ಕರ್ನಾಟಕದ ಸತ್ಯಾಗ್ರಹ ಸೌಧದ ನಿರ್ಮಾಣದ ಹಿಂದಿದೆ 'ಹೂಮಾಲೆ'ಯ ಕೊಡುಗೆಯ ಕಥೆ...

1970 ರಲ್ಲಿ ಅಂದಿನ ಮುಖ್ಯಮಂತ್ರಿಯೊಬ್ಬರು ತಮ್ಮ ಕೊರಳನ್ನೇರಲು ಸಿದ್ಧಗೊಂಡಿದ್ದ ಹೂವಿನ ಮಾಲೆಯನ್ನಿಟ್ಟುಕೊಂಡೇ ಸತ್ಯಾಗ್ರಹ ಸೌಧದ ನಿರ್ಮಾಣಕ್ಕೆ ಉಂಟಾಗಿದ್ದ ಕೊರತೆಯನ್ನು ಇಲ್ಲವಾಗಿಸಿದ್ದ ಕಥೆ ಗೊತ್ತೇ?
ಸತ್ಯಾಗ್ರಹ ಸೌಧ
ಸತ್ಯಾಗ್ರಹ ಸೌಧ

ಶಿವಪುರ: ಇತ್ತೀಚೆಗಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. ಆದರೆ 1970 ರಲ್ಲಿ ಅಂದಿನ ಮುಖ್ಯಮಂತ್ರಿಯೊಬ್ಬರು ತಮ್ಮ ಕೊರಳನ್ನೇರಲು ಸಿದ್ಧಗೊಂಡಿದ್ದ ಹೂವಿನ ಮಾಲೆಯನ್ನಿಟ್ಟುಕೊಂಡೇ ಸತ್ಯಾಗ್ರಹ ಸೌಧದ ನಿರ್ಮಾಣಕ್ಕೆ ಉಂಟಾಗಿದ್ದ ಕೊರತೆಯನ್ನು ಇಲ್ಲವಾಗಿಸಿದ್ದ ಕಥೆ ಗೊತ್ತೇ?

ಬೆಂಗಳೂರು-ಮೈಸೂರು ಹೆದ್ದಾರಿಯ ಬಳಿ, ಮದ್ದೂರಿನ ಉತ್ತರ ಭಾಗದಿಂದ 5 ಕಿ.ಮೀ ದೂರ ಇರುವ ಶಿವಪುರ ಮತ್ತೊಂದು ಗ್ರಾಮವೆಂದಷ್ಟೇ ಹಲವರಿಗೆ ತಿಳಿದಿದೆ. ಆದರೆ ಅದು ಭಾರತದ ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದಂತೆ ಸ್ಪೂರ್ತಿಯ ಸ್ಮಾರಕ-ಸತ್ಯಾಗ್ರಹ ಸೌಧವನ್ನು ಹೊಂದಿರುವ ವಿಶೇಷ ಸ್ಥಳವೂ ಹೌದು. 1938 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ನಡೆದ ನೆನಪಿಗಾಗಿ ಈ ಸತ್ಯಾಗ್ರಹ ಸೌಧವನ್ನು ನಿರ್ಮಾಣ ಮಾಡಲಾಗಿದೆ. 

ಈ ಸತ್ಯಾಗ್ರಹದಲ್ಲಿ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ ಅವರೂ ಭಾಗವಹಿಸಿದ್ದರೆಂಬುದು ಮತ್ತೊಂದು ವಿಶೇಷ. ಆಗ ಅವರಿಗೆ 30 ವರ್ಷ.     1952-56 ವರೆಗೂ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ 1970 ರಲ್ಲಿ ಸಂಸತ್ ಸದಸ್ಯರಾಗಿದ್ದಾಗ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಶಿವಪುರದ ಬಳಿ ಬಂದಾಗ,  ಧ್ವಜ ಸತ್ಯಾಗ್ರಹದ ನೆನಪಿಗೆ ಸ್ಮಾರಕ ನಿರ್ಮಿಸಬೇಕೆಂಬ ಆಲೋಚನೆ ಮೂಡಿತ್ತು. 

