ಕೊಡವ ಹಾಕಿ ನಮ್ಮೆ: ಕಾಫಿ ನಾಡಿನಲ್ಲಿ ಮರುಕಳಿಸಿದ ವೈಭವ!

ಕಾಫಿ ನಾಡು ಕೊಡಗು ಹಾಕಿ ಕ್ರೀಡೆಗೂ ಹೆಸರುವಾಸಿ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರತಿಭಾನ್ವಿತ ಹಾಕಿ ಪಟುಗಳನ್ನು ನೀಡಿದ ಹೆಗ್ಗಳಿಕೆ ಈ ಪುಟ್ಟ ಜಿಲ್ಲೆಗೆ ಇದೆ. ಜಿಲ್ಲೆಯ ಹಾಕಿ ರಂಗಕ್ಕೆ ಕಳಶವಿಟ್ಟಂತೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರತಿ ವರ್ಷ ನಡೆಯುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಡಿಕೇರಿ: ಕಾಫಿ ನಾಡು ಕೊಡಗು ಹಾಕಿ ಕ್ರೀಡೆಗೂ ಹೆಸರುವಾಸಿ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರತಿಭಾನ್ವಿತ ಹಾಕಿ ಪಟುಗಳನ್ನು ನೀಡಿದ ಹೆಗ್ಗಳಿಕೆ ಈ ಪುಟ್ಟ ಜಿಲ್ಲೆಗೆ ಇದೆ. ಜಿಲ್ಲೆಯ ಹಾಕಿ ರಂಗಕ್ಕೆ ಕಳಶವಿಟ್ಟಂತೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರತಿ ವರ್ಷ ನಡೆಯುತ್ತದೆ.

ಕೋವಿಡ್-ಲಾಕ್ಡೌನ್ ನಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಕ್ರೀಡೆಯನ್ನು ಆಯೋಜನೆಗೊಳಿಸಲಾಗಿರಲಿಲ್ಲ. ಆದರೀಗ ಮತ್ತೆ ಕೊಡವ ಕುಟುಂಬಗಳ ಹಾಕಿ ನಮ್ಮೆ ವೈಭವ ಮೆರೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರೀಡೆಯನ್ನು ಶನಿವಾರ ಉದ್ಘಾಟನೆಗೊಳಿಸಿದ್ದು, ಇದು ಕೊಡವರ ಸಂತೋಷವನ್ನು ಮುಗಿಲು ಮುಟ್ಟುವಂತೆ ಮಾಡಿದೆ. ಮುಖ್ಯಮಂತ್ರಿಗಳು ಇದೇ ವೇಳೆ ಅಪ್ಪಚೇತೋಳಂಡ ಹಾಕಿ ಕಪ್ ಲಾಂಛನವನ್ನು ಬಿಡುಗಡೆ ಮಾಡಿದರು.

ಈ ಕ್ರೀಡೆ ಕೊಡಗಿನಲ್ಲಿ ಹಾಕಿ ಪ್ರೋತ್ಸಾಹಿಸುವುದಷ್ಟೇ ಈ ಉತ್ಸವದ ಉದ್ದೇಶವಲ್ಲ. ಮುಖ್ಯವಾಗಿ ಕೊಡವರ ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯುವುದು ಇದರ ಹಿಂದಿನ ಉದ್ದೇಶವಾಗಿದೆ. ಜಗತ್ತು ಬೆಳೆದಂತೆ ಕೊಡವರ ಹಲವು ಕುಟುಂಬಗಳು ವಿವಿಧ ಕಡೆ ಚದುರಿಹೋದವು. ಇವುಗಳ ನಡುವೆ ಸಂಪರ್ಕ, ಸಮನ್ವಯತೆ ತರುವುದು ಹಾಗೂ ಇವುಗಳ ನಡುವೆ ಒಗ್ಗಟ್ಟು ಮೂಡಿಸುವ ತಂತ್ರವಾಗಿದೆ.

