ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಬೆಂಗಳೂರು ಹುಡುಗ ರಿಕಿ ಕೇಜ್ ಉಭಯ ಕುಶಲೋಪರಿ ಸಾಂಪ್ರತ: ಸಂದರ್ಶನ
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ದಿಕ್ ದಿಗಂತ ದಾಟಿ ಅಂತರಿಕ್ಷವನ್ನೇ ಮುಟ್ಟಿದರೂ ಆತನಿಗೆ ನೆಮ್ಮದಿ ಸಿಗುವುದು ಮನೆಯೆಂಬೊ ಬೇರಿನಲ್ಲಿ. ಬೆಂಗಳೂರಿನಲ್ಲಿದ್ದುಕೊಂಡೇ ನೂರಾರು ದೇಶಗಳಿಗೆ ಸುತ್ತಾಡುತ್ತಾ ಭಾರತದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಹರಡುತ್ತಿರುವ ಆಲದ ಮರ ರಿಕಿ ಕೇಜ್. ಅವರ ಸಂದರ್ಶನ ಕನ್ನಡಪ್ರಭ ಡಾಟ್ ಕಾಂನಲ್ಲಿ
Published: 23rd September 2021 12:50 PM | Last Updated: 23rd September 2021 07:08 PM | A+A A-

ರಿಕಿ ಕೇಜ್
ಸಂದರ್ಶನ- ನಿರೂಪಣೆ: ಹರ್ಷವರ್ಧನ್ ಸುಳ್ಯ
ಬೆಂಗಳೂರು: ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ದಿಕ್ ದಿಗಂತ ದಾಟಿ ಅಂತರಿಕ್ಷವನ್ನೇ ಮುಟ್ಟಿದರೂ ಆತನಿಗೆ ನೆಮ್ಮದಿ ಸಿಗುವುದು ಮನೆಯೆಂಬೊ ಬೇರಿನಲ್ಲಿ. ಬೆಂಗಳೂರಿನಲ್ಲಿದ್ದುಕೊಂಡೇ ನೂರಾರು ದೇಶಗಳಿಗೆ ಸುತ್ತಾಡುತ್ತಾ ಭಾರತದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಹರಡುತ್ತಿರುವ ಆಲದ ಮರ ರಿಕಿ ಕೇಜ್. ಜಗತ್ಪ್ರಸಿದ್ಧ ಸಂಗೀತಗಾರರು, ರಾಜಕಾರಣಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರೂ ರಿಕಿ ಗೆ ಎಚ್ ಎಸ್ ವೆಂಕಟೇಶಮೂರ್ತಿ, ಬಿ ಆರ್ ಲಕ್ಷ್ಮಣ್ ರಾವ್, ರಮೇಶ್ ಅರವಿಂದ್ ಜೊತೆ ಬೆರೆಯುವುದೇ ಖುಷಿ. ಗಿರೀಶ್ ಕಾಸರವಳ್ಳಿ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಅವರ ಪರಮೋಚ್ಛ ಗುರಿ. ಇಂತಿಪ್ಪ ಬೆಂಗಳೂರು ಹುಡುಗ ರಿಕಿ ಕನ್ನಡಪ್ರಭ ಡಾಟ್ ಕಾಮ್ ಗೆ ಸಂದರ್ಶನ ನೀಡಿದ್ದಾರೆ. ಓವರ್ ಟು ರಿಕಿ...

ನಾನು ಹುಟ್ಟಿದ್ದು ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ. ನನಗೆ 8 ವರ್ಷವಾಗಿದ್ದಾಗ ಅಪ್ಪನಿಗೆ ಭಾರತಕ್ಕೆ ಮರಳುವ ಮನಸ್ಸಾಗಿ ನಮ್ಮ ಕುಟುಂಬ ಅಮೆರಿಕ ದೇಶ ತೊರೆದಿತ್ತು. ನಮ್ಮದು ಮಾರ್ವಾಡಿ ಕುಟುಂಬ. ಭರತದಲ್ಲಿ ಯಾವ ಭಾಗದಲ್ಲಿ ನೆಲೆಯೂರಬೇಕೆಂಬುದರ ಬಗ್ಗೆ ಅಪ್ಪ ತುಂಬಾ ತಲೆ ಖರ್ಚು ಮಾಡಿದರು. ಭಾರತದ ಉದ್ದಗಲವನ್ನೂ ಅರಿತಿದ್ದ ಅಪ್ಪನಿಗೆ ಬೆಂಗಳೂರು ಇಷ್ಟವಾಯಿತು. ಇಲ್ಲಿ ನಮ್ಮ ನೆಂಟರಿಷ್ಟರು ಯಾರೂ ಇರಲಿಲ್ಲ ಎಂಬುದೂ ಒಂದು ಕಾರಣ! ಅಂದಿನಿಂದ ಬೆಂಗಳೂರು ನನ್ನೂರಾಯಿತು.
