3 ಸೆಕೆಂಡ್‌ ಗೆ 30 ಗುಂಡು; ಅಮೇಥಿಯಲ್ಲಿ ತಯಾರಾಗುವ ಎಕೆ 203 ರೈಫಲ್ ಎಷ್ಟು ವಿಧ್ವಂಸಕ ಗೊತ್ತೇ..?

ಇತ್ತೀಚೆಗಷ್ಟೇ ಅಮೇಥಿಯಲ್ಲಿ ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಕೆ 203 ರೈಫಲ್ ಕುರಿತ ಸುದ್ದಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದೀಗ ಇದೇ ಅತ್ಯಾಧುನಿಕ ವೆಪನ್ ನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹೆಲಿ: ಇತ್ತೀಚೆಗಷ್ಟೇ ಅಮೇಥಿಯಲ್ಲಿ ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಕೆ 203 ರೈಫಲ್ ಕುರಿತ ಸುದ್ದಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದೀಗ ಇದೇ ಅತ್ಯಾಧುನಿಕ ವೆಪನ್ ನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ದಶಕಗಳಿಂದಲೂ ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಪರಿಕರಗಳ ಪೂರೈಕೆಯಲ್ಲಿ ಭಾರತ ಅತಿ ಹೆಚ್ಚು ನಂಬಿಕೊಂಡಿದ್ದು ರಷ್ಯಾವನ್ನು. ಇತ್ತೀಚಿನ ವರ್ಷಗಳಲ್ಲಿ ಭಾರತ ಅಮೆರಿಕದತ್ತ ಕೊಂಚ ವಾಲಿದ್ದರೂ ರಷ್ಯಾ ಜತೆಗಿನ ಸ್ನೇಹವನ್ನು ಭಾರತ ಹಾಗೆಯೇ ಉಳಿಸಿಕೊಂಡಿದೆ. ತಿಂಗಳ ಹಿಂದಷ್ಟೇ ಭಾರತ ರಷ್ಯಾದ ಅತ್ಯಂತ ವಿಶ್ವಾಸಾರ್ಹ ಮತ್ತು ವಿನಾಶಕಾರಿ 'ಎಸ್‌-400 ಟ್ರಯಂಫ್‌ ಕ್ಷಿಪಣಿ ವಾಯುರಕ್ಷಣಾ ವ್ಯವಸ್ಥೆ'ಗಳನ್ನು ಖರೀದಿ ಮಾಡಿ ಪಾಕಿಸ್ತಾನ ಮತ್ತು ಚೀನಾಗೆ ತಲೆನೋವು ತಂದೊಡ್ಡಿತ್ತು. ಇದೀಗ ಮತ್ತದೇ ರಷ್ಯಾ ಸಹಕಾರದೊಂದಿಗೆ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದ ಕೋರ್ವಾದಲ್ಲಿರುವ ಶಸ್ತ್ರಾಸ್ತ್ರಗಳ ತಯಾರಿಕೆ ಕಾರ್ಖಾನೆಯಲ್ಲಿ ಅತ್ಯಾಧುನಿಕ ಎಕೆ-203 ರೈಫಲ್‌ ಗಳನ್ನು ತಾನೇ ನಿರ್ಮಾಣ ಮಾಡಲು ಭಾರತ ಮುಂದಾಗಿದೆ.
ಇಷ್ಟಕ್ಕೂ ಭಾರತವೇಕೆ ಇದೇ ರೈಫಲ್ ನ ಉತ್ಪಾದನೆಗೆ ಮುಂದಾಗಿದೆ.. ಇಷ್ಟಕ್ಕೂ ಈ ಅಸಾಲ್ಟ್‌ ರೈಫಲ್‌ ನ ವಿಶೇಷತಗೆಳು ಏನುಗೊತ್ತಾ..!
