ಭಾರತಕ್ಕೆ 75; ಸ್ವಾತಂತ್ರ್ಯವೆಂಬ ಸಾವಿರದ ಅಮೃತೋಪಮ ಸರಿತೆ

ಭಾರತವು ಸ್ವಾತಂತ್ರ್ಯ ಪಡೆದ ಕಥನವನ್ನು ಕಂಡರಿಯದ ಹಲವು ತಲೆಮಾರುಗಳೇ ಇಂದು ಮುಂಚೂಣಿಯಲ್ಲಿ ಇದೆ. ಜಗತ್ತಿನ ಅತಿ ಯುವ ದೇಶ ಎಂದೇ ಗುರುತಿಸಲ್ಪಡುತ್ತಿದೆ. ಹೋರಾಡಿದ ಮಹನೀಯರು ಇಂದು ಕಾಲನ ಕರೆಗೆ ಓಗೊಟ್ಟು ಇಹ ವ್ಯಾಪಾರ ಮುಗಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ದಿನ (ಸಾಂಕೇತಿಕ ಚಿತ್ರ)
ಭಾರತದ ಸ್ವಾತಂತ್ರ್ಯ ದಿನ (ಸಾಂಕೇತಿಕ ಚಿತ್ರ)

ಹಿಂದೊಮ್ಮೆ ದೇವ ದಾನವರು ಒಂದಾಗಿ ಸಮುದ್ರ ಮಂಥನ ಮಾಡಿದರಂತೆ. ಅವರ ಉದ್ದೇಶವೂ ಅಮೃತ ಮಂಥನವನ್ನು ಮಾಡುವುದಾಗಿತ್ತು. ಸಮುದ್ರ ಮಂಥನದ ಕಾಲದಲ್ಲಿ ಹಲವು ಅನಿರೀಕ್ಷಿತಗಳು ಉದ್ಭವಿಸಿ ಬಂದವು. ಶಂಖ ಚಕ್ರ, ಲಕ್ಷ್ಮಿ.... ಹೀಗೆ ಅವುಗಳನ್ನು ಕಾಲಕಾಲಕ್ಕೆ ಅರ್ಹರಿಗೆ ನೀಡಲಾಗುತ್ತಾ ಬಂದಿತು. ನಂತರ ಅಮೃತ ಮಂಥನಕ್ಕೆ ಮೊದಲ ಉದ್ಭವಿಸಿದ್ದು ಮಹಾ ಕಾಲಕೂಟ ವಿಷ. ಅದನ್ನು ಸ್ವೀಕರಿಸಲು ಯಾರೂ ತಯಾರಾಗಲಿಲ್ಲ. ಕಟ್ಟಕಡೆಗೆ ಶಿವನೇ ಅಮೃತೋದ್ಭವದ ಸಲುವಾಗಿ ವಿಷವನ್ನು ಗ್ರಹಿಸಿ ಕುಡಿದನಂತೆ. ಪಾರ್ವತಿ ಆತನ ಕಂಠವನ್ನು ಒತ್ತಿ ಹಿಡಿದ ಫಲವಾಗಿ ನೀಲಕಂಠನಾದನಂತೆ. 

ಇಂದು ಭಾರತವು ಸಹ ಸ್ವಾತಂತ್ರ್ಯ ಪಡೆದ ಸಂಭ್ರಮ ಅಮೃತ ಮಹೋತ್ಸವದ ಘಳಿಗೆಯಲ್ಲಿ ನಿಂತಿದೆ. ಭಾರತವಿಂದು ಜಾಗತಿಕವಾಗಿ ಹೊಸ ಮಜಲಿಗೆ ಬಂದು ನಿಂತಿದೆ. ಸ್ವಾತಂತ್ರ್ಯ ಪಡೆದ ಅಮೃತೋದ್ಭವದ ಕಾಲದಲ್ಲಿ ಮುಂಚಿನ ವಿಷವನ್ನು ಕುಡಿದವರು ಯಾರು ಎಂಬ ವಿವೇಚನೆಯನ್ನು ಓದುಗರೇ ನಿರ್ವಚಿಸಬಹುದು. 

