ಕನ್ನಡಿಗ ಡಾ.ಲಕ್ಷ್ಮಿಕಾಂತ ಮೂಕನಹಳ್ಳಿಗೆ ಅಮೆರಿಕಾದ ಪ್ರತಿಷ್ಠಿತ ಸಿ.ಎ.ಹಜೆನ್ಟೆಗ್ಲೋ ಪ್ರಶಸ್ತಿ!

ಕರ್ನಾಟಕದ ಮೂಲದವರಾದ ಡಾ.ಲಕ್ಷ್ಮಿಕಾಂತ ಮೂಕನಹಳ್ಳಿ ಅವರಿಗೆ 2020 ನೇ ಸಾಲಿನ ಅಮೆರಿಕಾದ ಪ್ರತಿಷ್ಠಿತ ಸಿ. ಎ. ಹಜೆನ್ಟೆಗ್ಲೋ ಪ್ರಶಸ್ತಿ ದೊರೆತಿದೆ. 

Published: 01st May 2021 01:16 PM  |   Last Updated: 01st May 2021 01:16 PM   |  A+A-


Dr. Lakshmikant Mookanahalli

ಡಾ.ಲಕ್ಷ್ಮಿಕಾಂತ ಮೂಕನಹಳ್ಳಿ

Posted By : Srinivas Rao BV
Source : Online Desk

ಕನ್ನಡಿಗ ಡಾ.ಲಕ್ಷ್ಮಿಕಾಂತ ಮೂಕನಹಳ್ಳಿ ಅವರಿಗೆ 2020 ನೇ ಸಾಲಿನ ಅಮೆರಿಕಾದ ಪ್ರತಿಷ್ಠಿತ ಸಿ. ಎ. ಹಜೆನ್ಟೆಗ್ಲೋ ಪ್ರಶಸ್ತಿ ದೊರೆತಿದೆ. 

ಸಿ.ಎ. ಹಜೆನ್ಟೆಗ್ಲೋ ಪ್ರಶಸ್ತಿಯನ್ನ  ಅಮೆರಿಕ ASTM ಇಂಟರ್ನ್ಯಾಷನಲ್ (ಅಮೆರಿಕನ್ ಸೊಸೈಟಿ ಫಾರ್ ಟೆಸ್ಟಿಂಗ್& ಮೆಟೀರಿಯಲ್ಸ್) 1953 ರಿಂದಲೂ ಈ ಪ್ರಶಸ್ತಿಯನ್ನು ಕೊಡಮಾಡುತ್ತಿದೆ. 2020 ರಲ್ಲಿ ಡಾ. ಲಕ್ಷ್ಮೀಕಾಂತ ಮೂಕನಹಳ್ಳಿ ಅವರ- Boundary Effects in the Desiccation of Soil Layers with Controlled Environmental Conditions ಎಂಬ ಲೇಖನವನ್ನು ಗುರುತಿಸಿ ಪ್ರಶಸ್ತಿ ನೀಡಿ ಪೇಪರ್ ಆಫ್ outstanding ಮೆರಿಟ್ ಎಂದು ಘೋಷಿಸಿದೆ.

ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಲಕ್ಷ್ಮಿಕಾಂತ ಮೂಕನಹಳ್ಳಿಯವರು, ಎಂ ಎಸ್ ರಾಮಯ್ಯದಲ್ಲಿ  ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನ ಪಡೆದಿದ್ದಾರೆ. ನಂತರ ಕೆಆರ್ ಇಸಿ ಯಲ್ಲಿ ಜಿಯೋಟೆಕ್ನಾಲಿಜಿ ವಿಷಯದಲ್ಲಿ  ಎಂಟೆಕ್ ಪದವಿಯನ್ನ ಪಡೆದಿರುತ್ತಾರೆ. 

