ಕನ್ನಡಿಗನ ಕೈಯಲ್ಲಿ ಅರಳಿದ ಅಯೋಧ್ಯೆಯ ಶ್ರೀರಾಮ: ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ...

ವಿಶ್ವದ ಗಮನ ಸೆಳೆದಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮ ಮಂದಿರದಲ್ಲಿ ವೀರಾಜಮಾನನಾಗಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಅರುಣ್ ಯೋಗಿರಾಜ್, ರಾಮ ಲಲ್ಲಾ ಮೂರ್ತಿ
ಅರುಣ್ ಯೋಗಿರಾಜ್, ರಾಮ ಲಲ್ಲಾ ಮೂರ್ತಿ

ವಿಶ್ವದ ಗಮನ ಸೆಳೆದಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮ ಮಂದಿರದಲ್ಲಿ ವೀರಾಜಮಾನನಾಗಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಶ್ರೀರಾಮ ಮಂದಿರದ ಬಾಲರಾಮನ ವಿಗ್ರಹ ಕೆತ್ತನೆ ಕಾರ್ಯವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಪೂರ್ಣಗೊಳಿಸಿದ್ದು, ತಿಂಗಳ ಹಿಂದೆಯೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಂಡಳಿಗೆ ಹಸ್ತಾಂತರಿಸಿದ್ದರು. ಮಂದಿರ ಉದ್ಘಾಟನೆಗೆ ಒಂದು ವಾರ ಬಾಕಿ ಇರುವಾಗಲೇ ಮೂಲ ವಿಗ್ರಹವನ್ನಾಗಿ ಮೈಸೂರಿನ ಶಿಲ್ಪಿ ಕೆತ್ತಿರುವ ಮೂರ್ತಿಯನ್ನು ಆಯ್ಕೆ ಮಾಡಿರುವುದಾಗಿ ಮಂಡಳಿ ಪ್ರಕಟಿಸಿದ್ದಲ್ಲದೆ ಈಗಾಗಲೇ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ.

ಶ್ರೀರಾಮ ಮಂದಿರದಲ್ಲಿ ರಾಮನ ವಿಗ್ರಹ ಸ್ಥಾಪಿಸಲು ಟ್ರಸ್ಟ್ ಮೂರು ಶಿಲ್ಪಿಗಳಿಗೆ ರಾಮನ ವಿಗ್ರಹದ ಕೆತ್ತನೆಯ ಕಾರ್ಯ ವಹಿಸಿದ್ದರು. ಅದರಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೂಡ ಒಬ್ಬರಾಗಿದ್ದು, ತಮ್ಮ ಕಲಾ ನೈಪುಣ್ಯತೆಯಿಂದ ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆಯ ಬುಜ್ಜೇಗೌಡನಪುರ ಗ್ರಾಮದ ಕೃಷ್ಣ ಶಿಲೆಯಿಂದ 51 ಇಂಚು ಉದ್ದದ ರಾಮಲಲ್ಲಾ ಪ್ರತಿಮೆಯನ್ನು ಅಮೋಘವಾಗಿ ಕೆತ್ತಿದ್ದಾರೆ.

ಈಗಾಗಲೇ ಈ ಮೂರ್ತಿಯನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಜನವರಿ 22 ರಂದು ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇನ್ನು ಈ ಮೂರ್ತಿಯನ್ನು ಕೆತ್ತಿದ ಕನ್ನಡಿಗ ಅರುಣ್ ಯೋಗಿರಾಜ್ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ...

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ 2000 ಗಣ್ಯರ ಪೈಕಿ ಅರುಣ್ ಯೋಗಿರಾಜ್ ಕೂಡ ಒಬ್ಬರಾಗಿದ್ದಾರೆ. ಅರುಣ್ ಅವರ ತಂದೆ ಹೆಸರು ಯೋಗಿ ರಾಜ್. ಅವರು ಕೂಡ ಶಿಲ್ಪಿ. ಅವರ ತಂದೆ ಅಂದರೆ ಅರುಣ್ ಅವರ ಅಜ್ಜ ಬಸವಣ್ಣ ಶಿಲ್ಪಿ. ಸರಿ ಸುಮಾರು 5 ತಲೆಮಾರುಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡಿರುವ ಕುಟುಂಬದವರು ಅರುಣ್‌.

ಮೈಸೂರಿನವರೇ ಆದ ಅರುಣ್ ಎಂಬಿಎ ವ್ಯಾಸಂಗ ಮಾಡಿದ ಬಳಿಕ ಬಹುರಾಷ್ಟ್ರೀಯ ಕಂಪನಿಗೆ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿ ಕೆಲಸ ಶುರುಮಾಡಿದ ಬಳಿಕ, ಶಿಲ್ಪ ಕಲೆಯ ಕಡೆಗೆ ಹೆಚ್ಚಿನ ಆಸಕ್ತಿ ಮೂಡಿದ್ದು, 2008ರಲ್ಲಿ ಕೆಲಸ ಬಿಟ್ಟು, ಕುಲಕಸುಬಾದ ಶಿಲ್ಪ ಕಲೆಯನ್ನೇ ಉದ್ಯೋಗವನ್ನಾಗಿ ಸ್ವೀಕರಿಸಿದರು.

ದೆಹಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯ ಹಿಂದೆ ಸ್ಥಾಪಿಸಲಾಗಿರುವ ಸುಭಾಷ್ ಚಂದ್ರ ಬೋಸ್ ಅವರ 30-ಅಡಿ ಪ್ರತಿಮೆಯನ್ನು ನಿರ್ಮಾಣ ಮಾಡಿರುವುದೂ ಸೇರಿದಂತೆ ಹಲವು ಪ್ರಮುಖ ಪ್ರತಿಮೆ ನಿರ್ಮಾಣಗಳಲ್ಲಿ ಅರುಣ್ ಅವರ ಶ್ರಮವಿದೆ.

ಕೇದಾರನಾಥದ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಶಿಲ್ಪ ಮತ್ತು ಮೈಸೂರಿನ 21 ಅಡಿ ಎತ್ತರದ ಹನುಮಾನ್ ಪ್ರತಿಮೆ ಕೂಡ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿಬಂದಿರುವುದು ಗಮನಾರ್ಹ ವಿಚಾರವಾಗಿದೆ. ಯೋಗಿರಾಜ್ ಅವರ ಕಲೆಯನ್ನು ಗುರುತಿಸಿದ್ದ ಪ್ರದಾನಿ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಂತೆ ರಾಮ ಮಂದಿರ ಟ್ರಸ್ಟ್ ಯೋಗಿರಾಜ್ ಅವರಿಗೆ ರಾಮಲಲ್ಲಾ ಮೂರ್ತಿ ಕೆತ್ತನೆಯ ಕಾರ್ಯವನ್ನು ವಹಿಸಿತ್ತು. ಕೇವಲ ಯೋಗಿರಾಜ್ ಅಷ್ಟೇ ಅಲ್ಲದೆ, ಬೆಂಗಳೂರಿನ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯ ನಾರಾಯಣ್ ಭಟ್ ಅವರಿಗೂ ಮೂರ್ತಿ ಕೆತ್ತನೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಅಂತಿಮವಾಗಿ ಯೋಗಿರಾಜ್ ಕೆತ್ತನೆಯ ಮೂರ್ತಿಗೆ ಒಪ್ಪಿಗೆ ಸೂಚಿಸಲಾಗಿತ್ತು.

ಯೋಗಿರಾಜ್ ಅವರು ಕೆತ್ತಿರುವ ರಾಮಲಲ್ಲಾ ವಿಗ್ರಹವು  ಸರಿಸುಮಾರು 4.24 ಅಡಿ ಎತ್ತರವನ್ನು ಹಾಗೂ 3 ಅಡಿ ಅಗಲವನ್ನು ಒಳಗೊಂಡಿದೆ. ವಿಗ್ರಹವು ಸುಮಾರು 200 ಕೆ.ಜಿ ತೂಕವನ್ನು ತೂಗುತ್ತದೆ. ಈ ವಿಗ್ರಹದಲ್ಲಿ ರಾಮ ಲಲ್ಲಾ ಅರಳಿದ ಕಮಲದ ಹೂವಿನ ಮೇಲೆ ನಿಂತು ಮುಗುಳು ನಗೆಯನ್ನು ಬೀರುತ್ತಿರುವ ಭಂಗಿಯಲ್ಲಿದ್ದಾನೆ. ವಿಗ್ರಹವನ್ನು ಒಂದೇ ಕಪ್ಪು ಬಣ್ಣದ ಕಲ್ಲಿನಿಂದ ಕೆತ್ತಲಾಗಿದೆ. ರಾಮನ ವಿಗ್ರಹದ ಸುತ್ತಲಿನ ಕಲ್ಲಿನ ಮೇಲೆ ಇನ್ನಿತರ ಕೆಲವೊಂದು ಆಕೃತಿಗಳನ್ನೂ ಕೂಡ ಕೆತ್ತಲಾಗಿದೆ. ರಾಮನ ವಿಗ್ರಹದ ಸುತ್ತಲೂ ಮೇಲ್ಭಾಗದಲ್ಲಿ ಸ್ವಸ್ತಿಕ, ಓಂ, ಚಕ್ರ, ಗದೆ ಮತ್ತು ಸೂರ್ಯ ದೇವನ ಚಿತ್ರಗಳನ್ನು ಕೆತ್ತಲಾಗಿದೆ. ಇದು ರಾಮನ ವಿಗ್ರಹವನ್ನು ಮತ್ತಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತಿದೆ. ಇದಲ್ಲದೆ, ರಾಮನ ವಿಗ್ರಹದ ಸುತ್ತಲೂ ರಾಮನ ಅವತಾರಗಳಲ್ಲಿ ಒಂದಾದ ವಿಷ್ಣುವಿನ 10 ಅವತಾರಗಳನ್ನು ಅಂದರೆ ದಶಾವತರಾಗಳನ್ನು ಕೆತ್ತಲಾಗಿದೆ. ಇನ್ನು ಈ ಪ್ರತಿಮೆಯ ಬಲಭಾಗದಲ್ಲಿ ಮತ್ಸ್ಯ, ಕೂರ್ಮ, ವರಹ, ನರಸಿಂಹ ಮತ್ತು ವಾಮನ ಅವತಾರಗಳ ಚಿತ್ರಗಳನ್ನೂ ಕೂಡ ಕೆತ್ತಲಾಗಿದೆ.

