
ಮೆಲ್ಬೋರ್ನ್: ಆಸ್ಟ್ರೇಲಿಯಾದ ಅದೃಷ್ಟಶಾಲಿಯೊಬ್ಬ ಬಹು ಮಿಲಿಯನ್ ಬೆಲೆ ಬಾಳುವ ಐಲ್ಯಾಂಡ್ ರೆಸಾರ್ಟ್ ನ್ನು ಲಾಟರಿಯಲ್ಲಿ ಕೇವಲ 49 ಡಾಲರ್ ಗಳಿಗೆ ಗೆದ್ದಿದ್ದಾರೆ.
ನ್ಯೂ ಸೌತ್ ವೇಲ್ಸ್ ನ ಜೋಶುವಾ ಎಂಬುವವರು ಲಾಟರಿ ಮೂಲಕ ಮೈಕ್ರೊನೇಷಿಯಾದ ದ್ವೀಪದ 16 ರೂಮ್, ಸಮೃದ್ಧ ಕಾಡು, ಗುಹೆಗಳನ್ನು ಹೊಂದಿರುವ ಕೊಸ್ರೇ ನಾಟಿಲಸ್ ಎಂಬ ಐಲ್ಯಾಂಡ್ ರೆಸಾರ್ಟ್ ನ್ನು ಅದರ ಮಾಲೀಕರು ಆಯೋಜಿಸಿದ್ದ ಲಾಟರಿಯಲ್ಲಿ ಗೆದ್ದಿದ್ದಾರೆ. ರೆಸಾರ್ಟ್ ನ ಮಾಲೀಕರು ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆಯಲು ಆಸ್ಟ್ರೇಲಿಯಾ ನಗರಕ್ಕೆ ವಾಪಸ್ ಹೋಗಲು ತೀರ್ಮಾನಿಸಿದ್ದರಿಂ, 20 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕನಸಿನ ರೆಸಾರ್ಟ್ ನ್ನು ದ್ವೀಪ ಜೀವನದ ಬಗ್ಗೆ ನಿಜವಾದ ಆಸಕ್ತಿಯುಳ್ಳ ಸೂಕ್ತ ವ್ಯಕ್ತಿಗೆ ನೀಡಲು ನಿರ್ಧರಿಸಿದ್ದರು.
ಊಟದ ಬಿಡುವಿನಲ್ಲಿ ನ್ಯೂಸ್ ಆರ್ಟಿಕಲ್ ನ್ನು ಓದುತ್ತಿದ್ದಾಗ ಐಲ್ಯಾಂಡ್ ರೆಸಾರ್ಟ್ ನ್ನು ಖರೀದಿಸುವ ನನ್ನ ಕನಸನ್ನು ನನಸು ಮಾಡುವ ಲೇಖನವೊಂದು ಕಾಣಿಸಿತು ಎಂದು ಮೂರೂ ಟಿಕೆಟ್ ಗಳನ್ನೂ ಖರೀದಿಸಿ ರೆಸಾರ್ಟ್ ನ್ನು ಲಾಟರಿಯಲ್ಲಿ ಗೆದ್ದಿರುವ ಜೋಶುವಾ ತಿಳಿಸಿದ್ದಾರೆ. ನನ್ನ ಕನಸು ನನಸಾಗಿರುವುದಕ್ಕೆ ರೆಸಾರ್ಟ್ ನ ಮಾಲೀಕರಾದ ಡೌಗ್ ಮತ್ತು ಸ್ಯಾಲಿ ಗೆ ಧನ್ಯವಾದ ತಿಳಿಸಬೇಕು ಎಂದು ಜೋಶುವಾ ಹೇಳಿದ್ದಾರೆ.
ಲಾಟರಿಯಲ್ಲಿ ರೆಸಾರ್ಟ್ ನ್ನು ಗೆಲ್ಲಲು 150 ರಾಷ್ಟ್ರಗಳಿಂದ ಸುಮಾರು 75,485 ಟಿಕೆಟ್ ಗಳು ಖರೀದಿಯಾಗಿದ್ದವು, ಪ್ರತಿ ಟಿಕೆಟ್ ನ್ನು 49 ಡಾಲರ್ ಗೆ ಮಾರಾಟ ಮಾಡಲಾಗಿತ್ತು, ಒಂದಕ್ಕಿಂತ ಹೆಚ್ಚು ಟಿಕೆಟ್ ಖರೀದಿಸುವುದಕ್ಕೆ ರಿಯಾಯ್ತಿ ನೀಡಲಾಗಿತ್ತಂತೆ.
Advertisement