ಈತ ಮಣ್ಣಿನ ಮಗ: ಜೈವಿಕ ಗೊಬ್ಬರ ತಯಾರಿಸಿದ ಉತ್ತರ ಪ್ರದೇಶ ಯುವಕನ ಯಶೋಗಾಥೆ...

ಈ ಯುವಕನ ಹಿನ್ನೆಲೆ ಕೆಮಿಕಲ್ ಎಂಜಿನಿಯರ್, ತಂದೆ ಅಪ್ಪಟ ಕೃಷಿಕ. ಇವೆರಡರ ಸಮ್ಮಿಳಿತದಿಂದ ಸೃಷ್ಟಿಯಾಗಿದ್ದೇ ಸಂಶೋಧನೆ. 
ಅಕ್ಷಯ್ ಶ್ರೀವಾಸ್ತವ
ಅಕ್ಷಯ್ ಶ್ರೀವಾಸ್ತವ

ಉತ್ತರ ಪ್ರದೇಶ: ಈ ಯುವಕನ ಹಿನ್ನೆಲೆ ಕೆಮಿಕಲ್ ಎಂಜಿನಿಯರ್, ತಂದೆ ಅಪ್ಪಟ ಕೃಷಿಕ. ಇವೆರಡರ ಸಮ್ಮಿಳಿತದಿಂದ ಸೃಷ್ಟಿಯಾಗಿದ್ದೇ ಸಂಶೋಧನೆ. 

ಉತ್ತರ ಪ್ರದೇಶ ರಾಜ್ಯದ ಪೂರ್ವ ಜಿಲ್ಲೆ ಖುಷಿನಗರದ ಅಕ್ಷಯ್ ಶ್ರೀವಾಸ್ತವ ಎಂಬ 23 ವರ್ಷದ ತರುಣ ತನ್ನ ತಂದೆ ಹೊಲದಲ್ಲಿ ದಿನವೂ ಹಗಲಿರುಳು ಕಷ್ಟಪಡುತ್ತಿದ್ದುದನ್ನು ಕಣ್ಣಾರೆ ನೋಡುತ್ತಿದ್ದ. ಕೃಷಿ ಸಮಸ್ಯೆಗೆ ಏನಾದರೊಂದು ಮಾಡಬೇಕೆಂದು ಆತನ ಮನಸ್ಸು ತುಡಿಯುತ್ತಿದ್ದು. ಕೊನೆಗೂ ಜೈವಿಕ ಗೊಬ್ಬರವನ್ನು ಕಂಡುಹಿಡಿದುಬಿಟ್ಟ.

ರಸಗೊಬ್ಬರಕ್ಕಿಂತ ಜೈವಿಕ ಗೊಬ್ಬರವನ್ನು ಬೆಳೆಗಳಿಗೆ ಹಾಕಿ ಫಲ ಕೊಯ್ಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಸರಿಯಾಗಿ ಬಿತ್ತನೆ, ವ್ಯವಸಾಯ ಮಾಡಿಕೊಂಡು ಹೋದರೆ ಶೇಕಡಾ 15 ರಿಂದ 40ರವರೆಗೆ ಹೆಚ್ಚು ಫಸಲು ಕೊಯ್ಯಬಹುದು. ಈತ ಕಂಡುಹಿಡಿದ ಜೈವಿಕ ಗೊಬ್ಬರಕ್ಕೆ ಇಟ್ಟ ಹೆಸರು 'ನವ್ಯಕೋಶ' ಎಂದು. ಅಂದರೆ ಒಂದು ರೀತಿಯಲ್ಲಿ ಸಂಪತ್ತು ಎಂದರ್ಥವಂತೆ. ಈತ ಕಂಡುಹಿಡಿದ ಈ ಜೈವಿಕ ಗೊಬ್ಬರ ಈಗ ಸುತ್ತಮುತ್ತಲಿನ ರೈತರಿಗೆ ವರದಾನವಾಗಿದೆ. ಅಷ್ಟೇ ಏಕೆ ಉತ್ತರ ಪ್ರದೇಶ ಸರ್ಕಾರ ಕೂಡ ಗುರುತಿಸಿ ಈತನಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಕೃಷಿಯೆಂದರೆ ರೈತರಿಗೆ ಹತ್ತಾರು ಸಮಸ್ಯೆಗಳು-ಸವಾಲುಗಳು ಇರುತ್ತವೆ. ನೀರಿನ ಸಮಸ್ಯೆ, ಬೆಳೆಗಳನ್ನು ಉತ್ಪಾದಿಸುವುದು, ಅವುಗಳನ್ನು ಸೂಕ್ತವಾಗಿ ಸಂಗ್ರಹಿಸುವುದು, ಜಮೀನಿನಲ್ಲಿ ಇಳುವರಿ ಬರುವುದಿಲ್ಲವೆಂದು ರಾಸಾಯನಿಕ ಗೊಬ್ಬರ ಹಾಕುತ್ತಾ ಹೋದರೆ ಮಣ್ಣು ಹಾನಿಕಾರಕವಾಗುತ್ತದೆ, ಮಾಲಿನ್ಯವಾಗುತ್ತದೆ, ಜೊತೆಗೆ ಕೆಲವು ವರ್ಷಗಳು ಕಳೆದ ನಂತರ ಇಳುವರಿ ಕಡಿಮೆಯಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ತನ್ನ ತಂದೆ ಎದುರಿಸುತ್ತಿರುವುದನ್ನು ಅಕ್ಷಯ್ ಚಿಕ್ಕವನಿಂದ ನೋಡುತ್ತಲೇ ಬೆಳೆದಿದ್ದ. ಅವನ ಮನಸ್ಸಿನಲ್ಲಿ ಪರಿಸರಕ್ಕೆ ಪೂರಕವಾದ ಗೊಬ್ಬರವನ್ನು ತಯಾರಿಸಬೇಕೆಂಬ ಯೋಚನೆ ಮೊಳೆಯುತ್ತಲೇ ಇದ್ದಿತು. 