ಭಾರತವು ಸ್ವಾತಂತ್ರ್ಯ ಪಡೆದ ಕಥನವನ್ನು ಕಂಡರಿಯದ ಹಲವು ತಲೆಮಾರುಗಳೇ ಇಂದು ಮುಂಚೂಣಿಯಲ್ಲಿ ಇದೆ. ಜಗತ್ತಿನ ಅತಿ ಯುವ ದೇಶ ಎಂದೇ ಗುರುತಿಸಲ್ಪಡುತ್ತಿದೆ. ಸ್ವತಂತ್ರ ಭಾರತದ ಸಂಕಲ್ಪ ತೊಟ್ಟು ಹೋರಾಡಿದ ಮಹನೀಯರು ಇಂದು ಕಾಲನ ಕರೆಗೆ ಓಗೊಟ್ಟು ಇಹ ವ್ಯಾಪಾರ ಮುಗಿಸಿದ್ದಾರೆ. ಹಾಗಾಗಿ ಸ್ವಾತಂತ್ರ್ಯ ಹೋರಾಟದ ಸಮಗ್ರ ಪರಿಚಯವನ್ನು ಅವಲೋಕಿಸಬೇಕಾದ ಅಗತ್ಯವನ್ನು ತಿಳಿಸಿಕೊಡುತ್ತದೆ. 

ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ಮುಂದಣ ಅಡಿಯನಿಡಲಾಗದು. ಸ್ವಾತಂತ್ರ್ಯ ಹೋರಾಟದ ಸರಿತೆಯಲ್ಲಿ ಪಾಲುಗೊಂಡಿದ್ದು ಯಾರೆಂಬ ಪ್ರಶ್ನೆಗೆ ಪಠ್ಯ ಪುಸ್ತಕಗಳಲ್ಲಿ ಕಂಡು ಬಂದಿದ್ದು ಕೆಲವೇ ಹೆಸರುಗಳು. ಹೋರಾಟ ಮಾಡಿದ್ದು ಅವರಷ್ಟೇನೆ, ಅಥವ ಫಲ ನೀಡಿದ್ದು ಅವರ ಹೋರಾಟ ಮಾತ್ರವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಇಂದಿನ ಬಹಳ ಯುವಕರಿಗೆ ಸ್ವಾತಂತ್ರ್ಯ ಹೋರಾಟದ ಹಲವು ಮಹತ್ವದ ಮಜಲುಗಳ ಪರಿಚಯ ಪಠ್ಯಪುಸ್ತಕದಿಂದ ಆಚೆಗೇ ದೊರೆತ ಕಾರಣಕ್ಕೆ ಇಂದಿಗೂ ಪಠ್ಯಪುಸ್ತಕಗಳಲ್ಲಿ ಕಂಡು ಬರುವ ನಾಯಕರುಗಳ ಬಗ್ಗೆ ವಿಶೇಷ ತಾತ್ಸಾರ. ನಮ್ಮ ಹಿಂದಿನ ಪಠ್ಯಪುಸ್ತಕಗಳ ತಜ್ಞರು ಹೋರಾಟದ ಸಮಗ್ರ ಚಿತ್ರಣ ನೀಡಿದ್ದಲ್ಲಿ ಇಂತಹ ಅಪಸವ್ಯಗಳನ್ನು ನಾವು ಎದುರಾಗಬೇಕಿರಲಿಲ್ಲ.

