ಪ್ರಾಥಮಿಕ ಶಾಲಾ ಹಂತದಿಂದಲೇ ಟ್ರಾಫಿಕ್ ಸುರಕ್ಷತೆ ಬಗ್ಗೆ ಕಲಿಸಬೇಕು: ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ (ಸಂದರ್ಶನ)

ಪ್ರಾಥಮಿಕ ಶಾಲಾ ಹಂತದಿಂದಲೇ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆಯಿಂದ ಸೈಬರ್ ಅಪರಾಧಗಳವರೆಗೆ ಪಠ್ಯಕ್ರಮವನ್ನು ಪರಿಚಯಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಹೇಳಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ.

ಬೆಂಗಳೂರು: ಪ್ರಾಥಮಿಕ ಶಾಲಾ ಹಂತದಿಂದಲೇ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆಯಿಂದ ಸೈಬರ್ ಅಪರಾಧಗಳವರೆಗೆ ಪಠ್ಯಕ್ರಮವನ್ನು ಪರಿಚಯಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ವಿಚಾರವನ್ನು ಪ್ರಸ್ತಾಪಿಸಿದರು.

ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ನೀವು ಕೈಗೊಂಡ ಉಪಕ್ರಮಗಳನ್ನು ವಿವರಿಸುವಿರೇ?
ನಾನು ಬೆಂಗಳೂರಿನ 38ನೇ ಪೊಲೀಸ್ ಆಯುಕ್ತ. ಇದು 1963 ರಿಂದ ಅಸ್ತಿತ್ವದಲ್ಲಿದೆ, ಆದ್ದರಿಂದ ನಾವು ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯ 60 ನೇ ವರ್ಷದಲ್ಲಿ ಇದ್ದೇವೆ. ಈ ಹುದ್ದೆ ಸಾಕಷ್ಟು ಸವಾಲಗಳನ್ನು ಹೊಂದಿದೆ. ಸಾಕಷ್ಟು ಅಧಿಕಾರಿಗಳನ್ನೂ ನೀಡಲಾಗಿದೆ. ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ನ ಅಧಿಕಾರವೂ ನಮಗಿದೆ. ಬೆಂಗಳೂರು ನಗರ ಪೊಲೀಸ್ ವಿಕಸನಗೊಂಡಿದ್ದು, ಹಿಂದಿನ ಎಲ್ಲಾ ಪೊಲೀಸ್ ಅಯುಕ್ತರು ನಗರಕ್ಕೆ ಅವರದ್ದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದನ್ನು ಮುಂದುವರಿಸಲಾಗುತ್ತಿದೆ.

ಸೇಫ್ ಸಿಟಿ ಯೋಜನೆಯಿಂದ ನಗರಕ್ಕೆ ಯಾವ ರೀತಿಯ ಪ್ರಯೋಜನವಾಗುತ್ತಿದೆ?
ನಾನು ಅಧಿಕಾರ ವಹಿಸಿಕೊಂಡಾಗ ಯೋಜನೆಯನ್ನು ನನ್ನ ಗಮನಕ್ಕೆ ತರಲಾಗಿತ್ತು. ಇದೀಗ 1ನೇ ಹಂತ ಪೂರ್ಣಗೊಂಡಿದೆ. 2ನೇ ಹಂತ ಪ್ರಗತಿಯಲ್ಲಿದೆ. ಇದು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಜಂಟಿಯಾಗಿ 667 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಯೋಜನೆಯಡಿ ನಗರದಾದ್ಯಂತ ಸುಮಾರು 7,500 ಕ್ಯಾಮೆರಾಗಳನ್ನು ಹಾಕಲಾಗಿದ್ದು, ಮುಂದಿನ ತಿಂಗಳು ಹೊಸ ಕಮಾಂಡ್ ಸೆಂಟರ್ ಬರಲಿದೆ. ನಮ್ಮ ಅಸ್ತಿತ್ವದಲ್ಲಿರುವ ಎಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗಳು ಮತ್ತು 112 ಹೊಯ್ಸಳ ನಿಯಂತ್ರಣ ಕೊಠಡಿಗಳು ಈ ಕೇಂದ್ರದ ಅಡಿಯಲ್ಲಿ ಬರುತ್ತವೆ. ಬ್ಯಾಕೆಂಡ್‌ನಲ್ಲಿರುವ ಈ ಎಲ್ಲಾ ಕ್ಯಾಮೆರಾಗಳು ಕೃತಕ ಬುದ್ಧಿಮತ್ತೆಯನ್ನು ಹೊಂದಿವೆ. ಮುಖ ಮತ್ತು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆಯ ಸಾಮರ್ಥ್ಯವನ್ನು ಇದು ಹೊಂದಿವೆ. ಇದು ದೊಡ್ಡ ಬದಲಾವಣೆಯನ್ನು ತರಲಿದೆ ಎಂಬುದು ನನ್ನ ಭಾವನೆ.

ಲೋಕ ಸ್ಪಂದನ ಎಂದರೇನು?
ಪೊಲೀಸ್ ಸೇವೆಯನ್ನು ಜನಸ್ನೇಹಿಯನ್ನಾಗಿ ಮಾಡಲು, ನಾವು ‘ಲೋಕ ಸ್ಪಂದನ’ವನ್ನು ಪರಿಚಯಿಸಿದ್ದೇವೆ. ಪೊಲೀಸರ ಸೇವೆಗಳ ಕುರಿತು ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲಾಗುವುದು. ನಗರದ ಯಾವುದೇ ಪೊಲೀಸ್ ಠಾಣೆಗೆ ಬರುವ ವ್ಯಕ್ತಿಯನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದರ ಕುರಿತು ಯಾರಾದರೂ ಸ್ವತಂತ್ರವಾಗಿ ಮತ್ತು ಸರಳವಾಗಿ, ತ್ವರಿತವಾಗಿ ಪ್ರತಿಕ್ರಿಯೆಯನ್ನು ನೀಡಬಹುದು. ಪೋಲಿಸ್ ಠಾಣೆಗಳಿಗೆ ರೇಟಿಂಗ್ ನೀಡಬಹುದು. ಪೋಲೀಸರ ಬಗ್ಗೆ ಅಥವಾ ಠಾಣೆಯಲ್ಲಿ ಅವರು ಎದುರಿಸಿದ ಯಾವುದೇ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಪೊಲೀಸ್ ಠಾಣೆಯಲ್ಲಿ ಕ್ಯೂಆರ್ ಕೋಡ್ ಗಳನ್ನೂ ಕೂಡ ನೀಡಲಾಗಿದೆ. 12 ರಿಂದ 14 ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ರತಿಕ್ರಿಯೆ ನೀಡಲು ಅದನ್ನು ಸ್ಕ್ಯಾನ್ ಮಾಡಬಹುದು. ಬ್ಯಾಕೆಂಡ್‌ನಲ್ಲಿ, ಇವೆಲ್ಲವನ್ನೂ ಒಟ್ಟುಗೂಡಿಸಲಾಗುತ್ತದೆ ಮತ್ತು ಇದನ್ನು ಕಮಿಷನರ್ ಹಂತದವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ.

ಜನರ ಪ್ರತಿಕ್ರಿಯೆ ಹೇಗಿದೆ?
ಸಲಹೆಗಳಿಗಿಂತ ಹೆಚ್ಚಾಗಿ ಸಮಸ್ಯೆಗಳೇ ಕೇಳಿ ಬರುತ್ತಿವೆ. ಠಾಣೆಗಳಲ್ಲಿ ಜನರ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ವಿಳಂಬವಾಗುತ್ತಿದೆ ಎಂಬ ಪ್ರತಿಕ್ರಿಯೆಗಳು ಬರುತ್ತಿವೆ. ಶೇ.85-87ರಷ್ಟು ಜನರು ಸಕಾರಾತ್ಮಕ ಮತ್ತು ತೃಪ್ತಿಕರ ಉತ್ತರಗಳನ್ನು ನೀಡಿದ್ದಾರೆ. 243 ಹೊಯ್ಸಳ-ನಿಯಂತ್ರಿತ ವಾಹನಗಳ ಕುರಿತು ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಪಡೆದಿದ್ದೇವೆ. 112 ತುರ್ತು ಸಂಖ್ಯೆ ಕುರಿತಂತೆಯೂ ಪ್ರತಿಕ್ರಿಯೆ ಪಡೆದಿದ್ದೇವೆ.