ಈ ಉತ್ಸವಗಳ ಮತ್ತೊಂದು ಮಹತ್ವ ಪೂರ್ಣವಾದ ಪ್ರಯೋಜನವೆಂದರೆ ವೈವಾಹಿಕ ಸಂಬಂಧಗಳು ಸಹ ಏರ್ಪಡುತ್ತವೆ. ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತ ಕೊಡವರ ಕುಟುಂಬಗಳು ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗಿವೆ. ಹಾಕಿ ಉತ್ಸವವನ್ನು ವೀಕ್ಷಿಸುವ ನೆಪದಲ್ಲಿ ಈ ಕುಟುಂಬಗಳು ಮರಳಿ ಕೊಡಗಿಗೆ ಬರುತ್ತವೆ. ಬರುವಾಗ ಕುಟುಂಬದ ಯಜಮಾನ ತನ್ನ ಜೊತೆ ಇಡೀ ಕುಟುಂಬದ ಎಲ್ಲ ಸದಸ್ಯರನ್ನು ಕರೆದುಕೊಂಡು ಬರುತ್ತಾನೆ. ಮದುವೆ ವಯಸ್ಸಿಗೆ ಬಂದಂತಹ ಈ ಕುಟುಂಬಗಳ ಯುವಕ, ಯುವತಿಯರಿಗೆ ತಮ್ಮ ಜೀವನ ಸಂಗಾತಿಯನ್ನು  ಹುಡುಕಿಕೊಳ್ಳಲು ಸಹ ಇದು ವೇದಿಕೆಯಾಗುತ್ತದೆ. ಹೀಗೆ ಹಾಕಿ ಉತ್ಸವ ಕೊಡವರ ಜೀವನ ಪದ್ಧತಿಯಲ್ಲಿ ಮೀಳಿತವಾಗಿ ಬಿಟ್ಟಿದೆ.

ಕೊಡಗಿನ ಕುಟುಂಬಗಳನ್ನು ಒಟ್ಟುಗೂಡಿಸುವ ಸಲುವಾಗಿ ಹಾಲಿ ಅಧ್ಯಕ್ಷ ಬೋಪಣ್ಣ ಅವರ ತಂದೆ ಪಾಂಡಂಡ ಕುಟ್ಟಪ್ಪ ಅವರು 1997ರಲ್ಲಿ ಮೊದಲ ಕೊಡವ ಹಾಕಿ ಪಂದ್ಯಾವಳಿಯನ್ನು ಕರಡ ಗ್ರಾಮದಲ್ಲಿ ಆಯೋಜಿಸಿದ್ದರು. ಇದನ್ನು ಪಾಂಡಂಡ ಹಾಕಿ ಕಪ್ ಎಂದು ಕರೆಯಲಾಯಿತು. ಪಂದ್ಯಾವಳಿಗಾಗಿ 2 ಲಕ್ಷ ರೂ.ಗಳ ನಿಧಿಯನ್ನು ಸಮುದಾಯದಿಂದ ಸಂಗ್ರಹಿಸಲಾಗುತ್ತದೆ. ಒಟ್ಟು 60 ಕುಟುಂಬಗಳು ಈ ಕ್ರೀಡೆಯನ್ನು ಆರಂಭಿಸಿದ್ದು, ಕ್ರೀಡೆಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅವಕಾಶ ನೀಡಲಾಗುತ್ತಿದೆ.

1997ರಿಂದ 2018ರವರೆಗೆ ಸತಚ 22 ವರ್ಷಗಳ ಕಾಲ ಹಾಕಿಯನ್ನು ಆಯೋಜಿಸಲಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದೆ. ಕೊಡವ ಸಮುದಾಯದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರೀಡೆಯನ್ನು ಪ್ರಾರಂಭಿಸಲಾಗಿತ್ತು.

