
ಜೊಹಾನ್ಸ್ ಬರ್ಗ್: ಹಣದ ದಾಹದ ಸರ್ಕಸ್ ಕಂಪನಿಯ ಕಪಿಮುಷ್ಟಿಯಲ್ಲಿ ಸಿಲುಕಿ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಸುಮಾರು 33 ಸಿಂಹಗಳನ್ನು ಏರ್ ಲಿಫ್ಟ್ ಕಾರ್ಯಾಚರಣೆ ಮೂಲಕ ರಕ್ಷಿಸಿ ದೂರದ ಆಫ್ರಿಕಾ ಕಾಡುಗಳಿಗೆ ರವಾನಿಸಿದ ಘಟನೆ ಪೆರು ಮತ್ತು ಕೊಲಂಬಿಯಾದಲ್ಲಿ ನಡೆದಿದೆ.
ಅನಿಮಲ್ ಡಿಫೆಂಡರ್ಸ್ ಇಂಟರ್‌ನ್ಯಾಷನಲ್(ಎಡಿಐ) ಸಂಸ್ಥೆಯ ಕಾರ್ಯಕರ್ತರು ಈ ಬೃಹತ್ ಏರ್ ಲಿಫ್ಟ್ ಕಾರ್ಯಾಚರಣೆ ನಡೆಸಿದ್ದು, ಸುಮಾರು 33 ಸಿಂಹಗಳನ್ನು ರಕ್ಷಿಸಿ ಆಫ್ರಿಕನ್ ಕಾಡುಗಳಿಗೆ ಬಿಡುವ ಮೂಲಕ ಅವುಗಳ ಪ್ರಾಣ ರಕ್ಷಿಸಿದ್ದಾರೆ. ಕಳೆದ ಏಪ್ರಿಲ್ ತಿಂಗಳಾಂತ್ಯದಲ್ಲಿ ಮುಕ್ತಾಯವಾದ "ಸ್ಪಿರಿಟ್ ಆಫ್ ಫ್ರೀಡಂ" ಎಂಬ ಹೆಸರಿನ ಈ ಕಾರ್ಯಾಚರಣೆ ಇದೀಗ ಜಗತ್ತಿನ ಗಮನ ಸೆಳೆಯುತ್ತಿದ್ದು, ವಿಶ್ವದ ಅತೀ ದೊಡ್ಡ "ವನ್ಯಜೀವಿಗಳ ಏರ್ ಲಿಫ್ಟ್ ಕಾರ್ಯಾಚರಣೆ" ಎಂದು ಇದನ್ನು ಬಣ್ಣಿಸಲಾಗುತ್ತಿದೆ.
ಪೆರು ಮತ್ತು ಕೊಲಂಬಿಯಾ ಸರ್ಕಸ್ ಕಂಪನಿಗಳ ವಶದಲ್ಲಿ ಸುಮಾರು ವರ್ಷಗಳಿಂದ ನರಕ ಯಾತನೆ ಅನುಭವಿಸುತ್ತಿದ್ದ 33 ಸಿಂಹಗಳನ್ನು ರಕ್ಷಿಸಿ ಸುಮಾರು 14,417ರ ಕಿಮೀ ದೂರವಿರುವ ದಕ್ಷಿಣ ಆಫ್ರಿಕಾದ ಕಾಡುಗಳಿಗೆ ವಿಮಾನದ ಮೂಲಕ ರವಾನಿಸಿ ಅವಗಳನ್ನು ಸ್ವತಂತ್ರವಾಗಿ ತಿರುಗಾಡಲು ಅನುವುಮಾಡಿಕೊಡಲಾಗಿದೆ. ಈ ಹಿಂದೆ ಸಾಕಷ್ಟು ಪ್ರಾಣಿಗಳನ್ನು ಏರ್ ಲಿಫ್ಟ್ ಮೂಲಕ ಸ್ಥಳಾಂತರಿಸಲಾಗಿದೆಯಾದರೂ ಎಡಿಐ ಕಾರ್ಯಕರ್ತರು ನಡೆಸಿರುವ ಈ ಕಾರ್ಯಾಚರಣೆ ಜಗತ್ತಿನ ಯಾವುದೇ ಮೂಲೆಯ ಕಾರ್ಯಾಚರಣೆಗಿಂತಲೂ ಅತೀದೊಡ್ಡ ಏರ್ ಲಿಫ್ಟ್ ಕಾರ್ಯಾಚರಣೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಾಚರಣೆಗಾಗಿ ಎಡಿಐ ಕಾರ್ಯಕರ್ತರು ಬಹಳ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರು. ಈ ಕಾರ್ಯಾಚರಣೆಗೆ ಒಟ್ಟು 18 ತಿಂಗಳು ಕಾಲ ಶ್ರಮಿಸಬೇಕಾಯಿತು.