ಉನ್ನತ ವ್ಯಾಸಂಗಕ್ಕಾಗಿ ಬಾರ್ಸಿಲೋನಾಗೆ ತೆರಳಿದ ಲಕ್ಷ್ಮಿಕಾಂತ ಮೂಕನಹಳ್ಳಿಯವರು, ಅಲ್ಲಿನ ಪ್ರತಿಷ್ಠಿತ ಯೂನಿವೆರ್ಸಿಟಿ (ಯುಪಿಸಿ-ಯೂನಿವೆರ್ಸಿದಾದ್ ದೆ ಪಾಲಿಟೆಕ್ನಿಕ ದೆ ಕಾತಲೂನ್ಯ) ಇಂದ ಜಿಯೋಮೆಕ್ಯಾನಿಕ್ಸ್ ವಿಷಯದಲ್ಲಿ ಪಿಹೆಚ್ಡಿ ಪದವಿಯನ್ನ 2007ರಲ್ಲಿ ಪಡೆದರು.

ಪ್ಯಾರಿಸ್ ನಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಲಕ್ಷ್ಮಿಕಾಂತ ಮೂಕನಹಳ್ಳಿ ರಿಸೆರ್ಚ್ ಅಸ್ಸೊಸಿಯೆಟ್ ಆಗಿ ಪ್ಯಾರಿಸ್  ನಗರದ ಯೂನಿವೆರ್ಸಿಟಿಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದಾರೆ. ಆ ನಂತರ ಕಾರ್ಪೊರೇಟ್ ಜಗತ್ತಿಗೆ ಪ್ರವೇಶ ಮಾಡಿದ ಅವರು, ಲಂಡನ್ ನಗರದಲ್ಲಿ schlumberger ಎನ್ನುವ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸದ ನಂತರ ಸ್ಪೇನ್ ನ ದೈತ್ಯ ಆಯಿಲ್ ಅಂಡ್ ಗ್ಯಾಸ್ ಸಂಸ್ಥೆ ರೆಪ್ಸೊಲ್ ನಲ್ಲಿ ಹಂತ ಹಂತವಾಗಿ ಮೇಲಿನ ಸ್ಥರಕ್ಕೆ ಏರುತ್ತಾ ಇಲ್ಲಿಯವರೆಗೆ ಅಲ್ಲೇ ನೆಲೆಯೂರಿದ್ದಾರೆ. ಕಳೆದ 20 ವರ್ಷದಲ್ಲಿ ಜಗತ್ತಿನ ಎಲ್ಲಾ ಖಂಡಗಳನ್ನೂ ಸುತ್ತಿ ಅನುಭವವನ್ನ ಪಡೆದುಕೊಂಡಿದ್ದಾರೆ. ಕೆಲಸ ಸಲುವಾಗಿ ಮೂರು ವರ್ಷ ಅಮೆರಿಕಾದ ಟೆಕ್ಸಾಸ್ ನಲ್ಲಿ ನೆಲೆ ನಿಂತ ದಿನಗಳಲ್ಲಿ ಯೂನಿವೆರ್ಸಿಟಿ ಆಫ್ ಟೆಕ್ಸಾಸ್ & ಆಸ್ಟಿನ್ ನಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದಾರೆ. ಮರಳಿ ಸ್ಪೇನ್ ನ ರಾಜಧಾನಿ ಮ್ಯಾಡ್ರಿಡ್ ನಲ್ಲಿ ವಿಶ್ವ ವಿಖ್ಯಾತ ಎಸದೆ (ESADE ) ಬ್ಯಸಿನೆಸ್ಸ್ ಅಂಡ್ ಲಾ ಸ್ಕೂಲ್ ನಲ್ಲಿ ಉನ್ನತ ಮ್ಯಾನೇಜ್ಮೆಂಟ್ ಶಿಕ್ಷಣವನ್ನ ಪಡೆಯುತ್ತಾರೆ.

ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಲಕ್ಷ್ಮಿಕಾಂತ ಮೂಕನಹಳ್ಳಿಯವರ ವೃತ್ತಿಗೆ ಸಂಬಂಧ ಪಟ್ಟ ಒಟ್ಟು 78 ಲೇಖನಗಳು ಈ ವರೆಗೂ ಅಂತರ್ರಾಷ್ಟ್ರೀಯ ಮ್ಯಾಗಜಿನ್ ಗಳಲ್ಲಿ ಪ್ರಕಟವಾಗಿದೆ. ಇವರ ಹೆಸರಿನಲ್ಲಿ ಇಲ್ಲಿಯವರೆಗೆ 569 ಸೈಟೇಷನ್ ದಾಖಲಾಗಿದೆ. 12 ಪೇಟೆಂಟ್ ಕೂಡ ಲಕ್ಷ್ಮೀಕಾಂತ್ ಹೆಸರಿನಲ್ಲಿವೆ.

ಲಕ್ಷ್ಮಿಕಾಂತ ಮೂಕನಹಳ್ಳಿ ಹುಟ್ಟಿದ್ದು ಮೇ 1, 1977ರಲ್ಲಿ,  ಸಿರಾ ತಾಲೂಕಿನ ಹೊಸೂರು ಎನ್ನುವ ಕುಗ್ರಾಮದಲ್ಲಿ. ತಂದೆ ರಾಮಶೇಷ ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಇದ್ದರು. ತಾಯಿ ನಾಗಲಕ್ಷ್ಮಿ ಮನೆಯ ಭಾರವನ್ನ ಹೊತ್ತವರು. ಪ್ರಾಥಮಿಕ  ಶಿಕ್ಷಣದ ಮೊದಲ ಎರಡು ವರ್ಷಗಳನ್ನು ಹೊಸೂರಿನಲ್ಲಿ ಓದಿದ  ನಂತರ ಬೆಂಗಳೂರಿನ ದೇವನಹಳ್ಳಿಯ ಬಳಿಯ ವಿಜಯಪುರ ಎನ್ನುವ ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಪೀಣ್ಯ ಸರಕಾರಿ ಶಾಲೆಯಲ್ಲಿ ಪಡೆದಿದ್ದಾರೆ.
 
ಅಮೆರಿಕನ್ ಸೊಸೈಟಿ ಫಾರ್ ಟೆಸ್ಟಿಂಗ್ ಅಂಡ್ ಮೆಟೀರಿಯಲ್ಸ್ (ASTM )೧೯೦೨ ರಲ್ಲಿ  West Conshohocken, Pennsylvania, northwest of Philadelphia ದಲ್ಲಿ ಸ್ಥಾಪನೆಯಾಗುತ್ತದೆ. ಇದರ ಶಾಖೆಗಳು ಬೆಲ್ಜಿಯಂ , ಚೀನಾ , ಕೆನಡಾ , ವಾಷಿಂಗ್ಟನ್ ಮತ್ತು ಪೆರು ದೇಶಗಳಲ್ಲಿ ಇದೆ.

ಬಾಲ್ಯದಿಂದಲೂ ಗಣಿತ ಮತ್ತು ವಿಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿದ್ದ ಲಕ್ಷ್ಮೀಕಾಂತ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದದ್ದು ಕನ್ನಡದಲ್ಲಿ ಎನ್ನುವುದು ಗಮನಾರ್ಹ ಅಂಶ. ಬಾಲ್ಯದಲ್ಲಿ ಹೇಳಿಕೊಳ್ಳುವ ಯಾವ ಸೌಲಭ್ಯವೂ ಇಲ್ಲದೆ ಶ್ರೀಯುತರ ಇಲ್ಲಿನವರೆಗಿನ ಸಾಧನೆ ಹತ್ತಾರು ಕನ್ನಡಿಗರಿಗೆ ಪ್ರೇರಣೆಯಾಗಿದೆ.


Stay up to date on all the latest ವಿಶೇಷ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp