ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು!
ಜಾತಿ-ಧರ್ಮದ ಹೆಸರಿನಲ್ಲಿ ಹಗಜಗ್ಗಾಟಗಳು ನಡೆಯುತ್ತಿರುವ ನಡುವಲ್ಲೇ ಮೈಸೂರಿನಲ್ಲೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಘಟನೆಯೊಂದು ಸಮಾಜದ ಮುನ್ನೆಲೆಗೆ ಬಂದಿದೆ.
Published: 13th November 2022 02:14 PM | Last Updated: 14th November 2022 07:28 PM | A+A A-

ಸಂಗ್ರಹ ಚಿತ್ರ
ಮೈಸೂರು: ಜಾತಿ-ಧರ್ಮದ ಹೆಸರಿನಲ್ಲಿ ಹಗಜಗ್ಗಾಟಗಳು ನಡೆಯುತ್ತಿರುವ ನಡುವಲ್ಲೇ ಮೈಸೂರಿನಲ್ಲೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಘಟನೆಯೊಂದು ಸಮಾಜದ ಮುನ್ನೆಲೆಗೆ ಬಂದಿದೆ.
ಹಿಂದೂ ಮಹಿಳೆಯೊಬ್ಬರ ಅಂತ್ಯ ಸಂಸ್ಕಾರವನ್ನು ಮುಸ್ಲಿಂರು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಶಿವಮ್ಮ ಎಂಬ ಮಹಿಳೆ ಸುಮಾರು 30 ವರ್ಷದಿಂದಲೂ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದರು. ಆಕೆಗೆ ಮಗ, ಮಗಳು ಇದ್ದರೂ ಅವರೊಂದಿಗೆ ಹೋಗದೇ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದರು. ಮಹಿಳೆಯ ಶವಸಂಸ್ಕಾರ ಮಾಡಲು ಕುಟುಂಬಸ್ಧರು, ಸಂಬಂಧಿಕರಾರು ಇಲ್ಲದ ಕಾರಣ ವಿಷಯ ತಿಳಿದ ಒಂದಷ್ಟು ಮುಸ್ಲಿಮರು ಶಿವಮ್ಮ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲು ಮುಂದೆ ಬಂದಿದ್ದಾರೆ.
ಇದನ್ನೂ ಓದಿ: ಭಾವೈಕ್ಯತೆಯ ಸಂಗಮ: ಅನಾಥ ಹಿಂದೂ ಹುಡುಗಿಯ ಮದುವೆಗೆ ಮುಸ್ಲಿಂ ಸಮುದಾಯದ ಜನರಿಂದ ಆರ್ಥಿಕ ಸಹಾಯ
ಸುನ್ನಿ ಚೌಕದಿಂದ ಬನ್ನಿಮಂಟಪದ ಜೋಡಿ ತೆಂಗಿನ ಮರ ರುದ್ರಭೂಮಿಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಬಂದಿದ್ದಾರೆ. ಈ ವೇಳೆ ಮುಸ್ಲಿಂ ಬಾಂಧವರೇ ಶವಕ್ಕೆ ಹೆಗಲು ಕೊಟ್ಟಿದ್ದಾರೆ.
ಮುಸ್ಲಿಂ ಬಾಂಧವರು ಶಿವಮ್ಮಳ ಗುಡಿಸಲ ಮುಂದೆ ಪೆಂಡಾಲ್ ಹಾಕಿ ರಾತ್ರಿಯಿಡಿ ಜಾಗರಣೆ ಮಾಡುತ್ತಾ ಕಾವಲಿದ್ದರು. ಅಂತ್ಯಕ್ರಿಯೆ ನೆರವೇರಿಸಲು ನಗರದ ಸುನ್ನಿ ಚೌಕ್‌ನಿಂದ ಜೋಡಿ ತೆಂಗಿನ ಮರ ರುದ್ರಭೂಮಿಗೆ ಪಾರ್ಥಿವ ಶರೀರವನ್ನು ತರಲಾಗಿದೆ. ಈ ವೇಳೆ ಮುಸ್ಲಿಂ ಬಾಂಧವರೇ ಶವಕ್ಕೆ ಹೆಗಲು ಕೊಟ್ಟು ಹೊತ್ತು ಸಾಗಿದ್ದರು. ನಂತರ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮುಸ್ಲಿಮರು ಕೊನೆವರೆಗೂ ರುದ್ರಭೂಮಿಯಲ್ಲೇ ಇದ್ದು ಎಲ್ಲವನ್ನೂ ನೋಡಿಕೊಂಡಿದ್ದಾರೆ.
ಇದನ್ನೂ ಓದಿ: ಇದು ಹಿಂದು-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ: ಬೀದರ್ ನ ಅಷ್ಟೂರು ಜಾತ್ರೆಯಲ್ಲಿ ಒಟ್ಟಿಗೆ ಮಿಂದೆದ್ದ ಹಿಂದು-ಮುಸ್ಲಿಂ ಭಕ್ತರು
ಎಂಸಿಸಿ ಮಾಜಿ ಕಾರ್ಪೊರೇಟರ್ ಸುಹೇಲ್ ಬೇಗ್ ಮಾತನಾಡಿ, ಮಹಿಳೆಯ ಸಂಬಂಧಿಕರು ಸಿಗದಿದ್ದಾಗ ಮುಸ್ಲಿಮರು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದರು. 60ಕ್ಕೂ ಹೆಚ್ಚು ಮುಸ್ಲಿಂ ಯುವಕರು ಅಂತ್ಯಕ್ರಿಯೆ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ.