು ಇಷ್ಟವಿಲ್ಲದಿದ್ದರೂ ಪ್ರತಿದಿನ ಅದರ ರಿಕ್ವೆಸ್ಟ್ ಕಳಿಸುತ್ತಿರುತ್ತಾರೆ. ಅದನ್ನು ಅಕ್ಸೆಪ್ಟ್ ಮಾಡದಿದ್ದರೆ ಎಷ್ಟೋ ಜನಕ್ಕೆ ನಿಮ್ಮ ಮೇಲೆ ಸಿಟ್ಟೂ ಬರುತ್ತದೆ. ನಿಮಗೆ ಗೊತ್ತೇ ಇಲ್ಲದ ಆಟಗಳಲ್ಲಿ ನಿಮ್ಮನ್ನು ಹೇಗೋ ತೂರಿಸಿ ಜಗತ್ತಿಗೆಲ್ಲ ನೀವು ಆ ಆಟ ಆಡುತ್ತಿದ್ದೀರೆಂದು ಎಫ್ಬಿಯಲ್ಲಿ ಟಾಂಟಾಂ ಮಾಡುವ ಅದೆಂಥದೋ ಒಂದು ಮಾಯದ ವಿದ್ಯೆ ಅವರಿಗೆಲ್ಲ ಗೊತ್ತಿದೆ. ಉಚಿತವಾಗಿ ಮೊಬೈಲ್ ಕೊಡುತ್ತೇವೆಂಬ ಸುಳ್ಳು ಆಟಕ್ಕೆ ನೀವೇ ಸೃಷ್ಟಿಕರ್ತರು ಎಂಬಂತೆ ಬೇರೆಯವರು ಮಾಡಿಡಲು ಸಾಧ್ಯವಿದೆ. ಅದು ನಿಮಗೆ ಗೊತ್ತೇ ಆಗುವುದಿಲ್ಲ. ಇಂಥ ಎಡವಟ್ಟುಗಳು ಯಾಕೆ ಬೇಕು? ಎಫ್ಬಿಯಲ್ಲಿ ಗಿಡ ನೆಟ್ಟು, ಹಣ್ಣು ಕೊಯ್ದು, ಹಾಲು ಕರೆದು, ಮಾರ್ಕೆಟ್ನಲ್ಲಿ ಮಾರಿ ಸುಳ್ಳುಸುಳ್ಳೇ ದುಡ್ಡು ಮಾಡಿ ನಿಮಗೆ ಯಾವ ಸೀಮೆ ಕೃಷಿಕರಾಗಬೇಕಿದೆ?
ಬೇಹುಗಾರಿಕೆ ಮಾಡಿ ಸಿಕ್ಕಿಬೀಳ್ತೀರಿ ಹುಷಾರು!
ಕೆಲವರು ಫೇಸ್ಬುಕ್ನಲ್ಲಿ ಬಹಿರಂಗವಾಗಿ ಏನೂ ಮಾಡುವುದಿಲ್ಲ. ಮೂರು ವರ್ಷದಲ್ಲಿ ಒಂದೇ ಒಂದು ಸ್ಟೇಟಸ್ ಅಪ್ಡೇಟ್ ಮಾಡಿರುವುದಿಲ್ಲ, ಒಂದೇ ಒಂದು ಕಮೆಂಟ್ ಬರೆದಿರುವುದಿಲ್ಲ. ಆದರೂ ದಿನಕ್ಕೆ ಮೂರ್ನಾಲ್ಕು ತಾಸು ಎಫ್ಬಿಯಲ್ಲಿರುತ್ತಾರೆ. ಹಾಗಾದರೆ ಅವರೇನು ಮಾಡುತ್ತಾರೆ? ಬೇರೆಯವರ ಪ್ರೊಫೈಲ್ ನೋಡುವುದು, ಫೋಟೋ ನೋಡುವುದು, ತಮಗೆ ಗೊತ್ತಿರುವವರ ಲೈಫ್ನಲ್ಲಿ ಏನು ನಡೆಯುತ್ತಿದೆ ಎಂದು ಕದ್ದು ನೋಡುವುದು. ಇದೆಲ್ಲ ಯಾರಿಗೂ ಗೊತ್ತಾಗುವುದಿಲ್ಲ ಅಂತ ಅವರಂದುಕೊಂಡಿರುತ್ತಾರೆ. ಆದರೆ ಇಂಥದ್ದನ್ನೂ ಪತ್ತೆಹಚ್ಚಲು ಫೇಸ್ಬುಕ್ನಲ್ಲಿ ಹಲವಾರು ಮಾರ್ಗಗಳು ಆವಿಷ್ಕಾರಗೊಂಡಿವೆ. ನನ್ನ ಪ್ರೊಫೈಲ್ ಯಾರು ನೋಡಿದ್ದಾರೆಂದು ತಿಳಿದುಕೊಳ್ಳುವುದು ಈಗ ಬಹಳ ಸುಲಭ. ಹಾಗಾಗಿ ನೀವು ಯಾರ ಬಗ್ಗೆ ಬೇಹುಗಾರಿಕೆ ನಡೆಸಿದರೂ ಅದು ಅವರಿಗೆ ಗೊತ್ತಾಗುತ್ತದೆ. ನಿಮಗೆ ಗೊತ್ತಿಲ್ಲದಂತೆ ನಿಮ್ಮ ಬಗ್ಗೆ ಅವರು ಅಸಹ್ಯಪಟ್ಟುಕೊಳ್ಳುತ್ತಾರೆ.
ಯಾವುದೋ ಮೂಡ್ನಲ್ಲಿ ಏನೋ ಬರೆದು ಅವಾಂತರ
ಅನೇಕರು ರಾತ್ರಿ ಕುಡಿದಾಗ ಎಫ್ಬಿಯಲ್ಲಿ ಏನೇನೋ ಬರೆದು ಮರುದಿನ ಅದನ್ನು ಡಿಲೀಟ್ ಮಾಡಿ ಸಾರಿ ಕೇಳುತ್ತಾರೆ. ಅಷ್ಟರಲ್ಲಿ ಮರ್ಯಾದೆ ಹೋಗಿರುತ್ತದೆ. ಇನ್ನು ಕೆಲವರು ಯಾವುದೋ ಮೂಡ್ನಲ್ಲಿ ಬರೆಯಬಾರದ್ದನ್ನು ಬರೆದು ಆಮೇಲೆ ಮೂಡ್ ಸರಿಹೋದಾಗ ಹಿಂಗೆಲ್ಲ ಯಾಕೆ ಬರೆದೆ ಎಂದು ಗಾಬರಿ ಬೀಳುತ್ತಾರೆ. ಅಷ್ಟರಲ್ಲಿ ನಿಮ್ಮ ಬಗ್ಗೆ ಬೇರೆಯವರಿಗೆ ತಿಳಿಯಬಾರದ್ದು ತಿಳಿದುಹೋಗಿರಬಹುದು ಅಥವಾ ಬೇರೆಯವರಿಗೆ ನೀವು ಮಾಡಬಾರದ ಕಮೆಂಟ್ಮಾಡಿ ಅದು ಅವರನ್ನು ಹರ್ಟ್ ಮಾಡಿರಬಹುದು. ಅದು ನೀವೇ ಕೈಯಾರೆ ಮಾಡಿಕೊಂಡ ಎಡವಟ್ಟು. ಮನಸ್ಸು ಹಿಡಿತದಲ್ಲಿಲ್ಲದಿದ್ದಾಗ ಎಫ್ಬಿಗೂ ಲಂಗು ಲಗಾಮಿರುವುದಿಲ್ಲ.
ಎಫ್ಬಿ ಇಲ್ಲದಿದ್ದರೆ ಇವನ್ನೆಲ್ಲ ಮಾಡಬಹುದು