ಏನಿದು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ? ಇದಕ್ಕೆ ಅಷ್ಟೊಂದು ವಿರೋಧ ಯಾಕೆ?

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಎಪಿಎಂಸಿ ಕಾಯಿದೆ ಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಸುಗ್ರೀವಾಜ್ಞೆಗೆ ತರಾತುರಿಯಲ್ಲಿ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದರಿಂದ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಎಪಿಎಂಸಿ
ಎಪಿಎಂಸಿ

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಎಪಿಎಂಸಿ ಕಾಯಿದೆ ಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಸುಗ್ರೀವಾಜ್ಞೆಗೆ ತರಾತುರಿಯಲ್ಲಿ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದರಿಂದ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. 

ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಗೆ ಅನಕೂಲ ಮಾಡಿಕೊಡುವುದಕ್ಕಾಗಿ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸ ಬೇಕೆಂದು ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾಕ್ಕೆ ಮೇ 5 ರಂದು ಪತ್ರ ಬರೆದು ಸೂಚಿಸಿತ್ತು. ಅದರಂತೆ ಕಾಯಿದೆಗೆ ತಿದ್ದುಪಡಿ ಮಾಡಿ ರಾಜ್ಯಪಾಲರ ಅಂಕಿತಕ್ಕೆ ರಾಜ್ಯ ಸರ್ಕಾರ ಕಳಿಸಿತ್ತು.ಆದರೆ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂಪುಟ ಸಭೆಯಲ್ಲಿಟ್ಟು ಅನುಮೋದನೆ ಪಡೆದ ಬಳಿಕ ಸುಗ್ರೀವಾಜ್ಞೆಯನ್ನು ಕಳಿಸಿ ಎಂದು ತಿರಸ್ಕಾರಿಸಿದ್ದಾರೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ರೈತ ಸಂಘಟನೆಗಳು, ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಏನಿದು ಎಪಿಎಂಸಿ ಕಾಯ್ದೆ
ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ದಿ ಕಾಯಿದೆಯನ್ನು ಮೊದಲ ಬಾರಿಗೆ 1966ರಲ್ಲಿ ಜಾರಿಗೆ ತರಲಾಗಿತ್ತು. ನಂತರ 20 ವರ್ಷಗಳ ಬಳಿಕ 1986ರಲ್ಲಿ ರೈತರ ಹಿತವನ್ನೇ ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಗೆ ಪ್ರಬಲವಾದ ತಿದ್ದುಪಡಿ ಮಾಡಲಾಗಿತ್ತು. ನಂತರ 2017ರಲ್ಲಿ ಎಪಿಎಂಸಿ ಮಾದರಿ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ಈಗ ಅದೇ ಮಾದರಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತನ್ನಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಜೊತೆಗೆ ತಿದ್ದುಪಡಿ ತಂದಿರುವುದನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕು ಎಂದು ಆದೇಶ ಮಾಡಿದೆ.

ರೈತರು ಬೆಳೆಯುವ ಫಸಲನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಬೇಕು.ಅದನ್ನು ಖರೀದಿ ಮಾಡುವ ವ್ಯಾಪಾರಿಗಳು ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು ರೈತರು ಬೆಳೆದ ಮಾಲನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶವಿತ್ತು. ಜೊತೆಗೆ 2017ರ ಮಾದರಿ ಕಾಯಿದೆಯ ಪ್ರಕಾರ ಆನ್‌ಲೈನ್‌ ಮೂಲಕ ಟೆಂಡರ್‌ ಖರೀದಿದಾರರು ಭಾಗವಹಿಸಲು ಅವಕಾಶವಿತ್ತು. ಈಗ ಇದೇ ಕಾಯಿದೆಯ 8ನೇ ಕಲಂಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸೂಚಿಸಿದೆ.

ನೂತನ ಸುಗ್ರೀವಾಜ್ಞೆಯಲ್ಲಿ ಏನಿದೆ: 
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತರಿಗಾಗಿಯೆ ತಿದ್ದುಪಡಿ ಮಾಡಿದಂತಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳ ಹಿತ ಎದ್ದು ಕಾಣುತ್ತಿದೆ. ಯಾಕೆಂದರೆ ಈಗಿರುವ ಎಪಿಎಂಸಿ ಕಾಯ್ದೆ ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇರಲಿಲ್ಲ. 

ಬಹುರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಕೃಷಿ ನಿರ್ದೇಶನಾಲಯದ ಅನುಮತಿ ಅಗತ್ಯವಾಗಿತ್ತು. ಇದೀಗ ಎಂಪಿಎಂಸಿ ಒಳಗೆ ಅಥವಾ ಹೊರೆಗೆ ರೈತರ ಉತ್ನನ್ನಗಳನ್ನು ಖರೀದಿ ಮಾಡಲು ಯಾವುದೇ ಅನುಮತಿ ಅನಗತ್ಯ ಎಂಬುದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ರೈತರಿಗೆ ನಿಗದಿತ ಬೆಲೆ ಸಿಗುವ ಯಾವುದೇ ಖಾತ್ರಿಯಿಲ್ಲ ಎಂದು ರೈತ ಮುಖಂಡರು ಸುಗ್ರೀವಾಜ್ಞೆ ವಿರೋಧಿಸಿದ್ದಾರೆ. 

