ವಿಶ್ವ ಭೂ ದಿನ: ರಣ ಬೇಸಿಗೆಯಲ್ಲೂ ತಂಪು ವಾತಾವರಣ; ಹಸಿರು ಸ್ವರ್ಗ ವಿಜಯಪುರ ಇತರ ಜಿಲ್ಲೆಗಳಿಗೂ ಮಾದರಿ!

ಶುಷ್ಕತೆ ಮತ್ತು ಬಿರು ಬೇಸಿಗೆಗೆ ಹೆಸರುವಾಸಿಯಾಗಿರುವ ಬಿಜಾಪುರ ವಿಜಯಪುರವಾಯಿತೋ. ಹಾಗೇಯೆ ನಿಧಾನವಾಗಿ ಹಸಿರು ಸ್ವರ್ಗವಾಗಿ ಅರಳುತ್ತಿದೆ
ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್

ಬೆಂಗಳೂರು: ಶುಷ್ಕತೆ ಮತ್ತು ಬಿರು ಬೇಸಿಗೆಗೆ ಹೆಸರುವಾಸಿಯಾಗಿರುವ ಬಿಜಾಪುರ ಹೇಗೆ ವಿಜಯಪುರವಾಯಿತೊ, ಹಾಗೇಯೆ ನಿಧಾನವಾಗಿ ಹಸಿರು ಸ್ವರ್ಗವಾಗಿ ಅರಳುತ್ತಿದೆ. ಇದಕ್ಕೆ ಮುಖ್ಯ ಕಾರಣ ರಾಜಕೀಯ ಇಚ್ಛಾಶಕ್ತಿ ಮತ್ತು ಜನರ ಒತ್ತಾಯ.

ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ್ ಅವರು ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದಾಗ 2015 ರಲ್ಲಿ ಎರಡು ಒಳ್ಳೆಯ ಕೆಲಸ ಮಾಡಿದರು. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ನೀರಾವರಿ ಇಲಾಖೆಯಿಂದ ಅನುಮತಿ ಪಡೆದರು, ಹಾಗೇಯೇ ಅರಣ್ಯ ಇಲಾಖೆಯಿಂದ ಏಕಕಾಲದಲ್ಲಿ ಜನರಿಗೆ ಸಸಿಗಳನ್ನು ಹಸ್ತಾಂತರಿಸುವ ಕೆಲಸ ಮಾಡಿದರು.

ಏತನ್ಮಧ್ಯೆ, ಎನ್‌ಜಿಒಗಳು ಐದು ವರ್ಷಗಳ ಕನಸಿನ ಕೋಟಿ ವೃಕ್ಷ ಅಭಿಯಾನದಲ್ಲಿ 1 ಕೋಟಿ ಸಸ್ಯಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವಂತೆ ಜನರನ್ನು ಪ್ರೇರೇಪಿಸಲು ಪ್ರಾರಂಭಿಸಿದವು. 10 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವಿಜಯಪುರದಲ್ಲಿ 600 ಎಕರೆಗಳಲ್ಲಿ 60,000 ಸ್ಥಳೀಯ ಜಾತಿಯ ಮರಗಳೊಂದಿಗೆ ಅತಿದೊಡ್ಡ ನಗರ ಅರಣ್ಯ ತೋಟ ಸೃಷ್ಟಿಯಾಗಿದೆ. ಈಗಾಗಲೇ 1.30 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಮತ್ತು ಸೋಲಾರ್‌ ಚಾಲಿತ ಹನಿ ನೀರಾವರಿಯೊಂದಿಗೆ, ಶೇ. 98ರಷ್ಟು ಸಸ್ಯಗಳಿಗೆ ಬದುಕುಳಿಯಲು ಸಾಧ್ಯವಾಯಿತು ಎಂದು ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ (SPPA) ತಿಳಿಸಿದೆ.

ವಿಜಯಪುರ ಮಾದರಿಯನ್ನು ಕರ್ನಾಟಕದ ಇತರ ಭಾಗಗಳಲ್ಲಿ ಅಥವಾ ಭಾರತದ ಇತರ ಭಾಗಗಳಲ್ಲಿ ಪುನರಾವರ್ತಿಸಬಹುದೇ?