ಪಾಂಡಂಡ ಕುಟ್ಟಪ್ಪ ಕುಟ್ಟಣಿ ಮತ್ತು ಅವರ ಸಹೋದರ ಕಾಶಿ ಪೊನ್ನಪ್ಪ ಅವರು 1997ರಲ್ಲಿ ಕಂಡ ಕನಸಿನ ಕೂಸು ವಿಶ್ವಮಟ್ಟಕ್ಕೆ ಬೆಳೆಯುತ್ತದೆ, ಕೊಡಗಿನ ಕ್ರೀಡಾರಂಗದಲ್ಲಿ ಇತಿಹಾಸ ಸೃಷ್ಟಿಸುತ್ತದೆ ಎಂದು ಸ್ವತಃ ಅವರಿಗೆ ನಿರೀಕ್ಷೆ ಇರಲಿಲ್ಲ. ಕೊಡಗಿನ ಕ್ರೀಡಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೊಡವ ಹಾಕಿ ನಮ್ಮೆಯು 1997ರಲ್ಲಿ ಕರಡದಲ್ಲಿ 60 ತಂಡಗಳೊಡನೆ ಆರಂಭವಾಯಿತು. ನಂತರ ವರ್ಷದಲ್ಲಿ 116 ಕುಟುಂಬಗಳು ಬಾಗವಹಿಸಿದವು. 1999ರಲ್ಲಿ 140 ಮತ್ತು 2000ರಲ್ಲಿ 170 ಕುಟುಂಬಗಳು ಭಾಗವಹಿಸಿದವು. 2018ರ ಕುಲ್ಲೇಟಿರ ಹಾಕಿ ಕಪ್‌ನಲ್ಲಿ 329 ಕುಟುಂಬಗಳು ಭಾಗವಹಿಸುವುದರೊಂದಿಗೆ ಲಿಮ್ಕಾ ಬುಕ್ ದಾಖಲೆ ಕೂಡ ವಿಶ್ವಮಟ್ಟದಲ್ಲಿ ಕೊಡವ ಹಾಕಿಯನ್ನು ಗುರುತಿಸುವಂತಾಯಿತು.

2001 ರಲ್ಲಿ, ಕುಟ್ಟಪ್ಪ ಅವರಿಗೆ ಕೊಡವ ಹಾಕಿ ನಮ್ಮೆಗಾಗಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2018 ರಲ್ಲಿ 329 ತಂಡಗಳೊಂದಿಗೆ ಒಂದೇ ಸಮುದಾಯದಿಂದ ಆಡಿದ ವಿಶಿಷ್ಟ ಪಂದ್ಯಾವಳಿ ಎಂದು ಗುರುತಿಸಲ್ಪಟ್ಟ ನಂತರ ಕುಟ್ಟಪ್ಪ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದರು. ನವದೆಹಲಿಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಈ ವರ್ಷ 336 ಕುಟುಂಬಗಳು ಭಾಗವಹಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾಗಿದೆ.

<strong>2018 ರಲ್ಲಿ ಕುಲ್ಲೇಟಿರ ಹಾಕಿ ಕಪ್ ಸಮಯದಲ್ಲಿನ ಚಿತ್ರ</strong>
2018 ರಲ್ಲಿ ಕುಲ್ಲೇಟಿರ ಹಾಕಿ ಕಪ್ ಸಮಯದಲ್ಲಿನ ಚಿತ್ರ

ಸಮುದಾಯದೊಳಗೆ ಸಹಬಾಳ್ವೆ ಮತ್ತು ಕೌಟುಂಬಿಕ ಬಂಧಗಳನ್ನು ಉತ್ತೇಜಿಸುವ ಗುರಿಯನ್ನು ಗುರಿಯೊಂದಿಗೆ ಕ್ರೀಡೆಯನ್ನು ಆರಂಭಿಸಲಾಗಿತ್ತು ಎಂದು ನಿವೃತ್ತ ಹಾಕಿ ಗೋಲ್‌ಕೀಪರ್ ಚೆಪ್ಪುಡಿರ ಕಾರಿಯಪ್ಪ ಹೇಳಿದ್ದಾರೆ.