ಎಕೆ 203 ಎಕೆ 47ನ ಸುಧಾರಿತ ರೂಪ. ಹೌದು... ರಷ್ಯಾದ ಕಲಾಶ್ನಿಕೋವ್‌ ಕಂಪನಿ ತಯಾರಿಸಿದ್ದ ಜಗತ್ತಿನ ಅತ್ಯಂತ ಜನಪ್ರಿಯ ಎಕೆ 47 ರೈಫಲ್ ನ ಸುಧಾರಿತ ರೂಪವೇ ಎಕೆ 203 ರೈಫಲ್‌. ವಿಶ್ವದ ಅತ್ಯಂತ ವಿಶ್ವಾಸಾರ್ಹ ರೈಫಲ್ ಗಳಲ್ಲಿ ಎಂದು ಎಕೆ 203ಯನ್ನು ಗುರುತಿಸಲಾಗಿದೆ. ಈಗಾಗಲೇ ವಿಶ್ವದ ನಾನಾ ದೇಶಗಳು ಈ ಘಾತುಕ ರೈಫಲ್ ಅನ್ನು ಬಳಕೆ ಮಾಡುತ್ತಿದ್ದು, ಇದೀಗ ಭಾರತ ಕೂಡ ಈ ಶಸ್ತ್ರಾಸ್ತ್ರವನ್ನು ಬಳಕೆ ಮಾಡುತ್ತಿರುವುದಲ್ಲದೇ, ಈ ವಿನಾಶಕಾರಿ ರೈಫಲ್ ಅನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತಾನೇ ಉತ್ಪಾದಿಸಲು ಭಾರತ ಮುಂದಾಗಿದೆ. ಇದಕ್ಕಾಗಿ ಭಾರತ ಮತ್ತು ರಷ್ಟಾ ಪರಸ್ಪರ ಒಪ್ಪಂದ ಮಾಡಿಕೊಂಡಿದೆ.
ದೇಶದ ಭೂಸೇನೆ, ನೌಕಾಪಡೆ, ವಾಯುಪಡೆಗಳಿಗೆ ಹಂತ ಹಂತವಾಗಿ ಇವುಗಳನ್ನು ಸ್ಥಳೀಯವಾಗಿ ಉತ್ಪಾದಿಸಿ ಪೂರೈಸುವ ಗುರಿ ಹೊಂದಲಾಗಿದೆ. ನಂತರದಲ್ಲಿ ಅರೆಸೇನಾಪಡೆಗಳಿಗೆ ಹಾಗೂ ಪೊಲೀಸ್‌ ಇಲಾಖೆಗೂ ಈ ರೈಫಲ್ ಅನ್ನು ಪೂರೈಕೆಯಾಗ ಮಾಡಲಾಗುತ್ತದೆ ಎಂದು ಸರ್ಕಾರದ ಮೂಲಗಲು ತಿಳಿಸಿವೆ. ಆ ಮೂಲಕ ದೇಶಿ ನಿರ್ಮಿತ ಇನ್ಸಾಸ್ ರೈಫಲ್‌ ಗಳ ಸ್ಥಾನವನ್ನು ಇದು ಕ್ರಮೇಣ ಅತಿಕ್ರಮಿಸಲಿದೆ. 
ಎರಡು ಬಗೆಯಲ್ಲಿ ರೈಫಲ್ ಲಭ್ಯ, ನಿಮಿಷದಲ್ಲಿ 600 ಬುಲೆಟ್‌ ಫೈರ್‌ ಮಾಡುವ ಸಾಮರ್ಥ್ಯ! 
ಎಕೆ 203 7.62 x 39 ಎಂಎಂ ಅಳತೆಯಲ್ಲಿ ಫುಲ್‌ ಸೈಜ್‌ ಮತ್ತು ಕಾಂಪ್ಯಾಕ್ಟ್/ಕಾರ್ಬೈನ್‌ ಎಂಬ ಎರಡು ಬಗೆಯ ರೈಫಲ್‌ ಗಳು ಲಭ್ಯ. ಅರೆ ಸ್ವಯಂಚಾಲಿತ ಮತ್ತು ಪೂರ್ಣ ಸ್ವಯಂಚಾಲಿತ ವಿಧಾನದಲ್ಲಿ ಗುಂಡು ಹಾರಿಸಬಹುದಾಗಿದೆ. ಗ್ಯಾಸ್‌ ಆಪರೇಟೆಡ್‌, ರೋಟರಿ ಬೋಲ್ಟ್‌ ಲಾಕಿಂಗ್‌ ವ್ಯವಸ್ಥೆ ಹೊಂದಿರುವ ಪೂರ್ಣ ಪ್ರಮಾಣದ ರೈಫಲ್‌ ನ ಉದ್ದ 940 ಎಂಎಂ. ಬ್ಯಾರೆಲ್‌ ಉದ್ದ 415 ಮಿ.ಮೀ.  ಶತ್ರು ಪಾಳಯದವರು ಕಣ್ಣುಮಿಟುಕಿಸಿವುದರೊಳಗೆ ಹೊಡೆದುರುಳಿಸುವ ತಾಕತ್ತು ಈ ರೈಫಲ್‌ ಗಿದೆ. ಒಂದು ನಿಮಿಷದಲ್ಲಿ 600 ಬುಲೆಟ್‌ ಗಳನ್ನು ಫೈರ್‌ ಮಾಡಬಲ್ಲದು. ಇದಕ್ಕೆ ಹೊಂದಿಕೆಯಾಗುವ ಮ್ಯಾಗ್‌ ಜಿನ್‌ನಲ್ಲಿ 30 ಬುಲೆಟ್‌ ಗಳಿರುತ್ತವೆ. ಅಂದರೆ ಕೇವಲ ಮೂರು ಸೆಕೆಂಡುಗಳಲ್ಲಿ 30 ಗುಂಡುಗಳನ್ನು ಫೈರ್‌ ಮಾಡುತ್ತದೆ. ಈ ಗನ್ ನ ವೇಗವೇ ಇದರ ತಾಕತ್ತು ಎಂದೂ ಹೇಳಬಹುದು. 
