ಬರಿಗಾಲಿನ ಶ್ರಮದಿಂದ ಬಹು ಎತ್ತರಕ್ಕೆ ಬೆಳೆದ ಫುಟ್ ಬಾಲ್ ಆಟಗಾರ್ತಿ ಸಬಿತ್ರಾ ಭಂಡಾರಿ! 

ಬೆಂಗಳೂರು ಯುನೈಟೆ- ಗೋಕುಲಂ ಕೇರಳ ನಡುವೆ ನಡೆದ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನಲ್ಲಿ ಅದ್ಭುತ ಪ್ರತಿಭೆಯೊಂದು ಗಮನ ಸೆಳೆದಿತ್ತು. 
ಬರಿಗಾಲಿನ ಶ್ರಮದಿಂದ ಬಹು ಎತ್ತರಕ್ಕೆ ಬೆಳೆದ ಫುಟ್ ಬಾಲ್ ಆಟಗಾರ್ತಿ ಸಬಿತ್ರಾ ಭಂಡಾರಿ!
ಬರಿಗಾಲಿನ ಶ್ರಮದಿಂದ ಬಹು ಎತ್ತರಕ್ಕೆ ಬೆಳೆದ ಫುಟ್ ಬಾಲ್ ಆಟಗಾರ್ತಿ ಸಬಿತ್ರಾ ಭಂಡಾರಿ!

ಬೆಂಗಳೂರು ಯುನೈಟೆ- ಗೋಕುಲಂ ಕೇರಳ ನಡುವೆ ನಡೆದ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನಲ್ಲಿ ಅದ್ಭುತ ಪ್ರತಿಭೆಯೊಂದು ಗಮನ ಸೆಳೆದಿತ್ತು. 

ಆಕೆಯ ಹೆಸರು ಸಬಿತ್ರಾ ಭಂಡಾರಿ, ಮೂಲತಃ ನೇಪಾಳಿ. ಸ್ಥಳೀಯ ಫುಟ್ಬಾಲ್ ಟೂರ್ನಮೆಂಟ್ ಗಳಲ್ಲಿ ಈಗಾಗಲೇ ಖ್ಯಾತಿ ಗಳಿಸಿರುವ  ಅವರು ಕಳೆದ ವರ್ಷ ಅನು ಲಾಮ ಅವರ 35 ಗೋಲ್ ನ ದಾಖಲೆಯನ್ನು ಬದಿಗೆ ಸರಿಸಿ ದಾಖಲೆ ನಿರ್ಮಿಸಿದ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಇವರ ಹೆಸರು ಹೆಚ್ಚು ಖ್ಯಾತಿ ಪಡೆಯಿತು. ಈಗ ಮಹಿಳಾ ಫುಟ್ ಬಾಲ್ ಲೀಗ್ ನಲ್ಲಿ 15 ಗೋಲ್ ಗಳನ್ನು ದಾಖಲಿಸುವ ಮೂಲಕ ಟೂರ್ನಿಯ ಗರಿಷ್ಠ ಗೋಲ್ ಗಳಿಸಿರುವ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಈ ಸಬಿತ್ರಾ ನಡೆದು ಬಂದ ಹಾದಿ ಯಾವ ಸಿನಿಮಾ ಕಥೆಗೂ ಕಡಿಮೆಯೇನಿಲ್ಲ. ನೇಪಾಳದ ಲಮ್ ಜುಂಗ್ ಜಿಲ್ಲೆಯ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ಸಬಿತ್ರಾಗೆ 6 ಸಹೋದರಿಯರು. ಈಕೆ ಎರಡನೇಯ ಮಗಳು. ಈಕೆಯ ತಂದೆ ಒಬ್ಬರೇ ಕುಟುಂಬದ ಜೀವನಕ್ಕೆ ಆಧಾರ. ಫುಟ್ ಬಾಲ್ ಆಡುತ್ತಿದ್ದಳಾದರೂ ಸರಿಯಾದ ಉಪಕರಗಳಿರಲಿಲ್ಲ. ಕೆಲವೊಮ್ಮೆ ಕಾಲುಚೀಲಗಳನ್ನು ಧರಿಸಿ, ಇನ್ನೂ ಕೆಲವೊಮ್ಮೆ ಬರಿಗಾಲಲ್ಲಿ ಫುಟ್ ಬಾಲ್ ಆಡುತ್ತಿದ್ದಳು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಫುಟ್ ಬಾಲ್ ಮೇಲಿನ ಆಕೆಯ ಶ್ರದ್ಧೆ ಆಕೆಯನ್ನು ಸ್ಥಳೀಯ ಟೂರ್ನಮೆಂಟುಗಳಲ್ಲಿ ಆಡುವುದಕ್ಕೆ ಪ್ರೇರೇಪಿಸಿತ್ತು. ಈ ಹಂತದಲ್ಲಿ ಹಲವು ಯುವಕರು ಆಕೆಗೆ ಅಗತ್ಯವಿದ್ದ ಶೂಗಳನ್ನು ಕೊಡಲು ಮುಂದಾದರಾದರೂ ಅದು ಆಕೆಗೆ ಸರಿ ಹೊಂದಲಿಲ್ಲ. ಹಾಗಂತ ಫುಟ್ ಬಾಲ್ ಕಿಟ್ ಗಾಗಿ ಆಕೆ ಮನೆಯಲ್ಲಿ ಬೇಡಿಕೆಯನ್ನೂ ಇಡಲಿಲ್ಲ. ಹುಡುಗರು ನೀಡುವ ಶೂಗಳಿಗಿಂತ ಬರಿಗಾಲಲ್ಲೇ ಫುಟ್ ಬಾಲ್ ಆಡುವುದು ಸೂಕ್ತ ಅನ್ನಿಸಿತ್ತಂತೆ ಸಬಿತ್ರಾಗೆ. 

