ಡ್ಯೂಕ್ vs ಕೂಕಬುರಾ ವಿವಾದ ಮತ್ತೆ ತಾರಕಕ್ಕೆ: ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡನ್ನು ಬಿಸಿಸಿಐ ಬೇಡ ಎನ್ನವುದೇಕೆ? ಇಲ್ಲಿದೆ ಉತ್ತರ

ಭಾರತ ಟೆಸ್ಟ್ ಪಂದ್ಯಗಳನ್ನು ಆಡಲು ವಿದೇಶದತ್ತ ಮುಖ ಮಾಡಿದಾಗಲೆಲ್ಲಾ ಡ್ಯೂಕ್ vs ಕೂಕಬುರಾ ಚೆಂಡುಗಳ ವಿವಾದ ಮುನ್ನಲೆಗೆ ಬರುತ್ತದೆ. ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸುತ್ತದೆ. ಇಷ್ಟಕ್ಕೂ ಏನಿದು ಚೆಂಡಿನ ವಿವಾದ..
ಕೂಕಪುರಾ ಮತ್ತು ಡ್ಯೂಕ್ಸ್ ಚೆಂಡು
ಕೂಕಪುರಾ ಮತ್ತು ಡ್ಯೂಕ್ಸ್ ಚೆಂಡು
Updated on

ಭಾರತ ಟೆಸ್ಟ್ ಪಂದ್ಯಗಳನ್ನು ಆಡಲು ವಿದೇಶದತ್ತ ಮುಖ ಮಾಡಿದಾಗಲೆಲ್ಲಾ ಡ್ಯೂಕ್ vs ಕೂಕಬುರಾ ಚೆಂಡುಗಳ ವಿವಾದ ಮುನ್ನಲೆಗೆ ಬರುತ್ತದೆ. ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸುತ್ತದೆ. ಇಷ್ಟಕ್ಕೂ ಏನಿದು ಚೆಂಡಿನ ವಿವಾದ..

ಐಪಿಎಲ್ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ನತ್ತ ತಿರುಗಿದ್ದು, ಮುಂಬರುವ ಜೂನ್ 7 ರಂದು ಓವಲ್‌ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡವು ಸಿದ್ಧತೆ ನಡೆಸಿದೆ. ಏತನ್ಮಧ್ಯೆ ಈ ಮಹತ್ತರ ಪಂದ್ಯದಲ್ಲಿ ಬಳಸಲಾಗುವ ಚೆಂಡು ಇದೀಗ ಸುದ್ದಿಗೆ ಗ್ರಾಸವಾಗಿದ್ದು, ಬಿಸಿಸಿಐ ಮತ್ತು ವಿದೇಶ ಆಟಗಾರರ ನಡುವಿನ ತಿಕ್ಕಾಟಕ್ಕೂ ಕಾರಣವಾಗಿದೆ.

ಆಸ್ಟ್ರೇಲಿಯಾದ ಮಾಜಿ ಆಟಗಾರರು ಕೂಕಬುರಾ ಬಾಲ್​ನಲ್ಲೇ ಪಂದ್ಯವನ್ನಾಡುವ ಮಾತುಗಳನ್ನಾಡಿದ್ದರು. ಇದಕ್ಕೆ ಬೆಂಬಲ ನೀಡಿದ್ದ ಮಾಜಿ ಆಸಿಸ್ ಕ್ರಿಕೆಟ್ ಆಟಗಾರ ರಿಕ್ಕಿ ಪಾಂಟಿಂಗ್ ಕೂಕಬುರಾ ಚೆಂಡಿನಲ್ಲೇ ಫೈನಲ್ ಪಂದ್ಯನಡೆಯಲಿದ್ದು, ಕೂಕಬುರಾ ಬಾಲ್​ನಲ್ಲೇ ಕಣಕ್ಕಿಳಿಯುತ್ತೇವೆ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಸಿಸಿಐ, ಭಾರತ vs ಆಸ್ಟ್ರೇಲಿಯಾ WT ಫೈನಲ್ ಪಂದ್ಯವನ್ನು ಡ್ಯೂಕ್ಸ್ ಬಾಲ್‌ ನಲ್ಲೇ ಆಡಲಾಗುತ್ತದೆ ಮತ್ತು ಕೂಕಬುರಾ ಚೆಂಡಿನಲ್ಲಿ ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ಡ್ಯೂಕ್ಸ್-ಕೂಕಬುರಾ ಚೆಂಡಿನ ನಡುವೆ ಏನು ವ್ಯತ್ಯಾಸ?:
ಆಸ್ಟ್ರೇಲಿಯಾದ ಕ್ರೀಡಾ ಪರಿಕರಗಳನ್ನು ತಯಾರಿಸುವ ಕಂಪನಿಯ ಹೆಸರು ಕೂಕಬುರಾ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಸೇರಿದಂತೆ ಹೆಚ್ಚಿನ ತಂಡಗಳು ತಮ್ಮ ತಮ್ಮ ದೇಶದಲ್ಲಿ ಟೆಸ್ಟ್‌ ಕ್ರಿಕೆಟ್ ಆಡಲು ಬಳಸುವುದು ಕೂಕಬುರಾ ಕಂಪನಿಯ ಚೆಂಡನ್ನು. ಈ ಚೆಂಡಿನ ಒಳಗಿನ ಎರಡು ಪದರಗಳನ್ನು ಕೈಯಲ್ಲೇ ಹೊಲಿಯಲಾಗುತ್ತದೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ನಡೆದ ಡಬ್ಲ್ಯುಟಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಬಳಕೆಯಾದದ್ದು ಡ್ಯೂಕ್ಸ್‌ ಚೆಂಡು. ಇದರ ಬಣ್ಣ ಚೆರ‍್ರಿ ಹಣ್ಣಿನ ಕೆಂಪು. 

