ಸಿಯಾಚಿನ್‌ನಲ್ಲಿ ಬದುಕು ಹೀಗಿರುತ್ತದೆ!

ಶತ್ರು ರಾಷ್ಟ್ರದ ದಾಳಿಯಲ್ಲಿ ಸಾಯುವುದಕ್ಕಿಂತ ಹೆಚ್ಚು ಸೈನಿಕರು ಇಲ್ಲಿನ ಹವಾಮಾನ ವೈಪರೀತ್ಯದಿಂದ ಸಾಯುತ್ತಾರೆ ಎಂಬುದು ದುರದೃಷ್ಟಕರ ಸಂಗತಿ....
ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿ ಭಾರತದ ಸೈನಿಕರು
ಸಿಯಾಚಿನ್ ನಿರ್ಗಲ್ಲು ಪ್ರದೇಶದಲ್ಲಿ ಭಾರತದ ಸೈನಿಕರು
ಜಗತ್ತಿನ ಅತೀ ಎತ್ತರದಲ್ಲಿರುವ ಯುದ್ಧಭೂಮಿ ಸಿಯಾಚಿನ್. ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಭಾರತೀಯ ಸೈನಿಕರು ದೇಶ ರಕ್ಷಣೆಯ ಕಾಯಕದಲ್ಲಿ ಮಗ್ನರಾಗಿದ್ದಾರೆ. ಶತ್ರು ರಾಷ್ಟ್ರದ ದಾಳಿಯಲ್ಲಿ ಸಾಯುವುದಕ್ಕಿಂತ ಹೆಚ್ಚು ಸೈನಿಕರು ಇಲ್ಲಿನ ಹವಾಮಾನ ವೈಪರೀತ್ಯದಿಂದ ಸಾಯುತ್ತಾರೆ ಎಂಬುದು ದುರದೃಷ್ಟಕರ ಸಂಗತಿಗಳಲ್ಲೊಂದು. ಅಂದಹಾಗೆ ಸಿಯಾಚಿನ್ ಎಂಬ ಪ್ರದೇಶ ಹೇಗೆ ಇರುತ್ತದೆ ಎಂಬುದನ್ನು ನಾವು ಚಿತ್ರಗಳಲ್ಲಿಯೋ, ಟೀವಿಯಲ್ಲಿಯೋ ನೋಡಿರುತ್ತೇವೆ. ಆದರೆ ಅಲ್ಲಿ ನಮ್ಮ ಸೈನಿಕರು ಹೇಗೆ ಬದುಕುತ್ತಿದ್ದಾರೆ? ಅಲ್ಲಿನ ವಾತಾವರಣ ಒಡ್ಡುವ ಸವಾಲುಗಳೇನು? ಎಂಬುದನ್ನು ತಿಳಿಯಬೇಕಾದರೆ ಸಿಯಾಚಿನ್ ಹವಾಮಾನದ ಬಗ್ಗೆ ಅರಿವು ಇರಬೇಕು. 
ಸಿಯಾಚಿನ್ ಹೇಗಿದೆ? ಓದಿ ನೋಡಿ...
ಉಸಿರಾಡುವುದೇ ಇಲ್ಲಿ ಕಷ್ಟ
ಬೆಳಗ್ಗಿನ ಹೊತ್ತು ಇಲ್ಲಿನ ಸರಾಸರಿ ಉಷ್ಣತೆ ಮೈನಸ್ 30 ಡಿಗ್ರಿ. ರಾತ್ರಿ ಹೊತ್ತು ಮೈನಸ್ 55 ಡಿಗ್ರಿ. ಇದು ಕೆಲವೊಮ್ಮೆ  ಮೈನಸ್ 60 ರಷ್ಟು ಆಗುವುದೂ ಇದೆ. ಸುತ್ತ ನೋಡಿದರೆ ಬೇರೇನೂ ಕಾಣುವುದಿಲ್ಲ, ಕಾಣುವುದು ಹಿಮಗುಡ್ಡೆಗಳು ಮಾತ್ರ. ಇಲ್ಲಿ ವಾತಾವರಣದ ಒತ್ತಡ ಅತೀ ಕಡಿಮೆಯಾಗಿರುವುದರಿಂದ ಉಸಿರಾಟವೂ ಕಷ್ಟ. ನಮಗೆ ಸಿಗುವ ಆಮ್ಲಜನಕದ ಶೇ. 10 ರಷ್ಟು ಮಾತ್ರ ಆಮ್ಲಜನಕ ಇಲ್ಲಿ ಉಸಿರಾಡಲು ಸಿಗುತ್ತದೆ.
ದೇಹವನ್ನು ಕುಗ್ಗಿಸುವ ಆ ಚಳಿ
ಹತ್ತು ನಿಮಿಷ ಇಲ್ಲಿ ನಡೆದಾಡಿದರೆ ಮತ್ತೆ ಸುಧಾರಿಸಿಕೊಳ್ಳುವುದಕ್ಕೆ ಅರ್ಧ ಗಂಟೆಯಾದರೂ ಬೇಕೇ ಬೇಕು. ಶ್ವಾಸಕೋಶ ಮತ್ತು ಮೆದುಳನ್ನು ಬಾಧಿಸುವ ಹೈ ಆಲ್ಟಿಟ್ಯೂಡ್ ಪಲ್ಮನರೀ ಒಡಿಮಾಗೆ ತುತ್ತಾಗಲು ಇಲ್ಲಿ ಕೆಲವೇ ಕ್ಷಣಗಳು ಸಾಕು ಇಲ್ಲಿ.  
