ಗಂಡಸು ಯಾಕೆ ವಿವಾಹ ಬಾಹಿರ ಸಂಬಂಧ ಬೆಳೆಸುತ್ತಾನೆ?
ಹೆಂಡತಿಯೊಂದಿಗಿನ ಬಾಳು ಸಂತೃಪ್ತಕರವಾಗಿಲ್ಲದಿದ್ದರೆ, ಗಂಡಸು ಇನ್ನೊಂದು ಸಂಬಂಧ ಹುಡುಕಿ ಹೋಗುತ್ತಾನೆ. ಈ ಮಾತನ್ನು ಇಷ್ಟರವರೆಗೂ ನಿಜವೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದು ನಿಜವಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಸಂಗತಿಯನ್ನು ರಟ್‍ಗರ್ಸ್ ವಿಶ್ವವಿದ್ಯಾಲಯದ ಅಧ್ಯಯನ ಬಹಿರಂಗಪಡಿಸಿದೆ. ಹೆಂಡತಿಗೆ ಮೋಸ ಮಾಡಿದ ಗಂಡಂದಿರಲ್ಲಿ ಶೇ.56 ಮಂದಿ ತಮ್ಮ ದಾಂಪತ್ಯದಲ್ಲಿ ಸುಖವಾಗಿಯೇ ಇದ್ದರು. ಆತ ಹೊರಗೆ ಮೇಯಲು ಮುಖ್ಯ ಕಾರಣ- ಆತ ಬಯಸುವ ವೈವಿಧ್ಯ.
ಹಾಗಿದ್ದರೆ ಹೆಂಗಸು ಯಾಕೆ ವಂಚಿಸುತ್ತಾಳೆ? ಅದು ಶುದ್ಧ ಪ್ರೇಮವಂಚಿತೆಯ ಪಾಡು. ಆಕೆ ವಂಚಿಸಲು ಮುಂದುವರಿಯುತ್ತಾಳಾದರೂ, ಎಂದೂ ಕುಟುಂಬವನ್ನು ಛಿದ್ರಗೊಳಿಸಲು ಮುಂದಾಗುವುದಿಲ್ಲ. ವಂಚಿಸುವ ಮಂದಿಯಲ್ಲಿ ಗಂಡಸರ ಸರಿಸುಮಾರು ವಯಸ್ಸು 41 ಆದರೆ, ಹೆಂಗಸರದು 34. ಇವೆಲ್ಲ ಕುತೂಹಲಕರ ಸಂಗತಿಗಳು. ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದ ಸಂಗತಿಗಳೆಲ್ಲ ಕುತೂಹಲಕರವೇ! ಇದನ್ನು ಮರುಶೋಧಿಸುವಂತೆ ಮಾಡಿದ್ದು, ಇತ್ತೀಚೆಗೆ ನಡೆದ 'ಆಶ್ಲೆ ಮ್ಯಾಡಿಸನ್' ವೆಬ್‍ಸೈಟ್ ಹ್ಯಾಕಿಂಗ್ ಪ್ರಕರಣ. ವಿವಾಹೇತರ ಸಂಬಂಧಕ್ಕೆ ಅನುವು ಮಾಡಿಕೊಡುತ್ತಿದ್ದ ಈ ಸೈಟ್ ಅನ್ನು ದಿ ಇಂಪ್ಯಾಕ್ಟ್ ಟೀಂ ಎಂಬ ತಂಡ ಹ್ಯಾಕ್ ಮಾಡಿದೆ. ಬರೋಬ್ಬರಿ 3.70 ಕೋಟಿ ಗ್ರಾಹಕರ ವಿವರಗಳು ಈಗ ಅವರ ಕೈಯಲ್ಲಿವೆ. ಈ ವೆಬ್‍ಸೈಟನ್ನು ಮುಚ್ಚದಿದ್ದರೆ ಈ ವಿವರಗಳನ್ನು ಬಹಿರಂಗಪಡಿಸುವುದಾಗಿ ಅವರ ಬೆದರಿಕೆ. ಈ ಗ್ರಾಹಕರಲ್ಲಿ ಸುಮಾರು 2.7 ಲಕ್ಷ ಭಾರತೀಯರೂ ಇದ್ದಾರೆ ಎಂಬುದು ನಮ್ಮವರ ತೊಡೆ ನಡುಗಲು ಕಾರಣ.
ಹ್ಯಾಕ್ ಆದ ಆಶ್ಲೆ ಮ್ಯಾಡಿಸನ್ ಸಂಸ್ಥೆಯ ಸಿಇಒ ನೊಯೆಲ್ ಬಿಡರ್‍ಮನ್ ಎಂಬಾತ ಒಂದು ಸಂದರ್ಶನ ನೀಡಿದ್ದಾನೆ. ಅನೈತಿಕ ಸಂಬಂಧಗಳ ಬಗ್ಗೆ ಆತ ಸಾಕಷ್ಟು ಆಸಕ್ತಿಕರ ವಿಚಾರಗಳನ್ನು ಈ ಸಂದರ್ಶನದಲ್ಲಿ ನೀಡಿದ್ದಾನೆ. ಡೇಟಿಂಗ್ ಜಾಲತಾಣವನ್ನು ಹಲವಾರು ವರ್ಷ ನಡೆಸಿದ ಈತನ ಮಾತುಗಳು ಅನುಭವದಿಂದ ಬಂದ ಹಲವಾರು ಒಳನೋಟಗಳನ್ನು ನೀಡುತ್ತವೆ.
ಪತ್ನಿಯರು ಮೋಸ ಮಾಡುವುದಕ್ಕೆ ಮುಖ್ಯ ಕಾರಣ- ಗಂಡನಲ್ಲಿ ಕಾಣದ ಮೊದಲಿನ ಪ್ರೀತಿ. ನಿತ್ಯದ ಬದುಕಿನಲ್ಲಿ ಇಲ್ಲವಾದ ಸ್ವಾರಸ್ಯವನ್ನು ಹೊರಗಡೆ ತುಂಬಿಕೊಳ್ಳಲು ಆಕೆ ಬಯಸುತ್ತಾಳೆ. ಹಾಗೆಂದು ಆಕೆ ಗಂಡ, ಮನೆ, ಮಕ್ಕಳನ್ನು ಕಳೆದುಕೊಳ್ಳಲು ಸಿದ್ಧಳಿಲ್ಲ. ಆದರೆ ಗಂಡಸಿಗೆ ಅದು ವೈವಿಧ್ಯವನ್ನು ಟ್ರೈ ಮಾಡುವ ಒಂದು ಕ್ಷೇತ್ರ. ಬೇರೆ ಶರೀರ, ಬೇರೆ ವಯಸ್ಸು, ಬೇರೆ ಬಣ್ಣ... ಭಿನ್ನತೆಯೆಂಬುದು ಆತನ ಲೈಂಗಿಕ ಬಯಕೆಯ ಕಿಡಿ ಉರಿಸುವ ತುಪ್ಪ. ಇಂಟರ್ ನೆಟ್ ಬರುವ ಮುನ್ನ ವಿವಾಹೇತರ ಸಂಬಂಧದ ವ್ಯಾಪ್ತಿ ಎಷ್ಟಿದೆ ಎಂದು ತಿಳಿಯುವುದು ಸುಲಭವಾಗಿರಲಿಲ್ಲ. ಇಂದು, ಆಶ್ಲೆ ಮ್ಯಾಡಿಸನ್ ತಾಣವೊಂದೇ ದಿನಕ್ಕೆ 35 ಸಾವಿರ ಮಂದಿಯನ್ನು ದಾಖಲಿಸಿಕೊಳ್ಳುತ್ತದೆ. ತಿಂಗಳಿಗೆ 120 ದಶಲಕ್ಷ ಮಂದಿ ಇದಕ್ಕೆ ಭೇಟಿ ನೀಡುತ್ತಾರೆ. 1.2 ದಶಲಕ್ಷ ಸಂಪರ್ಕ ಏರ್ಪಡುತ್ತದೆ. ಇದು ಅಮೆರಿಕವೊಂದರ ಮಾಹಿತಿಯಲ್ಲ, ಜಗತ್ತಿನೆಲ್ಲೆಡೆ ಹೀಗೇ ಅಂತಾನೆ ನೊಯೆಲ್.
ಜೈವಿಕ ಹಂಬಲಗಳು ಬಲವತ್ತರವಾದವು. ಮನುಷ್ಯಜೀವಿಯ ರಚನೆ ಏಕಸಂಗಾತಿ ವ್ಯವಸ್ಥೆಗೆ ಪೂರಕವಾಗಿಲ್ಲ ಎನ್ನುವ ನೊಯೆಲ್ ನೀಡುವ ಒಂದು ಮಾಹಿತಿ ಗಾಬರಿ ಹುಟ್ಟಿಸುವಂತಿದೆ- ಈತನ ತಾಣದಲ್ಲಿ ಬಹು ಮಂದಿ ಭಾರತೀಯ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಮತ್ತು ಇವರು ಹುಡುಕಾಡುತ್ತಿರುವುದು ಭಾರತೀಯ ಗಂಡಸರಿಗಲ್ಲ! ತಾಣ ಶುರುಮಾಡಿದಾಗ ಬಂದ 98.9 ವಿವಾಹಿತೆಯರ ಬೇಡಿಕೆ ವಿವಾಹಿತ ಪುರುಷರಿಗಿತ್ತು. ಈಗ ಅದು 83 ಶೇಕಡಕ್ಕಿಳಿದಿದೆ. 17 ಶೇಕಡ ಮಂದಿ ಅವಿವಾಹಿತರನ್ನು ಕೇಳುತ್ತಾರೆ. ಹಾಗಂತ ಈ ಡೇಟಿಂಗ್ ಸೈಟ್ ಗಳು ಆನ್‍ಲೈನ್ ಸೂಳೆಗೇರಿಗಳಲ್ಲ. ಇಲ್ಲಿ ಪ್ರತಿ ದಿವಸ ನೂರಾರು ಅಂಥ ಬೇಡಿಕೆಗಳನ್ನು ಪತ್ತೆ ಹಚ್ಚಿ ತೆಗೆದುಹಾಕಲಾಗುತ್ತದೆ ಎಂದೂ ನೊಯೆಲ್ ತಿಳಿಸುತ್ತಾನೆ.