ಕೂಕಬುರಾ ಡ್ಯೂಕ್ಸ್‌ಗಿಂತ ಚಪ್ಪಟೆಯಾಗಿದೆ, ಇದು ಬೌಲರ್‌ನ ಬೆರಳುಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಡ್ಯೂಕ್ಸ್ ಚೆಂಡಿನ ಸೀಮ್ ಮತ್ತು ಆಕಾರವು ಕೂಕಬುರಾಕ್ಕಿಂತ ಏಕೆ ಹೆಚ್ಚು ಕಾಲ ಉಳಿಯುತ್ತದೆ?

ಕೂಕಬುರಾ ಚೆಂಡಿಗೆ ಹೋಲಿಸಿದರೆ ಎಸ್‌ಜಿ ಡ್ಯೂಕ್ಸ್ ಚೆಂಡಿನ ಹೊಲಿಗೆಗೆ ಬಳಸುವ ದಾರ ದಪ್ಪವಾಗಿರುತ್ತದೆ. ಹೊಲಿಗೆಗಳ ನಡುವಿನ ಅಂತರ ಎಸ್‌ಜಿ ಚೆಂಡಿನಲ್ಲಿ ಕಡಿಮೆ ಇರುತ್ತದೆ. ಡ್ಯೂಕ್ಸ್ ಬಾಲ್‌ನಲ್ಲಿನ ಭಾರವಾದ ಮೆರುಗೆಣ್ಣೆಯು ಚೆಂಡು ಸುಮಾರು 60 ಓವರ್‌ಗಳವರೆಗೆ ತನ್ನ ಸ್ವಿಂಗ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. 60 ಓವರ್‌ಗಳ ನಂತರ, ಚೆಂಡು ರಿವರ್ಸ್ ಸ್ವಿಂಗ್ ಪಡೆಯುತ್ತದೆ.

ಅಂತೆಯೇ ಇಂಗ್ಲೆಂಡ್‌ನಲ್ಲಿ ಮೋಡ ಕವಿದ ವಾತಾವರಣದ ಸಂದರ್ಭ ವೇಗಿಗಳು ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಕೂಕಬುರಾ ಚೆಂಡಿನ ಸೀಮ್‌ ಭಾಗದ ಗ್ರಿಪ್ ಚೆನ್ನಾಗಿರುವುದರಿಂದ ಬೌಲರ್‌ಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಭದ್ರವಾಗಿ ಹಿಡಿಯಬಹುದು. ಕೂಕಬುರಾ ಚೆಂಡು ಹೊಳಪು ಕಳೆದುಕೊಂಡ ನಂತರವೂ ಎತ್ತರಕ್ಕೆ ಪುಟಿಯಬಲ್ಲದು. ಹೀಗಾಗಿ ವೇಗ ಹಾಗೂ ಮಧ್ಯಮ ವೇಗದ ಬೌಲರ್‌ಗಳು ಬೌನ್ಸ್‌ ಮೂಲಕವೇ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಹುದು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ವಿರಾಟ್ ಕೊಹ್ಲಿ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ ಮತ್ತು ಉಮೇಶ್ ಯಾದವ್ ಸೇರಿದಂತೆ ಅನೇಕ ಭಾರತೀಯ ಆಟಗಾರರಿಗೆ ಡ್ಯೂಕ್ಸ್ ಕ್ರಿಕೆಟ್ ಬಾಲ್ ಆದ್ಯತೆಯ ಟೆಸ್ಟ್-ಪಂದ್ಯದ ಬಾಲ್ ಆಗಿದೆ, ಅವರೆಲ್ಲರೂ ಈ ಹಿಂದೆ ಅದರ ಪರವಾಗಿ ಮಾತನಾಡಿದ್ದರು. ಡ್ಯೂಕ್ಸ್ ಚೆಂಡನ್ನು ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್‌ನಲ್ಲಿ ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ SG ಚೆಂಡನ್ನು ಬಳಸಿದರೆ ಉಳಿದ ಟೆಸ್ಟ್ ರಾಷ್ಟ್ರಗಳು ಆಸ್ಟ್ರೇಲಿಯಾ ನಿರ್ಮಿತ ಕೂಕಬುರಾ ಕ್ರಿಕೆಟ್ ಚೆಂಡನ್ನು ಬಳಸುತ್ತವೆ.

