ಜಾರ್ಖಂಡ್: ಸ್ನೇಹಿತನ ಜೀವ ಉಳಿಸಲು 15 ಗಂಟೆಗಳಲ್ಲಿ 1,200 ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ ಮಾಡಿದ 'ಆಪ್ತಮಿತ್ರ'
ಕೋವಿಡ್-19 ಸೋಂಕು ಸಮಸ್ಯೆ ಎದುರಿಸುತ್ತಿದ್ದ ಬಾಲ್ಯದ ಸ್ನೇಹಿತನ ಬದುಕಬೇಕಾದರೆ ಇನ್ನು 10 ಗಂಟೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆಯಾಗಬೇಕಿತ್ತು.
Published: 01st May 2021 01:30 PM | Last Updated: 01st May 2021 01:34 PM | A+A A-

ಕೋವಿಡ್-19 ನಿಂದ ಚೇತರಿಸಿಕೊಳ್ಳುತ್ತಿರುವ ರಾಜನ್
ರಾಂಚಿ: ಕೋವಿಡ್-19 ಸೋಂಕು ಸಮಸ್ಯೆ ಎದುರಿಸುತ್ತಿದ್ದ ಬಾಲ್ಯದ ಸ್ನೇಹಿತನ ಬದುಕಬೇಕಾದರೆ ಇನ್ನು 10 ಗಂಟೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆಯಾಗಬೇಕಿತ್ತು. ಆಕ್ಸಿಜನ್ ವ್ಯವಸ್ಥೆ ಮಾಡಲು ಎರಡನೇ ಯೋಚನೆಯನ್ನು ಮಾಡದೇ 15 ಗಂಟೆಗಳಲ್ಲಿ 1,200 ಕಿ.ಮೀ ಸಂಚರಿಸಿ ಸ್ನೇಹಿತನನ್ನು ಬದುಕಿಸಿದ್ದಾರೆ ದೇವೇಂದ್ರ ಕುಮಾರ್ ರೈ.
ಏ.25 ರಂದು ಸಂಜಯ್ ಸಕ್ಸೇನಾ ಅವರಿಂದ ಈ ಮಾಹಿತಿಯನ್ನು ಪಡೆದ ಜಾರ್ಖಂಡ್ ನ ದೇವೇಂದ್ರ ಕುಮಾರ್ ರೈ (34) ಸ್ನೇಹಿತನಿಗೆ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆ ಮಾಡುವುದಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ಇಡೀ ರಾತ್ರಿ ಆಕ್ಸಿಜನ್ ವ್ಯವಸ್ಥೆ ಮಾಡುವುದಕ್ಕೆ ಯತ್ನಿಸಿದ್ದಾರೆ. ಮರು ದಿನ ಮಧ್ಯಾಹ್ನದ ವೇಳೆಗೆ ಎರಡು ಆಕ್ಸಿಜನ್ ಸಿಲೆಂಡರ್ ಗಳು ಲಭ್ಯವಾದವು. ಆದರೆ ಈಗ ಅವುಗಳನ್ನು 1,200 ಕಿ.ಮೀ ದೂರದಿಂದ ಸಾಗಿಸುವುದು ಹೇಗೆ ಎಂಬುದು ಸಮಸ್ಯೆಯಾಗಿತ್ತು.
ಆದರೆ ಕ್ಷಣಮಾತ್ರವೂ ಯೋಚನೆ, ತಡ ಮಾಡದೇ 1,200 ಕಿ.ಮೀ ಪ್ರಯಾಣಿಸಲು ದೇವೇಂದ್ರ ಕುಮಾರ್ ರೈ ಅಣಿಯಾದರು. ಬೊಕಾರೋದಿಂದ ತನ್ನ ಪೋಷಕರಿಗೂ ತಿಳಿಸದೇ ತನ್ನ ಮತ್ತೋರ್ವ ಸ್ನೇಹಿತನಿಂದ ಕಾರು ಪಡೆದು ರಾಂಚಿಯಿಂದ ನೋಯ್ಡಾಗೆ (1,200 ಕಿ.ಮೀ ದೂರದ ಪ್ರಯಾಣ) ಕೇವಲ 15 ಗಂಟೆಗಳಲ್ಲಿ ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ ಮಾಡಿ ಸ್ನೇಹಿತನಿಗೆ ಸರಿಯಾದ ಸಮಯದಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ.