ಭಾರತವು ಅಮೆರಿಕದ ಸಿಗ್‌ ಸಾವರ್‌ ಕಂಪನಿ ಜತೆಗೆ ಒಂದು ವರ್ಷದ ಅವಧಿಯೊಳಗೆ 7.62 ಎಂಎಂನ 72,400 ಸಿಗ್‌ ಸಾವರ್‌ ಅಸಾಲ್ಟ್‌ ರೈಫಲ್‌ ಗಳನ್ನು ಪೂರೈಸುವ ನಿಟ್ಟಿನಲ್ಲಿ 700 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಇದರ ಜತೆಗೆ ಈಗ ರಷ್ಯಾದ ಎಕೆ 203 ರೈಫೆಲ್‌ ಗಳೂ ಬತ್ತಳಿಕೆ ಸೇರಲಿವೆ. ರಷ್ಯಾದ ಸೇನಾ ಅಧಿಕಾರಿ ಲೆಫ್ಟಿನೆಂಟ್‌ ಜನರಲ್‌ ಮಿಕೈಲ್‌ ಕಲಾಶ್ನಿಕೋವ್‌ ಅಭಿವೃದ್ಧಿಪಡಿಸಿದ ರೈಫಲ್‌ ಇದು. ಜಗತ್ತಿನ ಅತ್ಯಂತ ವಿಶ್ವಾಸಾರ್ಹ ವೆಪನ್‌ ಆಗಿದ್ದು 50ಕ್ಕೂ ಹೆಚ್ಚು ರಾಷ್ಟ್ರಗಳ ಸೇನಾ ಬತ್ತಳಿಕೆಯಲ್ಲಿ ಇವು ಇವೆ. 1949ರಿಂದ ಇಂದಿಗೂ ಬಳಕೆಯಲ್ಲಿವೆ. ಆಫ್ಘನ್‌-ರಷ್ಯಾ ಯದ್ಧದ ನಂತರ ಈ ರೈಫಲ್‌ಗಳು ಯಥೇಚ್ಛ ಸಂಖ್ಯೆಯಲ್ಲಿ ಉಗ್ರರ ಕೈಸೇರಿದ್ದು ಹೇಗೆ ಎಂಬ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿದೆ. 
ಜಾಮ್‌ ಆಗಲ್ಲ 
ಎಲ್ಲ ಹವಾಗುಣಕ್ಕೆ ಹೊಂದುವಂತೆ ನ್ಯಾಟೋ ದರ್ಜೆಯ ಸ್ಫೋಟಕ ಸಾಮಗ್ರಿಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿ ಬುಲೆಟ್‌ಗಳು ಫೈರ್‌ ಆದರೂ ಮ್ಯಾಗಜಿನ್‌ಗಳು ಜಾಮ್‌ ಆಗುವುದಿಲ್ಲ. ಇನ್ನು ಅಮೇಥಿಯಲ್ಲಿ ನಿರ್ಮಾಣ ಮಾಡಲಾಗುವ ಉತ್ಪಾದನಾ ಘಟಕದಲ್ಲಿ 7.50 ಲಕ್ಷ ರೈಫಲ್‌ಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಈ ರೈಫಲ್‌ ಒಟ್ಟು 4.1 ಕೆ.ಜಿ ತೂಕ ಹೊಂದಿದ್ದು, ಗರಿಷ್ಠ 400 ಮೀಟರ್‌ ದೂರದ ನೇರ ಗುರಿಯನ್ನು ಹೊಡೆದುರುಳಿಸುತ್ತದೆ. ಇದೇ ಕಾರಣಕ್ಕೆ ಸೇನೆಯಲ್ಲಿ ಇದು ಗೇಮ್ ಚೇಂಜರ್ ಪಾತ್ರ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com