ಶೇ.20ರಷ್ಟು ಹಣವೂ ಕಾಮಗಾರಿಗಳಿಗೆ ಖರ್ಚಾಗುತ್ತಿಲ್ಲ, ಸಾರ್ವಜನಿಕರು ಜಾಗೃತರಾಗಬೇಕಿದೆ: ಡಿ ಕೆಂಪಣ್ಣ (ಸಂದರ್ಶನ)

ಇಲಾಖೆಗಳಿಗೆ ಮೀಸಲಿಟ್ಟ ಅನುದಾನಕ್ಕಿಂತ ಕಾಮಗಾರಿ ಆದೇಶಗಳೇ ಹೆಚ್ಚಾಗಿವೆ. 2019ರ ನಂತರ ಎಲ್ಲಾ ಇಲಾಖೆಗಳಲ್ಲಿ ಅದರಲ್ಲೂ ನೀರಾವರಿ ಇಲಾಖೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿರುವ ಶೇ.40 ಕಮಿಷನ್ ಆರೋಪದ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ತನಿಖೆ ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಬಾಕಿ ಇರುವ ಬಿಲ್‌ಗಳನ್ನು ತೆರವುಗೊಳಿಸಿ ಕಾಮಗಾರಿ ಆರಂಭಿಸುವಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಕೆಂಪಣ್ಣ ಅವರು, ಕಮಿಷನ್ ವಿಚಾರ, ಗುತ್ತಿಗೆದಾರರ ಸಮಸ್ಯೆಗಳು ಕುರಿತು ಮಾತನಾಡಿದ್ದಾರೆ.

ಗುತ್ತಿಗೆದಾರರ 25,000 ಕೋಟಿ ರೂ.ಗಳ ಬಿಲ್ ಬಾಕಿ ಉಳಿದಿರುವುದೇಕೆ?
ಇಲಾಖೆಗಳಿಗೆ ಮೀಸಲಿಟ್ಟ ಅನುದಾನಕ್ಕಿಂತ ಕಾಮಗಾರಿ ಆದೇಶಗಳೇ ಹೆಚ್ಚಾಗಿವೆ. 2019ರ ನಂತರ ಎಲ್ಲಾ ಇಲಾಖೆಗಳಲ್ಲಿ ಅದರಲ್ಲೂ ನೀರಾವರಿ ಇಲಾಖೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ.

ಎಷ್ಟು ದಿನಗಳಿಂದ ಬಿಲ್‌ಗಳು ಬಾಕಿ ಇವೆ?
ಈ ಹಿಂದೆ ಸುಮಾರು 5,000 ಕೋಟಿ ರೂ.ಗಳ ಬಿಲ್ ಬಾಕಿ ಉಳಿದಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೆವು. ಆದರೆ. 2019 ರ ನಂತರ, ಆಯ್ದ ಗುತ್ತಿಗೆದಾರರಿಗೆ ಒಲವು ತೋರಲು ಪ್ರಾರಂಭಿಸಿದರು. ಹಿರಿತನವನ್ನು ಅನುಸರಿಸುವಲ್ಲಿ ವಿಫಲರಾದರು. ಬಿಎಂಟಿಸಿಯಲ್ಲಿ ಚಾಲಕರಾಗಿ ನಿವೃತ್ತರಾದ ವ್ಯಕ್ತಿಯೊಬ್ಬರು 780 ಕೋಟಿ ರೂಗಳ ಗುತ್ತಿಗೆ ಪಡೆದರು. ಈ ಗುತ್ತಿಗೆ ಬಿಜೆಪಿ ನಾಯಕರ ಕೃಪಾಕಟಾಕ್ಷದಿಂದ ಸಿಕ್ಕಿತ್ತು, ಈ ಕುರಿತು ಸಿಬಿಐ ತನಿಖೆ ಮುಂದುವರೆದಿದೆ.

