ಪರ್ವತ ಗುಡ್ಡವನ್ನು ಕಡಿದು ತಾವೇ ರಸ್ತೆ ನಿರ್ಮಿಸಿಕೊಂಡ ಒಡಿಶಾದ ಕೊರಾಪುಟ್ ನ ಬುಡಕಟ್ಟು ಗ್ರಾಮಸ್ಥರು!
ಒಡಿಶಾ ರಾಜ್ಯದ ಕೊರಾಪುಟ್‌ನ ಘಂಟ್ರಗುಡದ ಬಡ ಬುಡಕಟ್ಟು ನಿವಾಸಿಗಳು 'ಪರ್ವತ ಮನುಷ್ಯ' ದಶರತ್ ಮಾಂಝಿ ಅವರ ಬಗ್ಗೆ ಕೇಳದಿರಬಹುದು, ಆದರೆ ಅವರಂತೆ ತಮ್ಮ ರಸ್ತೆ ಸೌಲಭ್ಯ ಸಮಸ್ಯೆಯನ್ನು ಪರಿಹರಿಸಲು ಕಡಿದಾದ ಬೆಟ್ಟವನ್ನು ಕಡಿದು ತಾವೇ ರಸ್ತೆ ನಿರ್ಮಿಸಿದ್ದಾರೆ.
Published: 25th November 2022 02:02 PM | Last Updated: 25th November 2022 03:53 PM | A+A A-

ಗ್ರಾಮಸ್ಥರು ನಿರ್ಮಿಸಿದ ರಸ್ತೆ
ಕೊರಾಪುಟ್(ಒಡಿಶಾ): ಒಡಿಶಾ ರಾಜ್ಯದ ಕೊರಾಪುಟ್‌ನ ಘಂಟ್ರಗುಡದ ಬಡ ಬುಡಕಟ್ಟು ನಿವಾಸಿಗಳು 'ಪರ್ವತ ಮನುಷ್ಯ' ದಶರತ್ ಮಾಂಝಿ ಅವರ ಬಗ್ಗೆ ಕೇಳದಿರಬಹುದು, ಆದರೆ ಅವರಂತೆ ತಮ್ಮ ರಸ್ತೆ ಸೌಲಭ್ಯ ಸಮಸ್ಯೆಯನ್ನು ಪರಿಹರಿಸಲು ಕಡಿದಾದ ಬೆಟ್ಟವನ್ನು ಕಡಿದು ತಾವೇ ರಸ್ತೆ ನಿರ್ಮಿಸಿದ್ದಾರೆ.
ಈ ಗ್ರಾಮದ ಪುರುಷರು ಮತ್ತು ಮಹಿಳೆಯರು ಬೆಟ್ಟವನ್ನು ಕಡಿದು ಪೊದೆಗಳನ್ನು ತೆರವುಗೊಳಿಸಿ ಘಂಟ್ರಗುಡಾವನ್ನು ಜಿಲ್ಲೆಯ ಪುಕಿ ಚಕ್‌ನಿಂದ ಸಂಪರ್ಕಿಸುವ 6 ಕಿಮೀ ಉದ್ದದ ಕುಚ್ಚಾ ರಸ್ತೆಯನ್ನು ನಿರ್ಮಿಸಿದ್ದಾರೆ. ಘಂಟ್ರಗುಡವು ದಕ್ಷಿಣ ಒಡಿಶಾದ ಕೊರಾಪುಟ್ ಪಟ್ಟಣದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ರಸ್ತೆಯ ಕೊರತೆಯಿಂದಾಗಿ ಹಳ್ಳಿಗರು ಅಲ್ಲಿಗೆ ತಲುಪಲು 52 ಕಿಲೋ ಮೀಟರ್ ಸಂಚರಿಸಬೇಕಾಗಿತ್ತು. ಇದರಿಂದ ಗ್ರಾಮಸ್ಥರಿಗೆ ಸಮಸ್ಯೆಗಳಾಗುತ್ತಿತ್ತು.
ಗ್ರಾಮಸ್ಥರು ನಿರ್ಮಿಸಿರುವ ರಸ್ತೆಯಿಂದ 20 ಕಿಲೋ ಮೀಟರ್ ಸಂಚಾರ ಕಡಿಮೆಯಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥ ಲಚ್ಚಣ್ಣ ಪುರಸೇತಿ. ರಸ್ತೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ನಾವೇ ರಸ್ತೆ ನಿರ್ಮಿಸಲು ನಿರ್ಧರಿಸಿದೆವು ಎನ್ನುತ್ತಾರೆ ಗ್ರಾಮಸ್ಥ ಲೋಚನ್ ಬಿಸೋಯಿ.
