ನೀರಿಗಾಗಿ ಅಮ್ಮನ ಕಷ್ಟ ನೋಡಲಾಗದೇ 45 ಅಡಿ ಬಾವಿ ಕೊರೆದ 15 ವರ್ಷದ ಬಾಹುಬಲಿ

ಇಲ್ಲೊಬ್ಬ 15 ವರ್ಷದ ಬಾಲಕ ನೀರಿಗಾಗಿ ತನ್ನ ತಾಯಿ ಪಡುವ ಕಷ್ಟ ನೋಡಲಾರದೇ 45 ಅಡಿ ಬಾವಿ ತೋಡಿ ಅಸಾಮಾನ್ಯ ಎನಿಸಿಕೊಂಡಿದ್ದಾನೆ...
ಪವನ್ ಕುಮಾರ್
ಪವನ್ ಕುಮಾರ್

ಶಿವಮೊಗ್ಗ:  ತನ್ನ ಹೆತ್ತ ತಾಯಿಯ ಮೇಲಿನ ಪ್ರೀತಿಗಾಗಿ,  ಮಮತೆಗಾಗಿ, ಸತ್ತನಂತರ ನೆನಪಿಗಾಗಿ ಕೆಲ ಮಕ್ಕಳು ದೇವಾಲಯ ಸ್ಥಾಪಿಸುವುದು, ಪ್ರತಿಮೆ ನಿರ್ಮಿಸುವುದನ್ನು ಮಾಡುತ್ತಾರೆ, ಆದರೆ ಇಲ್ಲೊಬ್ಬ 15 ವರ್ಷದ ಬಾಲಕ ನೀರಿಗಾಗಿ ತನ್ನ ತಾಯಿ ಪಡುವ ಕಷ್ಟ ನೋಡಲಾರದೇ 45 ಅಡಿ ಬಾವಿ ತೋಡಿ ಅಸಾಮಾನ್ಯ ಎನಿಸಿಕೊಂಡಿದ್ದಾನೆ.

ಅಮ್ಮನ ಕಷ್ಟ ನೋಡಲಾಗದೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದ  15 ವರ್ಷದ ಹುಡುಗ ಪವನ್ ಕುಮಾರ್ ಬಾವಿಯನ್ನು ಅಗೆದು ನೀರು ತೆಗೆದಿದ್ದಾನೆ.
ಪವನ್ ಮನೆಯ ಹಿಂಭಾಗ ಬಾವಿ ನಿರ್ಮಿಸಿದ ಮೇಲೆ ಊರಿನಲ್ಲಿ ಎಲ್ಲರೂ ಅವನನ್ನು 'ಬಾಹುಬಲಿ' ಎಂದು ಕರೆಯುತ್ತಿದ್ದಾರಂತೆ. ಅಮ್ಮನ ಪೂಜೆಗೆ ನೀರು ತರಲು ಕಷ್ಟವಾಗದಿರಲೆಂದು ಬಾಹುಬಲಿಯು ಶಿವನ ಲಿಂಗವನ್ನೇ ಎತ್ತಿಕೊಂಡು ಬಂದು ಜಲಪಾತದ ಬಳಿ ಪ್ರತಿಷ್ಠಾಪಿಸಿದ್ದ ತೆಲುಗು ಸಿನಿಮಾ ಕಥೆಯಂತೆ, ತನ್ನ ತಾಯಿಗೆ ಕಷ್ಟವಾಗದಿರಲಿ ಎಂದು ಬಾವಿ ತೋಡಿದ್ದಾನೆ. ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಅಮ್ಮ ನೀರು ತರಲು ಗಂಟೆಗಟ್ಟಲೇ ಸಮಯ ವ್ಯಯಿಸುತ್ತಿದ್ದರು. ನನಗೆ ಕಳೆದ ಎರಡು ತಿಂಗಳಿಂದ ರಜೆ ಇದ್ದ ಕಾರಣ ಮನೆಯ ಹಿಂಬದಿಯಲ್ಲಿ ಯಾಕೆ ಬಾವಿ ತೋಡಬಾರದು ಎಂದುಕೊಂಡು ಕೆಲಸಕ್ಕೆ ಕೈ ಹಾಕಿದೆ ಎನ್ನತ್ತಾನೆ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪವನ್ ಕುಮಾರ್.

ಏಪ್ರಿಲ್ ತಿಂಗಳಲ್ಲಿ ಬಾವಿ ತೋಡಲು ಪವನ್ ಆರಂಭಿಸಿದ ಪವನ್ ಗೆ 45 ಅಡಿ ಅಗೆತ ಆದ ನಂತರ ಕೈಮುರಿಯಿತು. ನಂತರ ವೃತ್ತಿಪರ ಕೆಲಸಗಾರರ  ಸಹಾಯ ತೆಗೆದುಕೊಳ್ಳಬೇಕಾಯಿತು ಎಂದು ಪವನ್ ಹೇಳಿದ್ದಾನೆ. ಬಾವಿಯಲ್ಲಿ ನೀರು ಕಂಡೊಡನೆ ಅಮ್ಮನ ಕಣ್ಣು ಮಾತ್ರವಲ್ಲ, ಹೃದಯವೂ ತುಂಬಿ ಬಂದಿದೆ.

ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ರಾಜ್ಯದ ಸೇವೆ ಸಲ್ಲಿಸಬೇಕು ಎಂದು ಕನಸು ಹೊತ್ತಿದ್ದಾನೆ. 45 ಅಡಿ ಅಗೆದ ನಂತರವೂ ನೀರು ಬರದಿದ್ದರಿಂದ ತುಂಬಾ ನಿರಾಶೆ ಆಗಿತ್ತು. ಆದರೆ, ಇಬ್ಬರು ವೃತ್ತಿಪರ ಬಾವಿ ತೋಡುವವರ ಸಹಕಾರದಿಂದ ಇನ್ನೂ ಹತ್ತು ಅಡಿ ತೋಡಿದಾಗ ನೀರು ಜಿನುಗಿತು ಎಂದು ಪವನ್ ಸಂತಸ ವ್ಯಕ್ತ ಪಡಿಸುತ್ತಾನೆ. ಈ ಬಾವಿಯ ನೀರನ್ನು ಪವನ್ ಮನೆಯವರು ಮಾತ್ರವಲ್ಲ ಅಕ್ಕಪಕ್ಕದವರೂ ಉಪಯೋಗಿಸಿ ಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com