ಮಹಿಳಾ ವಿಭಾಗದಲ್ಲಿ ಟಾಪ್ ಆಟಗಾರ್ತಿಯಾಗಿದ್ದ ಸಬಿತ್ರಾ ಪ್ರತಿಭೆಯನ್ನು 2014 ರಲ್ಲಿ ರಾಷ್ಟ್ರೀಯ ರೆಫರಿಯಾಗಿದ್ದ ಶುಕ್ರಾ ಲಾಮ ದಾಯ್ ಗುರುತಿಸುತ್ತಾರೆ. 

"ಲಮ್ ಜುಂಗ್ ನಲ್ಲಿ ನಡೆದಿದ್ದ ಟೂರ್ನಮೆಂಟ್ ನಲ್ಲಿ ನಾನು ಅತ್ಯಧಿಕ ಗೋಲ್ ಗಳನ್ನು ದಾಖಲಿಸಿದ್ದೆ. ಆ ಸಮಯದಲ್ಲಿ ರೆಫರಿಯಾಗಿದ್ದ ಶುಕ್ರ ಲಾಮ ನನ್ನ ಪ್ರತಿಭೆಯನ್ನು ಗುರುತಿಸಿದರು. ಫೋನ್ ನಂಬರ್ ಪಡೆದು ಕರೆ ಮಾಡಿ ಕ್ಲಬ್ ಟ್ರೈಯಲ್ ಬಗ್ಗೆ ವಿವರಿಸಿದ್ದರು. ಆಗ ನಾನು ನಿರ್ಧಾರ ಕೈಗೊಳ್ಳಬೇಕಿತ್ತು. ಕ್ಲಬ್ ಟ್ರಯಲ್ ಇದ್ದದ್ದು ಲಮ್ ಜುಂಗ್ ನಿಂದ 7 ಗಂಟೆ ಪ್ರಯಾಣಿಸಬೇಕಾದ ಕಠ್ಮಂಡುವಿನಲ್ಲಿ. ನನ್ನ ಬಳಿ ಹಣ ಇರಲಿಲ್ಲ. ಪ್ರಮುಖವಾಗಿ ಒಂದು ಜೊತೆ ಶೂ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಹಿಂಜರಿಕೆಯಿಂದಲೇ ನಾನು ತಂದೆಯೊಂದಿಗೆ ಈ ವಿಷಯ ಹಂಚಿಕೊಂಡೆ. ನನ್ನ ತಂದೆ ಒಂದಷ್ಟು ಹಣ ಕೊಟ್ಟು ಆಶೀರ್ವದಿಸಿ ನನ್ನನ್ನು ಕಳುಹಿಸಿಕೊಟ್ಟರು". 

ಟ್ರಯಲ್ ನ ನಂತರ ಸಬಿತ್ರಾಗೆ  ನೇಪಾಳದ ಎಪಿಎಫ್ ಕ್ಲಬ್ ನಲ್ಲಿ ಒಪ್ಪಂದವೂ ಸಿಕ್ಕಿತು. 2014 ರ ಎಸ್ಎಎಫ್ಎಫ್ ಚಾಂಪಿಯನ್ ಶಿಪ್ ನಲ್ಲಿ ಆಡುವುದಕ್ಕೆ ನೇಪಾಳದಿಂದ ಕರೆಯೂ ಬಂತು, ಮೊದಲ ಪಂದ್ಯದ 2 ನೇ ನಿಮಿಷದಲ್ಲೇ ಭೂತಾನ್ ವಿರುದ್ಧ ಖಾತೆ ತೆರೆದಿದ್ದರು. 22 ವರ್ಷದ ಈ ಯುವ ಆಟಗಾರ್ತಿ ಆಗಿನಿಂದಲೂ ಜನಪ್ರಿಯತೆ ಗಳಿಸಿಕೊಂಡು ಬರುತ್ತಿದ್ದಾರೆ. 

ಸಬಿತ್ರಾ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ ನಲ್ಲಿ ಆಡುವುದರ ಹೊರತಾಗಿ ಮಾಲ್ಡೀವ್ಸ್ ನಲ್ಲಿಯೂ ಟೂರ್ನಮೆಂಟ್ ನಲ್ಲಿ ಆಡಿದ್ದಾರೆ. ಈಗ ಸಬಿತ್ರಾಗೆ ಹಣಕಾಸಿನ ನೆರವೂ ಸಿಗುತ್ತಿದ್ದು, ಕುಟುಂಬ ಸದಸ್ಯರಿಗೂ ಆರ್ಥಿಕ ಸಹಕಾರ ನೀಡುತ್ತಿದ್ದಾರೆ. ಪ್ರತಿ ತಿಂಗಳೂ ಸಹೋದರನ ಶಿಕ್ಷಣಕ್ಕೆ ಹಣ ಕಳಿಸುತ್ತೇನೆ ಇದರಿಂದ ನನಗೆ ಸಂತಸವಾಗುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಬಿತ್ರಾ.  ಪ್ರತಿಯೊಬ್ಬ ಭಾರತೀಯ ಫುಟ್ ಬಾಲ್ ಆಟಗಾರರಂತೆ ಸಬಿತ್ರಾ ಸಹ ಯುರೋಪಿಯನ್ ಕ್ಲಬ್ ಗೆ ಸೇರುವ ಕನಸು ಹೊತ್ತಿದ್ದಾರೆ. ಆಕೆಯ ಪ್ರತಿಭೆ ಅದನ್ನು ಸಾಕಾರಗೊಳಿಸುವ ಸಾಧ್ಯತೆಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com