ಪೊಲೀಸ್ ಕಮಿಷನರ್ ಆಗಿ ನಗರವನ್ನು ಹೇಗೆ ವಿವರಿಸುತ್ತೀರಿ?
ಸಮಾಜ ಇರುವವರೆಗೆ ಅಪರಾಧಗಳು ಇದ್ದೇ ಇರುತ್ತವೆ. ಅಪರಾಧ ನಿಯಂತ್ರಣ ಶೇವಿಂಗ್ ಇದ್ದಂತೆ. ಇವರು ನಗರ ಅಥವಾ ನ್ಯಾಯವ್ಯಾಪ್ತಿಯಿಂದ ಅಪರಾಧವನ್ನು ನಿರ್ಮೂಲನೆ ಮಾಡಿದ್ದಾರೆ ಅಥವಾ ಅದನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ನಾವು ಪ್ರತಿದಿನ ಕ್ಷೌರ ಮಾಡಬೇಕು, ಒಂದು ದಿನ ಕ್ಷೌರ ಮಾಡದಿದ್ದರೆ ಅದು ಸ್ವಲ್ಪಮಟ್ಟಿಗೆ ಬೆಳೆಯುತ್ತದೆ. ಬಿಟ್ಟರೆ ಬೆಳೆಯುತ್ತಲೇ ಇರುತ್ತದೆ.

ಕೊಲೆ ಪ್ರಕರಣಗಳು ಹೆಚ್ಚುತ್ತಿವೆಯೇ?
ಅಂಕಿಅಂಶಗಳ ಪ್ರಕಾರ, ಕೊಲೆ ಪ್ರಕರಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಅಪರಾಧ ಪ್ರಕರಣಗಳಲ್ಲೂ ಇಳಿಕೆಯಾಗುತ್ತಿದೆ. ರಕ್ತಸಿಕ್ತ ಅಪರಾಧಗಳಿಗಿಂತ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳವಿದೆ.

ನಗರದಲ್ಲಿ ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಲು ನಮಗಿರುವ ಅಡೆತಡೆಗಳೇನು?
ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳಿವೆ. ಇಂದಿನವರೆಗೆ ಬೆಂಗಳೂರಿನಲ್ಲಿ ಸುಮಾರು 1.2 ಕೋಟಿ ವಾಹನಗಳನ್ನು ನೋಂದಾಯಿಸಿದ್ದೇವೆ, ಜೊತೆಗೆ ಹೊರಗಿನಿಂದ ಬರುವ ಇತರ ವಾಹನಗಳೂ ಕೂಡ ಇವೆ. ರಸ್ತೆಗಳು ಸೀಮಿತವಾಗಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳಿರುವ ಕಾರಣ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದಾರೆ. ಟ್ರಾಫಿಕ್ ಅನ್ನು ನಿಯಂತ್ರಿಸುವುದು, ಜಂಕ್ಷನ್‌ಗಳಲ್ಲಿ ಸಿಗ್ನಲ್‌ಗಳನ್ನು ಹಾಕಲಾಗುತ್ತಿದೆ. ಇತರೆ ನಾಗರಿಕ ಸಂಸ್ಥೆಗಳೊಂದಿಗೂ ಕೆಲಸ ಮಾಡುತ್ತಿದ್ದೇವೆ. ವರ್ಕ್ ಫ್ರಮ್ ಹೋಮ್ ನಿಂದ ಇದೀಗ ಎಲ್ಲರೂ ಕಚೇರಿಗೆ ಹೋಗಲು ಆರಂಭಿಸಿದ್ದಾರೆ, ಇದು ಸಮಸ್ಯೆಯನ್ನು ಉಲ್ಭಣಿಸಿದೆ.

ಶಾಲಾ ಪಠ್ಯಕ್ರಮದಲ್ಲಿ ಸಂಚಾರ ಜಾಗೃತಿಯನ್ನು ಪರಿಚಯಿಸುವುದು ಯಾವ ವಯಸ್ಸಿನಲ್ಲಿ ಸೂಕ್ತವಾಗಿರುತ್ತದೆ?
ಸಂಚಾರ ಸುರಕ್ಷತೆ ಕುರಿತ ಪಠ್ಯಕ್ರಮವನ್ನು ಪ್ರಾಥಮಿಕ ಹಂತದ ಪಠ್ಯಕ್ರಮದೊಂದಿಗೆ ಸಂಯೋಜಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಅರ್ಹವಾದ ಚಾಲನಾ ವಯಸ್ಸನ್ನು ತಲುಪುವ ಹೊತ್ತಿಗೆ, ಟ್ರಾಫಿಕ್ ಸುರಕ್ಷತೆಯ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಂಡಿರುತ್ತಾರೆ.

ಕಾಲೇಜು ಕ್ಯಾಂಪಸ್‌ನಲ್ಲಿ ಮಾದಕ ವಸ್ತುಗಳ ಲಭ್ಯತೆಯ ಬಗ್ಗೆ ಏನು ಹೇಳುತ್ತೀರಿ?
ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಯುವ ಪೀಳಿಗೆಗಳಲ್ಲಿ. ಕಾನೂನು ಒಂದರಿಂದ ಸಮಸ್ಯೆ ಬಗೆಹಿಸಲು ಸಾಧ್ಯವಿಲ್ಲ. ಸಮಾಜದ ಸಾಮೂಹಿಕ ಪ್ರಯತ್ನ ಕೂಡ ಮುಖ್ಯವಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು.

ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ಕಣ್ಗಾವಲು ಹೇಗಿದೆ?
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಹುಟ್ಟಿಕೊಂಡ ಪ್ರಕರಣಗಳ ಸಂಖ್ಯೆ ಮತ್ತು ಜನರು ಹಂಚಿಕೊಳ್ಳುವ ವಿಷಯದಿಂದಾಗಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಲು, ಪ್ರತಿ ಪೊಲೀಸ್ ಠಾಣೆಯಲ್ಲಿ ಈಗ ಕನಿಷ್ಠ ಇಬ್ಬರು ಕಾನ್ಸ್‌ಟೇಬಲ್‌ಗಳು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಕುರಿತು ತರಬೇತಿ ಪಡೆದಿದ್ದಾರೆ. ಸೈಬರ್ ಕ್ರೈಮ್ ಒಂದು ಗಮನಾರ್ಹ ವಿಚಾರವಾಗಿದ್ದು. ಯಾವುದೂ ಉಚಿತವಾಗಿ ಬರುವುದಿಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ವಂಚಕರ ಬಲೆಗೆ ಬೀಳುವುದನ್ನು ತಡೆಯಲು ಸಾಮಾಜಿಕ ಮಾಧ್ಯಮದಲ್ಲಿ ಯಾವ ಮಾಹಿತಿಯನ್ನು ಹಂಚಿಕೊಳ್ಳಬಾರದು.

ಸೈಬರ್ ಅಪರಾಧ ಪತ್ತೆ ದರ ಎಷ್ಟಿದೆ?
ಸೈಬರ್ ಕ್ರೈಮ್‌ನ ಪತ್ತೆ ಪ್ರಮಾಣ ಕಡಿಮೆಯಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಯಾವುದೇ ಸೈಬರ್ ಅಪರಾಧವನ್ನು ತ್ವರಿತವಾಗಿ ವರದಿ ಮಾಡಲು ಪ್ರೋತ್ಸಾಹಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ. ವರದಿ ಮಾಡಲು ಅನುಕೂಲವಾಗುವಂತೆ ಟೋಲ್-ಫ್ರೀ ಸಂಖ್ಯೆ, 1930 ಅನ್ನು ಪರಿಚಯಿಸಿದ್ದೇವೆ.

ಸೈಬರ್ ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ತಂತ್ರಜ್ಞಾನವಿದೆಯೇ?
ಬೆಂಗಳೂರು ಪ್ರಮುಖ ಐಟಿ ಕೇಂದ್ರವಾಗಿದೆ. ಸೈಬರ್ ಲ್ಯಾಬ್ ಸ್ಥಾಪಿಸಿದ್ದೇವೆ. ದೇಶದಲ್ಲೇ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಿದ ಮೊದಲ ನಗರ ನಮ್ಮದಾಗಿದೆ. ಇಂದು, ಪ್ರತಿ ವಿಭಾಗದಲ್ಲಿಯೂ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಠಾಣೆಯಿದೆ, ಸೈಬರ್ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಾದ ತಂತ್ರಜ್ಞಾನವನ್ನು ಹೊಂದಿದ್ದೇವೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪೊಲೀಸ್ ಠಾಣೆಗಳಲ್ಲಿಯೂ ಸೈಬರ್ ಅಪರಾಧ ದೂರುಗಳನ್ನು ದಾಖಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ.

ವಾಹನ ಕಳ್ಳತನದ ಬಗ್ಗೆ ವರದಿ ಮಾಡುವ ಪ್ರಕ್ರಿಯೆಯಂತೆಯೇ ದೂರುಗಳ ನೀಡಲು ಇ-ಎಫ್‌ಐಆರ್ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯಿದೆಯೇ?
ಟೋಲ್-ಫ್ರೀ ಸಂಖ್ಯೆಯು ಸೈಬರ್ ಕ್ರೈಮ್ ಪ್ರಕರಣಗಳನ್ನು ನಿರ್ವಹಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಸೈಬರ್ ಅಪರಾಧ ವರದಿಗಾಗಿ ಇ-ಎಫ್‌ಐಆರ್ ಪರಿಗಣಿಸುವ ಸಾಧ್ಯತೆಗಳಿವೆ.

IPC ಮತ್ತು CrPC ಯ ವಿಭಾಗಗಳಿಗೆ ತಿದ್ದುಪಡಿಗಳ ಕುರಿತು ನಿಮ್ಮ ಅಭಿಪ್ರಾಯವೇನು?
ಇದಕ್ಕೆ ಸಮಗ್ರ ವಿಶ್ಲೇಷಣೆಯ ಅಗತ್ಯವಿದೆ. ಈ ಬದಲಾವಣೆಗಳಿಗೆ ಸಂಬಂಧಿಸಿದ ಅಂತಿಮ ನಿರ್ಧಾರವು ಸಂಸತ್ತಿನ ಮೇಲಿದೆ.

ಸೈಬರ್ ಅಪರಾಧಗಳ ಪರಿಹರಿಸಲು ಹ್ಯಾಕರ್‌ಗಳನ್ನು ನೇಮಿಸಿಕೊಳ್ಳುತ್ತೀರಾ?
ಸೈಬರ್ ಕ್ರೈಮ್ ತನಿಖೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ತಾಂತ್ರಿಕ ಮತ್ತು ಸೈಬರ್ ಜ್ಞಾನದ ಪ್ರಾಮುಖ್ಯತೆ ಇದೆ. ಕೆಲವು ಪ್ರಕರಣಗಳಲ್ಲಿ ಅವರ ಸಹಾಯವನ್ನು ಪಡೆಯುತ್ತೇವೆ.

ತುರ್ತು ಕರೆಗಳಿಗಾಗಿ ಇಲಾಖೆಯು ಪರಿಚಯಿಸಿದ ಡಯಲ್ ಬೂತ್‌ಗಳಿಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಹೇಗಿದೆ?
ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಸಂಕಷ್ಟಕ್ಕೆ ಸಿಲುಕಿದ ಜನರು ಅಂತಿಮವಾಗಿ ಈ ಬೂತ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ನಗರದಲ್ಲಿ ಪ್ರಸ್ತುತ, 30 ಬೂತ್‌ಗಳು ಲಭ್ಯವಿದ್ದು, ನಾವು ಇನ್ನೂ 20 ಬೂತ್‌ಗಳನ್ನು ಸೇರಿಸುವ ಪ್ರಕ್ರಿಯೆ ಮುಂದುವರೆದಿದೆ.

ನಗರದಲ್ಲಿ ಹೊಸ ಪೊಲೀಸ್ ಠಾಣೆಗಳ ಕುರಿತು ಏನು ಹೇಳುತ್ತೀರಿ?
ಐದು ಹೊಸ ಸಂಚಾರ ಠಾಣೆಗಳು ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಅಪರಾಧಗಳ ಸಂಖ್ಯೆ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳ ವಿಷಯದಲ್ಲಿ ಹೆಚ್ಚಿನ ಹೊರೆ ಹೊಂದಿರುವ ಪೊಲೀಸ್ ಠಾಣೆಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ಒದಗಿಸಲಾಗುತ್ತದೆ. ಇನ್ನೆರಡು ವರ್ಷಗಳಲ್ಲಿ ಎರಡು ಹಂತಗಳಲ್ಲಿ 2,454 ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಪಿಕ್ ಪಾಕೆಟ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆಯೇ?
ಹೌದು, ಬಹುಪಾಲು ಜನರು ಹೆಟ್ಟು ಡಿಜಿಟಲ್ ಪಾವತಿ ಬಳಕೆ ಮಾಡುತ್ತಿರುವುದರಿಂದ ಇದು ಕಡಿಮೆಯಾಗಿದೆ.

ಬೆಂಗಳೂರಿಗೆ ಇಬ್ಬರು ಪೊಲೀಸ್ ಆಯುಕ್ತರು ಬೇಕಾ?
ಈ ಕುರಿತ ನಿರ್ಧಾರ ಸರ್ಕಾರದ ನೀತಿಗಳ ಮೇಲೆ ನಿಂತಿದೆ. ಆದರೆ ನನ್ನ ಅಭಿಪ್ರಾಯದಲ್ಲಿ, ಇಬ್ಬರು ಆಯುಕ್ತರನ್ನು ಹೊಂದಿರುವ ಇತರ ನಗರಗಳಿಗಿಂತ ಬೆಂಗಳೂರು ಭಿನ್ನವಾಗಿದೆ.

ಅಪರಾಧಿಗಳ ಪತ್ತೆಗೆ ಬೆಂಗಳೂರು ಪೊಲೀಸರು ಫೇಷಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆಯೇ?
ಸೇಫ್ ಸಿಟಿ ಯೋಜನೆಯಡಿ, ನಾವು ಫೇಷಿಯಲ್ ರೆಕಗ್ನಿಷನ್ ಗಾಗಿ ಒಂದು ದೊಡ್ಡ ಘಟಕವನ್ನೇ ಹೊಂದಿದ್ದೇವೆ. ನಾವು ಹಾಕಿರುವ 7,500 ಕ್ಯಾಮೆರಾಗಳಲ್ಲಿ ಹಲವು ಕ್ಯಾಮೆರಾಗಳು ಮುಖ ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ.

ಡೇಟಾವನ್ನು ಉತ್ತಮವಾಗಿ ರಕ್ಷಿಸಲಾಗುತ್ತಿದೆಯೇ?
ಸಂಪೂರ್ಣವಾಗಿ ಸಂಗ್ರಹಿಸಿಡಲಾಗುತ್ತಿದೆ. ನಾವು ನಮ್ಮದೇ ಆದ ಸರ್ವರ್‌ಗಳನ್ನು ಹೊಂದಿದ್ದೇವೆ. ಅವುಗಳು ಎಲ್ಲಾ ಭದ್ರತಾ ಪ್ರೋಟೋಕಾಲ್‌ಗಳನ್ನು ಹೊಂದಿವೆ.

ಪೊಲೀಸರು ಒತ್ತಡವನ್ನು ಹೇಗೆ ನಿವಾರಿಸುತ್ತಾರೆ?
ಒತ್ತಡವು ವೈಯಕ್ತಿಕವಾದದ್ದು. ನಾವು ಇಲಾಖೆಯಲ್ಲಿ ಸಲಹೆಗಾರರನ್ನು ಹೊಂದಿದ್ದೇವೆ. ಯಾರಿಗೆ ಯಾವುದೇ ಸಮಸ್ಯೆ ಇದ್ದರೂ ಅವರೊಂದಿಗೆ ಮಾತನಾಡಬಹುದು. ಪೊಲೀಸರು ಏಕರೂಪದ ಪಡೆ, ಅಲ್ಲಿ ಸೌಹಾರ್ದತೆ ಮತ್ತು ಏಕರೂಪತೆ ಇದೆ.

ನೀವು ನಾಗರಿಕ ಸೇವೆಯನ್ನು ಆಯ್ಕೆ ಮಾಡಲು ಕಾರಣವೇನು?
ನನ್ನ ತಂದೆ ಸರ್ಕಾರಿ ನೌಕರನಾಗಿದ್ದರಿಂದ ನಾನು ಸಾರ್ವಜನಿಕ ಸೇವೆಯಲ್ಲಿರಲು ಬಯಸಿದ್ದೆ. ಇದರಂತೆ ನಾನು IPS ಗೆ ಸೇರಿಕೊಂಡೆ.

ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ನೀವು ಹೇಗೆ ನಿಭಾಯಿಸುತ್ತೀರಿ?
ಸೇವೆ ವೇಳೆ ಕೆಲವು ವೈಯಕ್ತಿಕ ಮತ್ತು ಕುಟುಂಬ ತ್ಯಾಗಗಳನ್ನು ಮಾಡಬೇಕಾಗುತ್ತದೆ. ನನ್ನ ವಿಷಯದಲ್ಲಿ, ನನ್ನ ನಿಶ್ಚಿತಾರ್ಥವನ್ನು ಒಂದು ದಿನ ಮುಂದೂಡಲಾಗಿತ್ತು. ನನ್ನ ಇಬ್ಬರು ಪುತ್ರರ ನಾಮಕರಣ ಸಮಾರಂಭಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ನನ್ನ ಅಧೀನದಲ್ಲಿರುವ ಅಧಿಕಾರಿಗಳಿಗೆ ರಜೆಯನ್ನು ನಿರಾಕರಿಸುವುದಿಲ್ಲ. ಸಿಬ್ಬಂದಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಕೆಲಸ ಆರಂಭಿಸಿದ್ದಕ್ಕೆ ಇದೂ ಒಂದು ಕಾರಣವಾಗಿದೆ. ಈ ಮೂಲಕ ಸಿಬ್ಬಂದಿಗಳಿಗೆ ರಜೆ ನೀಡಬೇಕೆಂದು ಒತ್ತಾಯಸಲಾಗುತ್ತಿದೆ.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆಯೇ?
ಇದೆ. ಆದರೆ ಅದು ಗ್ರಹಿಕೆಯ ವಿಷಯವಾಗಿದೆ. ನಾವು ಬಯಸಿದ ಸಿಬ್ಬಂದಿಗಳ ಸಂಖ್ಯೆಯನ್ನು ನಾವು ಎಂದಿಗೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಲಭ್ಯವಿರುವ ಸಿಬ್ಬಂದಿಯ ಅತ್ಯುತ್ತಮ ಬಳಕೆ ಮತ್ತು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುಲು ವಿಭಾಗವನ್ನು ರೂಪಿಸಿಕೊಂಡಿದ್ದೇವೆ. ನಾವು ಅಳವಡಿಸಿರುವ ಪ್ರತಿಯೊಂದು ಕ್ಯಾಮೆರಾವೂ ನಮ್ಮ ಕಣ್ಣು ಮತ್ತು ಕಿವಿಗಳಾಗಿವೆ. ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಆದಾಗ್ಯೂ, ದೆಹಲಿ, ಮುಂಬೈ, ಚೆನ್ನೈ ಅಥವಾ ಕೋಲ್ಕತ್ತಾದಂತಹ ಇತರ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ, ನಮ್ಮ ಒಂದು ಲಕ್ಷ ಜನಸಂಖ್ಯೆಗೆ ಅಥವಾ ಪ್ರದೇಶವಾರು ಜನಸಂಖ್ಯೆಗೆ ಕಡಿಮೆ ಸಂಖ್ಯೆಯ ಪೊಲೀಸರನ್ನು ಹೊಂದಿದ್ದೇವೆ.

ಪೊಲೀಸ್ ಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಬಗ್ಗೆ ಏನು ಹೇಳುತ್ತೀರಿ?
ಮಹಿಳಾ ಪಡೆಗಳು ಶೇ.13-14 ರಷ್ಟಿದ್ದಾರೆ. ಈ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಟ್ರಾಫಿಕ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಕೇಂದ್ರಗಳು ಮಹಿಳೆಯರ ನೇತೃತ್ವದಲ್ಲಿರುತ್ತವೆ. ಮಹಿಳಾ ಎಸಿಪಿಗಳು ಮತ್ತು ಡಿಸಿಪಿಗಳೂ ಇದ್ದಾರೆ.

ನೀವು ಬದಲಾಯಿಸಲು ಬಯಸಿದ್ದಿರಿ, ಆದರೆ, ಸಾಧ್ಯವಾಗಲಿಲ್ಲ ಎಂಬುದು ಏನಾದರೂ ಇದೆಯೇ?
ನಾನು ಬದಲಾಯಿಸಲು ಬಯಸುವ ಒಂದು ವಿಚಾರವೆಂದರೆ ಎಂಟು ಗಂಟೆಗಳ ಕೆಲಸದ ಶಿಫ್ಟ್ ಅನ್ನು ತರುವುದು. ನಮ್ಮ ಹೊಯ್ಸಳ ಸಿಬ್ಬಂದಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿ 15 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುಧಾರಣೆ ತರಬೇಕಿದೆ.

