ವಿಶ್ವಸಂಸ್ಥೆ: ವಿಶ್ವಾದ್ಯಂತ ಡಿಸೆಂಬರ್ 1ರನ್ನು ಏಡ್ಸ್ ದಿನ ಎಂದು ಆಚರಿಸಲಾಗುತ್ತದೆ. ಒಂದೆಡೆ ಏಡ್ಸ್ ಗೆ ಔಷದ ಕಂಡುಹಿಡಿವ ಸಾಹಸ ನಡೆಯುತ್ತಲೇ ಇದೆ. ಇನ್ನೊಂದೆಡೆ ಜಾಗೃತಿ ಮೂಲಕ ಎಚ್ ಐವಿ ಸೋಂಕನ್ನು ತಡೆಗಟ್ಟುವ ಕಾರ್ಯವೂ ನಡೆಯುತ್ತಿದೆ. ಆದರೆ ಇದೆಲ್ಲವನ್ನು ಮೀರಿ ಎಚ್ ಐವಿ ಮಾನವ ದೇಹವನ್ನು ಪ್ರವೇಶಿಸಲು ಹಲವು ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದೆ.
ಬೆಳೆಯುತ್ತಿರುವ ತಂತ್ರಜ್ಞಾನ ಅದನ್ನು ಕೈಬೀಸಿ ಕರೆಯಲಾರಂಭಿಸಿದೆ. ಇದೀಗ ಏಷ್ಯಾದ ಹದಿಹರೆಯದವರಲ್ಲೂ ಎಚ್ ಐವಿ ಸೋಂಕು ವ್ಯಾಪಿಸಲು ಸ್ಮಾರ್ಟ್ ಫೋನ್ ಡೇಟಿಂಗ್ ಆ್ಯಪ್ ಗಳೂ ಕಾರಣವಾಗುತ್ತಿವೆ ಎಂದು ವಿಶ್ವ ಸಂಸ್ಥೆ ಅಂಕಿಅಂಶ ಸಮೇತ ಮಾಹಿತಿ ಹೊರಗೆಡವಿದೆ.
ಜಗತ್ತಿನ ಸುಮಾರು 120ಕೋಟಿ ಹದಿವಯಸ್ಸಿನವರಲ್ಲಿ ಸುಮಾರು ಅರ್ಧದಷ್ಟು ಮಂದಿ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿದ್ದು ಇವರಲ್ಲಿ 10ರಿಂದ 19 ವರ್ಷ ವಯಸ್ಸಿನ ನಡುವೆ ಇರುವ ಲಕ್ಷಾಂತರ ಬಾಲಕರು ಮತ್ತು ಯುವಕರಲ್ಲಿ ಹೆಚ್ ಐವಿ ಸೋಂಕಿನ ಆತಂಕ ಕಾಣಿಸಿಕೊಂಡಿದೆ. ಇದಕ್ಕೆ ಮೊಬೈಲ್ ಆ್ಯಪ್ ಗಳು ಕಾರಣ ಹಾಗೂ ಇವರಲ್ಲಿ ಬಹುತೇಕ ಹುಡುಗರು ಸಲಿಂಗ ಕಾಮದತ್ತ ಆಕರ್ಷಿತರು ಎಂದು ವಿಶ್ವಸಂಸ್ಥೆ ಹೇಳಿರುವುದನ್ನು ದ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಆ್ಯಪ್ ನಿಂದ ಆಪತ್ತ: ಮೊಬೈಲ್ ಡೇಟಿಂಗ್ ಆ್ಯಪ್ ಗಳು ಡೇಟಿಂಗ್ ಮತ್ತು ಸೆಕ್ಸ್ ಗೆ ಮುಕ್ತ ಅವಕಾಶ ಒದಗಿಸುತ್ತಿದ್ದು, ಸಲಿಂಗಕಾಮ, ವೇಶ್ಯೆಯರ ಸಹವಾಸ, ಮಂಗಳಮುಖಿ ಯರೊಂದಿಗಿನ ದೈಹಿಕ ಸಂಪರ್ಕ, ಅಸುರಕ್ಷಿತ ಸೆಕ್ಸ್, ಮಾದಕ ವಸ್ತುಗಳ, ಕೋಮೋತ್ತೇಜಕಗಳ ಬಳಕೆಯನ್ನು ಹೆಚ್ಚು ಮಾಡಿದೆ ಅಧ್ಯಯನ ವರದಿ ಹೇಳಿದೆ.
ಸೆಕ್ಸ್ ಗಾಗಿ ಆ್ಯಪ್ ಬಳಕೆ ಮಾಡುತ್ತಿದ್ದೇವೆ ಯುವಜನತೆಯೇ ಹೇಳುತ್ತಿರುವುದರಿಂದ ಈಗ ಆ್ಯಪ್ ಡೆವಲಪರ್ ಮತ್ತು ಸೇವಾಸಂಸ್ಥೆಗಳನ್ನು ಎಚ್ಚರಿಸಬೇಕಿದೆ ಎಂದು ಏಷ್ಯಾ ಪೆಸಿಫಿಕ್ ವಿಭಾಗದ ಯುನಿಸೆಫ್ ಸಲಹೆಗಾರ ವಿಂಗ್ ಸೀ ಚೆಂಗ್ ಹೇಳುತ್ತಾರೆ. 2030ರ ಹೊತ್ತಿಗೆ ಏಡ್ಸ್ ನಿರ್ಮೂಲನೆ ಮಾಡುವ ಪಣತೊಟ್ಟಿರುವ ವಿಶ್ವಸಂಸ್ಥೆಗೆ ಈ ಬೆಳವಣಿಗೆ ಆತಂಕ ಹುಟ್ಟಿಸಿದೆ.
ಆ್ಯಪ್ ಗಳಲ್ಲೇ ಎಚ್ಚರಿಕೆ ಸಂದೇಶ!: ಡೇಟಿಂಗ್ ಆ್ಯಪ್ ಗಳ ನಿಷೇಧ ಅಸಾದ್ಯ. ಹಾಗಾಗಿ ಅವುಗಳಿಂದಲೇ ಜಾಗೃತಿ ಸಂದೇಶ ರವಾನಿಸುವ ಬಗ್ಗೆ ವಿಶ್ವಸಂಸ್ಥೆ ಯೋಚಿಸಿದೆ.