ಮಗನ ಮದುವೆ ದಿನವೇ ವಧು ಸೊಸೆಯಲ್ಲ ಹೆತ್ತ ಮಗಳು ಅಂತ ಗೊತ್ತಾಗಿ ತಾಯಿಗೆ ಶಾಕ್, ಆದ್ರೂ ನಡೆಯಿತು ಮದುವೆ!

ಇದು ಯಾವುದೇ ಹಿಂದಿ ಸಿನಿಮಾದ ಕಥೆಯಲ್ಲ. ನಿಜ ಜೀವನದಲ್ಲಿ ನಡೆದ ರೋಚಕ ಮತ್ತು ಭಾವುಕ ಘಟನೆ. ತನ್ನ ಮಗನ ಮದುವೆಯ ಖುಷಿಯಲ್ಲಿದ್ದ ತಾಯಿಗೆ ವಧು ತಾನು ಹೆತ್ತ ಮಗಳು ಎಂಬ ವಿಚಾರ ಗೊತ್ತಾಗಿ ಶಾಕ್ ಆದ ಘಟನೆ ಚೀನಾದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇದು ಯಾವುದೇ ಹಿಂದಿ ಸಿನಿಮಾದ ಕಥೆಯಲ್ಲ. ನಿಜ ಜೀವನದಲ್ಲಿ ನಡೆದ ರೋಚಕ ಮತ್ತು ಭಾವುಕ ಘಟನೆ. ತನ್ನ ಮಗನ ಮದುವೆಯ ಖುಷಿಯಲ್ಲಿದ್ದ ತಾಯಿಗೆ ವಧು ತಾನು ಹೆತ್ತ ಮಗಳು ಎಂಬ ವಿಚಾರ ಗೊತ್ತಾಗಿ ಶಾಕ್ ಆದ ಘಟನೆ ಚೀನಾದಲ್ಲಿ ನಡೆದಿದೆ.
   
ಜಿಯಾಂಗ್ಸು ಪ್ರಾಂತ್ಯದ ಸುಝೂನಲ್ಲಿ ಈ ಘಟನೆ ನಡೆದಿದ್ದು, ಮಾರ್ಚ್‌ 31ರಂದು ನಡೆದ ಈ ಘಟನೆ ತಡವಾಗಿ  ಬೆಳಕಿಗೆ ಬಂದಿದೆ. ಮಗನ ಮದುವೆ ದಿನ ತನ್ನ ಸೊಸೆಯಾಗಿ ಬರುತ್ತಿರುವ ವಧು 20 ವರ್ಷಗಳ ಹಿಂದೆ ತಾನು ಕಳೆದುಕೊಂಡಿದ್ದ ಹೆತ್ತ ಮಗಳು ಎಂಬ ವಿಚಾರ ತಾಯಿಗೆ ಗೊತ್ತಾದ ನಂತರ ನಾಟಕೀಯ ತಿರುವು ಪಡೆದುಕೊಂಡಿತು ಎಂದು ಓರಿಯಂಟಲ್ ಡೈಲಿ ವರದಿ ಮಾಡಿದೆ.

ಮಗನ ಮದುವೆ ಸಿದ್ಧತೆಯಲ್ಲಿದ್ದ ತಾಯಿ ಅಚಾನಕ್ಕಾಗಿ ವಧುವಿನ ಕೈಯಲ್ಲಿದ್ದ ಮಚ್ಚೆಯನ್ನು ನೋಡಿದ್ದು, ವಧು ಬೇರೆ ಯಾರೂ ಅಲ್ಲ ತಾನು ಹೆತ್ತ ಮಗಳು ಎಂದು ಗೊತ್ತಾಗಿದೆ. ಆ ತಾಯಿ ತಕ್ಷಣ ವಧುವಿನ ಹೆತ್ತವರ ಬಳಿ ಹೋಗಿ `ನಿಮ್ಮ ಮಗಳನ್ನು 20 ವರ್ಷಗಳ ಹಿಂದೆ ದತ್ತು ಪಡೆದಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇಳಿ ಆ ಹೆತ್ತವರು ಒಂದು ಕ್ಷಣ ಶಾಕ್ ಆಗಿದ್ದರು. ಯಾಕೆಂದರೆ, ಈ ವಿಷಯ ಇಷ್ಟು ದಿನ ರಹಸ್ಯವಾಗಿಯೇ ಇತ್ತು. ಆದರೂ ಈ ತಾಯಿ ಒತ್ತಾಯ ಮಾಡಿದಾಗ ಇವರು ಸತ್ಯ ಒಪ್ಪಿಕೊಂಡಿದ್ದರು.

