ಮೈಸೂರಿನ ಇಬ್ಬರು ಅನಾಥರ ಪಾಲಿಗೆ ಆಪ್ತ ರಕ್ಷಕ: ಹೆಣ್ಣುಮಕ್ಕಳಿಗೆ ಮನೆ ಕಟ್ಟಿಸಿಕೊಟ್ಟ ಆರಕ್ಷಕ
ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ವಂತ ಹಣದಲ್ಲಿ ಮನೆ ಕಟ್ಚಿಸಿಕೊಟ್ಟಿದ್ದಾರೆ
Published: 22nd October 2020 01:48 PM | Last Updated: 22nd October 2020 02:57 PM | A+A A-

ಹೊಸ ಮನೆ ನಿರ್ಮಾಣ
ಮೈಸೂರು: ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ವಂತ ಹಣದಲ್ಲಿ ಮನೆ ಕಟ್ಚಿಸಿಕೊಟ್ಟಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಎಎಸ್ ಐ ಎಸ್ ದೊರೇಸ್ವಾಮಿ ಇಬ್ಬರಿಗೂ ಮನೆ ನಿರ್ಮಿಸಿಕೊಟ್ಟು ಸಹಾಯ ಹಸ್ತ ಚಾಚಿದ್ದಾರೆ. ದೀಪಾ ಮತ್ತು ರಾಣಿ ಎಂಬ ಇಬ್ಬರು 8 ವರ್ಷದ ಹಿಂದೆ ತಮ್ಮ ಪೋಷಕರನ್ನು ಕಳೆದುಕೊಂಡಿದ್ದರು, ಅದಾದ ನಂತರ ಅವರ ಅಜ್ಜಿ ಇಬ್ಬರನ್ನು ನೋಡಿಕೊಳ್ಳುತ್ತಿದ್ದರು
ಆದರೆ ಇತ್ತೀಚೆಗೆ ವಯೋ ಸಂಬಂಧ ಕಾಯಿಲೆಯಿಂದ ಸಾವನ್ನಪ್ಪಿದ್ದರು, ಅದಾದ ನಂತರ ಇಬ್ಬರು ಜೀವನ ನಡೆಸಲು ಹೋರಾಟ ನಡೆಸುತ್ತಿದ್ದರು.
ಎಚ್ ಡಿ ಕೋಟೆಯ ಶಿರಾಮಳ್ಳಿ ಗ್ರಾಮಸ್ಥರು ಇಬ್ಬರಿಗೆ ನೆರವು ನೀಡುತ್ತಿದ್ದರು, ಆದರೆ ಕೊರೋನಾ ಕಾರಣದಿಂದಾಗಿ ಇಬ್ಬರು ದೈನಂದಿನ ಊಟಕ್ಕಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.
ಈ ವಿಷಯ ತಿಳಿದ ದೊರೆಸ್ವಾಮಿ ಅವರಿಗೆ ಅಗತ್ಯವಾದ ಆಹಾರ ಧಾನ್ಯ ಕೊಡಿಸಿ ಅವರ ಶಿಕ್ಷಣದ ಜವಾಬ್ದಾರಿ ಸಹ ತೆಗೆದುಕೊಂಡಿದ್ದಾರೆ.
ತಮ್ಮ ಪತ್ನಿ ಚಂದ್ರಿಕಾ ಜೊತೆ ಬಂದ ದೊರೆಸ್ವಾಮಿ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ ಪಡೆದುಕೊಂಡಿದ್ದಾರೆ. ಸುಮಾರು 3 ಲಕ್ಷ ರು ವೆಚ್ಚದಲ್ಲಿ ಹೆಣ್ಣುಮಕ್ಕಳಿಗೆ ಮನೆ ನಿರ್ಮಿಸಿಕೊಟ್ಟಿದ್ದು, ಸೋಮವಾರ ಗೃಹ ಪ್ರವೇಶ ಸಮಾರಂಭ ನಡೆಯಿತು, ಈ ವೇಳೆ ಮನೆಗೆ ಅಗತ್ಯವಾದ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜೊತೆಗೆ ದೀಪಾಳನ್ನು ಖಾಸಗಿ ಕಾಲೇಜಿಗೆ ನೋಂದಾಯಿಸಿದ್ದು, ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಹಾಯ ನೀಡಿದ್ದಾರೆ. ಇಬ್ಬರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂಬ ಕಾರಣಕ್ಕೆ ಅವರಿಗೆ ಸ್ಮಾರ್ಟ್ ಫೋನ್ ಕೂಡ ಕೊಡಿಸಿದ್ದಾರೆ. ಅವರು ತಮ್ಮ ತಂದೆಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ, ನಮ್ಮ ಮನೆಯಲ್ಲಿ ಒಂದು ಬಾತ್ ರೂಂ ಅಥವಾ ಟಾಯ್ಲೆಟ್ ಇರಲಿಲ್ಲ ಎಂದು ದೀಪಾ ತಿಳಿಸಿದ್ದಾಳೆ.
ಮನುಷ್ಯರಾಗಿ ಮಾನವೀಯತೆ ತೋರಿಸುವುದು ನಮ್ಮೆಲ್ಲರ ಕರ್ತವ್ಯ, ಅಗತ್ಯವಿರುವವರಿಗೆ ನೆರವು ನೀಡುವುದು ನಮ್ಮ ಧರ್ಮ,ನನ್ನ ಕೈಲಾದ ಸಹಾಯ ಮಾಡಿದ್ದೇನೆ, ಅವರ ವಿದ್ಯಾಭ್ಯಾಸದ ಎಲ್ಲಾ ಖರ್ಚು ವೆಚ್ಚಗಳನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ದೊರೆಸ್ವಾಮಿ ತಿಳಿಸಿದ್ದಾರೆ.