ಹಿಂದಿ ಭಾಷೆ ಹೇರಿಕೆ ತಪ್ಪು: ನಿಘಂಟು ತಜ್ಞ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ. ಜಿ.ವೆಂಕಟಸುಬ್ಬಯ್ಯ

ಕನ್ನಡ ನಿಘಂಟುವಿನ 8 ಆವೃತ್ತಿಗಳು, 10, 000 ಪುಟಗಳಷ್ಟು ಮತ್ತು ಲೆಕ್ಕವಿಲ್ಲದಷ್ಟು ಪದಗಳು ಆ ಶಬ್ದಕೋಶದಲ್ಲಿ...
ಪ್ರೊ ಜಿ ವೆಂಕಟಸುಬ್ಬಯ್ಯ
ಪ್ರೊ ಜಿ ವೆಂಕಟಸುಬ್ಬಯ್ಯ

ಬೆಂಗಳೂರು: ಕನ್ನಡ ನಿಘಂಟುವಿನ 8 ಆವೃತ್ತಿಗಳಲ್ಲಿ 10,000 ಪುಟಗಳಷ್ಟು ಮತ್ತು ಲೆಕ್ಕವಿಲ್ಲದಷ್ಟು ಪದಗಳು. ಇದು ಆಕ್ಸ್ ಫರ್ಡ್ ಅರ್ಥಕೋಶಕ್ಕೆ ಸಮನಾಗಿ ಕನ್ನಡ ನಿಘಂಟುವನ್ನು ಅಭಿವೃದ್ಧಿಪಡಿಸಿದ ಕನ್ನಡ ನಿಘಂಟು ತಜ್ಞ 105ರ ಇಳಿವಯಸ್ಸಿನ ಪ್ರೊ ಜಿ ವೆಂಕಟಸುಬ್ಬಯ್ಯನವರ ಸಂಕ್ಷಿಪ್ತ ಸಾಧನೆ ವಿವರ.

ಹಳೆಯ ಸಾಂಪ್ರದಾಯಿಕ ಕನ್ನಡದಿಂದ ಹಿಡಿದು ನವ ಕನ್ನಡದವರೆಗೆ ಕನ್ನಡ ಭಾಷೆಯ ಸಂಪತ್ತನ್ನು ಜಗತ್ತಿಗೆ ತೋರಿಸಿದವರು ಪ್ರೊ ಜಿ ವೆಂಕಟಸುಬ್ಬಯ್ಯನವರು. ಕನ್ನಡ ಶಬ್ದಕೋಶವನ್ನು 8 ಆವೃತ್ತಿಗಳಲ್ಲಿ ಅಭಿವೃದ್ಧಿಪಡಿಸಲು ಅವರಿಗೆ 60 ವರ್ಷಗಳು ಹಿಡಿಯಿತಂತೆ. ಈ ನಿಘಂಟು ಭಾರತೀಯ ಭಾಷೆಗಳಲ್ಲಿಯೇ ಅತ್ಯಂತ ಹೆಚ್ಚು ಆವೃತ್ತಿಗಳನ್ನು ಕಂಡಿದೆ.

ಪ್ರೊ ವೆಂಕಟಸುಬ್ಬಯ್ಯನವರ ಕನ್ನಡದ ನಿಘಂಟು ಮೊದಲ ಆವೃತ್ತಿ ಪ್ರಕಟವಾಗಿದ್ದು 1970ರಲ್ಲಿ ಮತ್ತು ಕೊನೆಯದ್ದು 1995ರಲ್ಲಿ. ಇಂತಹ ಕನ್ನಡದ ನಿಘಂಟು ತಜ್ಞ ಪ್ರೊ ವೆಂಕಟಸುಬ್ಬಯ್ಯನವರಿಗೆ ಈ ಬಾರಿಯ ಕೇಂದ್ರ ಸರ್ಕಾರದ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ದಕ್ಷಿಣ ವಲಯದಿಂದ ಭಾಷಾ ಸನ್ಮಾನ ಬಿರುದು ನೀಡಿ ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಅವರನ್ನು ಗೌರವಿಸಲಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರು ಅವರನ್ನು ಮಾತನಾಡಿಸಿದಾಗ-

ಈ ಪ್ರಶಸ್ತಿಯನ್ನು ನೀವು ನಿರೀಕ್ಷಿಸಿದ್ದಿರೆ?
-ಖಂಡಿತಾ ಇಲ್ಲ. ಜನರು ನನ್ನನ್ನು ಮರೆತಿದ್ದಾರೆ ಎಂದು ಭಾವಿಸಿದ್ದೆ. ಈ ವಯಸ್ಸಿನಲ್ಲಿ ನನಗೆ ಪ್ರಶಸ್ತಿ ಕೊಟ್ಟಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ.

