ಬೆಂಗಳೂರು: ಕ್ಯಾನ್ಸರ್ ನಿಂದ ಗುಣಮುಖವಾಗುವುದೇ ಕಷ್ಟ, ಹೀಗಿರುವಾಗ ಕೋವಿಡ್ ಬಂದರೆ ಇನ್ನೇನು ಗತಿ... ಚಾಮರಾಜನಗರದ ಕ್ಯಾನ್ಸರ್ ಪೀಡಿತ ರೈತರೊಬ್ಬರು ಕೊರೋನಾ ವಿರುದ್ಧ ಹೋರಾಡಿ, ಗೆದ್ದು ಹೊಸ ಭರವಸೆ ಮೂಡಿಸಿದ್ದಾರೆ.
ಕೊರೋನಾ ಸಂಬಂಧ ದಿನ ನಿತ್ಯ ನಕರಾತ್ಮಕ ಸುದ್ದಿಯನ್ನ ಕೇಳುತ್ತಿರುವ ಸಂದರ್ಭದಲ್ಲಿ, ಕ್ಯಾನ್ಸರ್ ಪೀಡಿತ ರೈತರೊಬ್ಬರು ಗುಣಮುಖರಾದ ಸುದ್ದಿ ಇತರೆ ರೋಗಿಗಳಿಗೆ ಸ್ಪೂರ್ತಿ ನೀಡಿದೆ.
ಚಾಮರಾಜನಗರ ಜಿಲ್ಲೆಯ ಮೂರ್ತಿ ಕೊರೋನಾದಿಂದ ಚೇತರಿಸಿಕೊಂಡ ಕ್ಯಾನ್ಸರ್ ಪೀಡಿತ ವ್ಯಕ್ತಿಯಾಗಿದ್ದಾರೆ.
ಕೊರೋನಾ ಸೋಂಕು ತಗುಲಿ 6 ತಿಂಗಳ ಕಾಲ ಹಾಸಿಗೆ ಹಿಡಿದಿದ್ದ ಮೂರ್ತಿಯವರು ಕೊನೆಗೂ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಮೊದಲಿಗೆ ಕಾಲಿನಲ್ಲಿ ಗಡ್ಡೆಯೊಂದು ಕಾಣಿಸಿಕೊಂಡಿತ್ತು. ನಂತರ ವೈದ್ಯರು ಆ ಗಡ್ಡೆಯನ್ನು ತೆಗೆದಿದ್ದರು. ನಂತರ ಆ ಗಡ್ಡೆಯನ್ನು ವೈದ್ಯಕೀಯ ಪರೀಕ್ಷೆ ನಡೆಸಿದಾಗ ನನಗೆ ಕ್ಯಾನ್ಸರ್ ಇದೆ ಎಂದು ತಿಳಿಸಿದ್ದರು. ಬಳಿಕ ರೇಡಿಯೇಷನ್ ಥೆರಪಿ ಮಾಡಿದ್ದರು. ನೋಡಲು ಎರಡು ಕಾಲು ಇದ್ದಂತೆ ಕಾಣುತ್ತದೆ. ಆದರೆ, ನನಗೆ ಒಂದು ಕಾಲು ಸ್ವಾಧೀನ ಇಲ್ಲ ಎಂಬಂತಿದೆ ಎಂದು ಮೂರ್ತಿಯವರು ಹೇಳಿದ್ದಾರೆ.
ರೈತರಾಗಿರುವ ಮೂರ್ತಿಯವರು ಕೊರೋನಾ ಸಾಂಕ್ರಾಮಿಕ ರೋಗ ಎದುರಾದಾಗಿನಿಂದಲೂ ಒಂದಲ್ಲ ಒಂದು ಏಳುಬೀಳುಗಳನ್ನು ನೋಡುತ್ತಲೇ ಬಂದಿದ್ದು, ಎಷ್ಟು ಸಂಕಷ್ಟಗಳು ಎದುರಾದರೂ ಅವುಗಳನ್ನು ದಿಟ್ಟತನದಿಂದ ಎದುರಿಸಿ ಇತರರಿಗೆ ಪ್ರೇರಣೆಯಾಗಿದ್ದಾರೆ.
