ಪ್ರಶ್ನೆಯಾಗಿಯೇ ಉಳಿದ 'ಬಹದ್ದೂರ್' ಶಾಸ್ತ್ರಿಯವರ ನಿಗೂಢ ಸಾವು

ಹಮ್ ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್‌ ಬಹಾದ್ದೂರ್ ಶಾಸ್ತ್ರಿಯವರು...
ಲಾಲ್‌ಬಹಾದ್ದೂರ್ ಶಾಸ್ತ್ರಿ
ಲಾಲ್‌ಬಹಾದ್ದೂರ್ ಶಾಸ್ತ್ರಿ
ಪ್ರಾಮಾಣಿಕತೆಯನ್ನೇ ಮೈಗೂಡಿಸಿಕೊಂಡು ಅತೀ ಸರಳ ಜೀವನ ನಡೆಸಿದ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ  111ನೇ ಹುಟ್ಟು ಹಬ್ಬವನ್ನು ನಾವಿಂದು ಆಚರಿಸುತ್ತಿದ್ದೇವೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ರೈತರಿಗೂ ಸೈನಿಕರಿಗೂ ಏಕ ರೀತಿಯಲ್ಲಿ ಗೌರವ ಸಲ್ಲಿಸಿದ ಮಹಾನ್ ಚೇತನ ಶಾಸ್ತ್ರಿಯವರು. ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ತಾಳ್ಮೆ, ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧ ಜೀವನಕ್ಕೆ ಬದ್ಧರಾಗಿದ್ದರು. 1956ರಲ್ಲಿ ಮೆಹಬೂಬ್ ನಗರದಲ್ಲಿ ರೈಲು ಅಪಘಾತವಾದಾಗ ರೈಲ್ವೇ  ಸಚಿವರಾಗಿದ್ದ ಶಾಸ್ತ್ರಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದು ಅವರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. 
ಹಮ್  ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ ಹೆಚ್ಚಿನವರಲ್ಲಿತ್ತು.
ಇದಾಗಿ ಎರಡು ವಾರಗಳಾಗಿತ್ತು. ಅವತ್ತು 1965, ಆಗಸ್ಟ್ 31ನೇ ತಾರೀಖು. ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಯಲ್ಲಿ ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು ಎನ್ನುವಾಗ ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು '10 ಜನಪಥ್‌' ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು.
ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು. ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು.
ಕೇವಲ 5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಎದೆ ಝಲ್ಲೆನಿಸುವಂತಹ ನಿರ್ಧಾರ ಕೈಗೊಂಡಿದ್ದರು. ಪಾಕ್‌ನ ಮೇಲೆ ಯುದ್ಧ ಘೋಷಣೆಯಾಗಿತ್ತು. 
ಆಮೇಲೆ ನಡೆದದ್ದು ಇತಿಹಾಸ: ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಾಸ್ತ್ರೀಜಿ ಎದೆಗುಂದಲಿಲ್ಲ. 'ಛಾಂಬ್ ಕೈ ಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ' ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿದರು. ಭಾರತ ಪ್ರತಿದಾಳಿ ಮುಂದುವರಿಸಿತು. ಸಪ್ಟೆಂಬರ್ 10ರಂದು 'ಅಸಲ್ ಉತ್ತರ್‌' (True North) ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು. ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ನಿರ್ಲಕ್ಷ್ಯದ ನೋಟ ಬೀರಿದವರಿಗೆ ತಕ್ಕ ಉತ್ತರ ಸಿಕ್ಕಿತ್ತು.  
ಈ ಮಧ್ಯೆ ಪಾಕಿಸ್ತಾನದ ಪರ ನಿಲುವು ತಳೆದಿದ್ದ ಚೀನಾ, ಯುದ್ಧದಲ್ಲಿ ಮೂಗು ತೂರಿಸುವ ಮಾತಾಡಿತು. ಆದರೂ ಚೀನಾದ ಬೆದರಿಕೆಗೆ ಬಗ್ಗಲಿಲ್ಲ ಭಾರತ. ಯುದ್ಧ ಮುಂದುವರೆಯಿತು.  ಆ ವೇಳೆ  'ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ' ಎಂಬ ಶಾಸ್ತ್ರಿಯವರ ಕರೆಗೆ 50 ಕೋಟಿ ಭಾರತೀಯರು ಓ ಗೊಟ್ಟರು. ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈ ಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಅದರ ಫಲವಾಗಿ, ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು.
ಇತ್ತ ಶಾಸ್ತ್ರಿಯವರ ಬಗ್ಗೆ ಹಗುರವಾಗಿ ಮಾತಾಡಿದ್ದವರು ಯುದ್ಧ ಮುಗಿದ ಮೇಲೆ ಸೊಲ್ಲೇ ಎತ್ತಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ನೆಹರು ಬದಲು ಶಾಸ್ತ್ರೀಜಿ ಪ್ರಧಾನಿಯಾಗಿರಬೇಕಿತ್ತು ಎಂಬ ಭಾವನೆ ಜನಮನದಲ್ಲುಂಟಾಯಿತು.ಸೋವಿಯತ್ ರಷ್ಯಾ, ಅಮೇರಿಕ ಮತ್ತು ಚೀನಾಗಳು ಹುಬ್ಬೇರಿಸಿದವು. ರಣರಂಗದಲ್ಲಿ ಶಾಸ್ತ್ರಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತವು. ಮಾತುಕತೆಗೆ ಕರೆದವು. ತಾಷ್ಕೆಂಟ್‌ನಲ್ಲಿ ಸಂಧಾನ ಮಾತುಕತೆ ಏರ್ಪಾಡಾಯಿತು.
