ಚಿಕ್ಕಮಗಳೂರ ಈ ಹುಡುಗಿ ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್

ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಮೇಘಾನಾ ಶಾನಭೋಗ್
ಮೇಘಾನಾ ಶಾನಭೋಗ್
ಹೈದರಾಬಾದ್: ಘಮಘಮಿಸುವ ಕಾಫಿಗೆ ಹೆಸರಾಗಿರುವ ಚಿಕ್ಕಮಗಳೂರಿನ ಹೆಮ್ಮೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನವರಾದ ಮೇಘನಾ ಶಾನಭೋಗ್ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹಾ ಸಾಧನೆ ಮಾಡಿದ ಮಹಿಳೆಯಾಗಿ ಮೇಘನಾ ಗುರುತಿಸಲ್ಪಡುತ್ತಾರೆ.
ಹೈದರಾಬಾದ್ ನ ದುಂಡಿಗಲ್‌ ವಾಯುಪಡೆ ಅಕಾಡಮಿಯಲ್ಲಿ ಮೇಘನಾ ಯುದ್ಧ ವಿಮಾನ ಪೈಲಟ್ ತರಬೇತಿ ಮುಗಿಸಿದ್ದು ಪೈಲಟ್ ಹುದ್ದೆಗೆ ನಡೆದ ಆಯ್ಜೆ ಪ್ರಕ್ರಿಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಶನಿವಾರ ನಡೆದ ಪಥಸಂಚಲನದ ವೇಳೆ ಈ ಸಂಬಂಧ ಅಧಿಕೃತ ಘೋಷಣೆ ಮಾಡಲಾಗಿದೆ.
ಮೇ 30, 1994 ಚಿಕ್ಕಮಗಳೂರಿನ ಮರ್ಲೆಯಲ್ಲಿ ಜನಿಸಿದ ಮೇಘನಾ ಅವರ ತಂದೆ ಎಂ.ಕೆ.ಸುರೇಶ್ ವಕೀಲ ವೃತ್ತಿ ಮಾಡುತ್ತಿದ್ದು ತಾಯಿ ಪಿ.ವಿ.ಶೋಭಾ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ನ್ಯಾಯಾಧಿಶೆಯಾಗಿದ್ದಾರೆ. ನಾಲ್ಕನೇ ತರಗತಿವರೆಗೆ ಮಹರ್ಷಿ ವಿದ್ಯಾಮಂದಿರದಲ್ಲಿ ವ್ಯಾಸಂಗ ಮಾಡಿದ್ದ ಮೇಘನಾ 5ನೇ ತರಗತಿಯಿಂದ ಪಿಯು ವರೆಗೂ ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನಲ್ಲಿ ಕಲಿತರು.
ಮೈಸೂರು ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ ಪದವಿ ಗಳಿಸಿದ ಮೇಘನಾ ಡಿಸ್ಟಿಂಕ್ಷನ್ ಪಡೆದಿದ್ದರು.ಈ ಬಳಿಕ ಸಿವಿಲ್ ಸರ್ವೀಸ್ ಸೇರುವ ಉದ್ದೇಶದಿಂದ ದೆಹಲಿಯಲ್ಲಿ ತರಬೇತಿಗೆ ದಾಖಲಾದ ಇವರು ಹಲವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಈಗ ಯುದ್ಧ ವಿಮಾನ ಪೈಲಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ದೇಶಾದ್ಯಂತದ 24 ಅಭ್ಯರ್ಥಿಗಳ ಪೈಕಿ ಇಬ್ಬರನ್ನು ಪೈಲಟ್ ತರಬೇತಿಗಾಗಿ ಆಯ್ಕೆ ಮಾಡಲಾಗಿತ್ತು. ಆ ಇಬ್ಬರಲ್ಲಿ ಒಬ್ಬರು ಕನ್ನಡ ಕುವರಿಯಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com