ಸಾಕಷ್ಟು ಉದ್ಯೋಗಿಗಳೂ, ಕೆಲಸದ ವೇಳೆ ಈ ತಾಣದಲ್ಲಿ ಇಣುಕುವುದುಂಟಂತೆ. ಹೆಚ್ಚು ಟ್ರಾಫಿಕ್ ಬೆಳಗ್ಗೆ 8.30, ಮಧ್ಯಾಹ್ನ 12.30 ಮತ್ತು 4.30ಗೆ ದಾಖಲಾಗುತ್ತದೆ. ಸಹೋದ್ಯೋಗಿ ಹತ್ತಿರ ಸುಳಿದರೆ ವೆಬ್ ಸೈಟ್ ಮಾಯವಾಗುವಂತೆ ಮಾಡಲು ಪ್ಯಾನಿಕ್ ಬಟನ್ ಇದೆ. ಪ್ರತಿದಿನ ಇದು ಸಾವಿರಾರು ಬಾರಿ ಹೊಡಕೊಳ್ಳುತ್ತದೆ! ಇಲ್ಲಿ ದಾಖಲಿಸಿದ ಪ್ರತಿ ವಿವರವನ್ನೂ ಮರಳಿ ಪಡೆಯಬಹುದು. ನಮ್ಮ ಪಾಲಿಗೆ ಪರ್ಫೆಕ್ಟ್ ಅಫೇರ್ ಅಂದರೆ ಸುಳಿವು ಕೊಡದಂತಿರುವುದು ಎಂದು ವಿಲನ್ ನಗೆ ನಗುತ್ತಾನೆ ನೊಯೆಲ್.
ಟೆಕ್ಸಾಸ್‍ನಲ್ಲಿ ಒಂದು ಬಾರಿ ಈತನ ಭಾಷಣವಿತ್ತು. ಭಾಷಣದ ನಂತರ ಈತನ ಜತೆ ಮಾತನಾಡಲು, ತಮ್ಮ ಪಾಪ ನಿವೇದಿಸಿಕೊಳ್ಳಲು ಜನ ಸಾಲುಗಟ್ಟಿದ್ದರಂತೆ! ಆತ ಹೇಳುವ ಕೆಲವು ವಿಚಾರಗಳು ವಿವಾದಕ್ಕೆ ಅರ್ಹ. ಆಸ್ತಿಕ ಮಂದಿ ಹೆಚ್ಚು ಮೋಸ ಮಾಡುತ್ತಾರಂತೆ. ಯಾಕೆಂದರೆ ಪಾಪ ನಿವೇದಿಸಿಕೊಳ್ಳಲು ಅವಕಾಶ ಇದೆಯಲ್ಲ. ನಾಸ್ತಿಕರು ಮಾತ್ರ ಆಸ್ತಿಕರಿಗಿಂತ ಹೆಚ್ಚು ಕಾಲ ತಮ್ಮ ಪಾಪದ ಭಾರ ಹೊತ್ತಿರುತ್ತಾರಂತೆ. ಪತ್ತೆಯಾಗದಂತೆ ಇದ್ದರೆ, ಮೋಸ ಮಾಡುವುದು ತಪ್ಪಲ್ಲವಂತೆ. ನನ್ನ ಪತ್ನಿ ಮೋಸ ಮಾಡಿದರೆ, ಆಕೆ ಹೀಗೆ ಮಾಡಲು ನನ್ನಲ್ಲಿರುವ ಯಾವ ಕೊರತೆ ಕಾರಣವಾಯ್ತು? ಎಂದು ಯೋಚಿಸಿಕೊಳ್ಳುತ್ತೇನೆ ಎನ್ನುವ ಭೂಪನೀತ. ವಿವಾಹೇತರ ಸಂಬಂಧಕ್ಕೆಳಸುವವರು ಇತರ ಕ್ಷೇತ್ರಗಳಲ್ಲಿ ಇತರರಿಗೆ ಮೋಸ ಮಾಡುತ್ತಾರೆ ಎಂಬುದಕ್ಕೆ ಆಧಾರವೇನಿಲ್ಲ ಎಂದೂ ಭರವಸೆ ಕೊಡುತ್ತಾನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