ನಾನು ಬೆಂಗಳೂರು ಹುಡುಗ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆ. ವಿದ್ಯಾರ್ಥಿ ಭವನ್ ದೋಸೆ, ಏರ್ ಲೈನ್ಸ್ ಹೋಟೆಲ್, ಗಾಂಧಿ ಬಜಾರ್ ಎಲ್ಲವೂ ನನಗಿಷ್ಟ. ಬೆಂಗಳೂರು ಹಿಂದಿನಂತಿಲ್ಲ, ಹಸಿರು ಕಡಿಮೆಯಾಗಿದೆ. ನನ್ನ ಶಾಲಾ ಶಿಕ್ಷಣ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್ ನಲ್ಲಾಯಿತು. ದಂತ ವೈದ್ಯಕೀಯ ಓದಿದ್ದು ಬೆಂಗಳೂರಿನ ಆಕ್ಸ್ ಫರ್ಡ್ ಡೆಂಟಲ್ ಸೈನ್ಸಸ್ ಕಾಲೇಜಿನಲ್ಲಿ. ಬೆಂಗಳೂರು ಎಂದಿಗೂ ನನ್ನೂರು.
ಅಪ್ಪನೊಡನೆ ಮಾಡಿಕೊಡ ಒಪ್ಪಂದ

ಅಪ್ಪನಿಗೆ ನಾನು ವೈದ್ಯನಾಗಬೇಕೆಂದು ಆಸೆ. ನಮ್ಮ ಕುಟುಂಬದ ಮೂರು ತಲೆಮಾರುಗಳಲ್ಲಿಯೂ ವೈದ್ಯರಾಗಿದ್ದರು. ಹೀಗಾಗಿ ಅದನ್ನು ಅಲಿಖಿತ ಸಂಪ್ರದಾಯ ಎಂಬಂತೆ ನನ್ನ ತಲೆಗೆ ತುಂಬಲಾಗಿತ್ತು. ಆದರೆ ನನಗೆ ವೈದ್ಯ ವೃತ್ತಿ ಇಷ್ಟವಿರಲಿಲ್ಲ. ಸಂಗೀತವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕೆಂಬುದು ನನ್ನಾಸೆ. ಆದರೆ ಆ ಕಾಲದಲ್ಲಿ ಸಂಗೀತವನ್ನು ವೃತ್ತಿಯಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಮನೆಯವರನ್ನು ಒಪ್ಪಿಸುವುದು ಕಷ್ಟವಾಯಿತು. ಕಡೆಗೆ ಅನಿವಾರ್ಯವಾಗಿ ಅಪ್ಪನ ಜೊತೆ ಒಂದು ಒಪ್ಪಂದ ಮಾಡಿಕೊಂಡೆ. ಅಪ್ಪನ ಆಸೆಯಂತೆ ದಂತವೈದ್ಯಕೀಯ ಶಿಕ್ಷಣ ಪಡೆಯುತ್ತೇನೆ.
ನಂತರ ಒಂದು ವರ್ಷ ಸಂಗೀತವನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಪ್ರಯತ್ನ ಪಡುತ್ತೇನೆ. ಒಂದು ವೇಳೆ ಪ್ರಯತ್ನ ಕೈಹಿಡಿಯದಿದ್ದರೆ ಅಪ್ಪನ ಮಾತಿನಂತೆಯೇ ಕ್ಲಿನಿಕ್ ಇಟ್ಟುಕೊಂಡು ಡೆಂಟಿಸ್ಟ್ ಆಗುವುದು. ಆದರೆ ನನ್ನ ಅದೃಷ್ಟಕ್ಕೆ ಹಾಗಾಗಲಿಲ್ಲ.