ಸತ್ಯಾಗ್ರಹ ಸೌಧ ಸಮಿತಿಯ ನೇತೃತ್ವ ವಹಿಸಿದ್ದ ಮದ್ದೂರು ಕೌನ್ಸಿಲ್ ನ ಮಾಜಿ ಅಧ್ಯಕ್ಷ ಬಿಆರ್ ಶ್ರೀನಿವಾಸ ಮೂರ್ತಿ (83) ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು "ಮುಂಬೈ ಮೂಲದ ಆರ್ಕಿಟೆಕ್ಟ್  ಸತ್ಯಾಗ್ರಹ ಸೌಧ ನಿರ್ಮಿಸಲು 80 ಲಕ್ಷ ರೂಪಾಯಿಗಳ ವೆಚ್ಚವನ್ನು ಅಂದಾಜಿಸಿದ್ದರು. ಆದರೆ ಕೆಂಗಲ್ ಹನುಮಂತಯ್ಯ ಅವರು ನಿಯೋಜಿಸಿದ ಸ್ಥಳೀಯ ಆರ್ಕಿಟೆಕ್ಟ್  ಈ ಯೋಜನೆಗೆ 13.5 ಲಕ್ಷ ರೂಪಾಯಿಗಳನ್ನು ಹೇಳಿದ್ದರು ಈ ಮೊತ್ತವೂ ಆಗಾಧವಾದುದ್ದೇ ಆಗಿತ್ತು. 

ಅಂದಿನ ದೇವರಾಜ ಅರಸು ಸರ್ಕಾರ ಈ ಸ್ಮಾರಕ ನಿರ್ಮಾಣಕ್ಕಾಗಿ 5 ಲಕ್ಷ ರೂಪಾಯಿಗಳನ್ನು ನೀಡಿತ್ತು. ಸ್ಥಳೀಯ ಸಂಸ್ಥೆ 5 ಲಕ್ಷ ರೂಪಾಯಿಗಳನ್ನು ನೀಡಿದರೂ ಇನ್ನೂ ಹಣದ ಕೊರತೆ ಎದುರಾಗಿತ್ತು. 

ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡುವ ಸಮಾರಂಭದಲ್ಲಿ ಟಿ ನರಸಿಪುರದ ಶಾಸಕ ಕರಿಯಪ್ಪ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರನ್ನು ಸ್ವಾಗತಿಸುತ್ತ ಕೆಂಗಲ್ ಹನುಮಂತಯ್ಯ ಅವರಿಗೆ ಹೂವಿನ ಮಾಲೆ ಹಾಕಲು ಮುಂದಾದರು ಆದರೆ ಹನುಮಂತಯ್ಯ ಅವರು ಈ ಹಾರಕ್ಕೆ ಕೊರಳೊಡ್ಡದೇ, ಈ ಹೂವಿನ ಮಾಲೆಯನ್ನು ಹರಾಜು ಹಾಕುವುದಾಗಿ ಘೋಷಿಸಿದರು. 

ಪ್ರಸಿದ್ಧ ಟಿ ನರಸಿಪುರ ಸಾರಿಗೆ ಸೇವೆಯ ಮಾಲಿಕರಾಗಿದ್ದ ಕರಿಯಪ್ಪ ಈ ಹೂವಿನ ಮಾಲೆಯನ್ನು 1,001 ರೂಪಾಯಿಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ್ದರು ಈ ಹಣವನ್ನು ಸ್ಮಾರಕಕ್ಕೆ ಕೊಡುಗೆಯಾಗಿ ನೀಡಲಾಗಿತ್ತು" ಎಂದು ಗತ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಮೂರ್ತಿ 

"ಹನುಮಂತಯ್ಯ ಅವರು ಶಿವಪುರ ಸೌಧ ಕಾಮಗಾರಿ ಪೂರ್ಣಗೊಳಿಸುವವರೆಗೂ ಹೂವಿನ ಮಾಲೆ ಸ್ವೀಕರಿಸುವುದಿಲ್ಲ ಎಂಬ ಶಪತ ಮಾಡಿದ್ದರು, ಹನುಮಂತಯ್ಯ ಅವರು ಎಲ್ಲಿಗೆ ಹೋಗುತ್ತಿದ್ದರೋ ಅಲ್ಲೆಲ್ಲಾ ಅವರನ್ನು ಜನತೆ ಶ್ರೀಗಂಧ, ಹೂವು, ಇತ್ಯಾದಿ ಬೆಲೆ ಬಾಳುವ ವಸ್ತುಗಳಿಂದ ಕೂಡಿದ್ದ ಮಾಲೆಗಳನ್ನು ನೀಡುತ್ತಿದ್ದರು. ಇವುಗಳನ್ನು ಹರಾಜು ಹಾಕಿ ಅದರಿಂದ ಬರುತ್ತಿದ್ದ ಹಣವನ್ನು ಶಿವಪುರ ಧ್ವಜ ಸ್ಮಾರಕ ಟ್ರಸ್ಟ್ ಗೆ ನೀಡುತ್ತಿದ್ದರು. ನಾಲ್ಕು ವರ್ಷಗಳಲ್ಲಿ ಟ್ರಸ್ಟ್ ಈ ರೀತಿ 5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿತ್ತು 1970 ರಲ್ಲಿ ಸ್ಮಾರಕ ಉದ್ಘಾಟನೆಯಾಯಿತು" ಎನ್ನುತಾರೆ ಮೂರ್ತಿ 

ಹಿಂದೊಮ್ಮೆ ಸ್ಪೂರ್ತಿಯ ಸ್ಮಾರಕವಾಗಿದ್ದ ಸೌಧ ಈಗ ನಿರ್ಲಕ್ಷ್ಯಕ್ಕೊಳಗಾಗಿದೆ. ಭಾವಿ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ, ಗ್ರಂಥಾಲಯ ಸ್ಥಾಪನೆ ಮಾಡುವ ಮೂಲಕ ಈ ಸ್ಮಾರಕವನ್ನು ಅರ್ಥಪೂರ್ಣ ಪ್ರದೇಶವನ್ನಾಗಿ ಬಯಸಿದ್ದರು. ಆದರೆ ಏನೂ ಆಗಿಲ್ಲ ಎಂದು ಮೂರ್ತಿ ಹೇಳಿದ್ದಾರೆ. 

"ಈ ಸ್ಮಾರಕ ಸ್ಥಳೀಯ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಅಡಿ ಇದ್ದು ಆ.15 ರಂದು ಮಾತ್ರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. ಮಹಾತ್ಮಾ ಗಾಂಧಿ, ಹನುಮಂತಯ್ಯ, ಹಾಗೂ ಸ್ಮಾರಕ್ಕೆ ಜಾಗ ನೀಡಿದ್ದ ತಿರುಮಲೇ ಗೌಡ ಅವರ ಫೋಟೋಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಈ ಸ್ಮಾರಕ ರಕ್ಷಣೆಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಈ ಹಿಂದೆ ಶಾಲಾ ಮಕ್ಕಳನ್ನು ಸ್ಮಾರಕ ವೀಕ್ಷಣೆಗೆಂದು ಕರೆತರಲಾಗುತ್ತಿತ್ತು. ಆದರೆ 10 ವರ್ಷಗಳಿಂದ ಅದೂ ಸ್ಥಗಿತಗೊಂಡಿದೆ. ಸ್ಮಾರಕದ ಪ್ರದೇಶ ಸಮಾಜಘಾತುಕ ಚಟುವಟಿಕೆಗಳ ಕೇಂದ್ರವಾಗಿದೆ. ಈ ಸೌಧದ ಗತ ವೈಭವವನ್ನು ಸರ್ಕಾರ ಮರುಸ್ಥಾಪಿಸಬೇಕಿದೆ" ಎನ್ನುತ್ತಾರೆ ಸ್ಥಳೀಯ ನಿವಾಸಿ ಶಿವಕುಮಾರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com