ಯಾವುದೇ ಪ್ರಯೋಜಕತ್ವ ಇಲ್ಲದೆ, ಹಾಕಿ ನಮ್ಮೆಯನ್ನು ಸಮುದಾಯ ಹಾಗೂ ಸಮುದಾಯಕ್ಕಾಗಿ ಆಯೋಜಿಸಲಾಗುತ್ತದೆ. ಕುಟುಂಬ ಕಡಿಮೆ ಸದಸ್ಯರನ್ನು ಹೊಂದಿದ್ದರೆ, ಆ ಸಂದರ್ಭದಲ್ಲಿ ಹುಡುಗಿಯರು ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಕ್ರೀಡೆಯಲ್ಲಿ ಅಂಪೈರ್'ಗಳು, ಕಾಮೆಂಟೇಟರ್ ಗಳು, ತಾಂತ್ರಿಕ ತಂಡದ ಸದಸ್ಯರು ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿತ ಅತಿಥಿಗಳೆಲ್ಲರೂ ಕೊಡವರೇ ಆಗಿರುತ್ತದೆ. ಆರಂಭದಲ್ಲಿ ಸರಳ ಹಾಕಿ ಪಂದ್ಯಾವಳಿ ಆಗಿ ಆರಂಭವಾದರೂ ಇದೀಗ, ಎಲ್ಲರ ಗಮನ ಸೆಳೆಯುತ್ತಿರುವ ಕ್ರೀಡೆಯಾಗಿ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಕ್ರೀಡೆ ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ರೀಡೆ ವೀಕ್ಷಿಸಲು ಮೈದಾನಗಳಲ್ಲಿ ದೊಡ್ಡ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಉತ್ಸವಕ್ಕೆ ರೂ.7-10 ಲಕ್ಷ ಖರ್ಚು ಮಾಡುತ್ತಿದ್ದ ಆಯೋಜಕರು ಈ ಬಾರಿ ಬರೋಬ್ಬರಿ ರೂ.2 ಕೋಟಿ ವ್ಯಯಿಸಿದ್ದಾರೆ. ಆರಂಭದಲ್ಲಿ ಪ್ರಯೋಜಕತ್ವೇ ಇಲ್ಲದೆ ಹೆಣಗಾಡುತ್ತಿದ್ದ ಕ್ರೀಡೆಗೆ ಇದೀಗ ಸರ್ಕಾರವೇ ಬೆಂಬಲ ನೀಡಲು ಮುಂದಾಗಿದೆ.

2002ರಲ್ಲಿ ಕ್ರೀಡೆಗೆ ಮೊದಲ ಬಾರಿಗೆ ಹೊರಗಿನ ವ್ಯಕ್ತಿಯೊಬ್ಬರು ಅತಿಥಿಯಾಗಿ ಆಗಮಿಸಿದ್ದರು, ಅಂದಿನ ರಾಜ್ಯದ ರಾಜ್ಯಪಾಲೆ ವಿ.ಎಸ್.ರಮಾದೇವಿಯವರು ಅತಿಥಿಯಾಗಿ ಆಗಮಿಸಿದ್ದರು. ಇದರೊಂದಿಗೆ ಕ್ರೀಡೆಗೆ ಸೆಲೆಬ್ರಿಟಿಗಳು ಅತಿಥಿಗಳಾಗಿ ಪಾಲ್ಗೊಳ್ಳಲು ದ್ವಾರ ತೆರೆದಂತಾಯಿತು. ಇಲ್ಲಿಯವರೆಗೆ ಕ್ರೀಡಾ ಉದ್ಘಾಟನಾ ಕಾರ್ಯಕ್ರಮಕ್ಕೆ ಪದ್ಮ ಪ್ರಶಸ್ತಿ ಪುರಸ್ಕೃತರಾದ ಲೆಸ್ಲಿ ಕ್ಲಾಡಿಯಸ್ ಮತ್ತು ಧನರಾಜ್ ಪಿಳ್ಳೆಯಿಂದ ಒಲಿಂಪಿಯನ್ ಜೂಡ್ ಫೆಲಿಕ್ಸ್, ಮತ್ತೊಬ್ಬ ಪದ್ಮ ಪ್ರಶಸ್ತಿ ಪುರಸ್ಕೃತ ಮೊಳ್ಳೆರ ಪಿ ಗಣೇಶ್, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ದಿವಂಗತ ನಟ ಅಂಬರೀಶ್ ಆಗಮಿಸಿದ್ದಾರೆ.