 ಪಾಕಿಸ್ತಾನದ ವಿರುದ್ಧ  ಯುದ್ಧ ಜಯಿಸಿದ ನಂತರ ಶಾಸ್ತ್ರಿಯವರು ಪಾಕ್ ಅಧ್ಯಕ್ಷ ಮಹಮ್ಮದ್ ಆಯೂಬ್ ಖಾನ್ ಅವರನ್ನು ಭೇಟಿ ಮಾಡಲು ತಾಷ್ಕೆಂಟ್ ಗೆ ಹೋಗಿದ್ದರು.  ರಷ್ಯಾ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966, ಜನವರಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯೂಬ್‌ಖಾನ್ ನಡುವೆ ಸಂಧಾನ ಪ್ರಾರಂಭವಾಯಿತು. 'ಮುಂದೆಂದೂ ಬಲಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಿಲ್ಲ' ಎಂದು ಲಿಖಿತ ಭರವಸೆ ನೀಡಬೇಕೆಂದು ಶಾಸ್ತ್ರೀಜಿ ಪಟ್ಟು ಹಿಡಿದರು.
ಅಯೂಬ್‌ಖಾನ್ ಒಪ್ಪದೇ ಹೋದಾಗ,''Then you will have to find another PM'' (ಹಾಗಾದರೆ ನನ್ನ ನಂತರದ ಪ್ರಧಾನಿ ಬರುವವರೆಗೂ ಕಾಯಬೇಕಾಗುತ್ತದೆ!) ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಶಾಸ್ತ್ರಿಯವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅರಿತ ಅಯೂಬ್ ಖಾನ್ ತಾನೇ ಮಣಿದ. ಲಿಖಿತ ಭರವಸೆ ನೀಡಿದ. ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು.
ಅದು ನಿಗೂಢ ಸಾವು!:   ಇಷ್ಟೊಂದು ಪ್ರಾಮಾಣಿಕ, ನಿಷ್ಕಳಂಕ ಹಾಗೂ ಮೃದುಭಾಷಿಯಾಗಿದ್ದ ಶಾಸ್ತ್ರಿಯವರು ಜನವರಿ 11, 1966 ರಂದು ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ  ನಿಗೂಢ ರೀತಿಯಲ್ಲಿ  ದಯಾಘಾತದಿಂದ ಸಾವನ್ನಪ್ಪಿದ್ದರು. ಶಾಸ್ತ್ರಿಯವರ ಸಾವಿನಲ್ಲಿ ನಿಗೂಢತೆಯಿದೆ.ಅವರಿಗೆ ವಿಷ ಪ್ರಾಶನ ಮಾಡಲಾಗಿದೆ, ಈ ಬಗ್ಗೆ ತನಿಖೆ ನಡೆಸಬೇಕೆಂದು ಶಾಸ್ತ್ರಿಯವರ ಪತ್ನಿ ಲಲಿತಾ ಶಾಸ್ತ್ರಿ  ಆಗ್ರಹಿಸಿದ್ದರು. ವರದಿಗಳ ಪ್ರಕಾರ ಶಾಸ್ತ್ರಿಯವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿಲ್ಲ. ಆದರೆ ಶಾಸ್ತ್ರಿಯವರ ಹೊಟ್ಟೆಯ ಭಾಗದಲ್ಲಿ ನೀಲಿ ಕಲೆ ಮತ್ತು ಸೀಳಿದ ಗಾಯವಿತ್ತು. ಮರಣೋತ್ತರ ಪರೀಕ್ಷೆ ನಡೆಸದೇ ಇದ್ದರೂ ಅವರ ದೇಹದಲ್ಲಿ ಆ ಕಲೆ ಹೇಗೆ ಬಂತು ಎಂದು  ಶಾಸ್ತ್ರಿಯವರ ಮಗ ಸುನಿಲ್ ಪ್ರಶ್ನಿಸಿದ್ದರು.
ಇದಾದ ನಂತರ ಅನುಜ್ ಧಾರ್ ಅವರು ಆರ್ ಟಿಐ ಮೂಲಕ ಇದೇ ಪ್ರಶ್ನೆಯನ್ನು ಕೇಳಿದರೂ ಪ್ರಧಾನಿ ಕಚೇರಿ ಇದಕ್ಕೆ ಉತ್ತರಿಸಲು ನಿರಾಕರಿಸಿತ್ತು . 1960 ರಿಂದ 1964ರ ವರೆಗೆ  ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದ ಕುಲದೀಪ್ ನಯ್ಯರ್ ಕೂಡಾ ಈ ಪ್ರಶ್ನೆಯನ್ನು ಕೇಳಿದರೂ ಪ್ರಧಾನಿ ಕಚೇರಿ ಮಾಹಿತಿಯನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ಹೇಳಿತ್ತು. 
ಆದಾಗ್ಯೂ, ಭಾರತದಲ್ಲಿ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ನಡೆದಿತ್ತೇ ಎಂಬ ಪ್ರಶ್ನೆಗೂ ಭಾರತದ ಗೃಹ ಸಚಿವಾಲಯ ಉತ್ತರಿಸಲಿಲ್ಲ. ಇತ್ತ  ರಷ್ಯಾ ಒಕ್ಕೂಟವೂ ಕೂಡಾ ಮರಣೋತ್ತರ ಪರೀಕ್ಷೆಯನ್ನು ನಡೆಸಿಲ್ಲ ಎನ್ನುತ್ತವೆ ಕೆಲವು ವರದಿಗಳು. ವಿದೇಶಾಂಗ ಸಚಿವಾಲಯ ಮತ್ತು ಗೃಹ ಇಲಾಖೆಯಲ್ಲಿಯೂ ಇದೇ ಪ್ರಶ್ನೆಯನ್ನು ಪದೇ ಪದೇ ಕೇಳಿದರೂ ಯಾವುದೇ ಸಚಿವಾಲಯ ಇದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ,  
ಜುಲೈ 29 , 2009ರಲ್ಲಿ ದೆಹಲಿ ಪೊಲೀಸರು ಆರ್ ಟಿ ಐ ಅರ್ಜಿ ಸಲ್ಲಿಸಿದಾಗ, ಮಾಜಿ ಪ್ರಧಾನಿ ಶಾಸ್ತ್ರಿ ಸಾವಿನ ಬಗಗೆ ಯಾವುದೇ ಸಾಕ್ಷ್ಯಗಳು ಇಲ್ಲ ಎಂಬ ಉತ್ತರ ಸಿಕ್ಕಿತ್ತು.  ಅಷ್ಟೇ ಅಲ್ಲದೆ ಭಾರತ ಅಥವಾ ರಷ್ಯಾದಲ್ಲಿ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ಮಾಡಿರುವ ಬಗ್ಗೆ ಯಾವುದೇ ಪುರಾವೆಗಳು ಇಲ್ಲ.  ಇದೇ ವಿಷಯಕ್ಕೆ ಸಂಬಂಧಿಸಿದಂತೆ 2013ರರಲ್ಲಿ ಭಾರತ ಮತ್ತು ರಷ್ಯಾದಿಂದ ಬಂದ ವರದಿಯೊಂದರಲ್ಲಿ  ಶಾಸ್ತ್ರಿ ಸಾವಿನ ಹಿಂದೆ ಮೋಸ್ಕೋ ಕೈವಾಡ ವಿದೆ (ಹ್ಯಾಂಡ್ ಆಫ್  ಮೋಸ್ಕೋ) ಎಂದು ಹೇಳಲಾಗಿತ್ತು.  ನಾನ್ ಅಲೈನ್ ಮೆಂಟ್ ಬಗ್ಗೆ  ನೆಹರೂ ನೀತಿಗೆ ರಷ್ಯಾ ಅಸಮಾಧಾನ ವ್ಯಕ್ತ ಪಡಿಸಿತ್ತು. ಆದರೆ ಈ  ನೀತಿಯನ್ನು ಲಾಲ್ ಬಹದ್ದೂರ್  ಶಾಸ್ತ್ರಿ  ಬೆಂಬಲಿಸಿದ್ದು,  ಭಾರತಕ್ಕೆ ಹೆಚ್ಚಿನ ಸೈನ್ಯವನ್ನು ತರುವ ಇಚ್ಛೆ ಅವರಲಿತ್ತು. ಹಾಗಾದರೆ ನೆಹರೂ ನೀತಿಯನ್ನು ಬೆಂಬಲಿಸಿದ್ದೇ ಶಾಸ್ತ್ರಿಯವರ ಸಾವಿಗೆ ಕಾರಣವಾಯಿತೆ?
 ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು. ಶಾಸ್ತ್ರಿಯವರು ಕಾಲವಾಗಿ 49 ವರುಷಗಳಾದವು. ಇಲ್ಲಿವರೆಗೆ ಅವರ ಸಾವಿನ ಬಗ್ಗೆ ಆರ್ ಟಿಐ ಮೂಲಕ ಪದೇ ಪದೇ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದರೂ ಭಾರತ ಸರ್ಕಾರ ಇದಕ್ಕೆ ಉತ್ತರಿಸಲು ತಯಾರಾಗುತ್ತಿಲ್ಲ. ಶಾಸ್ತ್ರಿನ ಸಾವಿನ ಹಿಂದಿರುವ ರಹಸ್ಯವಾದರೂ ಏನು ? ಎಂಬ ಪ್ರಶ್ನೆ ಬರೀ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com