ಕಾಲೆತ್ತಿ ನಾಟ್ಯವಾಡುವ ಕೊಟ್ಟಿಗೆಹಾರ ಕಪ್ಪೆಗೂ, ವಿದೇಶಿ ಬಾರ್ನಿಯಾ ಕಪ್ಪೆ ನಡುವಿನ ವ್ಯತ್ಯಾಸ: ಅಧ್ಯಯನದಿಂದ ಬಹಿರಂಗ
ಬೆಂಗಳೂರು: ಪಕ್ಷಿಗಳು ನಾಟ್ಯವಾಡುವುದನ್ನು, ಸುಶ್ರಾವ್ಯವಾಗಿ ಉಲಿಯುವುದನ್ನು ಕೇಳಿರುತ್ತೇವೆ. ಆದರೆ ಕಪ್ಪೆ ನಾಟ್ಯವಾಡುವುದು ತುಂಬಾ ವಿಶೇಷ. ನಾಟ್ಯವಾಡುವ ಕಪ್ಪೆಯ ಸಂತತಿ ವಿದೇಶದೆಲ್ಲೋ ಇಲ್ಲ. ನಮ್ಮ ಕರ್ನಾಟಕ ರಾಜ್ಯದಲ್ಲೇ ಇರೋದು. ಅದರ ಹೆಸರು 'ಕೊಟ್ಟಿಗೆಹಾರ ಕಪ್ಪೆ'. ಅದು ಒಂದು ಕಾಲನ್ನು ಎತ್ತಿ ಮೇಲಕ್ಕೆ ಚಾಚುತ್ತದೆ ನಾಟ್ಯದ ಯಾವುದೋ ಭಂಗಿ ಎಂಬಂತೆ.
ಅಚ್ಚರಿ ಎಂದರೆ ಕೊಟ್ಟಿಗೆಹಾರ ಕಪ್ಪೆಯ ನಾಟ್ಯ ಭಂಗಿಯನ್ನೇ ಹೋಲುವ ಮತ್ತೊಂದು ಕಪ್ಪೆ ಸಂತತಿ ವಿದೇಶದಲ್ಲಿದೆ. ಅದರ ಹೆಸರು ಬಾರ್ನಿಯನ್ ಕಪ್ಪೆ. ಮಲೇಷ್ಯಾ ಬಳಿಯ ಬಾರ್ನಿಯೊ ದ್ವೀಪದಲ್ಲಿ ಅದು ಕಂಡುಬರುತ್ತದೆ. ಬಾರ್ನಿಯನ್ ಕಪ್ಪೆ ಮತ್ತು ಕೊಟ್ಟಿಗೆಹಾರ ಕಪ್ಪೆಯ ನಡುವೆ ಸ್ವಾಮ್ಯತೆ ತಿಳಿಯಲು ಪರಿಸರತಜ್ಞರು ಅಧ್ಯಯನ ನಡೆಸಿದ್ದಾರೆ.
ಈ ಅಧ್ಯಯನದಲ್ಲಿ ಬೆಂಗಳೂರು ಐಐಎಸ್ಸಿ ವಿಜ್ಞಾನಿ ಕೆ.ವಿ.ಗುರುರಾಜ್ ಪಾಲ್ಗೊಂಡಿದ್ದಾರೆ. ಅಧ್ಯಯನದಿಂದ ಅವೆರಡೂ ಕಪ್ಪೆಗಳ ಪ್ರಭೇದದ ನಡುವಿನ ಕುತೂಹಲಕರ ವ್ಯತ್ಯಾಸಗಳು ಪತ್ತೆಯಾಗಿವೆ.
ಜಗತ್ತಿನ ಬೇರೆ ಮೂಲೆಯಲ್ಲಿರುವ ಬಾರ್ನಿಯನ್ ಕಪ್ಪೆ ಮತ್ತು ನಮ್ಮ ಪಶ್ಚಿಮಘಟ್ಟದ ಕೊಟ್ಟಿಗೆಹಾರ ಕಪ್ಪೆ ಒಂದೇ ರೀತಿ ಕಾಲೆತ್ತುವುದು ತುಂಬಾ ಅಚ್ಚರಿ ಮೂಡಿಸುವ ವಿಷಯ. ಆದರೆ ಅವುಗಳ ನಾಟ್ಯ ಭಂಗಿಯ ಹಿಂದಿನ ಕಾರಣ ಮಾತ್ರ ಬೇರೆ ಬೇರೆ.
ಬಾರ್ನಿಯನ್ ಕಪ್ಪೆ ಸಂತಾನೋತ್ಪತ್ತಿ ಸಮಯದಲ್ಲಿ ತನ್ನ ಸಂಗಾತಿಯನ್ನು ಆಕರ್ಷಿಸಲು ಕಾಲೆತ್ತಿದರೆ, ನಮ್ಮ ಕೊಟ್ಟಿಗೆಹಾರ ಕಪ್ಪೆ ತನ್ನ ಅಧಿಕಾರ ಸ್ಥಾಪಿಸುವ ಯತ್ನವಾಗಿ ಕಾಲೆತ್ತುತ್ತದೆ ಎನ್ನುವ ಸಂಗತಿ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಕೊಟ್ಟಿಗೆಹಾರ ಕಪ್ಪೆ ತನ್ನ ಜಾಗದ ಮೇಲಿನ ಹಕ್ಕನ್ನು, ಗಡಿಯನ್ನು ತೋರ್ಪಡಿಸುವ ಸಲುವಾಗಿ ಕಾಲೆತ್ತುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