ಕನ್ನಡ ಅರ್ಥಕೋಶದಲ್ಲಿ ಅಷ್ಟರ ಮಟ್ಟಿಗೆ ಆಳಕ್ಕಿಳಿದು ನೀವು ಎಂಟು ಆವೃತ್ತಿಗಳನ್ನು ಪ್ರಕಟಿಸಿದ್ದು ಹೇಗೆ?
ಕನ್ನಡದಲ್ಲಿ ನಾನು ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾಗ ಖ್ಯಾತ ಕವಿ ಹಾಗೂ ಬರಹಗಾರ ಬಿ ಎಂ ಶ್ರೀಕಂಠಯ್ಯ ನನಗೆ ಪರೀಕ್ಷಾರ್ಥಿಯಾಗಿ ಬಂದಿದ್ದರು. ಒಂದೂವರೆ ಗಂಟೆ ಕಾಲ ನನ್ನಲ್ಲಿ ಪ್ರಶ್ನೆ ಕೇಳಿ ನಿನ್ನಂತ ಯುವಕರಿಂದ ಕನ್ನಡ ಭಾಷೆಯನ್ನು ಬೇರೆಯ ಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ ಎಂದು ಹೇಳಿದರು. ಅದು 1930ರ ಹೊತ್ತು. ಆ ಮಾತು ನನ್ನನ್ನು ಜಾಗೃತನನ್ನಾಗಿಸಿತು. ಕನ್ನಡ ಭಾಷೆಯ ಬೆಳವಣಿಗೆಗಾಗಿ ಏನಾದರೊಂದು ಮಾಡಬೇಕೆಂದು ಅಂದುಕೊಳ್ಳುತ್ತಿದ್ದೆ.

ನಿಮ್ಮ ಸಂಕಲ್ಪ ಕಾರ್ಯರೂಪಕ್ಕೆ ಬಂದಿದ್ದು ಹೇಗೆ?
1943ರಲ್ಲಿ, ಎ ಆರ್ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದಾಗ ಕನ್ನಡ ಸಾಹಿತ್ಯದಿಂದ ಹಲವು ಶಬ್ದಗಳನ್ನು ಹೆಕ್ಕಿ ತೆಗೆಯುವ ತಜ್ಞರ ಸಮಿತಿಯಲ್ಲಿ ನಾನು ಕೂಡ ಒಬ್ಬನಾಗಿದ್ದೆ. ಪಂಪ ಕವಿಯಿಂದ ಹಿಡಿದು ಕೆ ವಿ ಪುಟ್ಟಪ್ಪರವರೆಗಿನ ಕವಿ, ಸಾಹಿತಿಗಳ ಸಾಹಿತ್ಯ ಕೆಲಸಗಳಿಂದ ಹಲವು ಕನ್ನಡ ಶಬ್ದಗಳನ್ನು ಹೆಕ್ಕಿ ತೆಗೆದೆವು. ಹೀಗೆ ಮೊದಲ ಆವೃತ್ತಿ ಹುಟ್ಟಿಕೊಂಡಿತು. ನಂತರ ಅದನ್ನು ಮುಂದುವರಿಸಿಕೊಂಡು ಹೋಗಿ ಲಕ್ಷಾಂತರ ಶಬ್ದಗಳನ್ನು ಹೆಕ್ಕಿ ತೆಗೆದೆವು.

