ಹಿಮಾಲಯದ ಪಟ್ಟಣ ಮುಳುಗುತ್ತಿದೆ..! ಜೋಶಿಮಠ ಭೂಕುಸಿತಕ್ಕೆ ಕಾರಣ ಏನು ಗೊತ್ತಾ?

ಜೋಶಿಮಠದ ನಿವಾಸಿಗಳು ತಮ್ಮ ಮನೆಗಳು, ರಸ್ತೆಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿ ಉಂಟಾಗಿರುವ ದೊಡ್ಡ ಬಿರುಕುಗಳಿಂದ ಅತೀವ ಅತಂಕಕ್ಕೀಡಾಗಿದ್ದಾರೆ.
ಜೋಶಿಮಠ ಭೂಕುಸಿತ
ಜೋಶಿಮಠ ಭೂಕುಸಿತ

ಜೋಶಿಮಠದ ನಿವಾಸಿಗಳು ತಮ್ಮ ಮನೆಗಳು, ರಸ್ತೆಗಳು ಮತ್ತು ಕೃಷಿ ಕ್ಷೇತ್ರಗಳಲ್ಲಿ ಉಂಟಾಗಿರುವ ದೊಡ್ಡ ಬಿರುಕುಗಳಿಂದ ಅತೀವ ಅತಂಕಕ್ಕೀಡಾಗಿದ್ದಾರೆ.

ಉತ್ತರಾಖಂಡದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಇದೀಗ ದೈವನಾಡಿನಲ್ಲಿ ಅತೀದೊಡ್ಡ ಪ್ರಮಾಣದದ ಭೀತಿ ಹುಟ್ಟುಹಾಕಿದೆ. ಜನವರಿ 4 ರಂದು, ಉತ್ತರಾಖಂಡದ ಜೋಶಿಮಠದಲ್ಲಿ ವಾಸಿಸುತ್ತಿದ್ದ ಸುಮಾರು 34 ಮನೆಗಳಲ್ಲಿ ಆಳವಾದ ಬಿರುಕುಗಳು ಕಾಣಿಸಿಕೊಂಡಿದ್ದವು. ಇದೀಗ ಕೇವಲ ಮೂರು ದಿನಗಳ ಅಂತರದಲ್ಲಿ ಈ ರೀತಿ ಬಿರುಕು ಬಿಟ್ಟ ಮನೆಗಳ ಸಂಖ್ಯೆ 500ಕ್ಕೂ ಹೆಚ್ಚಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿಯನ್ವವೇ ಜೋಶಿಮಠದಲ್ಲಿ ಸುಮಾರು 570ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಉಂಟಾಗಿರುವ ಕುರಿತು ವರದಿ ದಾಖಲಾಗಿವೆ. ಆದರೆ ಸ್ಥಳೀಯರು ನೀಡುತ್ತಿರುವ ಮಾಹಿತಿಯಂತೆ ಈ ಸಂಖ್ಯೆ ಇನ್ನೂ ಮೂರು ಪಟ್ಟು ಹೆಚ್ಚಿದೆ ಎನ್ನಲಾಗಿದೆ.

ಇಷ್ಟಕ್ಕೂ ಈ ಭೂಕುಸಿತಕ್ಕೆ ಕಾರಣವೇನು?
ಇಲ್ಲಿ ನಡೆಯುತ್ತಿರುವ ಹೈಡಲ್ ಪವರ್ ಪ್ರಾಜೆಕ್ಟ್ ಗಾಗಿ ದೊಡ್ಡ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದ್ದು, ಈ ಸುರಂಗದಲ್ಲಿ ನಡೆಯುತ್ತಿರುವ ಸ್ಫೋಟಗಳು ಇಡೀ ಜೋಶಿಮಠ ಪಟ್ಟಣವನ್ನು ನಡುಗಿಸುತ್ತಿದೆ. ಪರಿಣಾಮ ಇಲ್ಲಿನ ಮನೆಗಳು, ಕಟ್ಟಡಗಳು, ಬಿರು ಬಿಟ್ಟಿದ್ದು, ಯಾವುದೇ ಹಂತದಲ್ಲಿ ಕುಸಿಯುವ ಭೀತಿ ಸೃಷ್ಟಿಸಿದೆ. ಜೀವಭಯದಿಂದ ಇಲ್ಲಿನ ಜನರು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರವಾಗುತ್ತಿದ್ದಾರೆ. ಇತ್ತ ಇಲ್ಲಿನ ನಿವಾಸಿಗಳು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಕೂಡಲೇ ಅಭಿವೃದ್ಧಿ ಕಾಮಗಾರಿ ನಿಲ್ಲಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ತಜ್ಞರು ಹೇಳೋದೇನು?
ಇತ್ತ NTPC ಕೂಡ  ತನ್ನ ಹೈಡಲ್ ಪವರ್ ಯೋಜನೆಗೂ  ಮತ್ತು ಜೋಶಿಮಠದಲ್ಲಿನ ಭೂಕುಸಿತ ದುರಂತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಪ ತಳ್ಳಿಹಾಕಿದೆ.  ಈ ಬಗ್ಗೆ ಮಾಹಿತಿ ನೀಡಿರುವ ತಜ್ಞರು ಜೋಷಿ ಮಠ ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ 6ಸಾವಿರ ಅಡಿ ಎತ್ತರದ ಪಟ್ಟಣವಾಗಿದೆ. ಇದು ಸಕ್ರಿಯ ಭೂಕಂಪನ ಪ್ರದೇಶವಾಗಿದ್ದು, ಭೂಕಂಪಗಳ ಹೆಚ್ಚಿನ ಅಪಾಯವಿರುವ ಭೂಕಂಪನ ಸಕ್ರಿಯ ವಲಯ ಎಂದು ತಜ್ಞರು ಹೇಳಿದ್ದಾರೆ. 

