ತ್ರಿಶೂರ್: ಕೇರಳದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ಮಧ್ಯೆ ವಿವಾಹ ಇತ್ಯಾದಿ ಶುಭ ಸಮಾರಂಭಗಳನ್ನು ಮಾಡುವುದು, ಅತಿಥಿಗಳನ್ನು ಕರೆಯುವುದು ಕಷ್ಟವಾಗಿದೆ. ಈ ಮಧ್ಯೆ ಕುಟುಂಬಸ್ಥರೊಬ್ಬರು ತಮ್ಮ ಸಾಕುನಾಯಿಗೆ ಮದುವೆ ಮಾಡಿಸಿ ಸುದ್ದಿಯಾಗಿದ್ದಾರೆ.
ಶೆಲ್ಲಿ ಪಿ ಕೆ ಮತ್ತು ಕುಟುಂಬಸ್ಥರ ಮುದ್ದಿನ ನಾಯಿಗಳಾದ ಆಸಿಡ್ ಎಂಬ ಸಾಕುನಾಯಿಗೆ ಜಾಹ್ನವಿ ಎಂಬ ಮತ್ತೊಂದು ಮುದ್ದು ಸಾಕುನಾಯಿಯನ್ನು ಮದುವೆ ಮಾಡಿಸಲಾಗಿದೆ. ಮಲಯಾಳಂ ಮಾಸ ಕನ್ನಿಯ ಶುಭ ಮುಹೂರ್ತದಲ್ಲಿ ಪುಣ್ಣಯುರ್ಕ್ಕುಲಮ್ ನಲ್ಲಿ ಕುನ್ನತುರ್ಮನ ಎಂಬಲ್ಲಿ ನಾಯಿಗಳಿಗೆ ಮದುವೆ ನಡೆದಿದೆ.
ಪೂರ್ವಾಹ್ನ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ಶುಭ ಮುಹೂರ್ತ ನೋಡಿಕೊಂಡು ಮನೆಯವರು ಮದುವೆ ಮಾಡಿಸಿದ್ದು ನಂತರ ಭರ್ಜರಿ ಭೋಜನವನ್ನೂ ನೀಡಿದ್ದರು. ಮದುವೆ ಸಮಾರಂಭದಲ್ಲಿ ನಾಯಿಗಳ ನೆಚ್ಚಿನ ಊಟ ಚಿಕನ್ ಬಿರಿಯಾನಿಯನ್ನು ಅತಿಥಿಗಳಿಗೆ ಉಣಬಡಿಸಲಾಗಿದೆ. ಆಸಿಡ್ ಮತ್ತು ಜಾಹ್ನವಿಯೊಟ್ಟಿಗೆ ಕುಳಿತು ಅತಿಥಿಗಳು ಚಿಕನ್ ಬಿರಿಯಾನಿಯನ್ನು ಸವಿದಿದ್ದಾರೆ.
ಎರಡು ವರ್ಷದ ಆಸಿಡ್ ಶೆಲ್ಲಿ ಮತ್ತು ಅವರ ಪತ್ನಿ, ಮಕ್ಕಳಿಗೆ ಕುಟುಂಬಸ್ಥರ ಹಾಗೆಯೇ ಇದೆ. ನನ್ನ ಪೋಷಕರಿಗೆ ನಾನು ಮತ್ತು ಸೋದರ ಅರ್ಜುನ್ ನಂತರ ಆಸಿಡ್ ಮೂರನೇ ಮಗನಂತೆ. ಆತನಿಗೆ ವಯಸ್ಸಾಗುತ್ತಿದ್ದಂತೆ ಜೋಡಿಯನ್ನು ಹುಡುಕುತ್ತಿದ್ದ ಪೋಷಕರು ತಕ್ಕ ಜೋಡಿ ಹೆಣ್ಣು ನಾಯಿಯನ್ನು ಹುಡುಕಿ ಮದುವೆ ಮಾಡಿಸಿದ್ದಾರೆ ಎಂದು ಶೆಲ್ಲಿಯವರ ಪುತ್ರ ಆಕಾಶ್ ಹೇಳುತ್ತಾರೆ. ಕಳೆದೊಂದು ವರ್ಷದಿಂದ ತಮ್ಮ ನಾಯಿ ಆಸಿಡ್ ಗೆ ಸೂಕ್ತ ಹೆಣ್ಣು ನಾಯಿಯನ್ನು ದಂಪತಿ ಹುಡುಕುತ್ತಿದ್ದರಂತೆ.
ನಾಯಿಯ ತರಬೇತುದಾರ ಮೂಲಕ ಜಾಹ್ನವಿ ಎಂಬ ಹೆಣ್ಣು ನಾಯಿಯನ್ನು ಕರೆತಂದು ವಿವಾಹ ಮಾಡಿಸಿದ್ದಾರೆ. ಮಲಯಾಳಂ ತಿಂಗಳು ಕನ್ನಿ ನಾಯಿಗಳ ಸಂಯೋಗ ತಿಂಗಳಿಗೆ ಪ್ರಶಸ್ತ ಎಂದು ಹೇಳಲಾಗುತ್ತಿದ್ದು ಈ ಸಮಯದಲ್ಲಿಯೇ ಸೂಕ್ತವೆಂದು ಮದುವೆ ಮಾಡಿಸಿದ್ದಾರೆ. ಅನೇಕರು ಏಕೆ ನಾಯಿಗಳಿಗೆ ಮದುವೆ ಮಾಡಿಸುತ್ತಿದ್ದೀರಿ ಎಂದು ಕೇಳಿದರು, ನಮಗೆ ನಮ್ಮ ಕುಟುಂಬಸ್ಥರ ರೀತಿಯೇ, ನಮ್ಮ ಪೋಷಕರಿಗೆ ಈ ನಾಯಿಗಳ ಮದುವೆಯಿಂದ ಖುಷಿಯಾಗಿದೆ ಎಂದು ಆಕಾಶ್ ಮತ್ತು ಅರ್ಜುನ್ ಹೇಳುತ್ತಾರೆ.
ನಾಯಿಗಳ ವಿವಾಹದ ವಿಡಿಯೊ ಮಾಡಿಸಿದ್ದು ಕುನ್ನತುರ್ಮನ ವಿವಾಹ ಸಮಾರಂಭ ವೈರಲ್ ಆಗಿದೆ. ಮದುವೆಯ ನಂತರ ಜಾಹ್ನವಿಯನ್ನು ಮನೆಗೆ ತುಂಬಿಸಿಕೊಂಡಿದ್ದು ಇನ್ನು ಮುಂದೆ ಶೆಲ್ಲಿ ಕುಟುಂಬದಲ್ಲಿ ಇಬ್ಬರು ನಾಯಿಗಳು ಒಟ್ಟಿಗೆ ಜೀವನ ನಡೆಸಲಿವೆ.
Advertisement