ಇಲ್ಲಿಂದ ಕ್ರೀಡೆಗೆ ವ್ಯಾಪಕ ಗುರ್ತಿಕೆ ಸಿಕ್ಕಿತು. ಪ್ರವಾಸೋದ್ಯಮ ವಲಯದಲ್ಲೂ ಸ್ಥಾನ ಪಡೆದುಕೊಂಡಿತು. ಈ ಬಾರಿಯ ಕ್ರೀಡೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದ್ದು, ಕಾರ್ಯಕ್ರಮ ಉದ್ಘಾಟನೆಗೆ ಸಾಂಪ್ರದಾಯಿಕ ಕೊಡವ ತಂಡಗಳು ಪ್ರದರ್ಶನಗಳನ್ನು ನೀಡಿದವು. ಕಳೆದ 20 ವರ್ಷಗಳಿಂದ, ಕೇವಲ ಒಂದೆರಡು ಹಾಕಿ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಕಾರಿಯಪ್ಪ ಅವರು ಮಾಹಿತಿ ನೀಡಿದ್ದಾರೆ.

ಹಾಕಿ ಶಿಬಿರಗಳ ಮೂಲಕ ಜಿಲ್ಲೆಯಲ್ಲಿ ಮೂಲಭೂತ ಹಾಕಿ ತರಬೇತಿಯನ್ನು ನೀಡಬೇಕಿದ್ದು, ಇಂತಹ ಕ್ರೀಡಾಕೂಟಗಳ ಮೂಲಕ ಅದನ್ನು ಬಲಪಡಿಸಬಹುದು. ಸರ್ಕಾರ ಜಿಲ್ಲೆಗೆ ಸಮರ್ಪಕವಾಗಿ ಪ್ರಾತಿನಿಧ್ಯ ನೀಡಬೇಕು ಎಂದು ಮಾಜಿ ಹಾಕಿ ಆಟಗಾರರು ಹೇಳಿದ್ದಾರೆ.

ಕೊಡಗು ಜಿಲ್ಲೆ ವಿವಿಧ ಕ್ರೀಡೆಗಳಿಗೆ 100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಆಟಗಾರರನ್ನು ನೀಡಿದ್ದು, 18 ಒಲಿಂಪಿಯನ್‌ಗಳಿಗೆ ನೆಲೆಯಾಗಿದೆ. ಆದರೆ, ಇಲ್ಲಿ ಕ್ರೀಡೆಗೆ ಸೌಲಭ್ಯಗಳ ಕೊರತೆ ಇದೆ ಎಂದು ಕರಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಅದೇನೇ ಇದ್ದರೂ, ಹಾಕಿ ಕೊಡವರ ವಂಶವಾಹಿಗಳಲ್ಲಿದೆ ಮತ್ತು ಈ ಹಬ್ಬ ಬಗ್ಗೆ ಸಮುದಾಯದ ಉತ್ಸಾಹವನ್ನು ಉತ್ತೇಜಿಸುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ವಯಸ್ಸಿನ ನಿರ್ಬಂಧವಿಲ್ಲ, ಇದು ಅನೇಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡಿದೆ. “ನಾಲ್ಕು ವರ್ಷಗಳ ವಿರಾಮದ ನಂತರ, ಹಾಕಿ ಉತ್ಸವವು ಸಮುದಾಯವನ್ನು ಒಗ್ಗೂಡಿಸುವ ಮತ್ತು ಪ್ರೇರೇಪಿಸುವ ಧ್ಯೇಯವಾಕ್ಯದೊಂದಿಗೆ ಮರಳಿದೆ. ಈ ವರ್ಷದ ಹೆಸರು ಈಗಾಗಲೇ ಜೂನಿಯರ್ ಇಂಡಿಯಾ ಹಾಕಿ ತಂಡ ಮತ್ತು ಕೂರ್ಗ್ ರೆಜಿಮೆಂಟ್ ತಂಡ ಆಡಿದ ವಿಶೇಷ ಪ್ರದರ್ಶನ ಪಂದ್ಯಗಳಂತಹ ಅನೇಕ ಪ್ರಥಮಗಳನ್ನು ಕಂಡಿದೆ. 25,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸಿರುವ ಮೂರು ಮೈದಾನಗಳಲ್ಲಿ ಪಂದ್ಯಾವಳಿ ನಡೆಯಲಿದೆ,’’ ಎಂದು ಈ ಬಾರಿಯ ಕೊಡವ ಹಾಕಿ ನಮ್ಮೆ ಅಧ್ಯಕ್ಷ ವಹಿಸಿರುವ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com