ರಿಲಯನ್ಸ್‌ ಫ್ರೆಶ್, ಬಿಗ್‌ಬಜಾರ್, ಅಮೆಜಾನ್, ಫ್ಲಿಫ್‌ಕಾರ್ಟ್‌, ವಾಲ್‌ಮಾರ್ಟ್‌ನಂತರ ದೈತ್ಯ ಕಂಪನಿಗಳಿಗೆ ಅನಕೂಲ ಮಾಡಿಕೊಡಲು ರೈತರ ಈ ಸಂಕಷ್ಟದ ಸಮಯವನ್ನು ಸರ್ಕಾರ ಬಳಸಿಕೊಂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಸುಗ್ರೀವಾಜ್ಞೆ ಜಾರಿ ಬಳಿಕ ಮುಂದೇನಾಗಲಿದೆ:

ಬಹುರಾಷ್ಟ್ರೀಯ ದೊಡ್ಡ ಕಂಪನಿಗಳಿಗೆ ಅವಕಾಶ ಮಾಡಿಕೊಡುವುದರಿಂದ ರೈತರ ಹಿತವನ್ನು ಬಲಿಕೊಟ್ಟಂತಾ ಗುತ್ತದೆ. ಜೊತೆಗೆ ರೈತರು ಮೊದಲು ಹೆಚ್ಚಿನ ಬೆಲೆಗೆ ಖರೀದಿಸುವ ಈ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಸಣ್ಣಪುಟ್ಟ ಖರೀದಿದಾರರು ವ್ಯಾಪಾರದಿಂದ ದೂರ ಉಳಿಯುತ್ತಾರೆ. ಶತಮಾನಗಳಿಂದ ಕೊಂಡಿಯಂತಿರುವ ರೈತರು ಹಾಗೂ ವ್ಯಾಪಾರಸ್ಥರನ್ನು ಬೇರೆ ಮಾಡುವುದೇ ಸುಗ್ರೀವಾಜ್ಞೆಯ ಉದ್ದೇಶದಂತಿದೆ. 

ಜೊತೆಗೆ ನಮ್ಮ ರಾಜ್ಯದ ಬಹಳಷ್ಟು ರೈತರು ತಮಗೆ ಬೇಕಾದಾಗ ವ್ಯಾಪಾರಸ್ಥರಿಂದ ಕೈಗಡದ ರೂಪದಲ್ಲಿ ಸಾಲವನ್ನು ಪಡೆದಿರುತ್ತಾರೆ. ರೈತರು ಪಡೆದಿರುವ ಸಾಲಕ್ಕೆ ರೈತರಿಂದ ಕೆಲವು ಬಾರಿ ವ್ಯಾಪಾರಸ್ಥರು ಬಡ್ಡಿಯನ್ನೂ ವಿಧಿಸುವುದಿಲ್ಲ. ಬದಲಿಗೆ ಎಪಿಎಂಸಿಗಳಲ್ಲಿನ ತಮ್ಮ ಅಡತಿ ಅಂಗಡಿಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಷರತ್ತು ಇರುತ್ತದೆ. ಹೊಸ ಕಾಯಿದೆಯಿಂದ ರೈತರು ಹಾಗೂ ವ್ಯಾಪಾರಸ್ಥರ ಮಧ್ಯದ ಕೊಂಡಿ ಸಂಪೂರ್ಣವಾಗಿ ನಾಶವಾಗುತ್ತದೆ. ಹಿಸ ಕಾಯಿದೆಯಿಂದ ರೈತರು ಹಾಗೂ ಸಣ್ಣ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗುತ್ತಾರೆ. 

ಎಪಿಎಂಸಿ ಕಾಯಿದೆಗೆ ತಿದ್ದುಪಡಿ ರೈತರಿಗೆ ಮಾರಕ:
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಕೇಳುವವರಿಲ್ಲದೆ ರೈತ ಸಮುದಾಯ ಕಂಗಾಲಾಗಿದೆ. ಈ ಸಂದರ್ಭದಲ್ಲಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವುದು ಅವರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಗ್ರೀವಾಜ್ಞೆಯನ್ನು ವಿರೋಧಿಸಿದ್ದಾರೆ. 

ಮೇ 5ರಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಎಪಿಎಂಸಿ ಕಾಯಿದೆ ತಿದ್ದುಪಡಿ ಕುರಿತು ಮಾದರಿ ಪತ್ರ ಕಳುಹಿಸುತ್ತೇವೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿ ಎಂದು ಹೇಳಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು. ರಾಜ್ಯ ಸರ್ಕಾರಗಳಿಗೆ ಈ ರೀತಿಯ ಆದೇಶ ನೀಡಲು ಹೇಗೆ ಸಾಧ್ಯ? ಇದು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ನಡೆಸಿರುವ ಸಂಚು. ಇದರಿಂದ ರೈತರಿಗೆ ಭಾರಿ ಅನ್ಯಾಯವಾಗುತ್ತದೆ. ಬಹು ರಾಷ್ಟ್ರೀಯ ಕಂಪನಿಗಳಿಗೆ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಹಾಕಿದೆ.

ರೈತರಿಗೆ ಸಂಬಂಧಿಸಿದ ಕಾನೂನು ಮಾಡುವಾಗ ವಿಧಾನಸಭೆಯಲ್ಲಿ, ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಏಕಾಏಕಿ ಆದೇಶ ಹೊರಡಿಸಿದರೆ ಹೇಗೆ ? ಸಂವಿಧಾನ ಪ್ರಕಾರ ಇದು ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯ. ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯಗಳ ವಿವೇಚನೆಗೆ ಬಿಡಬೇಕು. ತಿದ್ದುಪಡಿ ನಿರ್ಧಾರವನ್ನು ನಾವು ತೀವ್ರವಾಗಿ ವಿರೋಧ ಮಾಡುತ್ತೇವೆ. ಈ ಕುರಿತು ರೈತರ ಜೊತೆ, ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು. ಅದುವರೆಗೆ ಸುಗ್ರೀವಾಜ್ಞೆ ಹೊರಡಿಸಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com