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಮಗೆ ಶಾಲಾ ಪಠ್ಯಗಳಲ್ಲಿ ಕಾಣುವುದು ಮಹಾತ್ಮ ಗಾಂಧೀಜಿಯವರು. ಅವರು ಬರುವ ಮೊದಲೇ ನಡೆದ ಹೋರಾಟಗಳಲ್ಲಿ ನಮಗೆ ಮುಖ್ಯವಾಗಿ ಪರಿಚಯವಾಗುವುದು 1857ರ ಸ್ವಾತಂತ್ರ್ಯ ಸಂಗ್ರಾಮ ಮಾತ್ರ. 

ಗೋಪಾಲಕೃಷ್ಣ ಗೋಖಲೆ, ಲಾಲ್-ಬಾಲ್-ಪಾಲ್ ಎಂಬ ತ್ರಿಮೂರ್ತಿಗಳೇ ಎಂದು ಜನಪ್ರಿಯರಾದ ಲಾಲಾ ಲಜಪತರಾಯ್ ಪಂಜಾಬಿನ ಯುವಕರ ಕಣ್ಮಣಿ. ಬಾಲಗಂಗಾಧರ ತಿಲಕರು ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದು ಘೋಷಿಸಿದರು. ಮನೆಗಳಲ್ಲಿ ಅತ್ಯಂತ ಸಾಂಪ್ರದಾಯಿಕರ ಅರ್ಚಿತನಾದ ಗಣಪನನ್ನು ಬೀದಿಗೆ ತಂದರು. ಅವನ ಹೆಸರಿನಲ್ಲೇ ಜನರನ್ನು ಬೀದಿಬೀದಿಗಳಲ್ಲಿ ಸಂಘಟಿಸಿದರು. ಸ್ವಾತಂತ್ರ್ಯ ದೀವಿಗೆಯನ್ನು ಬೆಳಗಲು ಈ ಗಣಪತಿ ಮಂಡಳಗಳು ಬಹಳ ಮಹತ್ವದ ಕಾಣಿಕೆ ನೀಡಿದವು. 

ನೇತಾಜಿ ಸುಭಾಷ ಚಂದ್ರ ಬೋಸ್, ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ನಂತರ ಕಾಂಗ್ರೆಸಿನಿಂದ ಹೊರಬಂದು ಆಜಾದ್ ಹಿಂದ್ ಫೌಜ್ ಅನ್ನು ಮುನ್ನಡೆಸಿದರು. ಜಗತ್ತಿನ ಇತರ ರಾಷ್ಟ್ರಗಳ ನೆರವು ಪಡೆದು ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಲು ಶ‍್ರಮಿಸಿದರು. ಮೊತ್ತ ಮೊದಲ ಅನಿವಾಸಿ ಭಾರತ ಸರ್ಕಾರವನ್ನು ರಚಿಸಿದ್ದು ಸಹ ನೇತಾಜಿ ಸುಭಾಷಚಂದ್ರ ಬೋಸ್ ಅವರೇ. 

ಸ್ವಾತಂತ್ರ್ಯ ವೀರ ಸಾವರ್ಕರ್ ಅವರು ಇತಿಹಾಸದಲ್ಲಿ ಎರಡೆರಡು ಕಾಲಾಪಾನಿ ಶಿಕ್ಷೆಗೆ ಒಳಗಾದವರು. ಅಲ್ಲಿನ ಪಾಶವೀ ಸ್ವರೂಪದ ಶಿಕ್ಷೆಗಳ ವಿವರ ಕೇಳಿದರೇನೆ ಇಂದಿಗೂ ಬೆನ್ನ ಹುರಿಯಲ್ಲಿ ಛಳುಕು ಮೂಡುತ್ತದೆ. ಇದನ್ನು ‘ಆತ್ಮಾಹುತಿ’ ಕೃತಿಯ ಮೂಲಕ ಮೊತ್ತಮೊದಲಿಗೆ ಕನ್ನಡದಲ್ಲಿ ಅಕ್ಷರರೂಪಕ್ಕೆ ತಂದವರು ಲೇಖಕ ಶಿವರಾಮ್ ಅವರು. ನಂತರ ವೈಭವ ಪುರಂದರೆ, ಧನಂಜಯ ಕೀರ್, ಇತ್ತೀಚೆಗೆ ವಿಕ್ರಮ್ ಸಂಪತ್ ಅವರಂತಹ ಹಲವರ ಕೃತಿಗಳು ಕನ್ನಡದಲ್ಲಿ ಹೊರಬರುವ ವಿವಿಧ ಹಂತಗಳಲ್ಲಿದ್ದು ಸಾವರ್ಕರ್ ಅವರ ಸಮಗ್ರ ಪರಿಚಯ ನೀಡುತ್ತಿದೆ. 

ಭಗತ್ ಸಿಂಗ್, ಸುಖದೇವ, ರಾಜಗುರು, ಬಾಂಬೆಸೆದು ಓಡಿ ಹೋಗದೆ, ಬ್ರಿಟಿಷ್ ಸರ್ಕಾರಕ್ಕೆ ಭಯ ಮೂಡಿಸುವ ಸಲುವಾಗಿಯೇ ನಿಂತು ಬಂಧನಕ್ಕೆ ಒಳಗಾಗಿ ನ್ಯಾಯಾಲಯದಲ್ಲಿ ತನ್ನ ಸ್ಪಷ್ಟ ನಿಲುವನ್ನು ತಿಳಿಸಿ ಕೆಚ್ಚೆದೆಯಿಂದ ನೇಣಿಗೆ ಎದೆಯೊಡ್ಡಿದ ವೀರಪುತ್ರರು. ಚಂದ್ರಶೇಖರ ತಿವಾರಿ ತನ್ನನ್ನೇ ಆಜಾದ್ ಎಂದು ಕರೆದುಕೊಂಡು ಅದರಂತೆಯೇ ಬದುಕಿದ ಕ್ರಾಂತಿಕಾರಿ. ಕಟ್ಟಕಡೆಯ ಗುಂಡಿನವರೆಗೆ ಹೋರಾಟ ನಡೆಸಿ. ಕಡೆಯ ಗುಂಡನ್ನು ತನಗೇ ಹೊಡೆದುಕೊಂಡು ಸ್ವತಂತ್ರನಾಗಿಯೇ ಮುಕ್ತನಾದ ಸಾಹಸಿ,. ರಾಮಪ್ರಸಾದ ಬಿಸ್ಮಿಲ್ಲಾ, ಆಶ್ಫಾಕ್ ಉಲ್ಲಾ ಖಾನ್, ಬಟುಕೇಶ್ವರ ದತ್ತ, ಜತೀಂದ್ರನಾತ ದಾಸ್ ಹೀಗೆ ಹೇಳಿದಷ್ಟೂ ಮುಗಿಯದ ಸಾಲು. ಹೇಳಿದ್ದು ಹತ್ತು ಹೆಸರಾದರೆ ಹೇಳದೇ ಉಳಿದದ್ದು ಅಗಣಿತ. ಅಂಕೋಲಾದಲ್ಲಿ ದೋಂಢಿಯಾ ವಾಘ್ ನೇತೃತ್ವದ ಹೋರಾಟ, ಅಮರಸುಳ್ಯದ ಬಂಡಾಯದಂತಹ ಹೋರಾಟಗಳ ಬಗ್ಗೆ ಇತ್ತೀಚೆಗೆ ಅಧ‍್ಯಯನಶೀಲ ಪುಸ್ತಕಗಳು ಕನ್ನಡದಲ್ಲಿ ಹೊರಬಂದಿದೆ. 

ಯೋಗಿ ಅರವಿಂದರು ಅಂದಿನ ಬಹುದೊಡ್ಡ ಕ್ರಾಂತಿಕಾರಿ. ತಮ್ಮ ಜೈಲುವಾಸದ ನಂತರ ಅವರು ಆಧ‍್ಯಾತ್ಮದ ಕಡೆಗೆ ಒಲವು ತೋರಿ ಮುನ್ನಡೆದರು. ಆಧ‍್ಯಾತ್ಮಿಕವಾಗಿ ಭಾರತವನ್ನು ಮುನ್ನಡೆಸಿದರು. ಸನ್ಯಾಸಿ ಆಂದೋಲನವನ್ನು ಉಲ್ಲೇಖಿಸದೆ ಹೋದರೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಗಾಧತೆ ಅರಿವಾಗದೆ ಹೋದೀತು. 

ಬಂಕಿಮಚಂದ್ರ ಚಟರ್ಜಿಯವರ ವಂದೇ ಮಾತರಂ ಇಂದಿಗೂ ಭಾರತೀಯರಲ್ಲಿ ರೋಮಾಂಚನ ಉಂಟುಮಾಡುವ ಸ್ವಾತಂತ್ರ್ಯ ಘೋಷ. 

ಗಾಂಧೀಜಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಗಳು ನಡೆದವು ಅತ್ಯಂತ ಮಹತ್ವದ್ದು ಎಂದರೆ ಕ್ವಿಟ್ ಇಂಡಿಯಾ ಚಳುವಳಿ. ಭಾರತದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯುವ ಹೊತ್ತಿನಲ್ಲಿ ಜಗತ್ತು ವಿಶ‍್ವ ಮಹಾಯುದ್ಧದ ರಣಾಂಗಣದಲ್ಲಿ ನಿಂತಿತ್ತು.  ಅಪಾಯವನ್ನು ಅರಿತ ಬ್ರಿಟಿಷರು ಕಾಂಗ್ರೆಸಿನ ನೆಹರೂ, ಪಟೇಲ್, ಗಾಂಧೀಜಿಯವರಾದಿಯಾಗಿ ಎಲ್ಲರನ್ನು ಬಂಧಿಸಿ ಅದಾಗಲೇ ಚಳುವಳಿಯ ನಾಯಕತ್ವ ಹತ್ತಿಕ್ಕುವ ಸಮಸ್ತ ಪ್ರಯತ್ನ ಮಾಡಿ ಆಗಿತ್ತು. ಆದರೆ ಯಾವುದೇ ನಾಯಕನ ನೇತೃತ್ವದ ಹಂಗೇ ಇಲ್ಲದೆ, ಈ ದೇಶದ ಪ್ರತಿ ನಾಗರಿಕನ ಒಳಗಿದ್ದ ಸ್ವಾತಂತ್ರದ ಅಕಾಂಕ್ಷೆ ಭುಗಿಲೆದ್ದು ತನಗೇ ತಾನೇ ನಾಯಕಿರಾಗಿ ಪ್ರತಿ ಹಳ್ಳಿಯಲ್ಲಿ ಬ್ರಿಟಿಷರ ವಿರುದ್ಧ ಆಂದೋಲನಗಳಾದವು. ಮತ್ತೊಮ್ಮೆ ಬ್ರಿಟಿಷರಿಗೆ ಈ ನೆಲದ ಕ್ಷಾತ್ರ ತೇಜದ ಭರಪೂರ ಅನುಭವ ದೊರೆತಿತ್ತು. 
    