ಈ ಯುವತಿ ಹಲವಾರು ವರ್ಷಗಳ ಹಿಂದೆ ರಸ್ತೆ ಪಕ್ಕ ಅನಾಥವಾಗಿ ಸಿಕ್ಕಿದ್ದ ಹೆಣ್ಣು ಮಗು ಎಂದು ವಧುವಿನ ಪೋಷಕರು ಬಹಿರಂಗಪಡಿಸಿದ್ದರು. ಈ ಕತೆ ಕೇಳಿ ಸ್ವತಃ ವಧು ಕಣ್ಣೀರು ಸುರಿಸಿದ್ದಳು. ಜೊತೆಗೆ, ಇವಳು ತನ್ನ ನಿಜವಾದ ಹೆತ್ತವರ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಯತ್ನ ಮಾಡಿದ್ದಳು. ಹೀಗಾಗಿ, ತನ್ನ ನಿಜ ತಾಯಿಯನ್ನು ಭೇಟಿಯಾದಾಗ, ಇದು `ಮದುವೆಯ ದಿನಕ್ಕಿಂತ ಸಂತೋಷವಾದ ಕ್ಷಣ' ಎಂದು ವಧು ಬಣ್ಣಿಸಿದ್ದಾಳೆ.

ಈಗ ಉಳಿದದ್ದು ಯುವತಿ ಅಣ್ಣನನ್ನೇ ಹೇಗೆ ವರಿಸುವುದು ಎಂಬ ಪ್ರಶ್ನೆ, ಆದರೆ, ಅದಕ್ಕೂ ಉತ್ತರ ಸಿಕ್ಕಿದ್ದು, ಸ್ವತಃ ತಾಯಿಯೇ ಇದಕ್ಕೆ ಸಮ್ಮತಿಸಿದ್ದರು. ಯಾಕೆಂದರೆ, ವರ ನಿಜವಾಗಿಯೂ ಅವರ ಮಗನಾಗಿರಲಿಲ್ಲ...!

ಮಗಳನ್ನು ಕಳೆದುಕೊಂಡಿದ್ದ ದುಃಖದಲ್ಲಿ ಆ ತಾಯಿ ತನ್ನ ಕರುಳಬಳ್ಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಎಷ್ಟು ಹುಡುಕಿದರೂ ಮಗಳು ಸಿಗಲಿಲ್ಲ. ಹೀಗಾಗಿ, ಈ ನೋವನ್ನು ಮರೆಯಲು ಇವರು ಗಂಡು ಮಗುವನ್ನು ದತ್ತು ಪಡೆದು ಸಾಕುತ್ತಿದ್ದರು. ತನ್ನದೇ ಸ್ವಂತ ಮಗನ ಹಾಗೆಯೇ ಪ್ರೀತಿ ಕೊಟ್ಟು ಬೆಳೆಸಿದ್ದರು.

ಈ ಇಬ್ಬರು ಜೈವಿಕ ಒಡಹುಟ್ಟಿದವರಲ್ಲ. ಇಬ್ಬರ ಹೆತ್ತವರೂ ಇವರನ್ನು ದತ್ತು ಪಡೆದು ಸಾಕಿರುವುದರಿಂದ ಮದುವೆಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ಎಲ್ಲರ ಸಮ್ಮತಿಯೊಂದಿಗೇ ಈ ವಿವಾಹ ನೆರವೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com