ತಾಯಿಗೆ ಕೋವಿಡ್-19 ಸೋಂಕು ದೃಢಪಟ್ಟ ಬಳಿಕ ಕೊರೋನಾ ಸೋಂಕಿತರಿಗೆ ಉಚಿತ ಸೇವೆ ನೀಡಲು ಆಟೋ ಚಾಲಕ ಮುಂದು

ಕೋವಿಡ್-19 ನಡುವೆ ಹಲವು ಮಂದಿ ಮುನ್ನೆಲೆ ಕಾರ್ಯಕರ್ತರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಪೈಕಿ ಕೊಡಗಿನ ಆಟೋಚಾಲಕ ಬಿ.ವಿ ಪ್ರಶಾಂತ್ ಕುಮಾರ್ ಸಹ ಒಬ್ಬರು.
ಆಟೋ ಡ್ರೈವರ್ ಪ್ರಶಾಂತ್
ಆಟೋ ಡ್ರೈವರ್ ಪ್ರಶಾಂತ್

ಮಡಿಕೇರಿ: ಕೋವಿಡ್-19 ನಡುವೆ ಹಲವು ಮಂದಿ ಮುನ್ನೆಲೆ ಕಾರ್ಯಕರ್ತರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಪೈಕಿ ಕೊಡಗಿನ ಆಟೋಚಾಲಕ ಬಿ.ವಿ ಪ್ರಶಾಂತ್ ಕುಮಾರ್ ಸಹ ಒಬ್ಬರು. 

ತಮ್ಮ ತಾಯಿಗೆ ಕೋವಿಡ್-19 ಸೋಂಕು ತಗುಲಿದ ಬಳಿಕ ಕೋವಿಡ್-19 ಸೋಂಕಿತರಿಗೆ ಉಚಿತವಾಗಿ ಆಟೋ ಸೇವೆಯನ್ನು ಒದಗಿಸುತ್ತಿದ್ದಾರೆ ಬಿ.ವಿ ಪ್ರಶಾಂತ್ ಕುಮಾರ್, ಈ ವರೆಗೂ 55  ಕೋವಿಡ್-19 ಸೋಂಕಿತರಿಗೆ ಈ ರೀತಿಯ ಉಚಿತ ಸೇವೆಯನ್ನು ಬಿ.ವಿ ಪ್ರಶಾಂತ್ ಕುಮಾರ್ ಒದಗಿಸಿದ್ದಾರೆ ಹಾಗೂ ಲಾಕ್ ಡೌನ್ ಅಂತ್ಯದ ವರೆಗೂ ಕೋವಿಡ್-19 ರೋಗಿಗಳಿಗೆ ಉಚಿತ ಸೇವೆ ನೀಡುವುದಾಗಿ ಪ್ರಶಾಂತ್ ಹೇಳಿದ್ದಾರೆ. 

ಶುಂಠಿಕೊಪ್ಪದ ನಿವಾಸಿ ಪ್ರಶಾಂತ್ ಅವರ ತಾಯಿ (65) ಒಂದು ತಿಂಗಳ ಹಿಂದೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಆಕೆಯ ಸ್ಥಿತಿ ಚಿಂತಾಜಕವಾಗಿತ್ತು. ಆಕೆಯನ್ನು ವೆಂಟಿಲೇಟರ್ ಫೆಸಿಲಿಟಿಯ ಮೂಲಕ ಮಡಿಕೇರಿಯಲ್ಲಿರುವ ಕೋವಿಡ್-19 ಆಸ್ಪತ್ರೆಗೆ ದಾಖಲಿಸಾಗಿತ್ತು. ಯಶಸ್ವಿ ಚಿಕಿತ್ಸೆಯ ನಂತರ ಆಕೆ ಮನೆಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದರು. ಈ ಅವಧಿಯಲ್ಲಿ ಹಲವು ಕೋವಿಡ್-19 ರೋಗಿಗಳ ಪರದಾಟವನ್ನು ಪ್ರಶಾಂತ್ ಗಮನಿಸಿದ್ದರು. 

"ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ಕೋವಿಡ್-19 ರೋಗಿಗಳು ಸಾರಿಗೆ ವ್ಯವಸ್ಥೆ ಸರಿ ಇಲ್ಲದೇ ಪರದಾಡುತ್ತಿರುವುದನ್ನು ಗಮನಿಸಿದ್ದೆ. ನಂತರ ನನ್ನ ಮನೆಯ ಬಳಿಯೇ ಇದ್ದ ಶಾಲೆಯ ಟೀಚರ್ ಹಾಗೂ ಆಕೆಯ ಕುಟುಂಬ ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿತ್ತು. ಆದರೆ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಸಹಾಯಕ್ಕೆ ಬರಲಿಲ್ಲ. ನಾನು ಕೊನೆಗೆ ಆಸ್ಪತ್ರೆಗೆ ಕರೆದೊಯ್ದೆ" ಎಂದು ಪ್ರಶಾಂತ್ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅಗತ್ಯವಿರುವವರಿಗೆ ಸೇವೆ ಲಭ್ಯವಾಗುವಂತೆ ಮಾಡಲು ತಮ್ಮ ಮೊಬೈಲ್ ನಂಬರ್ ನ್ನು ವಾಟ್ಸ್ ಆಪ್ ಗ್ರೂಪ್ ಗಳಿಗೆ ಹಂಚಿ ಏ.30 ರಿಂದ ಉಚಿತ ಸೇವೆಗಳನ್ನು ಪ್ರಾರಂಭಿಸಿದರು. 

ಶುಂಠಿಕೊಪ್ಪದ ಪಂಚಾಯಿತಿ ಸದಸ್ಯ ಸುನಿಲ್ ಹಾಗೂ ಪಿಡಿಒ ವೇಣುಗೋಪಾಲ್ ಅವರ ಸಹಾಯದಿಂದ ಕರ್ಫ್ಯೂ ಅವಧಿಯಲ್ಲಿ ಸಂಚರಿಸಲು ಪ್ರಶಾಂತ್ ಐಡಿ ಕಾರ್ಡ್ ಮತ್ತು ಪಾಸ್ ನ್ನು ಪಡೆದಿದ್ದಾರೆ. ಒಂದು ದಿನ ನಾನು ರಾತ್ರಿ 11 ರ ವೇಳೆಗೆ ಓರ್ವ ವ್ಯಕ್ತಿ ಮಡಿಕೇರಿ ಮಾರ್ಕೆಟ್ ಪ್ರದೇಶದ ಬಳಿ ನಿತ್ರಾಣರಾಗಿ ಇರುವುದನ್ನು ಕಂಡೆ, ಆತನ ಹೆಸರು ಹನೀಫ್. ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ಆತನಿಗೆ ಕೋವಿಡ್-19 ಇರುವುದು ದೃಢಪಟ್ಟಿತು. ಆದರೆ ಆತ ಕೋವಿಡ್-19 ನಿಂದ ಮೃತಪಟ್ಟ. ಮತ್ತೋರ್ವ ರೋಗಿ ಸುಬ್ಬು ಎಂಬಾತನನ್ನು ಆಸ್ಪತ್ರೆಗೆ ಕೊರೆದೊಯ್ದಿದ್ದೆ ಆತನೂ ಕೋವಿಡ್-19 ನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ತಮ್ಮ ನೆನಪುಗಳನ್ನು ಪ್ರಶಾಂತ್ ಹಂಚಿಕೊಂಡಿದ್ದಾರೆ. 

ಶುಂಠಿಕೊಪ್ಪದ ಆಸ್ಪತ್ರೆಯ ವೈದ್ಯ ಜೀವನ್ ಪ್ರಶಾಂತ್ ಗೆ ಪಿಪಿಇ ಕಿಟ್ ಗಳನ್ನು ನೀಡುತ್ತಾರೆ, ಪಂಚಾಅಯತ್ ಸದಸ್ಯ ಸುನಿಲ್, ಸಾಮಾಜಿಕ ಕಾರ್ಯಕರ್ತ ರಾಕೇಶ್ ಹಾಗೂ ಶುಂಠಿಕೊಪ್ಪ ರಕ್ಷಣ ವೇದಿಕೆ ಸದಸ್ಯರು ಪ್ರಶಾಂತ್ ಅವರ ಸಮಾಜಮುಖಿ ಕಾರ್ಯಕ್ಕೆ ಆರ್ಥಿಕ, ಪೆಟ್ರೋಲ್ ನೆರವು ನೀಡುವ ಮೂಲಕ ಬೆಂಬಲವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com