ಖುಷಿ ಸುದ್ದಿ: ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆ ಏರಿಕೆ

ವನ್ಯಜೀವಿ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.
ಹಿಮಚಿರತೆ
ಹಿಮಚಿರತೆ
Updated on

ಚಂಡೀಗಢ: ವನ್ಯಜೀವಿ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.

ದೇಶದಲ್ಲಿ ಅಳಿವಿನಂಚಿನಲ್ಲಿದ್ದ ಬಿಗ್ ಕ್ಯಾಟ್ಸ್ ಸಂತತಿ ಇದೀಗ ಕ್ರಮೇಣ ಏರಿಕೆಯತ್ತ ಸಾಗಿದ್ದು, ಹಿಮಚಿರತೆಗಳ ಕುರಿತು ನಡೆದ ಮೊದಲ ಅಧ್ಯಯನದಲ್ಲಿ ಅವುಗಳ ಸಂಖ್ಯೆ ಏರಿಕೆಯಾಗಿರುವ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಜಿಲ್ಲೆ ಲಾಹೌಲ್-ಸ್ಪಿತಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸರ್ವೆಗಾಗಿ ನೇಮಕವಾಗಿದ್ದ ತಜ್ಞರ ತಂಡ ಈ ಕುರಿತು ಅಧ್ಯಯನ ನಡೆಸಿ ಇದೀಗ ಹಿಮಚಿರತೆಗಳ ಸಂಖ್ಯೆ ಏರಿಕೆಯಾಗಿರುವ ಕುರಿತು ಮಹತ್ವದ ಮಾಹಿತಿ ನೀಡಿದೆ. 

ಈ ಹಿಂದೆ ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ ಹಿಮಚಿರತೆಗಳ ಉಪಸ್ಥಿತಿ ಇದೀಗ ಲಾಹೌಲ್-ಸ್ಪಿತಿಯಿಂದ ನೆರೆಯ ಕಿನ್ನೌರ್ ಮತ್ತು ಪಾಂಗಿ ಪ್ರದೇಶಗಳಿಗೂ ವಿಸ್ತರಿಸಿದೆ ಎನ್ನಲಾಗಿದೆ. ಬುಧವಾರ, ಅತಿ ಎತ್ತರದ ಶೀತ ಮರುಭೂಮಿಯಲ್ಲಿ ಕಿಬ್ಬರ್ ಪ್ರದೇಶದ ಚಿಚಾಮ್ ಗ್ರಾಮದಲ್ಲಿ ಹಿಮಚಿರತೆ ಕಾಣಿಸಿಕೊಂಡಿತ್ತು. ಇದು ಹಾಲಿ ಋತುವಿನ ಮೊದಲ ದೃಶ್ಯವಾಗಿದೆ. ಮೈಸೂರು ಮೂಲದ ನೇಚರ್ ಕನ್ಸರ್ವೇಶನ್ ಫೌಂಡೇಶನ್ (ಎನ್‌ಸಿಎಫ್) ಸಹಾಯದಿಂದ ಹಿಮಾಚಲ ಪ್ರದೇಶದ ವನ್ಯಜೀವಿಗಳ ಕುರಿತು ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದ್ದು, ಪ್ರಸ್ತುತ ಹಿಮ ಚಿರತೆಯ ಸಂಖ್ಯೆ 52 ರಿಂದ 73 ರ ನಡುವೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ. ಹಿಮಾಚಲ ಪ್ರದೇಶದ ಅರಣ್ಯ ಅಧಿಕಾರಿಗಳು ಈ ಅಧ್ಯಯನಕ್ಕೆ ಬರೊಬ್ಬರಿ ನಾಲ್ಕು ವರ್ಷಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 

ಈ ಹಿಮ ಚಿರತೆಗಳ ಪ್ರಮುಖ ಪ್ರದೇಶವೆಂದರೆ ಟ್ರಾನ್ಸ್-ಹಿಮಾಲಯನ್ ಪ್ರದೇಶದ ಶೀತ ಮರುಭೂಮಿ. ಹಿಮ ಚಿರತೆ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿದೆ ಎಂದು ಅಧ್ಯಯನವು ತೋರಿಸುತ್ತದೆ. ಹಿಮಾಚಲದ ಮುಖ್ಯ ವನ್ಯಜೀವಿ ವಾರ್ಡನ್ ರಾಜೀವ್ ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದು, ಪ್ರಾಣಿಗಳ ಆವಾಸಸ್ಥಾನವನ್ನು ಸುಧಾರಿಸಲು, ಪರಿಸರ ವಿಜ್ಞಾನವನ್ನು ಹೆಚ್ಚಿಸಲು ಮತ್ತು ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ಅರಣ್ಯ ಇಲಾಖೆ ಪ್ರಯತ್ನಗಳನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಹಿಮಚಿರತೆಗಳು ನೀರು ಕುಡಿಯಲು ಮತ್ತು ಅವುಗಳ ಬೇಟೆಗಾಗಿ ಕೆಳಗೆ ಬರುತ್ತಿರುವಂತೆ ಇತ್ತೀಚಿನ ತಿಂಗಳುಗಳಲ್ಲಿ ಸುಮಾರು 15 ದೃಶ್ಯಗಳನ್ನು ಅರಣ್ಯ ಇಲಾಖೆ ಗಮನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮ ಚಿರತೆಯ ಹೆಚ್ಚಿದ ದೃಶ್ಯಗಳು ಸಂರಕ್ಷಣೆ ಮತ್ತು ರಕ್ಷಣೆ ಮತ್ತು ಬೇಟೆಯ ನೆಲೆಯ ಲಭ್ಯತೆಯ ಉತ್ತಮ ಸಂಕೇತಗಳಾಗಿವೆ ಎಂದು ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಲಾಹೌಲ್‌ನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ದಿನೇಶ್ ಶರ್ಮಾ ಮಾತನಾಡಿ, ಹಿಮ ಚಿರತೆಗಳ ಸಂಖ್ಯೆಯ ಅಧ್ಯಯನವು ಟ್ರಯಲ್ ಮ್ಯಾಪಿಂಗ್, ಉಪಗ್ರಹ ಸಮೀಕ್ಷೆ, ಸೈನ್ ಸಮೀಕ್ಷೆ ಮತ್ತು ಇತರ ತಂತ್ರಗಳನ್ನು ಒಳಗೊಂಡಿದೆ. "ಈ ಪ್ರದೇಶದಲ್ಲಿ ಹಿಮಚಿರತೆಗಳ ಬೇಟೆಯ ವ್ಯಾಪ್ತಿ ಸಾಕಷ್ಟು ಇದೆ ಎಂದು ಅಧ್ಯಯನವು ಸೂಚಿಸುತ್ತದೆ. ಪ್ರವಾಸಿಗರು ಮತ್ತು ಸ್ಥಳೀಯರು ಕಾಡು ಬೆಕ್ಕುಗಳನ್ನು ಅಥವಾ ಹಿಮಚಿರತೆಗಳನ್ನು ಓಡಿಸಬಾರದು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನದಿಂದ ಅವರು ದೂರವಿರಬೇಕು. ಅವರು ತಮ್ಮ ನೈಜ ಸ್ಥಳವನ್ನು ಸಾಮಾಜಿಕ ಮಾಧ್ಯಮ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾನ್ಯ ಅನುಮತಿಯಿಲ್ಲದೆ ಹಂಚಿಕೊಳ್ಳಬಾರದು. ಚಿತ್ರೀಕರಣವನ್ನೂ ತಪ್ಪಿಸಬೇಕು' ಎಂದು ಶರ್ಮಾ ಹೇಳಿದ್ದಾರೆ.

‘ಸುರಕ್ಷಿತ ಹಿಮಾಲಯ ಪ್ರಾಜೆಕ್ಟ್’ ಅಡಿಯಲ್ಲಿ ಪರಿಸರ ಸಚಿವಾಲಯ ಮತ್ತು ಹಿಮಾಚಲ ವನ್ಯಜೀವಿ ಇಲಾಖೆಯು ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಮಾದರಿಯನ್ನು ಜಾರಿಗೆ ತರುತ್ತಿದೆ ಎಂದು ಮೂಲಗಳು ತಿಳಿಸಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com