ಕೊರೋನಾ ಲಾಕ್ಡೌನ್ ಪರಿಣಾಮ ಬಹಳಷ್ಟು ನಷ್ಟ ಅನುಭವಿಸಿದ ಮೂರ್ತಿಯವರು ಪತ್ನಿ ಚಿತ್ರ ಅವರ ನೆರವಿನೊಂದಿಗೆ 100 ಎಕರೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆದಿದ್ದಾರೆ.
ಕಳೆದ ಬಾರಿ 30 ಎಕರೆ ಜಮೀನಿನಲ್ಲಿ ಟೊಮೆಟೋ ಹಾಗೂ 18 ಎಕರೆ ಜಮೀನಿನಲ್ಲಿ ಇತರೆ ಬೆಳೆಗಳನ್ನು ಬೆಳೆಯಲಾಗಿತ್ತು. ಆದರೆ, ಆಲಿಕಲ್ಲು ಮಳೆ ಬಂದು ಎಲ್ಲಾ ಬೆಳೆ ನಾಶವಾಗಿ ಹೋಗಿತ್ತು. ಅದೃಷ್ಟವಶಾತ್ 40 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಇದು ನಮ್ಮ ಕಷ್ಟವನ್ನು ದೂರಾಗಿಸಿತ್ತು.
ಮತ್ತೆ 30 ಎಕರೆ ಜಮೀನಿನಲ್ಲಿ ಟೊಮೆಟೋ, 25 ಜಮೀನಿನಲ್ಲಿ ಇತರೆ ಬೆಳೆ ಬೆಳೆಯಲಾಗಿತ್ತು. ಆದರೆ, ಸರ್ಕಾರ ಲಾಕ್ಡೌನ್ ಜಾರಿ ಮಾಡಿದ್ದರಿಂದ ನಷ್ಟವಾಯಿತು. ಇದೀಗ ಮತ್ತೆ 65 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದೇನೆ. ಇದರಿಂದ ಹಣ ಬಂದಿದ್ದೇ ಆದರೆ, ನಮ್ಮ ಜೀವನ ಸರಿಹೋಗುತ್ತದೆ. ನಷ್ಟವಾಗುತ್ತದೆ ಎಂದು ಹಿಂಜರಿಯುವುದಿಲ್ಲ. ದಾರಿಯಲ್ಲಿ ಹೋಗುವಾಗ ಬಿದ್ದೆವೆಂದು ಮೇಲೇಳುವುದಿಲ್ಲವೇ....ಮತ್ತೆ ಎದ್ದು ನಿಲ್ಲುತ್ತೇವೆ ಅಲ್ಲವೇ...? ಹಾಗೆಯೇ ರೈತರು ಕೂಡ ಜೀವನ ಸಾಗಿಸಬೇಕು. ಕಷ್ಟ ಬಂತೆಂದು ಆತ್ಮಹತ್ಯೆ ಮಾಡಿಕೊಳ್ಳಬಾರದು. ಮುನ್ನಡೆಯುತ್ತಿರಬೇಕೆಂದು ಎಂದು ಮೂರ್ತಿಯವರು ತಿಳಿಸಿದ್ದಾರೆ.
ಇದೇ ವೇಳೆ ಸರ್ಕಾರಕ್ಕೂ ಮನವಿ ಮಾಡಿಕೊಂಡಿರುವ ಅವರು, ಟ್ರಾನ್ಸ್ ಫಾರ್ಮರ್ ಗಳು ಹಾಳಾದರೆ, ಮೂರು ದಿನಗಳಲ್ಲಿ ಅದನ್ನು ಸರಿಪಡಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ರೈತರಾಗಿರುವ ನಾವು ಬಹಳಷ್ಟು ಕಷ್ಟಪಡುತ್ತೇವೆ. ರೂ.1 ಬೆಂಬಲ ಬೆಲೆ ನೀಡಿ ನಮಗೆ ರೂ.100 ನಷ್ಟವಾಗುವಂತೆ ಸರ್ಕಾರ ಮಾಡಬಾರದು. ನಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ನಿಗದಿಪಡಿಸಬೇಕು. ನಮ್ಮ ಕಷ್ಟಕ್ಕೆ ಸರ್ಕಾರ ಸೂಕ್ತ ರೀತಿಯ ಗೌರವ ನೀಡಿದರೆ ಸಾಕು ಎಂದಿದ್ದಾರೆ.
Advertisement