ಫ್ರೋಸ್ಟ್  ಬೈಟ್ (frostbite)
ಇಷ್ಟೇ ಅಲ್ಲ, ಹಿಮಪಾತದಿಂದ ದೇಹವೂ ಗಾಯಕ್ಕೊಳಗಾಗುತ್ತದೆ. ಕಬ್ಬಿಣ ದೇಹಕ್ಕೆ ತಾಗಿದರೂ ದೇಹದಲ್ಲಿ ಗಾಯಗಳಾಗುವ ಸಾಧ್ಯತೆಯಿದೆ. ಚಿಕ್ಕ ಪುಟ್ಟ ಗಾಯಗಳಾದರೂ ಅವು ಬೇಗನೆ ದೇಹವನ್ನು ಕುಗ್ಗಿಸಿಬಿಡುತ್ತವೆ. ಅಂದರೆ ಇಲ್ಲಿ ಫ್ರೋಸ್ಟ್  ಬೈಟ್ ಜಾಸ್ತಿಯಾಗಿರುತ್ತದೆ. ವಿಪರೀತ ಚಳಿಯಿಂದಾಗಿ ದೇಹದಲ್ಲಿ ತಂತಾನೇ ಗಾಯಗಳಾಗುವುದನ್ನೇ ಫ್ರೋಸ್ಟ್ ಬೈಟ್ ಅಂತಾರೆ.  ಮೂಗು,  ಕೈ ಮತ್ತು ಕಾಲಿನ ಬೆರಳುಗಳು ಫ್ರೋಸ್ಟ್  ಬೈಟ್ ಗೆ ಒಳಗಾಗಿ  ಗ್ಯಾಂಗ್ರೀನ್ ಆಗುವ ಸಾಧ್ಯತೆಯೂ ಹೆಚ್ಚಿರುತ್ತದೆ.  ಈ ಫ್ರೋಸ್ಟ್ ಬೈಟ್‌ನಿಂದ ಕೈ ಬೆರಳುಗಳನ್ನೇ ಕತ್ತರಿಸಬೇಕಾಗಿ ಬಂದ ಉದಾಹರಣೆಗಳೂ ಇಲ್ಲಿವೆ.
ಸಿಕ್ಕಾಪಟ್ಟೆ ಸುಸ್ತು
ಇಲ್ಲಿನ ಹವಾಮಾನದಿಂದಾಗಿ ನಿದ್ದೆ, ಹಸಿವು ಇಲ್ಲದಾಗುತ್ತದೆ. ಶರೀರ ಕುಗ್ಗುತ್ತಾ ಹೋಗುತ್ತಿದ್ದು ನೆನಪಿನ ಶಕ್ತಿಯೂ, ಮಾತನಾಡುವ ಶಕ್ತಿಯೂ ಕುಂದುತ್ತದೆ.
ಹಿಮಗಾಳಿ
ಇಲ್ಲಿ ಗಂಟೆಗೆ 100 ಮೈಲಿ ವೇಗದಲ್ಲಿ ಹಿಮಗಾಳಿ ಬೀಸುತ್ತಿರುತ್ತದೆ. ಮೂರು ವಾರಗಳ ಕಾಲ ಇದು ಸತತವಾಗಿ ಬೀಸುತ್ತಿದ್ದು, ಮನುಷ್ಯನಿಗೆ ಇದನ್ನು ಎದುರಿಸಲು ಸಾಧ್ಯವಾಗುವುದಿಲ್ಲ.
ಹಿಮ ಮಳೆ
ಸಿಯಾಚಿನ್‌ನಲ್ಲಿ  36 ಅಡಿಯಷ್ಟು ಹಿಮ ಮಳೆಯಾಗುತ್ತದೆ. ಹೀಗೆ ಬಿದ್ದ ಹಿಮಗಳನ್ನು ಆಗಾಗ ತೆರವು ಮಾಡದೇ ಇದ್ದಲ್ಲಿ ಸೈನಿಕರ ಪೋಸ್ಟ್‌ಗಳೂ ಹಿಮಾವೃತವಾಗಿ ಮುಳುಗುವ ಸಾದ್ಯತೆಯಿರುತ್ತದೆ. ಅದರ ಜತೆಗೇ ಹಿಮಪಾತವೂ ಆಗುತ್ತಿರುತ್ತದೆ.
ಆಹಾರ ಸೇವನೆಯೂ ಕಷ್ಟ
ಆರೆಂಜ್, ಆ್ಯಪಲ್ ಎಲ್ಲ ಕ್ಷಣಾರ್ಧದಲ್ಲಿ ಮುದುಡಿ ಕ್ರಿಕೆಟ್ ಬಾಲ್‌ನಷ್ಟು ಗಟ್ಟಿಯಾಗಿ ಬಿಡುತ್ತದೆ. ನಮಗಿಷ್ಟವಾದ ಆಹಾರಗಳನ್ನು ಸೇವಿಸುವುದು ಇಲ್ಲಿ ಕನಸಿನ ಮಾತು. ಸೈನಿಕರಿಗೆ ಹೆಲಿಕಾಪ್ಟರ್ ಮೂಲಕ ಟಿನ್ ಕ್ಯಾನ್ ಗಳಲ್ಲಿ ಆಹಾರವನ್ನು ಪೂರೈಸಲಾಗುತ್ತದೆ. ಇಲ್ಲಿ ಹೆಲಿಕಾಪ್ಟರ್ ಹಾರಾಟವೂ ಕಷ್ಟವಾಗಿರುತ್ತದೆ.
ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಸಿಯಾಚಿನ್‌ನಲ್ಲಿ ದೇಶ ರಕ್ಷಣೆ ಮಾಡುತ್ತಿರುವ ನಮ್ಮ ಸೈನಿಕರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com