ಮುರಿದ ದೇವರ ಮೂರ್ತಿ, ಒಡೆದ ದೇವರ ಫೋಟೋಗಳ ವೈಜ್ಞಾನಿಕ ವಿಲೇವಾರಿ; ಬೆಳಗಾವಿ ಮೂಲದ ವೀರೇಶ್ ಹಿರೇಮಠ ವಿಶಿಷ್ಠ ಕಾರ್ಯ

ಮನೆಗೆ ಒಳಿತಾಗಲಿ ಎಂದು ದೇವರ ಮೂರ್ತಿ, ಫೋಟೋಗಳನ್ನು ಇಟ್ಟು ಪೂಜೆ ಮಾಡುವುದು ಭಾರತದಲ್ಲಿ ಸಾಮಾನ್ಯ. ಈ ಮೂರ್ತಿ ಹಾಗೂ ಫೋಟೋಗಳಿಗೆ ಸಾಕಷ್ಟು ಭಕ್ತಿ-ಭಾವದಿಂದ ಪೂಜೆ ಮಾಡಲಾಗುತ್ತದೆ...
ವೀರೇಶ್ ಹಿರೇಮಠ
ವೀರೇಶ್ ಹಿರೇಮಠ

ಬೆಳಗಾವಿ: ಮನೆಗೆ ಒಳಿತಾಗಲಿ ಎಂದು ದೇವರ ಮೂರ್ತಿ, ಫೋಟೋಗಳನ್ನು ಇಟ್ಟು ಪೂಜೆ ಮಾಡುವುದು ಭಾರತದಲ್ಲಿ ಸಾಮಾನ್ಯ. ಈ ಮೂರ್ತಿ ಹಾಗೂ ಫೋಟೋಗಳಿಗೆ ಸಾಕಷ್ಟು ಭಕ್ತಿ-ಭಾವದಿಂದ ಪೂಜೆ ಮಾಡಲಾಗುತ್ತದೆ. ಆದರೆ, ಇದೇ ಮೂರ್ತಿ, ಫೋಟೋಗಳು ಛಿದ್ರಗೊಂಡಾಗ ಅವುಗಳನ್ನು ಮರಗಳ ಬುಡದಲ್ಲಿ, ಕಾಲುದಾರಿಗಳ ಮೂಲೆಗಳಲ್ಲಿ, ವಿದ್ಯುತ್ ಕಂಬಗಳ ತಳದಲ್ಲಿ, ನದಿಯ ದಡದಲ್ಲಿ ಬಿಸಾಡುವುದುಂಟು. ಕೆಲವೊಮ್ಮೆ ಕೆಲವರು ಹರಿಯುವ ನದಿಗೂ ಇವುಗಳನ್ನು ಎಸೆಯುತ್ತಾರೆ. 

ಇದರಿಂದ ಹಲವಾರು ವರ್ಷಗಳ ಕಾಲ ಪೂಜಿಸಿದ ದೇವರಿಗೆ ಅಪಮಾನ ಮಾಡಿದಂತಾಗುತ್ತಿದೆ. ಸಾಕಷ್ಟು ಜನರಿಗೆ ಈ ಮೂರ್ತಿಗಳು, ಫೋಟೋಗಳನ್ನು ವೈಜ್ಞಾನಿಕವಾಗಿ ಹೇಗೆ ವಿಲೇವಾರಿ ಮಾಡಬೇಕೆಂಬುದು ತಿಳಿದಿಲ್ಲ. ಇದೇ ಇದಕ್ಕೆ ಕಾರಣವಾಗಿದೆ. 

ಈ ನಿಟ್ಟಿನಲ್ಲಿ ಬೆಳಗಾವಿ ಮೂಲದ 47 ವರ್ಷದ ವ್ಯಕ್ತಿಯೊಬ್ಬರು ಈ ಫೋಟೋಗಳು ಹಾಗೂ ವಿಗ್ರಹಗಳನ್ನು ವೈಜ್ಞಾನಿಕವಾಗಿ ಹೇಗೆ ವಿಲೇವಾರಿ ಮಾಡಬೇಕೆಂಬ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಜನರಿಗೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 

ಬೆಳಗಾವಿ ನಗರದಿಂದ 16 ಕಿಮೀ ದೂರದಲ್ಲಿರುವ ರಾಜಹಂಸಗಡ ಗ್ರಾಮದವರಾದ ವೀರೇಶ್ ಹಿರೇಮಠ (47) ಅವರು ಬೆಳಗಾವಿಯ ವಿಜಯ ಆರ್ಥೋ ಮತ್ತು ಟ್ರಾಮಾ ಸೆಂಟರ್ (VOTC) ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿ ಸಮಯ ಮುಗಿದ ನಂತರ ರಸ್ತೆಗಳಲ್ಲಿ ಬಿದ್ದಿರುವ ದೇವರ ಫೋಟೋ, ಮೂರ್ತಿಗಳ ಸಂಗ್ರಹಿಸಿ ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದಾರೆ. 

ಇಲ್ಲಿಯವರೆಗೆ, ಹಿರೇಮಠ ಅವರು ಕನಿಷ್ಠ ಐದು ಟ್ರಕ್‌ಲೋಡ್‌ಗಳ ಫೋಟೋ ಫ್ರೇಮ್‌ಗಳು ಮತ್ತು ವಿಗ್ರಹಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

ರೈತ ಕುಟುಂಬದಲ್ಲಿ ಜನಿಸಿದ ವೀರೇಶ್ ಅವರು ಶಾಲಾ ಮುಗಿದ ಬಳಿಕ ಜಾನುವಾರುಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆಬದಿಯಲ್ಲಿ ಎಸೆದ ಫೋಟೋ ಫ್ರೇಮ್‌ಗಳು ಮತ್ತು ಆಮಂತ್ರಣ ಪತ್ರಗಳಿಂದ ದೇವರುಗಳ ಚಿತ್ರಗಳನ್ನು ಸಂಗ್ರಹಿಸುವ ಕೆಲಸ ಆರಂಭಿಸಿದ್ದರು. ಈ ಕಾರ್ಯಾಚರಣೆ ಇಂದಿಗೂ ಮುಂದುವರೆಸಿದ್ದು, ತಮಗೆ ಸಿಕ್ಕ ಫೋಟೋಗಳನ್ನು ತಮ್ಮ ಕೈಲಾದಷ್ಟು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 

ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ 2020 ರಲ್ಲಿ ವಿಧಿಸಲಾದ ಲಾಕ್‌ಡೌನ್ ಸಮಯ ವೀರೇಶ್ ಅವರಿಗೆ ಮತ್ತಷ್ಟು ಪ್ರೇರಣೆ ನೀಡಿದೆ. ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಂಡ ವೀರೇಶ್ ಅವರು ‘ಸರ್ವ ಲೋಕಸೇವಾ ಫೌಂಡೇಶನ್’ ಎಂಬ ಬ್ಯಾನರ್‌ನಡಿಯಲ್ಲಿ ತಮ್ಮ ಗೆಳೆಯರೊಂದಿಗೆ ಸೇರಿ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು. 

ಜನರೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡ ವೀರೇಶ್ ಅವರು, ರಸ್ತೆಬದಿಯಲ್ಲಿ ಎಲ್ಲಿಯೇ ದೇವರ ಫೋಟೋ ಮೂರ್ತಿಗಳು ಬಿದ್ದಿದ್ದರೂ ಅವುಗಳ ಫೋಟೋಗಳನ್ನು ಹಂಚಿಕೊಳ್ಳುವಂತೆ ತಿಳಿಸಿದ್ದರು. ಇದರಂತೆ ವಾರಾಂತ್ಯದ ದಿನಗಳಲ್ಲಿ ಪೋಟೋಗಳನ್ನು ಸಂಗ್ರಹಿಸುವ ಕೆಲಸ ಮಾಡಿದ್ದರು. ಸಂಗ್ರಹಿಸಿದ ಫೋಟೋಗಳನ್ನು ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಯಲ್ಲೋಜಿರಾವ್ ಪಾಟೀಲ್ ಮಾಲೀಕತ್ವದ ಜಮೀನಿನಲ್ಲಿ ಸಂಗ್ರಹಿಸಿಡುತ್ತಿದ್ದಾರೆ. 

ಫೋಟೋ ತಯಾರಕರ ಸಹಾಯ ಪಡೆದುಕೊಂಡು ವೀರೇಶ್ ಅವರು ಫೋಟೋಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಫೋಟೋಗಳಲ್ಲಿ ಗಾಜು, ಕಾರ್ಡ್ಬೋರ್ಡ್, ಮರದ ತುಂಡುಗಳು, ದೇವರುಗಳ ಫೋಟೋಗಳನ್ನು ಪ್ರತ್ಯೇಕಿಸಿ, ಮರ ಮತ್ತು ಹಲಗೆಯನ್ನು ಬಡವರಿಗೆ ಆಹಾರವನ್ನು ಬೇಯಿಸಲು ಸೌದೆಯಾಗಿ ನೀಡುತ್ತಿದ್ದಾರೆ. ಇನ್ನು ಗಾಜನ್ನು ಮರುಬಳಕೆಗಾಗಿ ಫೌಂಡರಿಗಳಿಗೆ ನೀಡುತ್ತಿದ್ದಾರೆ. ಇನ್ನು ದೇವರ ಚಿತ್ರಗಳನ್ನು ಸ್ವಾಮಿಗಳು ಮತ್ತು ಪುರೋಹಿತರು ಕೆಲವು ಪೂಜಾಕೈಂಕರ್ಯಗಳನ್ನು ಮಾಡಿದ ನಂತರ ಸುಡಲಾಗುತ್ತಿದೆ.

ರಸ್ತೆಯಲ್ಲಿ ಬಿಸಾಡುವ ಬದಲು ಫೋಟೋಗಳನ್ನು ಲೋಕಸೇವಾ ಫೌಂಡೇಶನ್'ಗೆ ನೀಡುವಂತೆ ಬೋರ್ಡ್ ಗಳನ್ನು ಕೂಡ ಅಲ್ಲಲ್ಲಿ ವೀರೇಶ್ ಅವರು ಹಾಕುತ್ತಿದ್ದಾರೆ. 

ವೀರೇಶ್ ಈ ಕಾರ್ಯಕ್ಕೆ ಕೆಲ ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋಕ್ಷ ಪಡೆದುಕೊಳ್ಳಲು ಜನರು ದೇವರಿಗೆ ಪೂಜೆ ಮಾಡುತ್ತಿದ್ದಾರೆ. ಆದರೆ, ವೀರೇಶ್ ದೇವರಿಗೇ ಮೋಕ್ಷ ನೀಡುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 

ವೀರೇಶ್ ಅವರ ಈ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಸಾಕಷ್ಟು ಜನರು, ಇವರ ಲೋಕಸೇವಾ ಫೌಂಡೇಶನ್ ನ್ನು ಸಂಪರ್ಕಿಸುತ್ತಿದ್ದು, ಛಿದ್ರಗೊಂಡ ಫೋಟೋಗಳನ್ನು ನೀಡುತ್ತಿದ್ದಾರೆ. ಇನ್ನು ಉತ್ತಮ ಸ್ಥಿತಿಯಲ್ಲಿರುವ ಫೋಟೋಗಳನ್ನು ವೀರೇಶ್ ಅವರು ತಮ್ಮ ವಾಟ್ಸಾಪ್ ನಲ್ಲಿ ಪ್ರಕಟಿಸುತ್ತಿದ್ದು, ಬಯಸುವವರು ಉಚಿತವಾಗಿ ಇದನ್ನು ಪಡೆದುಕೊಳ್ಳಬಹುದಾಗಿದೆ. 

"ದೇವ ಭೂಮಿ' ಸ್ಥಾಪಿಸುವ ಗುರಿ ಇಟ್ಟುಕೊಂಡಿರುವ ವೀರೇಶ್
ಬೆಳಗಾವಿಯ ಮಧ್ಯಭಾಗದಲ್ಲಿ 'ದೇವ ಭೂಮಿ' ಸ್ಥಾಪಿಸಲು ಚಿಂತನೆ ನಡೆಸಿದ್ದೇನೆ, ಇಲ್ಲಿ ಯಾರು ಬೇಕಾದರೂ ಬಳಸಿದ ಫೋಟೋಗಳನ್ನು ಇಡಬಹುದು. ನಾವು ಕೆಲವು ಉತ್ತಮ ಗುಣಮಟ್ಟದ ಫೋಟೋ ಫ್ರೇಮ್‌ಗಳನ್ನು ಸ್ವೀಕರಿಸುತ್ತಿದ್ದಂತೆ, ಕೆಲವರು ಅವುಗಳಿಗಾಗಿ ಕರೆ ಮಾಡುತ್ತಾರೆ. ಘಂಟಾ ಗಡಿ ಕಾರ್ಯಕ್ರಮ ಆರಂಭಿಸಿ, ವಾರಾಂತ್ಯದ ದಿನವಾದ ಭಾನುವಾರ ಜನರ ಮನೆ ಬಾಗಿಲಿನಿಂದಲೇ ಫೋಟೋ ಗಳ ಸಂಗ್ರಹಿಸುವ ಕಾರ್ಯಕ್ರಮ ನಡೆಸುವ ಯೋಜನೆಗಳಿವೆ ಎಂದು ವೀರೇಶ್ ಹೇಳಿದ್ದಾರೆ. 

ಪವಿತ್ರ ಮರಗಳ ನೆಡುವ ಕಾರ್ಯಾಚರಣೆ
ವೀರೇಶ್ ಮತ್ತು ಅವರ ತಂಡವು 'ಬಿಲ್ವ ಪತ್ರ', ಬಂಗಾಳ ಕ್ವಿನ್ಸ್, ಬನ್ನಿ ಮರ, ಶಾಮಿ, ಆಲದ, ಅಶ್ವತ್ಥ ಮರ ಮತ್ತು ಬೇವಿನ ಮರಗಳಂತಹ ಪವಿತ್ರ ವೃಕ್ಷಗಳ ಸಸಿಗಳನ್ನು ನೆಡುವ ಕಾರ್ಯವನ್ನೂ ಮಾಡುತ್ತಿದೆ. 

ನಿರ್ವಹಣೆ ಸುಲಭವಾಗುವ ಹಿನ್ನೆಲೆಯಲ್ಲಿ ವೀರೇಶ್ ಅವರ ತಂಡ ದೇವಸ್ಥಾನಗಳಲ್ಲಿ ಕೇವಲ ಒಂದು ಅಥವಾ ಎರಡು ಸಸಿಗಳನ್ನು ನೆಡುವ ಕಾರ್ಯ ಮಾಡುತ್ತಿದೆ. 

ಈ ಮರಗಳನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ವೀರೇಶ್, ಹಿಂದೂ ಧರ್ಮದಲ್ಲಿ ಇವುಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮರಗಳನ್ನು ತೆಗೆದರೆ ದೇವರ ಶಾಪಕ್ಕೆ ಜನರು ಭಯಪಡುತ್ತಾರೆ. ಈ ವರ್ಷ 1008 ‘ಬಿಲ್ವ ಪತ್ರ’ ಸಸಿಗಳನ್ನು ನೆಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com