ದೇಶವನ್ನು ಅಂದು ಕೋಮು ನೆಲೆಯಲ್ಲಿ ಒಡೆಯಲಾಯಿತು. ಜೂನ್ 1948ಕ್ಕೆ ಸ್ವಾತಂತ್ರ್ಯ ನೀಡುವ ಯೋಜನೆ ರೂಪುಗೊಂಡಿತ್ತು. ದೇಶದ ಗಡಿಗಳನ್ನು ನಿಗದಿ ಪಡಿಸಲು ರ್ಯಾಡ್ ಕ್ಲಿಫ್ ಎಂಬಾತ ಬಂದು  ದೇಶದ ಪರಿಚಯವೇ ಇಲ್ಲದೆ, ಕಛೇರಿಯಲ್ಲಿ ಕುಳಿತು, ನಕಾಶೆಗಳ ಮೇಲೆ ಗೆರೆ ಎಳೆಯುತ್ತ, ದೇಶವನ್ನು ಅತ್ಯಂತ ಅವೈಜ್ಞಾನಿಕವಾಗಿ ವಿಭಜಿಸಲಾಯಿತು.  ಮತ್ತು ಬಾಬಾಸಾಹೇಬರು ಸೂಚಿಸಿದಂತೆ ಲಾಜಿಕಲ್ ಪಾರ್ಟಿಷನ್ ಮಾಡದೆ, ಕೋಮುವಾರು ನೆಲೆಯಲ್ಲಿ ವಿಭಜಿಸಿದಲ್ಲಿ ಸಮಗ್ರ ಜನ ವರ್ಗಾವಣೆ ಮಾಡದೆ ಪ್ರಕ್ರಿಯೆ ಪೂರ್ಣಗೊಳ್ಳಬಾರದು ಎಂದು ಸೂಚಿಸಿದ್ದರು. 
    
ದೇಶಕ್ಕೆ ಸಮಸ್ಯೆಯನ್ನು ಜ್ವಲಂತವಾಗಿರಿಸುವ ಬ್ರಿಟಿಷರ ಷಡ್ಯಂತ್ರ ರಾತ್ರೋ ರಾತ್ರಿ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಗಳು ರಚನೆಯಾದವು., ಭಾರತದ 563 ಸಂಸ್ಥಾನಗಳನ್ನು ಸರ್ದಾರ ಪಟೇಲರು ಏಕೀಕೃತಗೊಳಿಸಿದರು. ಭಾರತದ ಶಿರೋಭಾಗದಲ್ಲಿ ತಲೆನೋವಾಗಿ ಕಾಶ್ಮೀರವನ್ನು ಉಳಿಸುವಲ್ಲಿ ಅಂದಿನ ನಾಯಕರು ಸಫಲರಾದರು. ಇತ್ತೀಚೆಗಷ್ಟೇ 370ನೆ ವಿಧಿಯ ಅನುಸಾರ ಆ ಪ್ರದೇಶದ ಪ್ರತ್ಯೇಕತೆಯ ಅಂಶಗಳನ್ನು ರದ್ದುಪಡಿಸಲಾಯಿತು. 
    
ದೇಶದ ಮೊದಲ ಸ್ವಾತಂತ್ರ್ಯ ಘೋಷಿಸಿದ ಗ್ರಾಮ ನಮ್ಮ ಕನ್ನಡ ನಾಡಿನ ನೆಲ ಈಸೂರು ಗ್ರಾಮ. ಸ್ವಾತಂತ್ರ್ಯ ಸರಿತೆಯಲ್ಲಿ ಸಾವಿರ ಕಥೆಗಳು. ತಿಳಿದಷ್ಟನ್ನೂ ಹೇಳಿದ ನಂತರವೂ ಹೇಳದೇ ಉಳಿದವುಗಳ ಅಗಾಧತೆಯೇ ಅನೂಹ್ಯ. 
    
ನಿರಂತರ ಜಾಗೃತಿಯೇ ಸ್ವಾತಂತ್ರ್ಯಕ್ಕೆ ತೆರಬೇಕಾದ ತೆರ. ಜಾಗೃತಿ ಮರೆತ ದಿನ ಆಕ್ರಮಣಕಾರರು ಯಾವುದೇ ರೂಪದಲ್ಲಿಯೂ ಬಂದು ಎರಗಬಹುದು. ಈ ಹಿಂದೆ ಭಾರತದಲ್ಲಿ ಇಂದಿರಾ ತಮ್ಮ ಪಟ್ಟ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ಜನರ, ದೇಶದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದರು. ನಿರಂತರ ಹೋರಾಟದ ಮೂಲಕ ದೇಶವು ಅದನ್ನು ಮರಳಿ ಪಡೆಯಿತು.  
    