ಶೇ.40 ಕಮಿಷನ್ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರೆ ಬರೆದಿದ್ದಿರಿ. ಪತ್ರ ಬರೆದ ಬಳಿದ ಯಾವುದಾದರೂ ಬದಲಾವಣೆಗಳಾಗಿವೆಯೇ?
ಯಾವುದೇ ಬದಲಾವಣೆಗಳಾಗಿಲ್ಲ. ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ 20 ಬಾರಿ ಪತ್ರ ಬರೆದಿದ್ದೆ. ಬಳಿಕ ಒಮ್ಮೆ ಭೇಟಿಗೆ ಅವಕಾಶ ನೀಡಿದ್ದರು. ಆದರೆ, ಸಂಪುಟದ ಸಚಿವರೊಬ್ಬರು ಗುತ್ತಿಗೆದಾರರನ್ನು ನಿರ್ವಹಿಸಬಹುದು ಎಂದು ಹೇಳಿದ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಶೇ.40 ಕಮಿಷನ್‌ ನಲ್ಲಿ  ಗುತ್ತಿಗೆದಾರರು ಶೇ.10 ಶಾಸಕರಿಗೆ, ಶೇ.24 ಇಂಜಿನಿಯರ್‌ಗಳಿಗೆ ಮತ್ತು ಉಳಿದ ಹಣವನ್ನು ಟೆಂಡರ್‌ಗೆ ಮಂಜೂರು ಮಾಡಲು ಪಾವತಿಸಬೇಕಾಗಿತ್ತು. ಕೆಲವೊಮ್ಮೆ ಈ ಕಮಿಷನ್ ಶೇ.40% ಕ್ಕಿಂತ ಹೆಚ್ಚಾಗುತ್ತಿತ್ತು.

ಇದನ್ನೂ ಓದಿ: ಬಿಲ್ ಬಾಕಿ ಬಿಡುಗಡೆ ಮಾಡಿ ಗುತ್ತಿಗೆದಾರರಿಗೂ ಭಾಗ್ಯಗಳನ್ನು ನೀಡಿ: ಸರ್ಕಾರಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆಗ್ರಹ
 
ಶೇ.40 ಕಮಿಷನ್ ಆಗಿದ್ದು ಯಾವಾಗ?
2019 ರ ನಂತರ ಶೇ.40 ಕಮಿಷನ್ ಆಯಿತು. ಬೆಂಗಳೂರಿನಲ್ಲಿ ಟೆಂಡರ್‌ಗೆ ಅನುಮೋದನೆ ಪಡೆಯಲು ಶಾಸಕರು ಶೇ.15ರಷ್ಟು ಹಣ ತೆಗೆದುಕೊಂಡಿದ್ದಾರೆ.

ಯಾವ ಇಲಾಖೆ ಹೆಚ್ಚು ಕಮಿಷನ ಪಡೆದಿದೆ?
ನೀರಾವರಿ ಇಲಾಖೆ. ಬಿಬಿಎಂಪಿ. ಕಳೆದ ಎರಡು ವರ್ಷಗಳಿಂದ ಯಾವುದೇ ಪಾವತಿ ಮಾಡಿಲ್ಲ.

ನೆರೆಯ ರಾಜ್ಯಗಳ ಪರಿಸ್ಥಿತಿ ಹೇಗಿದೆ?
ತೆಲಂಗಾಣದಲ್ಲಿ, ಗುತ್ತಿಗೆದಾರರು ಶಾಸಕರಿಗೆ ಶೇ.1 ಕಮಿಷನ್ ನೀಡುತ್ತಾರೆ. ಅಂತಿಮವಾಗಿ, ಟೆಂಡರ್‌ಗಳನ್ನು ತೆರವುಗೊಳಿಸಲು ಸುಮಾರು ಶೇ.15 ಆಗುತ್ತದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳುಗಳಾಗಿದ್ದು, ಸರ್ಕಾರದ ವಿರುದ್ಧ ಯಾವುದೇ ಆರೋಪ ಮಾಡುವುದಿಲ್ಲ.

ವಿರೋಧ ಪಕ್ಷದ ಶಾಸಕರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ತನಿಖೆಗೆ ಆದೇಶಿಸಲಾಗಿದೆಯೇ?
ಆ ರೀತಿ ಹೇಳಲು ಸಾಧ್ಯವಿಲ್ಲ. ಆದರೆ, ರಾಜರಾಜೇಶ್ವರಿ ನಗರ ಮತ್ತು ಮಲ್ಲೇಶ್ವರಂನಲ್ಲಿ ಶಾಸಕರ ಬೆಂಬಲಿಗರಿಗೆ ಕಾಮಗಾರಿಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ವಿಶೇಷ ಗಮನ ನೀಡಿದ್ದಾರೆ.

ಕಳೆದ ಬಾರಿ ಆರೋಪ ಮಾಡಿದಾಗ ನ್ಯಾಯಾಲಯದ ಮೆಟ್ಟಿಲೇರಲಿಲ್ಲವೇಕೆ?
ದಾಖಲೆಗಳನ್ನು ಸಲ್ಲಿಸಲು ನ್ಯಾಯಾಂಗ ತನಿಖೆಗೆ ಆಗ್ರಹಿಸುವಂತೆ ನಮ್ಮ ವಕೀಲರು ಸಲಹೆ ನೀಡಿದ್ದರು. ಒಂದು ವೇಳೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇ ಆಗಿದ್ದರೆ, ನಮ್ಮ ಗುತ್ತಿಗೆದಾರರು ಗುರಿಯಾಗುತ್ತಿದ್ದರು. ಶೇ.40ರಷ್ಟು ಕಮಿಷನ್ ನೀಡಿದ್ದೇವೆ ಎಂದು ಹೇಳಿಕೊಂಡ ನಾಲ್ವರು ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನಾವು ನ್ಯಾಯಾಲಯದ ಮೆಟ್ಟಿಲೇರಲಿಲ್ಲ.

ನೀವೂ ಒಬ್ಬ ಗುತ್ತಿಗೆದಾರ. ನೀವು ಕೂಡ ಶೇ.40 ಕಮಿಷನ್ ನೀಡಿದ್ದೀರಾ?
ಇಲ್ಲ. ನಾನು ಯಾರಿಗೂ ಶೇ.40 ಕಮಿಷನ್ ನೀಡಿಲ್ಲ. ನಾನು ನನ್ನ ವೃತ್ತಿಯನ್ನು ತ್ಯಜಿಸಿದ್ದೇನೆ.

ಕಮಿಷನ್ ಪಿಡುಗು ಯಾವಾಗ ತೊಲಗಲಿದೆ?
ಟೆಂಡರ್ ನೀಡಿ. ಮಂಜೂರಾತಿ ನೀಡಲು ಕಾಲಮಿತಿ ನಿಗದಿಪಡಿಸಿ ಹೊಸ ವ್ಯವಸ್ಥೆ ಜಾರಿಗೆ ತರಬೇಕಿದೆ. ಆದರೆ. ಬದಲಾವಣೆಗೆ ಯಾರೂ ಸಿದ್ಧರಿಲ್ಲ.

ಬೊಮ್ಮಾಯಿ ಹೇಳಿದಂತೆ ವ್ಯವಸ್ಥೆಗಳು ಬದಲಾಗಿವೆಯೇ?
ಅವರು ಕೆಲವರ ಪರ ಒಲವು ತೋರಿಸಿದ್ದು ಬಿಟ್ಟರೆ, ಬೇರೇನನ್ನೂ ಮಾಡಲಿಲ್ಲ. 50 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳ ಟೆಂಡರ್‌ಗಳನ್ನು ಪರಿಶೀಲಿಸಲು ಆಯೋಗವನ್ನು ರಚಿಸಲಾಗಿದೆ, ವಿಧಾನಸಭೆ ಚುನಾವಣೆಗೂ ಮುನ್ನ ಒಂದೇ ಬಾರಿಗೆ ನೀರಾವರಿ ಇಲಾಖೆಯಲ್ಲಿ 700 ಕೋಟಿ ರೂ.ಗಳ ಕಾಮಗಾರಿ ಆದೇಶ ಹೊರಡಿಸಲಾಗಿತ್ತು. ಚುನಾವಣೆಗಾಗಿ ಈ ಹಣ ಸಂಗ್ರಹಿಸಲಾಗಿತ್ತು. ಹೀಗಿರುವಾಗ ಗುತ್ತಿಗೆದಾರರಿಗೆ ನೀಡಲು ಹಣ ಎಲ್ಲಿಂದ ಬರುತ್ತದೆ...?

ಬಿಜೆಪಿ ಬೆಂಬಲಿತ ಗುತ್ತಿಗೆದಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ...?
ಒಂದು ಪಕ್ಷದ ವಿರುದ್ಧವಲ್ಲ. ಎಲ್ಲಾ ಪಕ್ಷಗಳ ಸರ್ಕಾರಗಳ ವಿರುದ್ಧವೂ ನಾವು ಆರೋಪ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಶಿವಕುಮಾರ್ ಆರೋಪದ ಬಗ್ಗೆ ತಪ್ಪು ಭಾವನೆ ಹೊಂದಿರಬಹುದು.
 
ಬಾಕಿ ಬಿಲ್ ಗಳ ತೆರವುಗೊಳಿಸುವಂತೆ ಸರ್ಕಾರಕ್ಕೆ ಆಗಸ್ಟ್ 31ರವರೆಗೆ ಗಡುವು ನೀಡಿದ್ದೀರಿ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಿಮ್ಮ ಮುಂದಿನ ನಡೆ ಏನು?
ಇನ್ನು ಕಾಯಲು ಸಾಧ್ಯವಿಲ್ಲ. ಅಗಸ್ಟ್ 31ರ ನಂತರ ನಮ್ಮ ಸಂಘದ ಕಾರ್ಯಕಾರಿ ಸಮಿತಿ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ,

ಬಿಬಿಎಂಪಿ ಗುತ್ತಿಗೆದಾರರ ಸಂಘದೊದಿಗೆ ನಮ್ಮ ಸಂಘ ಸಂಪರ್ಕ ಹೊಂದಿಲ್ಲ ಎಂಬ ನಿಮ್ಮ ಹೇಳಿಕೆ ಅವರಿಲ್ಲಿ ಬೇಸರ ತಂದಿದೆಯೇ?
ಅವರು ಎಂದಿಗೂ ನಮ್ಮೊಂದಿಗೆ ಇರಲಿಲ್ಲ. ಬಿಬಿಎಂಪಿಯಲ್ಲಿ ಮೂರು ಸಂಘಗಳಿದ್ದು, ಅವರಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಹೇಮಂತ್ ಗಂಭೀರ ಆರೋಪ ಮಾಡಿದ್ದು, ನಂತರ ಅದನ್ನು ಹಿಂಪಡೆದಿದ್ದಾರೆ. ಅವರು ನನ್ನನ್ನು ಸಂಪರ್ಕಿಸಿದ್ದರು, ಆದರೆ, ನಾವು ವೈಯಕ್ತಿಕ ಪ್ರಕರಣಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ, ಆದರೆ, ಅವರು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದೇ ಆದರೆ, ಬೆಂಬಲ ನೀಡುತ್ತೇವೆ. ಹೇಮಂತ್ ತಮ್ಮ ಸಂಬಂಧಿ ಹಾಗೂ ಶಾಸಕರೊದಿಗೆ ಶಿವಕುಮಾರ್ ಅವರ ನಿವಾಸಕ್ಕೂ ಭೇಟಿ ನೀಡಿದ್ದಾರೆ.

ಅವರು ಹೇಳಿಕೆಯಿಂದ ಹಿಂದೆ ಸರಿದಿದ್ದು ಏಕೆ?
ಅವರು ಮಾಡಿದ್ದ ಕಾಮಗಾರಿ ಕೆಲಸದ ಬಗ್ಗೆ ಅವರಿಗೇ ಕಳವಳವಿತ್ತು. ತಪಾಸಣೆ ಸಂದರ್ಭದಲ್ಲಿ ಬಹಿರಂಗಗೊಳ್ಳುವ ಆತಂಕವಿತ್ತು. ಹೀಗಾಗಿ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.

ತಪಾಸಣೆ ವೇಳೆ ಗುಣಮಟ್ಟ ಬಹಿರಂಗವಾಗಬಹುದು ಎಂಬ ಆತಂಕದಲ್ಲಿ ಗುತ್ತಿಗೆದಾರರು ಇದ್ದಾರೆಯೇ?
ಇಲ್ಲ, ಅನೇಕ ಗುತ್ತಿಗೆದಾರರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, 3-4 ವರ್ಷಗಳವರೆಗೆ ಪಾವತಿಗಳನ್ನು ಬಿಡುಗಡೆ ಮಾಡದಿದ್ದರೆ ಯಾವ ಗುಣಮಟ್ಟವನ್ನು ನಿರೀಕ್ಷಿಸಬಹುದು? ಬಿಬಿಎಂಪಿ ಕಳೆದ 26 ತಿಂಗಳಿಂದ ಪಾವತಿಗಳನ್ನು ಬಾಕಿ ಉಳಿಸಿಕೊಂಡಿದೆ. ಮುಖ್ಯ ಆಯುಕ್ತರು ಇದು ಸಾಮಾನ್ಯವಾಗಿದೆ ಎಂದು ಹೇಳುತ್ತಾರೆ.

ಯೋಜನೆ ಒಟ್ಟಾರೆ ಹಣದಲ್ಲಿ ಶೇ.40ರಷ್ಟು ಹಣ ಕಮಿಷನ್'ಗೆ ಹೋದರೆ, ಕಾಮಗಾರಿಗೆ ಖರ್ಚು ಮಾಡುವ ಹಣವೆಷ್ಟು?
ಕಮಿಷನ್ ಮತ್ತು ತೆರಿಗೆ ಪಾವತಿಸಿದ ನಂತರ. ಕನಿಷ್ಠ ಶೇ.10 ಲಾಭವನ್ನು ಇಟ್ಟುಕೊಂಡರೆ, ಎಷ್ಟು ಹಣ ಉಳಿಯುತ್ತದೆ? ಅಂತಿಮವಾಗಿ, ಇದು ಕೆಲಸದ ಗುಣಮಟ್ಟದಲ್ಲಿ ರಾಜಿಯಾಗಲೇಬೇಕಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಬೆಂಗಳೂರಿನ ರಸ್ತೆಗಳು ಏಕೆ ಕೆಟ್ಟ ಸ್ಥಿತಿಯಲ್ಲಿವೆ? ಹಲವು ಯೋಜನೆಗಳಲ್ಲಿ ಶೇ.20ರಷ್ಟು ಹಣವೂ ಯೋಜನೆಗಳಿಗೆ ವ್ಯಯವಾಗುತ್ತಿಲ್ಲ.

ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕಾಗಿ ನಿಮಗೆ ಎಂದಾದರೂ ಬೆದರಿಕೆಗಳು ಬಂದಿವೆಯೇ?
ಬೆದರಿಕೆ ಹಾಕಿರುವ ಕೆಲವು ಪತ್ರಗಳು ಬಂದಿವೆ. ಆದರೆ, ನಾನು ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ.

ಪ್ರತಿಯೊಂದು ಆರೋಪಕ್ಕೂ ನಿಮ್ಮ ಬಳಿ ಸಾಕ್ಷ್ಯಗಳಿವೆಯೇ? ಅವು ದಾಖಲೆಗಳ ರೂಪದಲ್ಲಿವೆಯೋ ಅಥವಾ ಆಡಿಯೋ/ವಿಡಿಯೋ ರೂಪದಲ್ಲಿದೆಯೋ?
ನೀಡಲಾದ ಪ್ರತಿಯೊಂದು ಒಪ್ಪಂದಕ್ಕೂ ನಮ್ಮ ಬಳಿ ದಾಖಲೆಗಳಿವೆ ಎಂದು ನಾನು ಹೇಳುವುದಿಲ್ಲ. ಆದರೆ, ನಮ್ಮ ಬಳಿ ದಾಖಲೆಗಳಿವೆ. ಆ ದಾಖಲೆಗಳು ಶೇ.40ರಷ್ಟು ಕಮಿಷನ್ ಆರೋಪ ಸಾಬೀತುಪಡಿಸಲು ಸಾಕಾಗುತ್ತವೆ.

ಶೇ.40 ಕಮಿಷನ್ ಆರೋಪ ಚುನಾವಣಾ ವಿಷಯವಾಗಿ ಮಾರ್ಪಟ್ಟು ಬಿಜೆಪಿಗೆ ಹಿನ್ನಡೆ ಉಂಟು ಮಾಡಿದ್ದರ ಬಗ್ಗೆ ಏನು ಹೇಳುತ್ತೀರಿ?
ನಮ್ಮ ಆರೋಪದಿಂದಲೇ ಇದೆಲ್ಲಾ ನಡೆದಿದೆ ಎಂದು ಹೇಳಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಇದು ಒಂದು ಕಾರಣವಾಗಿತ್ತು. ಭ್ರಷ್ಟಾಚಾರವು ಮುಖ್ಯ ವಿಷಯವಾಗಿತ್ತು.

ಈಗ ಭ್ರಷ್ಟಾಚಾರ ಇಲ್ಲವೇ?
ಹೊಸ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳುಗಳು ಕಳೆದಿವೆ ಅಷ್ಟೇ. ಹೊಸ ಸರ್ಕಾರ ಹೊಸ ಕಾಮಗಾರಿಗಳಿಗೆ ಆದೇಶ ನೀಡಿಲ್ಲ, ಹಣವನ್ನೂ ಮಂಜೂರು ಮಾಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಏನನ್ನೂ ದೂರುವುದಿಲ್ಲ.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ ಎಂದು ನೀವು ಭಾವಿಸುತ್ತೀರಾ?
ಭ್ರಷ್ಟಾಚಾರ ಇರುವುದಿಲ್ಲ ಎಂಬ ಭರವಸೆ ನನಗಿಲ್ಲ. ನಮ್ಮ ಹೋರಾಟದ ಮೂಲಕ ಮಾತ್ರ ಸ್ವಲ್ಪ ಮಟ್ಟಿಗೆ ಅದನ್ನು ನಿಯಂತ್ರಿಸಬಹುದು ಎಂದು ನಂಬಿದ್ದೇನೆ.

ಹೊಸ ಸರ್ಕಾರ ಇನ್ನೂ ಕಾಮಗಾರಿಗಳನ್ನು ನೀಡುತ್ತಿಲ್ಲ. ಗುತ್ತಿಗೆದಾರರು ಬದುಕುವುದು ಹೇಗೆ?
ಕಾಮಗಾರಿಗಳನ್ನು ನೀಡಲು ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಜನರೇ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ.

ಈಗ ಕಮಿಷನ್ ವಿಚಾರ ದೊಡ್ಡದಾಗಿದ್ದೇಕೆ? ಈ ಹಿಂದೆ ಭ್ರಷ್ಟಾಚಾರ ಇರಲಿಲ್ಲವೇ?
ಭ್ರಷ್ಟಾಚಾರ ಹಿಂದಿನಿಂದಲೂ ಇದ್ದೆ ಇದೆ. ಈ ಹಿಂದೆ ಪ್ಯೂನ್ ಅಥವಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಿಗೆ ಟಿಪ್ಸ್ ಕೊಡುತ್ತಿದ್ದೆವು. ಕ್ರಮೇಣ ಶಾಸಕರು ಪಾಲು ಕೇಳತೊಡಗಿದರು. ಶೇ.20ಕ್ಕಿಂತ ಕಡಿಮೆ ಇದ್ದ ಕಮಿಷನ್ ಕ್ರಮೇಣ ಹೆಚ್ಚಿ ಶೇ.40ಕ್ಕೆ ಏರಿಕೆಯಾಯಿತು. ಹೀಗಾಗಿ ಧ್ವನಿ ಎತ್ತಲೇ ಬೇಕಾಯಿತು.

ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ರಚಿಸಲಾಗಿರುವ ಎಸ್‌ಐಟಿ, ಗುತ್ತಿಗೆದಾರರ ಮೇಲೆ ಪರಿಣಾಮ ಬೀರುತ್ತದೆಯೇ?
ಕಾಮಗಾರಿಗೆ ಗ್ಯಾರಂಟಿ ಅವಧಿ ಒಂದು ವರ್ಷ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಕಾಮಗಾರಿಗಳನ್ನು ಎಸ್‌ಐಟಿ ಪರಿಶೀಲಿಸಲಿದೆ. ವಿಶ್ವಾಸಾರ್ಹ ವರದಿಯನ್ನು ಹೇಗೆ ಸಲ್ಲಿಸಲಿದೆ? ಕಾಮಗಾರಿ ನಡೆಯದೆ ಹಣ ವಸೂಲಿ ಮಾಡಿರುವ ಪ್ರಕರಣಗಳ ಪರಿಶೀಲಿಸಿ, ಭಾಗಿಯಾದವರಿಗೆ ಶಿಕ್ಷೆ ನೀಡಿದರೆ ಅರ್ಥವಿರುತ್ತದೆ. 4-5 ವರ್ಷಗಳ ಹಿಂದೆ ನಡೆದ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವುದು ವಿವೇಚನೆಯಿಂದ ಕೂಡಿದ್ದಲ್ಲ.

ಲಂಚ ನೀಡುವುದು ಕೂಡ ಅಪರಾಧವಾಗಿರುವುದರಿಂದ ಗುತ್ತಿಗೆದಾರರ ಸಂಘವು ಯಾವುದೇ ದಾಖಲೆ ನೀಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿವೆ...?
ತನಿಖಾ ಸಮಿತಿಗೆ ಪುರಾವೆ ನೀಡಲು ನಾವು ಸಿದ್ಧರಿದ್ದೇವೆ. ಈಗಾಗಲೇ ಲೋಕಾಯುಕ್ತಕ್ಕೆ ಕೆಲವು ದಾಖಲೆಗಳನ್ನು ಸಲ್ಲಿಸಿದ್ದೇವೆ.

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗುತ್ತದೆ ಎಂದು ನೀವು ಭಾವಿಸುತ್ತೀರಾ?
ಅಂತಹ ಭಾವನೆಗಳಿಲ್ಲ.

ಈ ವಯಸ್ಸಿನಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಿಮ್ಮನ್ನು ಪ್ರೇರೇಪಿಸುವ ಅಂಶ ಯಾವುದು?
ಒಂದು ದಿನ, ನಾನು ನನ್ನ ಕಚೇರಿಯಿಂದ ಹೊರಬರುತ್ತಿದ್ದಾಗ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳು ಎಡವಿ ಬಿದ್ದಳು. ಈ ವೇಳೆ ಆ ಮಹಿಳೆ ಗುತ್ತಿಗೆದಾರರನ್ನು ಶಪಿಸಿದರು. ದೇಶವನ್ನು ಹಾಳು ಮಾಡುತ್ತಿದ್ದಾರೆಂದು ಆಕೆ ಹೇಳಿದ್ದಳು. ಆದಾಗಲೇ ಶೇ.40 ಕಮಿಷನ್ ಚಾಲ್ತಿಯಲ್ಲಿತ್ತು. ಇತರರೂ ಭಾಗಿಯಾಗಿರುವಾಗ ಗುತ್ತಿಗೆದಾರರು ಮಾತ್ರವೇಳೆ ಆರೋಪಗಳನ್ನು ಸಹಿಸಿಕೊಳ್ಳಬೇಕು ಎಂಬ ಆಲೋಚನೆ ನನಗೆ ಬಂತು. ಹಾಗಾಗಿ ಕಮಿಷನ್ ಸಂಸ್ಕೃತಿಯ ವಿರುದ್ಧ ಹೋರಾಡಲು ನಿರ್ಧರಿಸಿದೆ.

ಬೆಂಗಳೂರಿನ ರಸ್ತೆಗಳು ಮತ್ತು ಫುಟ್‌ಪಾತ್‌ಗಳ ಕಳಪೆ ಗುಣಮಟ್ಟಕ್ಕೆ ಶೇಕಡಾ 40 ರಷ್ಟು ಭ್ರಷ್ಟಾಚಾರವೇ ಕಾರಣ ಎಂದು ಹೇಳುತ್ತೀರಾ?
ಖಂಡಿತವಾಗಿಯೂ ಹೌದು. ಗುತ್ತಿಗೆದಾರರು ಶೇ40 ಕಮಿಷನ್ ಪಾವತಿ ಮಾಡಿ, ಗುಣಮಟ್ಟದ ಕಾಮಗಾರಿ ಕಾರ್ಯ ನಡೆಸುವುದಾದರೂ ಹೇಗೆ?

ಗುತ್ತಿಗೆದಾರರನ್ನು ಹೊಣೆ ಮಾಡಬೇಕೇ?
ಖಂಡಿತವಾಗಿ, ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲದಿದ್ದರೆ ಗುತ್ತಿಗೆದಾರರನ್ನೂ ಹೊಣೆ ಮಾಡಬೇಕು.

ಹೊಸ ಸರ್ಕಾರ ಶೇ.20 ಕಮಿಷನ್ ಕೇಳಿದರೆ ಅದನ್ನು ಬಯಲಿಗೆಳೆಯುತ್ತೀರಾ?
ಶೂನ್ಯ ಭ್ರಷ್ಟಾಚಾರಕ್ಕಾಗಿ ಹೋರಾಡುತ್ತಿದ್ದೇವೆ, ಆದರೆ ಭ್ರಷ್ಟಾಚಾರವು ದೀರ್ಘಕಾಲದವರೆಗೆ ಇರುವುದರಿಂದ ನಾವು ಯಶಸ್ವಿಯಾಗದಿರಬಹುದು. ಆದರೆ ಭ್ರಷ್ಟಾಚಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬೇಕು.

ಹದಗೆಟ್ಟ ರಸ್ತೆಗಳಿಗಾಗಿ ಎಷ್ಟು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ?
ಒಬ್ಬ ವ್ಯಕ್ತಿಯನ್ನು ಕೂಡ ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ. ಏಕೆಂದರೆ, ಸರ್ಕಾರವೇ ಸ್ವತಃ ಭ್ರಷ್ಟಾಚಾರದಲ್ಲಿ ತೊಡಗಿದೆ. ಗುತ್ತಿಗೆದಾರರು ಬಿಲ್‌ಗಳನ್ನು ಸಿದ್ಧಪಡಿಸುವುದಿಲ್ಲ, ಅದನ್ನು ಸಹಾಯಕ ಎಂಜಿನಿಯರ್ ಮಾಡುತ್ತಾರೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯನಿರ್ವಾಹಕ ಅಭಿಯಂತರರು ಇದಕ್ಕೆ ಅನುಮೋದನೆ ನೀಡುತ್ತಾರೆ. ನಂತರ ಮೂರನೇ ವ್ಯಕ್ತಿಯ ತಪಾಸಣೆ ಇರುತ್ತದೆ. ಇಷ್ಟೆಲ್ಲಾ ಮಾಡಿದ ನಂತರ ಸರ್ಕಾರ (ಕಾಂಗ್ರೆಸ್) ಪರಿಶೀಲಿಸುವುದಾಗಿ ಹೇಳುತ್ತದೆ. ಹಾಗೆಂದರೆ ಏನು ಅರ್ಥ? ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿದ್ದರೆ ಎಷ್ಟು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆ? ಒಬ್ಬ ಅಧಿಕಾರಿಯ ವಿರುದ್ಧವೂ ಚಾರ್ಜ್ ಶೀಟ್ ಆಗಿಲ್ಲ.

ಈಗ ಬಿಬಿಎಂಪಿ ಕೌನ್ಸಿಲ್‌ನಲ್ಲಿ ಕಾರ್ಪೊರೇಟರ್‌ಗಳಿಲ್ಲ. ಕಮಿಷನ್‌ ಕಡಿಮೆಯಾಗಿದೆಯೇ?
ಭ್ರಷ್ಟಾಚಾರ ಸಾರ್ವಕಾಲಿಕವಾಗಿ (ಬಿಬಿಎಂಪಿ ಆಡಳಿತಾಧಿಕಾರಿಗಳ ಆಳ್ವಿಕೆಯಲ್ಲಿಯೂ) ಒಂದೇ ಆಗಿರುತ್ತದೆ. ಭ್ರಷ್ಟಾಚಾರ ಪದ್ಧತಿ ಈಗಲೂ ಇದೆ ಮತ್ತು ಹಿಂದೆಯೂ ಇತ್ತು. ಪ್ರಭಾವ ಇರುವ ಜನರು ಆಯುಕ್ತರನ್ನು ಬಳಸಿಕೊಳ್ಳುತ್ತಾರೆ.

ಕಾಮಗಾರಿ ಕೆಲಸ ಸಿಗುವ ಮೊದಲೇ ಗುತ್ತಿಗೆದಾರರು ಹಣ ಕೊಡಬೇಕಾ?
ಹೌದು! ನಾವು ಮುಂಗಡ ಕಮಿಷನ್ ನೀಡಬೇಕು. ಕಾಮಗಾರಿ ತೆಗೆದುಕೊಳ್ಳಬೇಕಾದರೆ ಶಾಸಕರಿಗೆ ಶೇ.10ರಷ್ಟು ಕಮಿಷನ್ ನೀಡಬೇಕು. ಉದಾಹರಣೆಗೆ 1 ಕೋಟಿ ರೂ.ಗಳ ಕಾಮಗಾರಿಯಾದರೆ 10 ಲಕ್ಷ ರೂ.ಗಳನ್ನು ಶಾಸಕರ ಮನೆಯಲ್ಲಿಯೇ ಪಾವತಿಸಬೇಕು, ಆಗ ಮಾತ್ರ ಕಾಮಗಾರಿಗಳನ್ನು ಮಂಜೂರು ಮಾಡಲಾಗುತ್ತದೆ. ಉಳಿದ 90 ಲಕ್ಷ ರೂ.ನಲ್ಲಿ ನಾವು ತೆರಿಗೆ ಮತ್ತು ಇತರ ಖರ್ಚುಗಳನ್ನು ಪಾವತಿಸಬೇಕಾಗುತ್ತದೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2013 ರಿಂದ 2018 ರವರೆಗೆ ಪರಿಸ್ಥಿತಿ ಹೇಗಿತ್ತು?
ಆಗ ಕಮಿಷನ್ ಶೇ.20 ಇತ್ತು. ಈಗ ಅದು ಶೇ 40ಕ್ಕೆ ಏರಿದೆ. ಅದನ್ನು ಕಡಿಮೆ ಮಾಡಬೇಕು. ಇದುವರೆಗೂ ಕಾಮಗಾರಿ ಮಂಜೂರಾಗಿಲ್ಲ.

ಭ್ರಷ್ಟಾಚಾರ ತಪ್ಪಿಸಲು ಇ-ಟೆಂಡರ್ ಆರಂಭಿಸಲಾಗಿದೆ. ಇದರ ಬಗ್ಗೆ ಏನು ಹೇಳುತ್ತೀರಿ?
ಅಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ನಾವು ಅದನ್ನು ಸರಿ ಮಾಡಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com