1760 ರ ಸುಮಾರಿಗೆ ಡ್ಯೂಕ್ ಕುಟುಂಬದಿಂದ ಚೆಂಡನ್ನು ಮೊದಲು ತಯಾರಿಸಲಾಯಿತು. ಡ್ಯೂಕ್ಸ್ ಬಾಲ್ ಅನ್ನು ಲಂಡನ್‌ನಲ್ಲಿ ಬ್ರಿಟಿಷ್ ಕ್ರಿಕೆಟ್ ಬಾಲ್ಸ್ ಲಿಮಿಟೆಡ್ ತಯಾರಿಸಿದೆ, ಇದು ಪ್ರಸ್ತುತ ಭಾರತೀಯ ಮೂಲದ ಉದ್ಯಮಿ ದಿಲೀಪ್ ಜಜೋಡಿಯಾ ಅವರ ಒಡೆತನದ ಕ್ರೀಡಾ ಸಲಕರಣೆಗಳ ಕಂಪನಿಯಾಗಿದೆ. 

ಕೂಕಬುರಾ ಕ್ರಿಕೆಟ್ ಚೆಂಡನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಥಾಂಪ್ಸನ್ ಕುಟುಂಬದ ಮಾಲೀಕತ್ವದ ವ್ಯಾಪಾರವಾದ ಕೂಕಬುರಾ ಸ್ಪೋರ್ಟ್‌ನಿಂದ ತಯಾರಿಸಲಾಗುತ್ತದೆ. ಕಂಪನಿಯು ಉತ್ತರ ಪ್ರದೇಶದ ಮೀರತ್‌ನಲ್ಲಿ ಉತ್ಪಾದನಾ ಸೌಲಭ್ಯವನ್ನು ಹೊಂದಿದೆ, ಇದು ಭಾರತೀಯ ಮಾರುಕಟ್ಟೆಗೆ ಉಪಕರಣಗಳನ್ನು ತಯಾರಿಸುತ್ತದೆ.

ಡ್ಯೂಕ್ಸ್ ಕ್ರಿಕೆಟ್ ಚೆಂಡು ಕೂಕಬುರಾಕ್ಕಿಂತ ಹೆಚ್ಚಾಗಿ ಏಕೆ ಸ್ವಿಂಗ್ ಆಗುತ್ತದೆ?
ಡ್ಯೂಕ್ಸ್ ಚೆಂಡಿನ ಉತ್ಪಾದನಾ ಪ್ರಕ್ರಿಯೆಯಲ್ಲಿ ಟ್ಯಾನಿಂಗ್ ಸಮಯದಲ್ಲಿ ಅದರ ಹೊರಭಾಗಕ್ಕೆ ಗ್ರೀಸ್ ಅನ್ವಯಿಸಲಾಗುತ್ತದೆ. ಸಾಮಾನ್ಯವಾಗಿ ಇಂಗ್ಲಿಷ್ ಕ್ರಿಕೆಟ್ ಋತುವಿನಲ್ಲಿ ಸಾಕಷ್ಟು ಮಳೆಯಾಗುತ್ತದೆ, ಆದ್ದರಿಂದ ಚೆಂಡನ್ನು ನೀರಿನಿಂದ ರಕ್ಷಿಸಬೇಕು, ಹೀಗಾಗಿ ಗ್ರೀಸ್ ಬಳಕೆ ಮಾಡಗುತ್ತದೆ. ಕ್ರಿಕೆಟ್ ಋತುವಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಹೆಚ್ಚು ಮಳೆಯಾಗದ ಕಾರಣ ಇಲ್ಲಿ ಈ ಚೆಂಡುಗಳ ಅಗತ್ಯವಿರುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com