ನಿಮ್ಮ ಅರ್ಥಕೋಶ ಮೂಲಕ ಲಕ್ಷಾಂತರ ಕನ್ನಡ ಶಬ್ದಗಳು ಜನಪ್ರಿಯವಾದವು, ಹೇಗೆ?
-ಕನ್ನಡದಲ್ಲಿ ಹಲವು ಶಬ್ದಗಳನ್ನು ದಿನನಿತ್ಯ ಬಳಕೆಯಲ್ಲಿ ಉಪಯೋಗಿಸುವುದಿಲ್ಲ. ಅಂತವುಗಳನ್ನು ಹೆಚ್ಚೆಚ್ಚು ದಿನನಿತ್ಯದ ವ್ಯವಹಾರಗಳಲ್ಲಿ ಬಳಸಿದರೆ ಜನಪ್ರಿಯವಾಗುತ್ತದೆ ಮತ್ತು ಜೀವಂತವಾಗಿ ಉಳಿಯುತ್ತದೆ. ಆ ಕೆಲಸವನ್ನು ನಾನು ಅರ್ಥಕೋಶದಲ್ಲಿ ಮಾಡಿದ್ದೇನೆ.

ಹಿಂದಿ ಭಾಷೆ ಹೇರಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಭಾಷೆಯನ್ನು ಯಾವತ್ತೂ ಇನ್ನೊಬ್ಬರ ಮೇಲೆ ಹೇರಬಾರದು. ಹಿಂದಿ ಭಾಷೆಯನ್ನು ಹೇರಿದರೆ ದಕ್ಷಿಣ ಭಾರತದ ಬೇರೆ ಭಾಷೆಗಳ ಮೇಲೆ ಪರಿಣಾಮ ಬೀರುತ್ತದೆ. ಭಾಷೆ ಹೇರಿಕೆಯನ್ನು ಜನ ವಿರೋಧಿಸಬೇಕು. ಅದು ಸಾಹಿತ್ಯ, ಮಾಧ್ಯಮ, ಬರಹ ವಲಯ ಮತ್ತು ಇಂದಿನ ಸೋಷಿಯಲ್ ಮೀಡಿಯಾ, ಬ್ಲಾಗುಗಳಲ್ಲಿ ಕೂಡ ಹಿಂದಿ ಭಾಷೆ ಹೇರಿಕೆಯನ್ನು ವಿರೋಧಿಸಬೇಕು.

ಮಾತನಾಡುವಾಗ ಕನ್ನಡ ಭಾಷೆಯ ಜೊತೆ ಬೇರೆ ಭಾಷೆಯನ್ನು ಸೇರಿಸುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗುತ್ತಿದೆ. ಅದರ ಬಗ್ಗೆ ಏನು ಹೇಳುತ್ತೀರಿ?
-ಹಲವು ವರ್ಷಗಳವರೆಗೆ ಈ ಕ್ರಮ ಅನುಸರಿಸಿದರೆ ಕನ್ನಡೇತರ ಭಾಷೆಗಳ ಶಬ್ದಗಳು ಕನ್ನಡ ಭಾಷೆಯ ಭಾಗವಾಗಿ ಬಿಡುತ್ತದೆ. ಕನ್ನಡ ಭಾಷೆಯ ಶುದ್ಧತೆ ಹೊರಟುಹೋಗುತ್ತದೆ.

ಅರ್ಥಕೋಶದ ಮತ್ತೊಂದು ಆವೃತ್ತಿಯ ಅಭಿವೃದ್ಧಿಗೆ ಅವಕಾಶವಿದೆಯೇ?
ಹೌದು, ಹಲವು ಹೊಸ ಶಬ್ದಗಳು ಹುಟ್ಟಿಕೊಂಡಿವೆ ಮತ್ತು ಅದರಲ್ಲಿ ಸತತ ಬದಲಾವಣೆಗಳಾಗುತ್ತಾ ಹೋಗುತ್ತದೆ. ಸರ್ಕಾರ ನಿರ್ಧಾರ ಮಾಡಿದರೆ ಕನ್ನಡ ಅರ್ಥಕೋಶದ ಇನ್ನೊಂದು ಆವೃತ್ತಿ ಹೊರತರಲು ಅವಕಾಶವಿದೆ.

ಕನ್ನಡ ಭಾಷೆಯ ಕುರಿತು ನೀತಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಯಾವ ಪಕ್ಷದ ಸರ್ಕಾರವೇ ಬರಲಿ, ಯಾವ ಅವಧಿಯಲ್ಲಿರಲಿ,  ಕನ್ನಡ ಭಾಷೆಯ ಕುರಿತು ಏನೇ ಹೊಸ ಉಪಕ್ರಮಗಳನ್ನು ಜಾರಿಗೆ ತರುವುದಿದ್ದರೂ ಸರ್ಕಾರ ಮೊದಲು ತಜ್ಞರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಕೇಳಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com