ಹೆಚ್ಚು ಸವಾಲಾಗಿ ಪರಿಣಮಿಸುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದೇ ಅಥವಾ ಟ್ರಾಫಿಕ್ ನಿರ್ವಹಣೆ ಮಾಡುವುದೇ?
ಟ್ರಾಫಿಕ್, ಸೈಬರ್ ಕ್ರೈಮ್‌ ಮತ್ತು ಡ್ರಗ್ಸ್ ಮೂರೂ ಸವಾಲಿನ ಕೆಲಸವೇ ಆಗಿವೆ.

ಸೈಬರ್ ಅಪರಾಧ ಕುರಿತ ಇತ್ತೀಚಿನ ಟ್ರೆಂಡ್ ಯಾವುದು?
ಪ್ರತಿದಿನ, ಪ್ರತಿ ಸೆಕೆಂಡ್ ವಂಚಕರು ಒಂದು ಅಥವಾ ಇನ್ನೊಂದು ರೀತಿಯಲ್ಲಿ ಜನರನ್ನು ವಂಚಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಜನರನ್ನು ವಂಚಕರಿಂದ ದೂರ ಇರಲು ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಸೈಬರ್ ಸಲಹೆಗಳನ್ನು ನೀಡುತ್ತಲೇ ಇರುತ್ತೇವೆ. ಅಲ್ಲಿ ನಾವು ವಿವಿಧ ರೀತಿಯ ಸೈಬರ್ ಅಪರಾಧಗಳು ಮತ್ತು ಮೋಸದ ಹೊಸ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ.

ಗಂಟೆಗಟ್ಟಲೆ ಕರ್ತವ್ಯದಲ್ಲಿರುವ ಟ್ರಾಫಿಕ್ ಪೊಲೀಸರಿಗೆ ಏನು ಸೌಲಭ್ಯ ನೀಡಲಾಗಿದೆ?
ಚೌಕಿಗಳನ್ನು ನೀಡಲಾಗಿದೆ. ಅವುಗಳು ಸಿಬ್ಬಂದಿಗಳನ್ನು ಸೂರ್ಯನ ಬೆಳಕು, ಮಳೆ ಮತ್ತು ಮಾಲಿನ್ಯದಿಂದ ರಕ್ಷಿಸುತ್ತವೆ. 30 ‘ನೆರವು’ ಬೂತ್‌ಗಳಿದ್ದು, ಸಾರ್ವಜನಿಕರು ಪೊಲೀಸ್ ನೆರವು ಪಡೆಯಬಹುದು. ಬಂಕರ್ ಬೆಡ್ ಮತ್ತು ಶೌಚಾಲಯದಂತಹ ಸೌಲಭ್ಯಗಳಿರುವುದರಿಂದ ಈ ಕೇಂದ್ರಗಳನ್ನು ಸಿಬ್ಬಂದಿ ವಿಶ್ರಾಂತಿ ಸ್ಥಳಗಳಾಗಿಯೂ ಬಳಸಬಹುದು. ಇಂತಹ ಇನ್ನೂ ಮೂವತ್ತು ಕೇಂದ್ರಗಳು ಬರಲಿವೆ. ಅಲ್ಲದೆ, ಮೊಬೈಲ್ ಶೌಚಾಲಯಗಳನ್ನು ಪರಿಚಯಿಸಲು ಚಿಂತನೆಗಳು ನಡೆಯುತ್ತಿವೆ.

ಅಪರಾಧಗಳಿಗೆ ಗುರಿಯಾಗುವುದನ್ನು ತಡೆಯಲು ನಾಗರಿಕರಿಗೆ ಯಾವ ಸಲಹೆಗಳನ್ನು ನೀಡುತ್ತೀರಿ?
ಬೆಂಗಳೂರಿನ ನಾಗರಿಕರು ಸಾಕಷ್ಟು ಪ್ರಬುದ್ಧರು, ಕಾನೂನು ಪಾಲಿಸುವವರು, ಸಹಕಾರಿ ಮತ್ತು ಪೊಲೀಸರಿಗೆ ಬೆಂಬಲ ನೀಡುತ್ತಾರೆ. ಅವರಿಗೆ ನೀಡಲು ಬಯಸುವ ಏಕೈಕ ಸಲಹೆಯೆಂದರೆ, ವಂಚಕರಿಂದ ದೂರ ಉಳಿಯಲು ಸಾಮಾನ್ಯ ಜ್ಞಾನ ಬಳಸುವಂತೆ ನಾನು ಹೇಳಲು ಬಯಸುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com