ಹೀಗಿರುವಾಗ ಪಿಯುಸಿ ಮುಗಿದ ನಂತರ ಕೆಮಿಕಲ್ ನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಬೇಕೆಂದು ದೃಢ ನಿಶ್ಚಯ ಮಾಡಿಕೊಂಡಿದ್ದ ಅಕ್ಷಯ್. ಆತನ ಗುರಿ ತಾವು ಎಂಜಿನಿಯರಿಂಗ್ ಓದಿ ದೊಡ್ಡ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಕೈತುಂಬಾ ಹಣ ಸಂಪಾದನೆ ಮಾಡಬೇಕೆಂಬುದು ಆಗಿರಲಿಲ್ಲ. ಕೃಷಿಯಲ್ಲಿ ದುಡಿಯುವ ತನ್ನ ತಂದೆ ಮತ್ತು ಅವರ ಓರಗೆಯ ಲಕ್ಷಾಂತರ ರೈತರಿಗೆ ಸಹಾಯ ಮಾಡಬೇಕೆಂಬುದೇ ಆಗಿತ್ತು.

ಕೆಮಿಕಲ್ ಇಂಜಿನಿಯರಿಂಗ್‌ಗೆ ಸೇರುವ ಹಿಂದಿನ ನನ್ನ ಆಲೋಚನೆಯು ವಿಷಯದ ಬಗ್ಗೆ ಆಳವಾದ ಮತ್ತು ವೈಜ್ಞಾನಿಕ ಜ್ಞಾನವನ್ನು ಗಳಿಸುವ ಉದ್ದೇಶ ನನ್ನದಾಗಿತ್ತು. ಇದರಿಂದ ನಾನು ರೈತರಿಗೆ ಸಹಾಯ ಮಾಡುವ ನನ್ನ ಕನಸನ್ನು ನನಸಾಗಿಸಬಹುದು ಎಂದು ಕೆಮಿಕಲ್ ಎಂಜಿನಿಯರಿಂಗ್ ಸೇರಿಕೊಂಡೆ ಎನ್ನುತ್ತಾನೆ. 

ಜೈವಿಕ ಗೊಬ್ಬರ ಕಂಡುಹಿಡಿದ ಬಗೆ ಹೇಗೆ? ಅಕ್ಷಯ್ ಶ್ರೀವಾಸ್ತವ್ ಗೆ ಈಗ 23 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಜೈವಿಕ ಗೊಬ್ಬರವನ್ನು ಆವಿಷ್ಕರಿಸಿದ್ದಾನೆ. ಇದು ಕೃಷಿ ಉತ್ಪಾದಕತೆಯನ್ನು ಶೇಕಡಾ 35 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಭಾರತದಾದ್ಯಂತ 3,000 ಕ್ಕೂ ಹೆಚ್ಚು ರೈತರಿಗೆ ಸಹಾಯವಾಗಿದೆ.

ಎಂಜಿನಿಯರಿಂಗ್ ಪದವಿ ಓದುತ್ತಿರುವಾಗಲೇ ಎರಡನೇ ವರ್ಷದಲ್ಲಿಯೇ ಜೈವಿಕ ಗೊಬ್ಬರ ತಯಾರಿಸುವ ತನ್ನ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿದ್ದ. ಆದರೆ ಕಾಲೇಜಿನಲ್ಲಿ ಸಂಶೋಧನೆಗೆ ಮೂಲಸೌಕರ್ಯಗಳ ಕೊರತೆಯಿತ್ತು. ಆಗ ಅಕ್ಷಯ್ ತಾನೇ ಸ್ವತಃ ರಾಜ್ಯದ ವಿವಿಧ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಐಐಟಿ ಕಾನ್ಪುರದಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಸಹ ಭೇಟಿ ನೀಡಿ ತನ್ನ ಕನಸಿಗೆ ಒಂದು ಸ್ಪಷ್ಟ ರೂಪ ನೀಡಲು ಕಷ್ಟಪಡುತ್ತಿದ್ದನು. 

ಈ ಮಧ್ಯೆ ಶೋಧನೆಗೆಂದು ಸಕ್ಕರೆ ಮತ್ತು ಆಲ್ಕೋಹಾಲ್ ಕಾರ್ಖಾನೆಗಳಿಗೆ ಭೇಟಿ ನೀಡಿ ಉತ್ಪನ್ನವನ್ನು ವಾಣಿಜ್ಯಿಕವಾಗಿ ಉತ್ಪಾದಿಸುವುದು ಮತ್ತು ಅದನ್ನು ಮಾರುಕಟ್ಟೆ ಮಾಡುವುದು ಹೇಗೆ ಎಂದು ತಿಳಿದುಕೊಂಡನು.

<strong>ತಾನು ಕಂಡುಹಿಡಿದ ಜೈವಿಕ ಗೊಬ್ಬರ ನವ್ಯಕೋಶ ಜೊತೆ ಅಕ್ಷಯ್ ಶ್ರೀವಾಸ್ತವ</strong>
ತಾನು ಕಂಡುಹಿಡಿದ ಜೈವಿಕ ಗೊಬ್ಬರ ನವ್ಯಕೋಶ ಜೊತೆ ಅಕ್ಷಯ್ ಶ್ರೀವಾಸ್ತವ

ಕೊನೆಗೆ ಆಗಸ್ಟ್ 2020 ರಲ್ಲಿ, ಅಕ್ಷಯ್ ಕಂಡ ಕನಸನ್ನು ನನಸು ಮಾಡಿಕೊಂಡನು. ನವ್ಯಕೋಶ 60 ವಿಧದ ಸೂಕ್ಷ್ಮಜೀವಿಗಳನ್ನು ಬಳಸಿ ಬಳಸಲು ಸಿದ್ಧವಾದ ಜೈವಿಕ ಗೊಬ್ಬರ. "ಈ ಸೂಕ್ಷ್ಮಜೀವಿಗಳು ಪೊಟ್ಯಾಸಿಯಮ್, ಸಾರಜನಕ, ಸತು ಮತ್ತು ಕಾರ್ಬನ್ ಸೇರಿದಂತೆ ಒಂಬತ್ತು ವಿಧದ ಪೋಷಕಾಂಶಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ" ಎನ್ನುತ್ತಾನೆ.

ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ (NABL) ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಅಕ್ಷಯ್ ನ ಆವಿಷ್ಕಾರಕ್ಕೆ ಮುದ್ರೆ ಸಿಕ್ಕಿದೆ. ಅಲ್ಲಿ ತನ್ನ ಜೈವಿಕ ಗೊಬ್ಬರದ 2 ಕೆಜಿ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದನು. ಇದಲ್ಲದೆ, ಮಣ್ಣಿನ ಪ್ರಯೋಗ ನಡೆಸಿದಾಗಲೂ ಗೊಬ್ಬರದಿಂದ ಇಳುವರಿ ಹೆಚ್ಚಾಗಿದೆ. ಅಕ್ಷಯ್ ನ ಆರು ವರ್ಷಗಳ ಶ್ರಮಕ್ಕೆ ಫಲ ಸಿಕ್ಕಿದೆ. 

ಅಕ್ಷಯ್ ಅಭಿವೃದ್ಧಿಪಡಿಸಿದ ಮತ್ತೊಂದು ಉತ್ಪನ್ನವೆಂದರೆ ಮಣ್ಣಿನಲ್ಲಿ ಹೀರಿಕೊಳ್ಳುವ ಗ್ರ್ಯಾನ್ಯೂಲ್, ಅದು ನೀರನ್ನು ಅದರ ತೂಕದ 300 ಪಟ್ಟು ಹಿಡಿದಿಟ್ಟು ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಇದು ಜೀವರಾಶಿ ವಿಘಟನೆಯನ್ನು ವೇಗಗೊಳಿಸುವ ಮತ್ತು ಮಣ್ಣಿನಲ್ಲಿ ಸೂಕ್ಷ್ಮಜೀವಿಯ ಚಟುವಟಿಕೆಯನ್ನು ಹೆಚ್ಚಿಸುವ ನ್ಯಾನೊಪಾರ್ಟಿಕಲ್‌ಗಳನ್ನು ಒಳಗೊಂಡಿದೆ.

NABL ವರದಿಯು ತನ್ನ ಎರಡು ಉತ್ಪನ್ನಗಳ ಸಂಯೋಜನೆಯು ಮಣ್ಣಿನ ಆರೋಗ್ಯವನ್ನು ಅವಲಂಬಿಸಿ ಇಳುವರಿಯನ್ನು ಶೇಕಡೀ 15 ರಿಂದ 40 ಪ್ರತಿಶತದಷ್ಟು ಹೆಚ್ಚಿಸುತ್ತದೆ. ನೀರಾವರಿ ಅಗತ್ಯಗಳನ್ನು ಶೇಕಡಾ 33ರಷ್ಟು ಕಡಿಮೆ ಮಾಡುತ್ತದೆ ಎಂದು ದೃಢಪಡಿಸುತ್ತದೆ.

ದೇಶದ ಅತ್ಯುನ್ನತ ಮಾನ್ಯತೆ ಸಂಸ್ಥೆಯಿಂದ ಪ್ರಮಾಣಪತ್ರದೊಂದಿಗೆ ಅಕ್ಷಯ್ ತಮ್ಮ ಜೈವಿಕ ಗೊಬ್ಬರ ಮತ್ತು ಗ್ರ್ಯಾನ್ಯೂಲ್‌ಗಳ ಸಾಮೂಹಿಕ ಉತ್ಪಾದನೆಯನ್ನು ಮಾರ್ಚ್ 2021ರಲ್ಲಿ ಪ್ರಾರಂಭಿಸಿದರು. ನಂತರ ಮಾಧ್ಯಮಗಳಿಂದಲೂ ಪ್ರಚಾರ, ಜನಪ್ರಿಯತೆ ಸಿಕ್ಕಿ ಅಕ್ಷಯ್ ತಯಾರಿಸಿದ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಯಿತು.

ಅಕ್ಷಯ್ ಸರ್ಕಾರದಿಂದ ಸ್ಟಾರ್ಟ್ ಅಪ್ ಸಂಸ್ಥೆಯ ಹಣಸಹಾಯ ಯೋಜನೆಗೆ ಅರ್ಜಿ ಸಲ್ಲಿಸಿದ್ದು ತನ್ನದೇ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದ್ದಾನೆ. 

ಪ್ರಸ್ತುತ, ಇವರ ಜೈವಿಕ ಗೊಬ್ಬರ ಉತ್ಪಾದನಾ ಸಾಮರ್ಥ್ಯವು ತಿಂಗಳಿಗೆ 10 ಟನ್‌ಗಳಾಗಿದ್ದು, ತಿಂಗಳಿಗೆ ಸುಮಾರು 25 ಟನ್ ಗಳಷ್ಟು ಬೇಡಿಕೆ ಬರುತ್ತಿದೆಯಂತೆ. ಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸುವುದು ಅವರ ಮುಂದಿನ ಸವಾಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com