ಜಾರ್ಖಂಡ್: ತಮ್ಮ ಹೊಲದಲ್ಲಿನ ಬೆಳೆಗೆ ನೀರಿನ ಅಭಾವ ಉಂಟಾದಾಗ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಕುಮಿರ್ತಾ ಗ್ರಾಮದ ಚುಂಬ್ರು ತಮ್ಸೋಯ್ ಎಂಬ ರೈತ 100 ಅಡಿ ಅಗಲದ ಹೊಂಡವನ್ನು ತಾವೇ ತೋಡಿದ್ದಾರೆ. ಅವರ ಕನಸು ನನಸಾಗಲು 40 ವರ್ಷಗಳು ಬೇಕಾಯಿತಾದರೂ, ಕೊನೆಗೂ ರೈತನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.
75 ವರ್ಷದ ಅವರು ಈಗ ಸುಮಾರು ಐದು ಎಕರೆ ಜಮೀನಿನಲ್ಲಿ ತಮ್ಮ ಬೆಳೆಗಳಿಗೆ ನೀರುಣಿಸುತ್ತಿದ್ದು, ತಮ್ಮ ಜಮೀನಿನಲ್ಲಿ ಮಾವು, ಅರ್ಜುನ್, ಬೇವು, ಸಾಲ್ ಸೇರಿದಂತೆ ಸುಮಾರು 60 ಮರಗಳನ್ನು ನೆಟ್ಟಿದ್ದಾರೆ. ಚುಂಬ್ರು ಅವರಿದ್ದ ಸ್ಥಳದಲ್ಲಿ ಭೀಕರ ಬರಗಾಲ ಎದುರಾದಾಗ, 1975ರಲ್ಲಿ ಅವರು ಜೀವನ ಕಟ್ಟಿಕೊಳ್ಳಲು ಲಖನೌಗೆ ವಲಸೆ ಹೋದರು. ಈ ವೇಳೆ ಅವರು ಅನೇಕ ಕಷ್ಟಗಳನ್ನು ಎದುರಿಸಿದರು ಮತ್ತು ನಿಯಮಿತವಾಗಿ ಸಂಬಳ ಸಹ ಸಿಗುತ್ತಿರಲಿಲ್ಲ.
ಇದರಿಂದ ಅಲ್ಲೂ ಸಂಕಷ್ಟಕ್ಕೀಡಾದ ಅವರು, ಮತ್ತೆ ತಮ್ಮ ಹಳ್ಳಿಗೆ ಮರಳಲು ನಿರ್ಧರಿಸಿದರು. 'ನನ್ನ ಮನೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿ ನಾನು ಅದೇ ಕೆಲಸವನ್ನು ಮಾಡಲು ಸಾಧ್ಯವಿದೆ ಎಂದರೆ, ನನ್ನ ಸ್ವಂತ ಭೂಮಿಯಲ್ಲೇಕೆ ನಾನು ಕಠಿಣ ಕೆಲಸವನ್ನು ಮಾಡಬಾರದು ಎಂದು ನಾನು ಯೋಚಿಸಿದೆ. ಒಂದು ತಿಂಗಳ ಕಾಲ ಅಲ್ಲಿದ್ದು, ನಂತರ ಮನೆಗೆ ಹಿಂತಿರುಗಿದೆ. ನನ್ನ ಏಳು ಎಕರೆ ಭೂಮಿಯಲ್ಲಿ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದೆ ಮತ್ತು ಮರಗಳನ್ನು ನೆಟ್ಟೆ. ಆದರೆ. ಅದಾದ ಕೆಲವೇ ದಿನಗಳಲ್ಲಿ ಈ ಪ್ರದೇಶದಲ್ಲಿ ನೀರಿನ ಕೊರತೆ ಎದುರಾಯಿತು' ಎಂದು ಹೇಳುತ್ತಾರೆ ಚುಂಬ್ರು.
'ನಮ್ಮದೇ ಗ್ರಾಮದಲ್ಲಿದ್ದ ಕೆಲವರ ಹೊಂಡಗಳಿಂದ ನನ್ನ ಹೊಲಕ್ಕೆ ನೀರುಣಿಸುವಂತೆ ಕೇಳಿದೆ. ಅವರು ನಿರಾಕರಿಸಿದರು. ಈ ನಿರಾಕರಣೆಯೇ, ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ಪಡೆಯಿತು. ಆಗ ನಾನು, ನಾನೇ ಒಂದು ಕೊಳವನ್ನು ತೋಡಲು ನಿರ್ಧರಿಸಿದೆ' ಎಂದು ಅವರು ಹೇಳಿದರು.
ಕುಟುಂಬ ಸದಸ್ಯರ ಪ್ರಕಾರ, ಚುಂಬ್ರು ಅವರು ಪ್ರತಿದಿನ ಹೊಂಡವನ್ನು ತೋಡುವ ಕೆಲಸ ಮಾಡುತ್ತಿದ್ದರು ಮತ್ತು ಆಗಾಗ್ಗೆ ಮಧ್ಯರಾತ್ರಿಯೂ ಮನೆಯಿಂದ ಸೀಮೆಎಣ್ಣೆ ದೀಪ ತೆಗೆದುಕೊಂಡು ಹೋಗಿ ಕೊಳದ ಕೆಲಸ ಮಾಡುತ್ತಿದ್ದರು.
'ಹೊಂಡ ತೋಡುವ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಸಹಾಯ ಮಾಡಿಲ್ಲ. ನನ್ನ ಮಾವ ಎಂದಿಗೂ ಇತರರ ನೆರವು ಕೋರಲಿಲ್ಲ. ಅಗೆಯುವುದರಿಂದ ಹಿಡಿದು ಮಣ್ಣನ್ನು ಹೊತ್ತು ಹೊಂಡದ ಹೊರಗೆ ಎಸೆಯುವವರೆಗೂ ಒಬ್ಬರೇ ಎಲ್ಲಾ ಕೆಲಸ ಮಾಡಿದರು. ಅವರು ತಮ್ಮ ಕನಸನ್ನು ನನಸಾಗಿಸಲು ದಣಿವರಿಯದೆ ಕೆಲಸ ಮಾಡುತ್ತಿದ್ದರು' ಎಂದು ಚುಂಬ್ರು ಅವರ ಸೊಸೆ ಚರಿಮಾ ಹೇಳಿದರು.
ಚುಂಬ್ರು ತೋಡಿದ ಕೊಳವನ್ನು ಈಗ ಗ್ರಾಮದ ಇತರರು ಬಳಸುತ್ತಾರೆ. ಆದರೂ, ಚುಂಬ್ರು ಎಂದಿಗೂ ವಿರೋಧ ವ್ಯಕ್ತಪಡಿಸಲಿಲ್ಲ. ಕುತೂಹಲಕಾರಿ ವಿಷಯವೆಂದರೆ, ಚುಂಬ್ರು ಅವರಿಗೆ ನೀರನ್ನು ನಿರಾಕರಿಸಿದ್ದವರು ಕೂಡ ಬೇಸಿಗೆಯಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಇತರ ಕೊಳಗಳು ಬತ್ತಿದಾಗ ಅವರ ಕೊಳವನ್ನೇ ಬಳಸುತ್ತಿದ್ದಾರೆ.
Advertisement