ಇಂದು ಅಫಘಾನಿಸ್ಥಾನದಲ್ಲಿ  ತಾಲಿಬಾನ್ ಹೆಸರಿನ ಉಗ್ರರು ದೇಶ ಮತ್ತು ಧರ್ಮದ ಹೆಸರಿನಲ್ಲಿ ದಾಳಿ ಮಾಡಿ, ಆ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಅಲ್ಲಿನ ಹೆಣ್ಣುಗಳನ್ನು ಹೊತ್ತೊಯ್ಯುತ್ತಿದ್ದಾರೆ. ಜಾಗೃತಿ ಕಳೆದುಕೊಂಡ ದಿನ ನಮ್ಮ ದೇಶಕ್ಕೂ ಅಂತಹ ಆಪತ್ತು ಬರುವ ಸಾಧ್ಯತೆ ಇಲ್ಲದಿಲ್ಲ. ದೇಶ ವಿರೋಧಿ ಕೃತ್ಯ ಮತ್ತು ಚಿಂತನೆಗಳನ್ನು ಸಹಿಸದಿರಿ. ವಿಶ‍್ವ ಮಾನವರಾಗಿ, ಗಡಿಗಳಿಲ್ಲದ ಜಗತ್ತಿನ ಕಲ್ಪನೆಗಳು ಕೇಳಲು ಸುಂದರ. ಆದರೆ, ದೇಶದ ರಾಜಕೀಯ, ಭೌಗೋಳಿಕ ಗಡಿಗಳನ್ನು ರಕ್ಷಿಸಿಕೊಳ್ಳಬೇಕಾದ್ದು ಯಾವುದೇ ದೇಶದ ಅಸ್ಥಿತ್ವದ ಪ್ರಶ್ನೆ. ದೇಶದ ಒಳಗೂ, ಹೊರಗೂ ಸುರಕ್ಷೆಯ ವಿಷಯದಲ್ಲಿ ಸಡಿಲತೆ ತೋರಿದ ತೋರಿದ ದಿನ ಭಾರತವೂ ಇನ್ನೊಂದು ಅಫಘಾನಿಸ್ತಾನ ಆಗುವ ದಿನ ದೂರವಿಲ್ಲ.  

ನೆನಪಿರಲಿ ಸ್ವಾತಂತ್ರ್ಯ ದಿನಾಚರಣೆ ಎಂಬುದು ಸಿಹಿ ಹಂಚಿ ಮನೆಗೆ ಹೋಗುವ ಸಂಭ್ರಮದ ಜಾತ್ರೆ ಅಲ್ಲ. ಈ ದಿನಕ್ಕೆ ದೇಶವನ್ನು ಸ್ವತಂತ್ರಗೊಳಿಸಲು ತಮ್ಮ ಬದುಕನ್ನೇ ಬಲಿಗೊಟ್ಟ ಅಸಂಖ್ಯ ಬಲಿದಾನಿಗಳ ರಕ್ತದ ಋಣವಿದೆ. ಅಸಂಖ್ಯ ತಾಯ್ತಂದೆಯರ ಬದುಕಿನ ಸುಖ-ಸೌಕರ್ಯಗಳ ತ್ಯಾಗದ ಹಂಗಿದೆ.  ನಮ್ಮ ಹಿರಿಯ ತ್ಯಾಗ ಬಲಿದಾನಗಳನ್ನು ನೆನೆಯೋಣ. ಮುಂದಿನ ಪರಂಪರೆಗೆ ಇದನ್ನು ನೆನಪಿಸೋಣ.


ಕೆ.ವಿ.ರಾಧಾಕೃಷ್ಣ
samanvita.2010@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com