ಕಳೆದ ಏಪ್ರಿಲ್ 30ರಂದು ಲ್ಯಾಟಿನ್ ಅಮೆರಿಕ ದೇಶಗಳಾದ ಪೆರು ಮತ್ತು ಕೊಲಂಬಿಯಾದ ವಿವಿಧ ಸರ್ಕಸ್ ಕಂಪನಿಗಳ ವಶದಲ್ಲಿದ್ದ 33 ಸಿಂಹಗಳನ್ನು ರಕ್ಷಿಸಿದ ಎಡಿಐ ಕಾರ್ಯಕರ್ತರು ಚಾರ್ಟೆಡ್ ಕಾರ್ಗೊ ವಿಮಾನದ ಮೂಲಕ ದೂರದ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ಗೆ ಸಾಗಿಸಿದರು.
ಏನಿದು ವನ್ಯಜೀವಿ ಏರ್ ಲಿಫ್ಟ್ ಕಾರ್ಯಾಚರಣೆ?
ಎಡಿಐ ವನ್ಯಜೀವ ಸಂರಕ್ಷಣಾ ಸಂಸ್ಥೆಯಾಗಿದ್ದು, ಬ್ರಿಟನ್ ಮೂಲದ ಟಿಮ್ ಫಿಲಿಪ್ಸ್ ಹಾಗೂ ಅವರ ಪತ್ನಿ ಜ್ಯಾನ್ ಕ್ರೀಮರ್ ಅವರು 1990ರಲ್ಲಿ ಅನಿಮಲ್ ಡಿಫೆಂಡರ್ಸ್ ಇಂಟರ್ ನ್ಯಾಷನಲ್(ಎಡಿಐ) ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಅಂದಿನಿಂದಲೇ ‘ಸ್ಟಾಪ್ ಸರ್ಕಸ್ ಸಫರಿಂಗ್’ ಎಂಬ ಚಳವಳಿಯನ್ನು ಹುಟ್ಟುಹಾಕಿದ ಇವರು ಪೆರು ಹಾಗೂ ಕೊಲಂಬಿಯಾದಲ್ಲಿದ್ದ ಸರ್ಕಸ್ ಸಂಸ್ಥೆಗಳ ವಿರುದ್ಧ ಹೋರಾಟ ಮಾಡಿದರು. ಅದಕ್ಕೆ ಸ್ಥಳೀಯ ಸರ್ಕಾರ ಕೂಡ ಎಡಿಐಗೆ ಸಾಥ್ ನೀಡುವುದರೊಂದಿಗೆ ಕಾರ್ಯಕರ್ತರು ಅಲ್ಲಿನ ಸ್ಥಳೀಯ ಕಾನೂನಿನ ಪ್ರಕಾರವೇ ಪ್ರಾಣಿಗಳನ್ನು ರಕ್ಷಿಸುವ ಕಾರ್ಯಕ್ರಮ ಆಯೋಜನೆ ಮಾಡಿದರು.
ಈ ಹಿಂದೆಯೂ ಅಪಾಯದಲ್ಲಿದ್ದ ಸಾಕಷ್ಟು ವನ್ಯ ಜೀವಿಗಳನ್ನು ಸಂರಕ್ಷಿಸಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದ ಎಡಿಐ, ಹಲವು ವರ್ಷಗಳಿಂದ ಪೆರು ಮತ್ತು ಕೊಲಂಬಿಯಾದ ವಿವಿಧ ಸರ್ಕಸ್ ಸಂಸ್ಥೆಗಳಲ್ಲಿದ್ದ ವನ್ಯ ಜೀವಿಗಳನ್ನು ಸಂರಕ್ಷಿಸಿತ ಕಾಡಿಗೆ ಬಿಡುವ ಸಲುವಾಗಿ "ಸ್ಪಿರಿಟ್ ಆಫ್ ಫ್ರೀಡಂ" ಎಂಬ ಹೆಸರಿನಲ್ಲಿ ಬೃಹತ್ ವನ್ಯಜೀವಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಸರ್ಕಸ್ ಸಂಸ್ಥೆಯಲ್ಲಿರುವ ಪ್ರಾಣಿಗಳನ್ನು ರಕ್ಷಿಸಿ ಅವರನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ರವಾನಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿತ್ತು.
ಹೀಗಾಗಿ ಸರ್ಕಸ್ ಸಂಸ್ಥೆಗಳಲ್ಲಿರುವ ವಿವಿಧ ವನ್ಯ ಜೀವಿಗಳನ್ನು ಜೊಹಾನ್ಸ್‌ಬರ್ಗ್‌ನ ಎಮೋಯಾ ಬಿಗ್ ಕ್ಯಾಟ್ (ಸಿಂಹ ಧಾಮ)ವನ್ಯಧಾಮಕ್ಕೆ ತಂದಿಳಿಸಲು ನಿರ್ಧರಿಸಲಾಯಿತು. ಅದರಂತೆ ಸುಮಾರು 18 ತಿಂಗಳ ಹಿಂದೆ ಮೊದಲ ಬಾರಿಗೆ ಬುಕರಮಂಗಾದಲ್ಲಿದ್ದ ಕೊಲಂಬಿಯನ್ ಸರ್ಕಸ್ ಕಂಪನಿಯು ತನ್ನ ವಶದಲ್ಲಿದ್ದ 9 ಸಿಂಹಗಳನ್ನು ಎಐಡಿ ಸಂಸ್ಥೆಯ ವಶಕ್ಕೆ ನೀಡಿತು. ಈ ಸಿಂಹಗಳನ್ನು ಉತ್ತರ ಕೊಲಂಬಿಯಾದ ಸುಮಾರು 400 ಕಿ.ಮೀ ದೂರದ ಬುಕರಮಂಗಾ ವಿಮಾನ ನಿಲ್ದಾಣದ ಮೂಲಕ ಏಪ್ರಿಲ್ 29ರಂದು ಬೊಗಾಟ ಕ್ಕೆ ಚಿಕ್ಕ ಕಾರ್ಗೊ ವಿಮಾನದ ಮೂಲಕ ಸಾಗಿಸಲಾಯಿತು.
ಇದಾದ ಬಳಿಕ ಲಿಮಾದ ಸರ್ಕಸ್ ಸಂಸ್ಥೆಯಲ್ಲಿದ್ದ ಸುಮಾರು 33 ಸಿಂಹಗಳನ್ನು ಸುಮಾರು 10,872 ಕಿ.ಮೀ. ದೂರವಿರುವ ಜೊಹಾನ್ಸ್ ಬರ್ಗ್ ಅರಣ್ಯಕ್ಕೆ ಸಾಗಿಸಲಾಯಿತು. ಎಲ್ಲ 33 ಸಿಂಹಗಳನ್ನು ಪ್ರತ್ಯೇಕ ಬೋನ್ ನೊಳಗೆ ಹಾಕಿ ಕಾರ್ಗೊ ವಿಮಾನದ ಮೂಲಕ ಲಿಮಾದಿಂದ ಜೊಹಾನ್ಸ್‌ಬರ್ಗ್‌ಗೆ ಸಾಗಿಸಲಾಯಿತು. ಜೊಹಾನ್ಸ್‌ಬರ್ಗ್‌ನ ವನ್ಯಧಾಮದಲ್ಲಿ 33 ಸಿಂಹಗಳ ವಿಹಾರಕ್ಕೆ ಅಗತ್ಯ ವಿಶಾಲ ಪ್ರದೇಶವಿದ್ದು, ಅಲ್ಲಿ ಕುಡಿವ ನೀರು, ಆಡುವುದಕ್ಕೆ ಈಜುಕೊಳ, ಮರಗಿಡಗಳು, ಕೆಲವು ಆಟದ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಪುನರ್‌ವಸತಿಯ ಮೊದಲ ಹಂತದಲ್ಲಿ ಈ ಸಿಂಹಗಳನ್ನು ಈಗಾಗಲೇ ಅಲ್ಲಿರುವ ಸಿಂಹಗಳ ಜೊತೆ ಬೆರೆಯುವಂತೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ ಈಗಿರುವ ವನ್ಯಧಾಮವನ್ನು 5 ಎಕರೆಗೆ ವಿಸ್ತರಿಸಲಾಗುವುದು ಮತ್ತು ದೃಷ್ಟಿ ಕಳೆದುಕೊಂಡಿರುವ ಸಿಂಹಗಳು ಮತ್ತು ಇತರೆ ಪ್ರಾಣಿಗಳಿಗೆ ಓಡಾಟಕ್ಕೆ ಅನುಕೂಲ ಕಲ್ಪಿಸುವ ಕೆಲಸ ಆಗಬೇಕಿದೆ. ಈ ಕೆಲಸಕ್ಕೆ ಇನ್ನೊಂದಿಷ್ಟು ತಿಂಗಳುಗಳು ಬೇಕಾಗಬಹುದು ಎಂಬುದು ಎಐಡಿ ಕಾರ್ಯಕರ್ತರು ಹೇಳಿದ್ದಾರೆ.
Advertisement