"ದೆಹಲಿ-ಎನ್ಆರ್ ಸಿಯಲ್ಲಿ ಆಕ್ಸಿಜನ್ ಪೂರೈಕೆ ಕೊರತೆ ಎದುರಾಗಿರುವುದರಿಂದ ಸ್ನೇಹಿತ ರಾಜನ್ ಗೆ ಇನ್ನು 10 ಗಂಟೆಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್ ಇದೆ. ಅದಾದ ಬಳಿಕ ಆಕ್ಸಿಜನ್ ಖಾಲಿಯಾದರೆ ಏನೂ ಆಗಬಹುದೆಂದು ವೈದ್ಯರು ಹೇಳುತ್ತಿದ್ದಾರೆ. ಆದ್ದರಿಂದ ಆತನಿಗೆ ಆಕ್ಸಿಜನ್ ಬೇಕಿದೆ ಎಂದು ಸಂಜಯ್ ಸಕ್ಸೇನಾ ಎಂಬುವವರು ಕರೆ ಮಾಡಿ ಹೇಳಿದರು,"
ಅದಾಗಲೇ ಸಂಜೀವ್ ಸುಮನ್ ಎಂಬ ಸ್ನೇಹಿತನನ್ನು ಕೋವಿಡ್-19 ನಿಂದ ಕಳೆದುಕೊಂಡಿದ್ದೆವು, ಮತ್ತೋರ್ವ ಸ್ನೇಹಿತನನ್ನು ಕಳೆದುಕೊಳ್ಳಲು ನಾವು ಸಿದ್ಧರಿರಲಿಲ್ಲ, ಆದ್ದರಿಂದ ಎರಡನೇ ಅಲೋಚನೆಯೇ ಮಾಡದೇ 1,200 ಕಿ.ಮೀ ದೂರದ ಪ್ರಯಾಣವನ್ನು 15 ಗಂಟೆಗಳಲ್ಲಿ ಕ್ರಮಿಸಿ ಸೂಕ್ತ ಸಮಯಕ್ಕೆ ಆಕ್ಸಿಜನ್ ತರಲಾಯಿತು. ರಾಜನ್ ಗೆ ಆಕ್ಸಿಜನ್ ಲಭ್ಯವಾಗಿದ್ದು, ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೇವೇಂದ್ರ ಕುಮಾರ್ ರೈ ಹೇಳಿದ್ದಾರೆ.
ಕೋವಿಡ್-19 ನಿಂದ ಬಳಲುತ್ತಿರುವ ರಾಜನ್ ಮಾತನಾಡುವುದಕ್ಕೆ ಸಾಧ್ಯವಾಗದೇ ಇದ್ದರೂ, ತನ್ನ ಸ್ನೇಹಿತನಿಂದಾಗಿ ಜೀವ ಉಳಿದಿದೆ ಎಂದು ಸ್ಮರಿಸಿದ್ದಾರೆ.
"ನಾನು ಇಂದು ಬದುಕಿದ್ದರೆ ಅದು ದೇವೇಂದ್ರನ ಕಾರಣದಿಂದಾಗಿ, ಆತ ಆಕ್ಸಿಜನ್ ನ್ನು ಸರಿಯಾದ ಸಮಯಕ್ಕೆ ತರದೇ ಇದ್ದಲ್ಲಿ ನಾನು ಖಂಡಿತಾ ಬದುಕುತ್ತಿರಲಿಲ್ಲ. ಆತನಂತಹ ಸ್ನೇಹಿತ ಇರುವುದಕ್ಕೆ ಹೆಮ್ಮೆಯಾಗುತ್ತದೆ, ಆತನಂತಹ ಸ್ನೇಹಿತ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ರಾಜನ್ ಹೇಳಿದ್ದಾರೆ.