ಕಲಿಕೆಯ ತಾಣ ಸೊನ್ನ ದಾಸೋಹ ವಿರಕ್ತ ಮಠ: ಅಕ್ಷರ ಜೋಳಿಗೆ ಮೂಲಕ ಶಾಲೆಗಾಗಿ ಭೂಮಿ ಖರೀದಿ, ಶಿವಾನಂದ ಸ್ವಾಮೀಜಿ ನೇತೃತ್ವ

ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ದಾಸೋಹ ವಿರಕ್ತ ಮಠದ ಪೀಠಾಧಿಪತಿ  ಶಿವಾನಂದ ಸ್ವಾಮೀಜಿ ಅವರಿಗೆ ಧಾರ್ಮಿಕ ಚಟುವಟಿಕೆ, ಸಾಮಾಜಿಕ ಬದ್ಧತೆಗಳ ನಡುವೆ ಶಿಕ್ಷಣ ಯಾವಾಗಲೂ ಅತ್ಯುನ್ನತವಾಗಿದೆ.
ಶಾಲಾ ಕಾರ್ಯಕ್ರಮದಲ್ಲಿ ಶಿವಾನಂದ ಸ್ವಾಮೀಜಿ
ಶಾಲಾ ಕಾರ್ಯಕ್ರಮದಲ್ಲಿ ಶಿವಾನಂದ ಸ್ವಾಮೀಜಿ

ಕಲಬುರಗಿ: ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ದಾಸೋಹ ವಿರಕ್ತ ಮಠದ ಪೀಠಾಧಿಪತಿ  ಶಿವಾನಂದ ಸ್ವಾಮೀಜಿ ಅವರಿಗೆ ಧಾರ್ಮಿಕ ಚಟುವಟಿಕೆ, ಸಾಮಾಜಿಕ ಬದ್ಧತೆಗಳ ನಡುವೆ ಶಿಕ್ಷಣ ಯಾವಾಗಲೂ ಅತ್ಯುನ್ನತವಾಗಿದೆ.

ಅಜ್ಞಾನವನ್ನು ಹೋಗಲಾಡಿಸುವ, ಸಮುದಾಯಗಳನ್ನು ಸಬಲಗೊಳಿಸುವ ಮತ್ತು ಜೀವನದಲ್ಲಿ ಅಸಂಖ್ಯಾತ ಸವಾಲುಗಳನ್ನು ಎದುರಿಸಲು ಅನುವು ಮಾಡಿಕೊಡುವ ಸಾಧನವೆಂದರೆ ಶಿಕ್ಷಣ. ಸರಿಯಾದ ಶಿಕ್ಷಣ ಒದಗಿಸುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ. ಅಂತಹ ಶಾಲೆಗಾಗಿ ಭೂಮಿ ಪಡೆಯುವಲ್ಲಿ ಸ್ವಾಮೀಜಿ ಯಶಸ್ವಿಯಾಗಿದ್ದಾರೆ.

ನೂತನ ಪ್ರೌಢಶಾಲೆ ನಿರ್ಮಿಸಬೇಕೆಂಬ  ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದ ವಿದ್ಯಾರ್ಥಿಗಳ ಬೇಡಿಕೆಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ.  ಹೊಸ ಸರ್ಕಾರಿ ಪ್ರೌಢಶಾಲೆ ನಿರ್ಮಾಣದ ಹೊಣೆ ಹೊತ್ತಿದ್ದ ಶಿವಾನಂದ ಸ್ವಾಮೀಜಿ  ಸೊನ್ನ ಗ್ರಾಮದಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದು, ಶಿಕ್ಷಣ ಸಂಸ್ಥೆಯ ಮೂಲಕ ಬಡವರಿಗೆ, ದಲಿತರಿಗೆ, ಆದಿವಾಸಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆಯಂತಹ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. 

ಅಫ್ಜಲ್ ಪುರ ತಾಲುೂಕಿನ ಘತ್ತರಗಾ  ಗ್ರಾಮದ ಭಕ್ತರ ಆಹ್ವಾನದ ಧಾರ್ಮಿಕ ಉಪನ್ಯಾಸ ನೀಡಲು ಅಕ್ಟೋಬರ್ ನಲ್ಲಿ ಅಲ್ಲಿಗೆ ಶಿವಾನಂದ ಸ್ವಾಮೀಜಿ ತೆರಳಿದ್ದಾಗ ಅಲ್ಲಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಗುಂಪೊಂದು ಸ್ವಾಮೀಜಿ ಅವರನ್ನು ಭೇಟಿ ನೀಡಿ,  ತಮ್ಮ ಶಾಲೆಯ ದುಸ್ಥಿತಿಯನ್ನು ವಿವರಿಸಿದ್ದರು. 

ಘತ್ತರಗಾ  ಭಾಗಮ್ಮ ದೇವಾಲಯ ಆವರಣದಲ್ಲಿರುವ ಶಾಲೆ ಯಾವಾಗ ಕುಸಿದು ಬೀಳುತ್ತದೆಯೋ ಎಂಬ ಆತಂಕದಲ್ಲಿಯೇ ಅಲ್ಲಿನ ವಿದ್ಯಾರ್ಥಿಗಳು ಭೀತಿಯಲ್ಲಿದ್ದರು. ಶಾಲೆ ದುರಸ್ಥಿಗೆ ಅನುದಾನದ ಅಗತ್ಯವಿತ್ತು. ಇದು ಧಾರ್ಮಿಕ ದತ್ತು ಇಲಾಖೆ ಅಧೀನದಲ್ಲಿದ್ದು, ಶಾಲೆ ದುರಸ್ಥಿ ಅಥವಾ ಪುನರ್ ನಿರ್ಮಾಣಕ್ಕೆ ಅವಕಾಶ ನೀಡಿರಲಿಲ್ಲ. ಸರ್ಕಾರ ಕೂಡಾ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಭೂಮಿಯನ್ನು ಖರೀದಿಸಿರಲಿಲ್ಲ. ಆದಾಗ್ಯೂ,  ಶಾಲೆಯನ್ನು ಸರ್ಕಾರಿ ಭೂಮಿಯಲ್ಲಿ ಅಥವಾ ದಾನವಾಗಿ ನೀಡಿದ ಭೂಮಿಯಲ್ಲಿ ನಿರ್ಮಿಸಬೇಕು ಎಂಬ ನಿಬಂಧನೆಯ ನೆರಳಿನಲ್ಲಿ ಭರವಸೆಯ ಮಿನುಗಿದೆ.  

ಅಕ್ಟೋಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗೆ ತಮ್ಮ ಸಂಕಟ ಹೇಳಿಕೊಳ್ಳಲು ವಿದ್ಯಾರ್ಥಿಗಳು ಘತ್ತರಗಾದಿಂದ ಕಲಬುರಗಿಯವರೆಗೆ ಸುಮಾರು 80 ಕಿಮೀ ಪಾದಯಾತ್ರೆ ಕೈಗೊಂಡಿದ್ದರು. ಆದರೆ ಅಧಿಕಾರಿಗಳು ತಡೆದರು ಆಗ ಕೊನೆಯದಾಗಿ ಸ್ವಾಮೀಜಿ ಅವರ ಬಳಿ ವಿದ್ಯಾರ್ಥಿಗಳು ಮನವಿ ಮಾಡಿದರು. 