ಈ ಭೂಮಿ ನಿಧಾನಗತಿಯಲ್ಲಿ ಮುಳುಗಡೆಯಾಗುತ್ತಿದ್ದು, ಈ ವಿಚಿತ್ರ ಚಲನೆಗೆ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಕಟ್ಟಡಕಾಮಗಾರಿ, ಜನಸಂದಣಿ, ರಸ್ತೆ ನಿರ್ಮಾಣ, ಅತಿಯಾದ ಹವಾಮಾನ ಕೂಡ ಈ ಮುಳುಗಡೆಗೆ ಕಾರಣ ಎಂದು  ಹೇಳಲಾಗಿದೆ. ಈಗಾಗಲೇ ಇಲ್ಲಿ ಈ ಹಿಂದಿನಿಂದಲೂ ಸಾಕಷ್ಟು ಬಾರಿ ಭೂಕುಸಿತ ಘಟನೆಗಳು ಸಂಭವಿಸಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ವರ್ಷದ ಹಿಂದೆಯೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ನಿವಾಸಿಗಳು
ಇನ್ನು ಹಾಲಿ ಭೂಕುಸಿತ ಸಂಬಂಧ ಇಲ್ಲಿನ ಸ್ಥಳೀಯ ನಿವಾಸಿಗಳು ವರ್ಷದ ಹಿಂದೆಯೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಜೋಶಿಮಠದ ನಿವಾಸಿಗಳು ಕಳೆದ ತಿಂಗಳು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮೂರು ಬಾರಿ ಪತ್ರ ಬರೆದು, ಸಮೀಪದ ಎನ್‌ಟಿಪಿಸಿ ಹೈಡಲ್ ಯೋಜನೆಯ ಸುರಂಗಗಳಲ್ಲಿನ ಸ್ಫೋಟದ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿಯೇ ಪವಿತ್ರ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ನಿರ್ಮಾಣ ಹಂತದಲ್ಲಿರುವ ಯೋಜನೆಯಿಂದ ಸ್ಫೋಟ ಸಂಭವಿಸಿದ ಕಾರಣ ಭೂಮಿ ನಡುಗಿತ್ತು.. ರಸ್ತೆಗಳಲ್ಲಿ ಆರಂಭಿಕ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದವು. ಇದರಿಂದ ಭಯಭೀತರಾದ ನಿವಾಸಿಗಳು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು, ಆದರೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೈಡ್ರೋಪವರ್ ಯೋಜನೆ ಕಾಮಗಾರಿ ಸ್ಥಗಿತ
ಇನ್ನುಸ್ಥಳೀಯರ ಆಕ್ರೋಶಕ್ಕೆ ಮಣಿದಿರುವ ಜೋಶಿಮಠ ಜಿಲ್ಲಾಡಳಿತ ಪ್ರಸ್ತುತ ಇಲ್ಲಿ ನಡೆಯುತ್ತಿದ್ದ ಹೈಡ್ರೋಪವರ್ ಯೋಜನೆ ಕಾಮಗಾರಿ ಸ್ಥಗಿತಗೊಳಿಸಿದೆ.  ಅಷ್ಟು ಮಾತ್ರವಲ್ಲದೇ ಏಷ್ಯಾದ ಅತೀ ದೊಡ್ಡ ರೋಪ್ ಎಂದೇ ಖ್ಯಾತಿ ಗಳಿಸಿರುವ ಇಲ್ಲಿನ ಔಲಿ ರೋಪ್ ವೇ ಸೇವೆಯನ್ನು ಕೂಡ ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಎನ್ ಡಿಆರ್ ಎಫ್ ಪಡೆಗಳನ್ನು ಸರ್ವಸನ್ನದರಾಗಿರುವಂತೆ ಸೂಚಿಸಿದ್ದು, ಅತೀ ಸೂಕ್ಷ್ಮ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಜೋಶಿಮಠ ವಿಚಾರವಾಗಿ ಸಮಿತಿ ರಚಿಸಿದ್ದು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com