ಇದು ಒಂದು ಸ್ಮರಣೀಯ ಕಾರ್ಯವಾಗಿದೆ, ಆದರೆ ಅದನ್ನು ಬೇರೆಡೆಯೂ ಅಳವಡಿಸಿಕೊಳ್ಳಬೇಕು ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಎಂಬಿ ಪಾಟೀಲ್ ಹೇಳಿದರು.

ಅವರ ಪ್ರಕಾರ, ದೊಡ್ಡ ಸಮಸ್ಯೆ ಎಂದರೆ, ಸಾಮಾನ್ಯವಾಗಿ ಸರ್ಕಾರ ನಡೆಸುವ ಯೋಜನೆಯಲ್ಲಿ, ವಿವಿಧ ಇಲಾಖೆಗಳು ಒಂದೇ ಗುರಿಯನ್ನು ಹೊಂದಿದ್ದರೂ ಸಹ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಇದು ಸಂಘಟಿತ ಪ್ರಯತ್ನವಾಗಿರಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಅರಣ್ಯ ಇಲಾಖೆ ಪರಸ್ಪರ ಕೈಜೋಡಿಸಿ ನಡೆದರೆ ಇಂತಹ ಯೋಜನೆ ಯಶಸ್ವಿಯಾಗಬಹುದು ಎಂದು ಪಾಟೀಲ್ ಹೇಳಿದರು.

ವಿಜಯಪುರದ ವಿಚಾರದಲ್ಲಿ ಪಾಟೀಲರು ವೈಯಕ್ತಿಕವಾಗಿ ಯೋಜನೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಬಹಳಷ್ಟು ಪ್ರಕ್ರಿಯೆಗಳನ್ನು ತಪ್ಪಿಸಿದೆ. ಹೀಗಾಗಿ ನನಗೆ ಇದು ಸರಳವಾಗಿತ್ತು. ಆರಂಭದಲ್ಲಿ, ರೈತರು ಅಗ್ಗವಾಗಿ ಸಸಿಗಳನ್ನು ಪಡೆಯಬಹುದು ಎಂದು ಭಾವಿಸಿ ಸಂತೋಷದಿಂದ ಇದ್ದರು, ಆದರೆ ಅದಕ್ಕೆ ಶೇ. 10 ರಷ್ಟು ಹಣ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದಾಗ ಅವರಿಗೆ ಆಸಕ್ತಿಯೇ ಇರಲಿಲ್ಲ ಎಂದು ಎಂಬಿ ಪಾಟೀಲ್ ಪುತ್ರ, ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕ ಮತ್ತು ಎಸ್‌ಪಿಪಿಎ ಎನ್‌ಜಿಒ ಅಧ್ಯಕ್ಷ ಧ್ರುವ್ ಹೇಳಿದ್ದಾರೆ.

ಎಂ.ಬಿ ಪಾಟೀಲ್
ವಿಶ್ವ ಆರೋಗ್ಯ ದಿನ ಘೋಷವಾಕ್ಯ: ನನ್ನ ಆರೋಗ್ಯ, ನನ್ನ ಹಕ್ಕು (ಕುಶಲವೇ ಕ್ಷೇಮವೇ)

ಇರುವ ಸಸಿಗಳ ಬದಲು ಅವರಿಗೆ ಬೇಕಾದುದನ್ನು ಕೊಡಬೇಕಾಗಿತ್ತು. ಹೆಚ್ಚಾಗಿ ಕೆಂಪು ಶ್ರೀಗಂಧ ಮಾವು ಮತ್ತು ಇತರ ಹಣ್ಣಿನ ಮರಗಳನ್ನು ಕೊಡಲಾಗುತ್ತಿತ್ತು, ನಾವು ಅವರಿಗೆ ಬೇಕಾದುದನ್ನು ನೀಡಲು ಪ್ರಾರಂಭಿಸಿದಾಗ ಅವರು ಹೆಚ್ಚು ಹೆಚ್ಚು ಪಡೆಯಲು ಪ್ರಾರಂಭಿಸಿದರು. ಆಗ ನಾವು ಇಡೀ ಕೃಷಿ-ಅರಣ್ಯ ಆಂದೋಲನವನ್ನು ನೋಡಿದ್ದೇವೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 21 ವರ್ಷದ ಧ್ರುವ್ ಹೇಳಿದರು.

ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಜಾಗೃತಿ ಮೂಡಿಸುವುದು ಮತ್ತೊಂದು ಪ್ರಮುಖ ಗುರಿಯಾಗಿದೆ ಎಂದು ಪಾಟೀಲ್ ಹೇಳಿದರು. ಇಲ್ಲಿ ಅವರ ಎನ್‌ಜಿಒ ಕೂಡ ಹೆಜ್ಜೆ ಹಾಕಿದೆ ಎಂದು ಧ್ರುವ ಹೇಳಿದರು. ನಾವು ಅಭಿಯಾನವನ್ನು ಕೋಟಿ ವೃಕ್ಷ ಅಭಿಯಾನ ಎಂದು ಕರೆದಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೂಡಿ ಕೆಲಸ ಮಾಡಿದ್ದೇವೆ. ನಾವು ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ, ಮ್ಯಾರಥಾನ್‌ಗಳನ್ನು ನಡೆಸಿದ್ದೇವೆ, ಜನರು ಹಸಿರು ಮತ್ತು ಸಮೃದ್ಧ ವಿಜಯಪುರದಲ್ಲಿ ಹೂಡಿಕೆ ಮಾಡಬೇಕೆಂದು ಎಲ್ಲವನ್ನೂ ಮಾಡಿದ್ದೇವೆ ಎಂದು ಧ್ರುವ ಹೇಳಿದರು.

ಗ್ರಾಮ ಪಂಚಾಯಿತಿಯ ಮಹಿಳೆಯೊಬ್ಬರು ಸುಮಾರು 5,000 ಸಸಿಗಳನ್ನು ನೆಟ್ಟು ಆರೈಕೆ ಮಾಡಿದರು. ಅದು ಸುಲಭ ಸಾಧ್ಯವಿರಲಿಲ್ಲ ಎಂದು ಪಾಟೀಲ್ ಹೇಳಿದರು. ಇಂದು ಯುವಕರು ಮದುವೆ ಮತ್ತು ಹುಟ್ಟುಹಬ್ಬಕ್ಕೆ ಹೂಗುಚ್ಛಗಳ ಬದಲಿಗೆ ಸಸಿಗಳನ್ನು ಉಡುಗೊರೆಯಾಗಿ ನೀಡುವಷ್ಟು ಉತ್ಸಾಹ ಹೊಂದಿದ್ದಾರೆ ಎಂದು ಧ್ರುವ ಹೇಳಿದರು. ಉತ್ಸಾಹವುಳ್ಳ ಜನರನ್ನು ಸಜ್ಜುಗೊಳಿಸುವುದು ಕಷ್ಟವೇನಲ್ಲ. ವಿಜಯಪುರದಲ್ಲಿ ನಡೆದದ್ದು ಬೇರೆ ಸ್ಥಳಗಳಿಗೂ ಮಾದರಿಯಾಗಬಲ್ಲದು, ಜನರ ಗುಂಪು ಟ್ರಸ್ಟ್ ರಚಿಸಬಹುದು. ಎಲ್ಲಾ ಪಾಲುದಾರರನ್ನು ಒಟ್ಟಿಗೆ ಸೇರಿಸಬಹುದು ಎಂದು ಧ್ರುವ ಹೇಳಿದರು. ಎರಡು ವಾರಗಳ ಹಿಂದೆ, ಕರ್ನಾಟಕದ ಉಳಿದ ಭಾಗಗಳು ಹೆಚ್ಚಿನ ತಾಪಮಾನವನ್ನು ಎದುರಿಸುತ್ತಿರುವಾಗ, ನಾವು ಈ ಋತುವಿನ ಮೊದಲ ಮಳೆಯ ತಂಪನ್ನು ಅನುಭವಿಸಿದೆವು. ಅದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ಧ್ರುವ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com