<strong>ದಾಸೋಹ ವಿರಕ್ತ ಮಠದಲ್ಲಿನ ವಿದ್ಯಾರ್ಥಿಗಳು</strong>
ದಾಸೋಹ ವಿರಕ್ತ ಮಠದಲ್ಲಿನ ವಿದ್ಯಾರ್ಥಿಗಳು

ಅಕ್ಷರ ಜೋಳಿಗೆ:  ಶಿವಾನಂದ ಸ್ವಾಮೀಜಿ ಅವರು ಘತ್ತರಗಾದಲ್ಲಿ ತಮ್ಮ ಮಠದ ಮತ್ತೊಂದು ಬ್ರ್ಯಾಂಚ್ ತೆರೆಯಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಕಮಿಟಿಯೊಂದನ್ನು ರಚಿಸುವಂತೆ ಸ್ಥಳೀಯ ಜನರನ್ನು ಪ್ರೋತ್ಸಾಹಿಸುವುದರ ಜೊತೆಗೆ ಭೂಮಿ ಖರೀದಿಸಿ ಅದನ್ನು ಹೊಸ ಸರ್ಕಾರಿ ಶಾಲೆಗೆ ದಾನ ನೀಡಲು ಗ್ರಾಮಸ್ಥರಿಂದ ದೇಣಿಗೆ ಸಂಗ್ರಹವನ್ನು ಆರಂಭಿಸಿದರು. ಹತ್ತಿ ಬ್ಯಾಗ್ ವೊಂದನ್ನು ಇಟ್ಟುಕೊಂಡು ಜನರಿಂದ ಸ್ವಯಂ ಪ್ರೇರಿತವಾಗಿ ದೇಣಿಗೆಯನ್ನು ಸಂಗ್ರಹಿಸಿದರು. ಇದಕ್ಕೆ 'ಅಕ್ಷರ ಜೋಳಿಗೆ' ಎಂದು ಸ್ವಾಮೀಜಿ ಕರೆದರು.

ಅಲ್ಲದೇ ತಮ್ಮ ಮಠದಿಂದ ರೂ. 1 ಲಕ್ಷವನ್ನು ಸ್ವಾಮೀಜಿ ನೀಡಿದ್ದಾರೆ. ಕೇವಲ 1 ರೂ. ನೀಡಿದ್ದರೂ ಕೂಡಾ ಸಮಿತಿ ಸದಸ್ಯರು ರಶೀದಿ  ನೀಡುತ್ತಿದ್ದರು. ಹೀಗೆ ಕಮಿಟಿ 10 ದಿನಗಳಲ್ಲಿ ಜನರಿಂದ ರೂ. 61 ಲಕ್ಷ ಸಂಗ್ರಹಿಸಿತು. ಇದರಲ್ಲಿ ಘತ್ತರಗಾದಲ್ಲಿ ಮೂರು ಎಕರೆ ಜಮೀನು ಖರೀದಿಸಲಾಯಿತು. ತದನಂತರ ಅಫ್ಜಲ್ ಪುರ ಶಾಸಕ ಎಂ ವೈ ಪಾಟೀಲ್ ಒಂದು ಎಕರೆ ಜಮೀನು ಖರೀದಿಯೊಂದಿಗೆ ಹೊಸ ಶಾಲೆ ನಿರ್ಮಾಣಕ್ಕೆ ಪ್ರಯತ್ನಿಸಿದರು. ಅಲ್ಲದೇ ಘತ್ತರಗಾ ಭಾಗಮ್ಮ ದೇವಾಲಯ ಟ್ರಸ್ಟ್ ಕೂಡಾ ಸರ್ಕಾರಕ್ಕೆ ಭೂಮಿ ನೀಡಲು ಒಂದು ಎಕರೆಯನ್ನು ಖರೀದಿಸಲು ನಿರ್ಧರಿಸಿತು. 

2.5 ಎಕರೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕಮಿಟಿ ನವೆಂಬರ್ 21 ರಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಕ್ರೆಪ್ಪ ಗೌಡ ಅವರಿಗೆ ಹಸ್ತಾಂತರಿಸಿತು. ಸರ್ಕಾರಿ ಪ್ರೌಢ ಶಾಲೆಯ ಹೊಸ ಕಟ್ಟಡಕ್ಕೆ 'ಘತ್ತರಗಾ ಭಾಗಮ್ಮ ಅಕ್ಷರ ಜೋಳಿಗೆ ಪ್ರೌಢ ಶಾಲೆ' ಎಂದು ಹೆಸರಿಡುವಂತೆ ಕಮಿಟಿ ಡಿಡಿಪಿಐಗೆ ಬರೆದ ಪತ್ರದಲ್ಲಿ ಒತ್ತಾಯಿಸಿತ್ತು. 

ಜ್ಞಾನದ ಪ್ರಸಾರ:  ಶಿವಾನಂದ ಸ್ವಾಮೀಜಿ ಮುಖ್ಯಸ್ಥರಾಗಿರುವ ಶಿವಾನಂದ ಶಿವಯೋಗಿ ಗ್ರಾಮೀಣ ಜನ ಕಲ್ಯಾಣ ಸಂಸ್ಥೆ ಸೊನ್ನಾ ಗ್ರಾದಲ್ಲಿ ಐಟಿಐ ಸಂಸ್ಥೆ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಪ್ರಾಥಮಿಕ ಶಾಲೆ ಹೊರತುಪಡಿಸಿ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಮಠ ನಡೆಸುತ್ತಿದೆ. ಕೆಲ ವರ್ಷಗಳ ಹಿಂದೆ ಪ್ರಾಥಮಿಕ ಶಾಲೆ ಅನುದಾನಿತ ಶಾಲೆ ಆಯಿತು. ಅಲ್ಲಿರುವ ಸುಮಾರು 1,500 ವಿದ್ಯಾರ್ಥಿಗಳ ಪೈಕಿ, 600 ವಿದ್ಯಾರ್ಥಿಗಳು ದಲಿತ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿರಕ್ತ ಮಠ ಅವರಿಗೆ ಉಚಿತ ಹಾಸ್ಟೆಲ್ ಹಾಗೂ ಶಿಕ್ಷಣವನ್ನು ಒದಗಿಸುತ್ತಿದೆ. 

ಚೀಲಗಳಲ್ಲಿ ಆಹಾರ ಧಾನ್ಯ:  ಯುಗಾದಿಯಂದು ಶಿವಾನಂದ ಸ್ವಾಮೀಜಿ ಮತ್ತು ಅವರ ಶಿಷ್ಯರು ಸೊನ್ನ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮನೆಗಳಿಗೆ ತೆರಳಿ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಆಹಾರ ಸಂಗ್ರಹಕ್ಕಾಗಿ ಅವರು ಮೊದಲಿಗೆ  ದಲಿತರ ಬಾಗಿಲು ಬಡಿಯುತ್ತಿದ್ದರು. ಪ್ರತಿ ವರ್ಷ ಸಾಮೂಹಿಕ ವಿವಾಹ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮಠದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಭಕ್ತರಿಗೆ 50 ಗ್ರಾಂನಿಂದ ಒಂದು ಕ್ವಿಂಟಾಲ್ ವರೆಗಿನ ಧಾನ್ಯಗಳನ್ನು ಜನರು ಕೊಡುಗೆಯಾಗಿ ನೀಡುತ್ತಾರೆ. 

ಉಪವಾಸ ಸತ್ಯಾಗ್ರಹ: ಮಲ್ಲಾಬಾದ್ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಂದಿನ ಮುಖ್ಯಮಂತ್ರಿ ಧರಂ ಸಿಂಗ್ ಅವರ ಸರ್ಕಾರದ ಮೇಲೆ ಒತ್ತಡ ಹೇರಲು, ಶಿವಾನಂದ ಸ್ವಾಮಿ ಅವರು ಜೇವರ್ಗಿ ತಾಲೂಕಿನ ಇತರ ಕೆಲವು ಸ್ವಾಮಿಗಳೊಂದಿಗೆ 13 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.  ಸಿಂಗ್ ಸ್ಥಳಕ್ಕೆ ಭೇಟಿ ನೀಡಿದ ನಂತರವೇ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಯಿತು ಮತ್ತು ಅವರ ಬೇಡಿಕೆ ಈಡೇರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com