ಬಿಡುವಿದ್ದಾಗ ಜಾಹೀರಾತುಗಳಿಗೆ ಸಂಗೀತ
ನನ್ನ ಕಾಲೇಜು ದಿನಗಳಲ್ಲೇ ನಾನು ಅಲ್ಲಿಲ್ಲಿ ಸಂಗೀತ ನುಡಿಸುತ್ತಿದ್ದೆ. ಬಿಡುವಿನ ವೇಳೆಯಲ್ಲಿ ಜಾಹೀರಾತುಗಳಿಗೆ ಸಂಗೀತ ಸಂಯೋಜಿಸಿಕೊಡುತ್ತಿದ್ದೆ. ಇದರಿಂದಾಗಿ ಸಂಗೀತವನ್ನು ವೃತ್ತಿಯನ್ನಾಗಿ ಸ್ವೀಕರಿಸುವುದು ಸುಲಭವಾಯಿತು. ಇದುವರೆಗೂ 3500 ಜಿಂಗಲ್ಸ್ ಗಳನ್ನು ಸಂಯೋಜಿಸಿದ್ದೇನೆ. ಜಾಹೀರಾತುಗಳಲ್ಲಿ ಕೇಳಿಬರುವ ಮ್ಯೂಸಿಕ್ ಅನ್ನು ಜಿಂಗಲ್ಸ್ ಎನ್ನುತ್ತಾರೆ. ವೊಡಾಫೋನ್, ಏರ್ ಟೆಲ್, ಮೆಕ್ ಡೊನಾಲ್ಡ್ಸ್, ಟಿವಿಎಸ್ ಹೀಗೆ ನೂರಾರು ಸಂಸ್ಥೆಗಳ ಜಾಹೀರಾತುಗಳಿಗೆ ಸಂಗೀತಗಾರನಾಗಿ ಕೆಲಸ ಮಾಡಿದ್ದೇನೆ.
ಬಾಲಿವುಡ್ ಎಂದರೆ ಅಲರ್ಜಿ

ಬಹುತೇಕ ಸಂಗೀತಗಾರರು ಬಾಲಿವುಡ್ ಅವಕಾಶಗಳಿಗಾಗಿ ಕಾಯುತ್ತಾರೆ. ಅಲ್ಲಿ ಅವಕಾಅಶ ಸಿಕ್ಕರೆ ಜೀವನ ಪಾವನ ಎಂಬಂತೆ ತಿಳಿಯುತ್ತಾರೆ. ಅದರೆ ನಿಜಕ್ಕೂ ಸಂಗೀತವನ್ನು ಪ್ರೀತಿಸುವವನು ಹಾಗೆ ಮಾಡುವುದಿಲ್ಲ. ನಿಜವಾದ ಸಂಗೀತಕ್ಕೆ ಎಲ್ಲಿದ್ದರೂ ಬೆಲೆಯಿದೆ. ಬಾಲಿವುಡ್ ನಲ್ಲಿ ಪಾಪ್ಯುಲರ್ ಸಂಸ್ಕೃತಿ ಬೇರೂರಿದೆ. ಜನರಿಗೆ ಮೆಚ್ಚುಗೆಯಾಗುವಂಥ ಸಂಗೀತ ಸಂಯೋಜಿಸುವುದು ಅಲ್ಲಿನವರ ಪರಮೋಚ್ಛ ಗುರಿ. ಆದರೆ ಸಂಗೀತ ಮೊದಲು ಸಂಯೋಜಕನ ಆತ್ಮಕ್ಕೆ ಹತ್ತಿರವಾಗಬೇಕು. ನನಗೆ ಅದು ತುಂಬಾ ಮುಖ್ಯ. ನಾನು ನನಗಾಗಿ ಸಂಗೀತ ನುಡಿಸುತ್ತೇನೆ. ನಮಗೆ ಆತ್ಮತೃಪ್ತಿ ಸಿಕ್ಕುವುದು ಮುಖ್ಯ.
ಗಿರೀಶ್ ಕಾಸರವಳ್ಳಿ ಸರ್ ಜೊತೆ ಕೆಲಸ ಮಾಡುವಾಸೆ

ನಾನು ವಿದೇಶಿ ಸಿನಿಮಾಗಳನ್ನು ಹೆಚ್ಚು ವೀಕ್ಷಿಸುತ್ತೇನೆ. ಜಗತ್ತಿನ ಅನೇಕ ನಿರ್ದೇಶಕರುಗಳ ವೈಶಿಷ್ಟ್ಯವನ್ನು ನಾನು ಬಲ್ಲೆ. ಆದರೆ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿದ ನಿರ್ದೇಶಕ ಎಂದರೆ ಕನ್ನಡದ ಗಿರೀಶ್ ಕಾಸರವಳ್ಳಿ. ಅವರ ಎಲ್ಲಾ ಸಿನಿಮಾಗಳನ್ನು ಹತ್ತು ಹಲವು ಬಾರಿ ನೋಡಿದ್ದೇನೆ. ಆತ ದೊಡ್ಡ ಸಿನಿಮಾಕರ್ಮಿ. ಅವರ ಸಿನಿಮಾಗಳು ಸತ್ವಯುತವಾಗಿರುತ್ತವೆ. ಅವರು ತೆಗೆಯುವ ಒಂದೊಂದು ಚಿತ್ರಿಕೆ(ಶಾಟ್)ಗಳಲ್ಲೂ ಸಂಗೀತವಿದೆ, ಲಾಲಿತ್ಯವಿದೆ. ಜೀವನದಲ್ಲಿ ಒಮ್ಮೆಯಾದರೂ ಗಿರೀಶ್ ಸರ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಅದುವೇ ನನ್ನ ಸೌಭಾಗ್ಯ. ಇನ್ನು ನಟ ರಮೇಶ್ ಅರವಿಂದ್ ನನಗೆ ಆಪ್ತರು. ನಾನು ಸಂಗೀತ ನಿರ್ದೇಶಕನಾಗಿರುವ ಮೂರೂ ಕನ್ನಡ ಸಿನಿಮಾಗಳು ರಮೇಶ್ ಅವರದೇ. ಆಕ್ಸಿಡೆಂಟ್, ಕ್ರೇಝಿ ಕುಟುಂಬ ಮತ್ತು ವೆಂಕಟ ಇನ್ ಸಂಕಟ. ರಮೇಶ್ ನನಗೆ ಅತ್ಯಾಪ್ತ ಗೆಳೆಯರು. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಒಳ್ಲೆಯ ಹ್ಯೂಮನ್ ಬೀಯಿಂಗ್. ಅಲ್ಲದೆ ನನಗೆ ಅಮೆರಿಕದ ಗಾಯಕ ಫೆರೆಲ್ ವಿಲಿಯಮ್ಸ್ ಮತ್ತು ಹಾಲಿವುಡ್ ನ ಸುಪ್ರಸಿದ್ಧ ಸಂಗೀತ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಜೊತೆ ಕೆಲಸ ಮಾಡುವಾಸೆ.
ಸಂಗೀತ ಎಂದರೆ ಏನು?

ಸಂಗೀತ ಎಂದರೆ ಕೇವಲ ತಾಳ ವಾದ್ಯ ಗಾಯನವಲ್ಲ, ಪ್ರಕೃತಿಯಲ್ಲಿ ಕೇಳಿ ಬರುವ ಸದ್ದುಗಳೆಲ್ಲವೂ ಸಂಗೀತವೇ. ಸೂಕ್ಷ್ಮವಾಗಿ ಒಂದು ನಿಮಿಷ ಮೌನಕ್ಕೆ ಶರಣಾಗಿ ಕಿವಿಗೊಟ್ಟು ಕೇಳಿದರೆ ನಮ್ಮ ಸುತ್ತಮುತ್ತಲೇ ಸಂಗೀತವನ್ನು ಕೇಳಬಹುದು. ಪ್ರಾಣಿಪಕ್ಷಿಗಳ ಮಾತುಗಳೂ ಸಂಗೀತವೇ. ಪ್ರಕೃತಿಯಲ್ಲೇ ಲಯವಿದೆ. ಹೀಗಾಗಿ ಸಂಗೀತ ಅನಾದಿ ಕಾಲದಿಂದಲೂ ಇದೆ. ಹಿಂದಿನ ತಲೆಮಾರುಗಳ ಜನರ ವಿಭಿನ್ನ ಬಗೆಯ ವಾದ್ಯಗಳನ್ನು ಬಳಸಿ ಸಂಗೀತ ಸೃಷ್ಟಿಸುತ್ತಿದ್ದರು. ಅವು ಪ್ರಕೃತಿ ಮತ್ತು ಮನುಷ್ಯನ ನಡುವೆ ಸಂಪರ್ಕ ಸೇತುವಂತಿದ್ದವು. ಅಲ್ಲಿಂದ ನಾವು ಬಹಳ ದೂರ ಕ್ರಮಿಸಿ ಬಂದಿದ್ದೇವೆ ಅನ್ನಿಸುತ್ತದೆ. ಆದರೆ ಶ್ರೇಷ್ಟ ಸಂಗೀತ ಈಗಲೂ ಆತ್ಮಕ್ಕೆ ಮತ್ತು ಪ್ರಕೃತಿಗೆ ಹತ್ತಿರವಾಗುತ್ತದೆ.
ವರ್ಲ್ಡ್ ಮ್ಯೂಸಿಕ್ ಎಂದರೇನು?
ಜಗತ್ತಿನ ಪ್ರತಿಯೊಂದು ಸ್ಥಳದಲ್ಲೂ ಸಂಗೀತ ತನ್ನದೇ ಆದ ಪ್ರಕಾರವನ್ನು ಮೈಗೂಡಿಸಿಕೊಂಡಿರುತ್ತದೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ. ಆಯಾ ಪರಿಸರ, ಸಂಸ್ಕೃತಿಗೆ ತಕ್ಕಂತೆ ಅಲ್ಲಿನ ಸಂಗೀತ ವಾದ್ಯಗಳು, ಹಾಡುಗಳು ಬದಲಾಗುತ್ತಿರುತ್ತದೆ. ಜಗತ್ತಿನ ಇತರೆ ಸಂಸ್ಕೃತಿಗಳಲ್ಲಿ ಬಳಸುವ ಸಂಗೀತ ವಾದ್ಯಗಳು, ಹಾಡುಗಾರರನ್ನು ಒಂದೇ ಸೂರಿನಡಿ ಸೇರಿಸಿ ಸಂಯೋಜಿಸಿದ ಸಂಗೀತ ವರ್ಲ್ಡ್ ಮ್ಯೂಸಿಕ್ ಎಂದು ಕರೆಸಿಕೊಳ್ಳುತ್ತದೆ.
ಎಲ್ಲಿಯ ಕಿರಿಬಾತಿ ಎಲ್ಲಿಯ ಬೆಂಗಳೂರು

ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಪಾಲ್ಗೊಂಡಿದ್ದಾಗ ಕಿರಿಬಾತಿ ಎನ್ನುವ ಪೆಸಿಫಿಕ್ ದ್ವೀಪರಾಷ್ಟ್ರದ ಅಧ್ಯಕ್ಷರು ಹವಾಮಾನ ಬದಲಾವಣೆ ಕುರಿತು ಮಾತನಾಡಿದ್ದರು. ಜಾಗತಿಕ ತಾಪಮಾನ ಏರಿಕೆಯಾದರೆ ಮೊದಲು ಮುಳುಗುವುದು ತನ್ನ ದೇಶ. ದಯವಿಟ್ಟು ನನ್ನ ಪುಟ್ಟ ದೇಶವನ್ನು ಮುಳುಗಿಸದಿರಿ ಎಂದು ಮನವಿ ಮಾಡಿಕೊಂಡರು. ನನಗೆ ಪೆಚ್ಚಾಯಿತು. ನಾವು ಜಾಗತಿಕ ತಾಪಮಾನ ಎಂದರೆ ಜಗತ್ತಿನ ನೀರಿನ ಮಟ್ಟ ಏರಿಕೆಯಾಗಬಹುದು, ಅತಿವೃಷ್ಟಿ ಅನಾವೃಷ್ಟಿಗಳಾಗಬಹುದು. ಹೇಗಿದ್ದರೂ ಇಂಥಾ ವಿಕೋಪಗಳು ಜರುಗುತ್ತಲೇ ಇರುತ್ತವೆ ಎಂದು ನಿರ್ಲಕ್ಷ್ಯ ತೋರುತ್ತೇವೆ. ಆದರೆ ಕಿರಿಬಾತಿ ನಂಥ ಪುಟ್ಟ ದೇಶವೊಂದು ನಮ್ಮೆಲ್ಲರ ತಪ್ಪಿನಿಂದ ಮುಳುಗುತ್ತದೆ ಎಂದು ಊಹಿಸಿಕೊಂಡರೆ ನಮ್ಮ ಅಪರಾಧದ ಅರಿವಾಗುತ್ತದೆ. ನಾನು ಆ ದೇಶಕ್ಕೆ ಭೇಟಿ ನೀಡಿ ಅಲ್ಲಿಯೇ ವಾರಗಟ್ಟಲೆ ಕಳೆದು ಅಲ್ಲಿನ ಸಂಗೀತ ಅಧ್ಯಯನ ನಡೆಸಿ ಆ ದೇಶದ ಕುರಿತಾಗಿ ಸಂಗೀತ ಸಂಯೋಜಿಸಿ ಜಗತ್ತಿನ ಗಮನ ಸೆಳೆದಿದ್ದೆ. ಕಿರಿಬಾತ್ ಅಧ್ಯಕ್ಷರು ನನಗೀಗ ಆಪ್ತರು. ಹಿಂದೊಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕಿರಿಬಾತಿ ಅಧ್ಯಕ್ಷರನ್ನು ಬೆಂಗಳೂರಿಗೆ ಕರೆತಂದಿದ್ದೆ. ಸಂಗೀತ ಯಾವ ರೀತಿ ದೇಶಗಳನ್ನು ಒಂದು ಮಾಡುತ್ತದೆ ಎನ್ನುವುದಕ್ಕೆ ಇದೊಳ್ಳೆ ಉದಾಹರಣೆ.
ಯುನೆಸ್ಕೊ ಕರುಣೆಯ ರಾಯಭಾರಿಯಾಗಿದ್ದು

ಗ್ರ್ಯಾಮಿ ವಿಜೇತ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಎಂದು ನನ್ನನ್ನು ಜನರು ಗುರುತಿಸುತ್ತಾರೆ. ಅದು ಸಂತೋಷವೇ. ಆದರೆ ನನ್ನ ಉದ್ದೇಶ, ನನ್ನ ಸಂಗೀತದ ಉದ್ದೇಶ ಸಂತಸವನ್ನು, ಶಾಂತಿಯನ್ನು ಹರಡುವುದು. ಈ ಕಾರಣಕ್ಕೆ ಯುನೆಸ್ಕೊ ಸಂಸ್ಥೆ ನನ್ನನ್ನು ಕರುಣೆಯ ರಾಯಭಾರಿಯನ್ನಾಗಿ (Ambassador Of Kindness) ಮಾಡಿತ್ತು. ಸಂಗೀತದ ಮೂಲಕ ಜಗತ್ತನ್ನು ಒಂದು ಮಾಡಬೇಕು. ದ್ವೇಷ ಬೀಜವನ್ನು ಕಿತ್ತೊಗೆದು ಸಹೋದರತ್ವವನ್ನು ಎಲ್ಲರಲ್ಲೂ ತುಂಬಬೇಕು ಎನ್ನುವುದು ನನ್ನ ಧ್ಯೇಯ. ನನ್ನ ಎರಡು ಜಗತ್ಪ್ರಸಿದ್ಧ ಮ್ಯೂಸಿಕ್ ಆಲ್ಬಂಗಳ ಹೆಸರುಗಳೇ ಅದಕ್ಕೆ ಸಾಕ್ಷಿ.. ''ವಿಂಡ್ಸ್ ಆಫ್ ಸಂಸಾರ'' ಮತ್ತು ''ಶಾಂತಿ ಸಂಸಾರ''. ಸಂಸಾರ ಎಂದು ನಾನು ಹೆಸರಿಟ್ಟಿದ್ದರ ಹಿಂದೆ ಕಾರಣವಿದೆ. ಸಂಸಾರ ಎನ್ನುವ ಪದಕ್ಕೆ ವಿಶಾಲ ಅರ್ಥವಿದೆ. ಜಗತ್ತೇ ಒಂದು ಕುಟುಂಬ ಎನ್ನುವ ಸಂದೇಶವಿದೆ. ಸಂಗೀತದ ಮೂಲಕ ಕಡೆಯ ತನಕವೂ ಆ ಕೆಲಸ ಮುಂದುವರಿಸುತ್ತೇನೆ.