ಗುದ್ದಲಿ, ಕುಡುಗೋಲು, ಮಚ್ಚು ಮೊದಲಾದ ಕೃಷಿ ಸಲಕರಣೆಗಳಿಂದ ಬುಡಕಟ್ಟು ಗ್ರಾಮಸ್ಥರು ಬೆಟ್ಟವನ್ನು ಅಗೆಯಲು ಪ್ರಾರಂಭಿಸಿದರು. ನೇರ ರಸ್ತೆಗಳಿಲ್ಲದ ಕಾರಣ ನಾವು ಕೊರಾಪುಟ್ ಪಟ್ಟಣವನ್ನು ತಲುಪಲು ತುಂಬಾ ಕಷ್ಟಪಡುತ್ತೇವೆ, ವಿಶೇಷವಾಗಿ ರಾತ್ರಿಯಲ್ಲಿ ಮತ್ತು ಮಳೆಗಾಲದಲ್ಲಿ. ರೋಗಿಗಳನ್ನು ಕೋರಾಪುಟ್‌ನಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸುವುದು ತೀರಾ ಕಷ್ಟಕರವಾಗಿತ್ತು.
ಇದನ್ನೂ ಓದಿ: ತುಮಕೂರು: ಬೆವರು ಸುರಿಸಿ ದುಡಿದ ರೂ.1.5 ಲಕ್ಷ ಹಣದಿಂದ ರಸ್ತೆ ದುರಸ್ಥಿ ಮಾಡಿದ ರೈತ!
ಇದೀಗ ರಸ್ತೆ ನಿರ್ಮಾಣದಿಂದ ಘಂಟ್ರಗುಡವನ್ನು ಹೊರತುಪಡಿಸಿ ಕನಿಷ್ಠ ಒಂಬತ್ತು ಹಳ್ಳಿಗಳ ಸುಮಾರು 4000 ನಿವಾಸಿಗಳಿಗೆ ಸಹಾಯವಾಗುತ್ತದೆ ಎಂದರು.

ಗ್ರಾಮವನ್ನು ಸಂಪರ್ಕಿಸಲು, ಶೀಘ್ರದಲ್ಲಿಯೇ ಪಕ್ಕಾ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಘಂಟರಗೂಡ ವ್ಯಾಪ್ತಿಗೆ ಒಳಪಡುವ ದಶಮಂತಪುರದ ಬ್ಲಾಕ್ ಅಭಿವೃದ್ಧಿ ಅಧಿಕಾರಿ ದಂಬೂರುಧಾರ್ ಮಲ್ಲಿಕ್ ತಿಳಿಸಿದರು.
ಏನಿದು ಪರ್ವತ ಮನುಷ್ಯನ ಭಗೀರಥ ಯತ್ನ: ಪರ್ವತ ಮನುಷ್ಯ ಎಂದು ಖ್ಯಾತಿ ಗಳಿಸಿರುವ ದಶರತ್ ಮಾಂಝಿ ಬಿಹಾರದ ಗಯಾ ಸಮೀಪದ ಗೆಹ್ಲೌರ್ ಗ್ರಾಮದ ಕೃಷಿ ಕಾರ್ಮಿಕ. 1959 ರಲ್ಲಿ ಅವರ ಪತ್ನಿ ಪರ್ವತದಿಂದ ಬಿದ್ದು ಗಾಯಗೊಂಡ ಕಾರಣ ಮೃತಪಟ್ಟಿದ್ದರು. ರಸ್ತೆಯ ಕೊರತೆಯಿಂದಾಗಿ ಅವರನ್ನು 90 ಕಿಮೀ ದೂರದಲ್ಲಿರುವ ಪಟ್ಟಣದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಿರಲಿಲ್ಲ.
ದೃಢನಿಶ್ಚಯದಿಂದ ಮಾಂಝಿ ನಂತರ 110 ಮೀ ಉದ್ದ (360 ಅಡಿ), 9.1 ಮೀ (30 ಅಡಿ) ಅಗಲ ಮತ್ತು 7.7 ಮೀ (25 ಅಡಿ) ಆಳದ ಬೆಟ್ಟಗಳ ಪರ್ವತದ ಮೂಲಕ ಸುತ್ತಿಗೆ ಮತ್ತು ಉಳಿ ಬಳಸಿ ಮಾರ್ಗವನ್ನು ಕೆತ್ತಲು ಪ್ರಾರಂಭಿಸಿದರು.ಅವರು ರಸ್ತೆ ನಿರ್ಮಿಸಲು 22 ವರ್ಷಗಳನ್ನು ತೆಗೆದುಕೊಂಡಿದ್ದರು. ಅವರ ರಸ್ತೆ ನಿರ್ಮಾಣದಿಂದಾಗಿ ಗಯಾ ಜಿಲ್ಲೆಯ ಅತ್ರಿ ಮತ್ತು ವಜಿರ್‌ಗಂಜ್ ಬ್ಲಾಕ್‌ಗಳ ನಡುವಿನ ಪ್ರಯಾಣ 55 ಕಿಮೀಯಿಂದ 15 ಕಿಮೀಗೆ ಮೊಟಕುಗೊಂಡಿತು.