ಹ್ರಾಂ.. ಹ್ರೀಂ... ಹ್ರೂಂ.. ಹುಂ... ಫಟ್

ಕೊಂಚ ಸಸ್ಪೆನ್ಸ್ ಭಯಂಕರ ಥ್ರಿಲ್ , ನೀವು ಪುಕ್ಕಲರಾಗಿದ್ರೆ ಈ ಕತೆಗಳನ್ನು ಓದಲೇಬೇಡಿ!
ಹ್ರಾಂ.. ಹ್ರೀಂ... ಹ್ರೂಂ.. ಹುಂ... ಫಟ್
Updated on: 

ಓಂ ಹ್ರಾಂ ಹ್ರೀಂ ಹ್ರೂಂ ಹುಂ ಫಟ್ ಸ್ವಾಹಾ
ನೀವು ಪುಕ್ಕಲರಾಗಿದ್ರೆ ಈ ಕತೆಗಳನ್ನು ಓದಲೇಬೇಡಿ!
ರಾತ್ರಿ ಓದಿ ಹೊರಗೆ ಹೋಗಲು ಭಯವಾದ್ರೆ ನಾವು ಹೊಣೆಯಲ್ಲ!
ಇಂದಿಗೂ ಬಗೆಹರಿಯದ ಶತಮಾನದ ದೆವ್ವದ ಕತೆಗಳು...
ದೆವ್ವಗಳನ್ನು ನೀವು ನಂಬದೇ ಇರಬಹುದು.
ಆದರೆ ಆಗುವ ಭಯವನ್ನು ತಳ್ಳಿ ಹಾಕಲಾಗದು, ಅಲ್ಲವೇ?


ಕಾಲೊತ್ತು ದಾಕ್ಷಾಯಣಿ
ಟಕ್ ಟಕ್ ಟಕ್.
ದಾಕ್ಷಾಯಣೀ! ದಾಕ್ಷಾಯಣೀ!
ಯಾರೋ ಕರೆಯುತ್ತಿದ್ದಾರೆ. ಹೆಣ್ಣು ಧ್ವನಿ. ಈ ಅಪರಾತ್ರಿಯಲ್ಲಿ?
ಗಂಡನ ಪಕ್ಕ ಮಲಗಿದ್ದ ದಾಕ್ಷಾಯಣಿ ಎದ್ದು ಬಾಗಿಲ ಬಳಿ ಹೋದಳು. ದೆವ್ವ ಹಾಗಿರಲಿ, ದೇವರನ್ನೂ ನಂಬದ 21ನೇ ಶತಮಾನದ ಮಾಡ್ರನ್ ಹೆಣ್ಣುಮಗಳು ಆಕೆ. ಹೆಸರು ಮಾತ್ರ ಹಳೆಯದು. ಇನ್ನೆಲ್ಲ ಅಲ್ಟ್ರಾಮಾಡರ್ನ್; ಮಲಗುವಾಗ ವಿಕ್ಟೋರಿಯಾ ಸೀಕ್ರೆಟ್ ಅಂಡರ್ ಗಾರ್ಮೆಂಟ್ ತೊಡುವಷ್ಟು!
ಯಾರದು ಈ ಅಪರಾತ್ರಿಯಲ್ಲಿ? ಏನು ಬೇಕು ನಿನಗೆ? ದಾಕ್ಷಾಯಣಿ ಕೇಳಿದಳು. ಬಾಗಿಲ ಹೊರಗಿನಿಂದ ಉತ್ತರವಿಲ್ಲ. ಬದಲಿಗೆ ಮತ್ತೆ ದಾಕ್ಷಾಯಣೀ ದಾಕ್ಷಾಯಣೀ ಎಂಬ ಕರೆ.
ದಾಕ್ಷಾಯಣಿ ವಾಪಸ್ ಹೋಗಿ ಗಂಡನನ್ನು ಎಬ್ಬಿಸಿದಳು. ಅಕ್ಕಪಕ್ಕದಲ್ಲಿ ಮನೆಗಳಿಲ್ಲದ ಒಂಟಿ ಮನೆ ಅವರದು. ಬೆಂಗಳೂರಿನ ಹೊರವಲಯದಲ್ಲಿದೆ. ಇಷ್ಟು ರಾತ್ರಿಯಲ್ಲಿ ಯಾರು ಎಂಬುದನ್ನು ತಿಳಿದುಕೊಳ್ಳದೆ ಬಾಗಿಲು ತೆರೆಯುವಷ್ಟು ದಡ್ಡರಲ್ಲ ಅವರು.
ಡ್ರಾನಿಂದ ಗಂಡ ಪಿಸ್ತೂಲ್ ತೆಗೆದ. ಇಬ್ಬರೂ ಹೋಗಿ ಬಾಗಿಲು ತೆರೆದರು. ಹೊರಗೆ ಯಾರೂ ಇಲ್ಲ. ನೀಲಿ ಹೊಗೆ ಹಾಯುತ್ತಿತ್ತು.
ದಾಕ್ಷಾಯಣಿಗೆ ಬರುವ ಅಶರೀರ ಕರೆ ಆವತ್ತಿಗೇ ನಿಲ್ಲಲಿಲ್ಲ. ಮಾರನೆಯ ದಿನ ರಾತ್ರಿ ಮಲಗಿದ್ದಾಗ ಕಿಚನ್‌ನಿಂದ ಕರೆ ಬಂತು. ಮತ್ತೆ ಇಬ್ಬರೂ ಪಿಸ್ತೂಲ್ ಹಿಡಿದು ಎದ್ದುಹೋದರು. ಅಡುಗೆ ಮನೆಯಲ್ಲಿ ಏನೂ ಇಲ್ಲ. ಗಂಧಕ ಸುಟ್ಟ ಕಮಟು ವಾಸನೆ.
ಮೂರನೆಯ ದಿನ ರಾತ್ರಿ ಟಾಯ್ಲೆಟ್‌ನಿಂದ ಕರೆ. ಎದ್ದುಹೋಗಿ ನೋಡಿದರೆ ಏನೂ ಇಲ್ಲ. ಆಗಷ್ಟೇ ಯಾರೋ ಮಲ ವಿಸರ್ಜನೆ ಮಾಡಿ ಹೋದ ದುರ್ನಾತ!
ಗಂಡ-ಹೆಂಡತಿ ಪೊಲೀಸ್ ಸ್ಟೇಶನ್ನಿಗೆ ಹೋದರು. ಪೊಲೀಸರು ಯಾರ ವಿರುದ್ಧ ಅಂತ ಕೇಸು ಹಾಕುತ್ತಾರೆ? ಯಾವುದಾದ್ರೂ ದೇವಸ್ಥಾನಕ್ಕೋ ಮಾಟಗಾರನ ಬಳಿಗೋ ಹೋಗಿ ಪೂಜೆ ಮಾಡಿಸಿ ಎಂದು ಪುಕ್ಕಟೆ ಸಲಹೆ ನೀಡಿ ಕಳಿಸಿದರು. ದಾಕ್ಷಾಯಣಿ ನಾಸ್ತಿಕಳಾದರೂ ಅವಳ ಗಂಡನಿಗೆ ದೇವರಲ್ಲಿ ನಂಬಿಕೆ. ಹೆಂಡತಿಯನ್ನು ಕರೆದುಕೊಂಡು ಮೂವತ್ತೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕೊಳ್ಳೇಗಾಲದ ಸುಪ್ರಸಿದ್ಧ ಜ್ಯೋತಿಷಿಯ ಬಳಿ ಹೋದ. ಆ ಪುಣ್ಯಾತ್ಮ ಅದೇನೋ ಮರದ ಬೇರು ಕೊಟ್ಟು ಇಬ್ಬರೂ ಕುತ್ತಿಗೆಗೆ ಕಟ್ಟಿಕೊಳ್ಳುವಂತೆ ಹೇಳಿ ಮೂರು ಸಾವಿರ ರೂಪಾಯಿ ಕಿತ್ತುಕೊಂಡು ಕಳಿಸಿದ.
ಬೇರೆ ವಿಧಿಯಿಲ್ಲದೆ ವಿಕ್ಟೋರಿಯಾ ಸೀಕ್ರೆಟ್ ಅಂಡರ್‌ವೇರ್ ತೊಡುವ ದಾಕ್ಷಾಯಣಿಯೂ, ಮನೆಯಲ್ಲಿ ಪಿಸ್ತೂಲ್ ಇಟ್ಟುಕೊಳ್ಳುವ ಅವಳ ಗಂಡನೂ ಕುತ್ತಿಗೆಗೆ ಬೇರು ಕಟ್ಟಿಕೊಂಡರು. ಕಾಕತಾಳೀಯವೋ ಏನೋ ಆವತ್ತಿನಿಂದ ದಾಕ್ಷಾಯಣಿಗೆ ಬರುತ್ತಿದ್ದ ಕರೆ ನಿಂತೇಹೋಯಿತು.
ಎಂಟನೆಯ ದಿನ ಯಾವುದೋ ಪಾರ್ಟಿಗೆ ಹೋಗಬೇಕೆಂದು ದಾಕ್ಷಾಯಣಿ ಬೇರು ಕಿತ್ತೆಸೆದಳು. ತಣ್ಣಗೆ ಎರಡು ಟಿನ್ ಬಿಯರ್ ಕುಡಿದು ಮನೆಗೆ ಬಂದು ರಾತ್ರಿ ಮಲಗಿದ್ದಾಗ ತಲೆದಿಂಬಿನ ಬಳಿ ಯಾರೋ ಓಡಾಡಿದಂತೆ ಅನ್ನಿಸಿತು. ನಿಧಾನವಾಗಿ ಆ ಆಕೃತಿ ಆಕೆಯ ಕಾಲ ಬುಡಕ್ಕೆ ಬಂತು. ದಾಕ್ಷಾಯಣಿಯ ಕಾಲುಗಳ ಮೇಲೆ ತಣ್ಣನೆಯ ಎರಡು ಕೈಗಳು ಓಡಾಡಿದವು. ಮರಗಟ್ಟಿದಂತಹ ಕೈಗಳಲ್ಲಿ ಮೂರು ನಿಮಿಷ ಅವಳ ಕಾಲಿಗೆ ಮಸಾಜ್  ನಡೆಯಿತು.
ಆವತ್ತೇ ಕೊನೆ. ಮರುದಿನವೇ ಅವರು ಮನೆ ಖಾಲಿ ಮಾಡಿದರು.
ಒಂದು ವರ್ಷ ಕಳೆದರೂ ದಾಕ್ಷಾಯಣಿಯ ಕಾಲು ಆಗಾಗ ರಾತ್ರಿ ಹೊತ್ತು ತಣ್ಣಗಾಗುವುದುಂಟು. ಕೊಳ್ಳೇಗಾಲದ ಪ್ರಸಿದ್ಧ ಜ್ಯೋತಿಷಿಗಳು ಕೊಟ್ಟ ಬೇರು ಕಳೆದುಹೋಗಿದೆ.
ಇನ್ನೊಂದು ತರೋಣ ಅಂದರೆ ಆ ಮನುಷ್ಯ ಸತ್ತು ಹನ್ನೆರಡು ವರ್ಷವಾಯಿತು ಎಂದು ಅವನ ಮನೆಯ ಅಕ್ಕಪಕ್ಕದವರು ಹೇಳುತ್ತಿದ್ದಾರೆ! (ಮುಂದುವರೆಯುವುದು..)

-ಅಮ್ಮಜ್ಜನದುಗ್ಗ

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/55398ಗೆ ಭೇಟಿನೀಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com