ಇನ್ನು ರಾಮ ಲಲ್ಲಾನ ಪ್ರತಿಮೆಯ ಎಡಭಾಗದಲ್ಲಿ ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಭಗವಾನ್‌ ಕಲ್ಕಿಯ ವಿಗ್ರಹಗಳೂ ಕಂಡು ಬಂದಿದೆ. ಪ್ರತಿಮೆಯ ಕೆಳಗೆ ಬಲಭಾಗದಲ್ಲಿ ಆಂಜನೇಯ ಸ್ವಾಮಿಯ ವಿಗ್ರಹವನ್ನು ಇಡಲಾಗಿದ್ದು, ಎಡಭಾಗದಲ್ಲಿ ಆಂಜನೇಯ ಸ್ವಾಮಿಯ ವಿಗ್ರಹವ ಅಥವಾ ಪ್ರತಿಮೆಯನ್ನು ಇಡಲಾಗಿದೆ. ಇದು ವಿಗ್ರಹಕ್ಕೆ ವಿಶೇಷ ಮೆರುಗು ನೀಡಿದೆ.

ಇನ್ನು ರಾಮನ ಮೂರ್ತಿ ಕೆತ್ತನೆ ವೇಳೆ ಯೋಗಿರಾಜ್ ಅವರು ಸಾಕಷ್ಟು ಸವಾಲುಗಳನ್ನು, ಪರಿಸ್ಥಿತಿಗಳನ್ನು ಎದುರಿಸಿದ್ದಾರೆ.

ರಾಮನ ಮೂರ್ತಿಯನ್ನು ಕೆತ್ತುವುದು ಸುಲಭದ ಕೆಲಸವಾಗಿರಲಿಲ್ಲ. ನನ್ನ ಮಗ ವಿಗ್ರಹ ಕೆತ್ತನೆಗೆ 6 ತಿಂಗಳ ವನವಾಸವನ್ನೇ ಮಾಡಿದಂತಿತ್ತು. 6 ತಿಂಗಳ ಕಾಲ ಮನೆಯಿಂದ ಹೊರಗಿದ್ದು ವಿಗ್ರಹ ಕೆತ್ತನೆ ಮಾಡಿದ್ದ. ಇದೀಗ ಆ ವಿಗ್ರಹ ಪೂಜಿಸಲ್ಪಡುತ್ತಿರುವುದು ನಮಗೆ ಹೆಮ್ಮೆ ಹಾಗೂ ಸಂತಸ ತಂದಿದೆ ಎಂದು ಯೋಗಿರಾಜ್ ಅವರ ತಾಯಿ ಹೇಳಿದ್ದಾರೆ.

ವಿಗ್ರಹ ಕೆತ್ತನೆ ವೇಳೆ ಪತಿಯ ಕಣ್ಣಿಗೆ ಗಾಯವಾಗಿತ್ತು. ಕಲ್ಲಿನ ಒಂದು ತುಂಡು ಕಾರ್ನಿಯಾವನ್ನು ಹಾಳು ಮಾಡಿತ್ತು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇಂದು ಈ ಎಲ್ಲಾ ಪ್ರಯತ್ನಕ್ಕೂ ಫಲ ಸಿಕ್ಕಿದೆ. ಪತಿ ಕೆತ್ತಿಗ ವಿಗ್ರಹ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿದೆ ಎಂದು ಯೋಗಿರಾಜ್ ಅವರ ಪತ್ನಿ ವಿಜೇತಾ ಅವರು ಹೇಳಿದ್ದಾರೆ.

ರಾಮಲಲ್ಲಾ ವಿಗ್ರಹ ಪ್ರತಿಷ್ಠಾನೆಗೊಳ್ಳುತ್ತಿರುವುದು ಮೈಸೂರಿನ ಖ್ಯಾತಿ ಹೆಚ್ಚುವಂತೆ ಮಾಡಿದೆ. ಈ ಮೂಲಕ ನಮ್ಮ ವಂಶ ಮತ್ತಷ್ಟು ಬೇರೂರುವಂತೆ ಮಾಡಿದೆ. ಜನರು ವಿಗ್ರಹವನ್ನು ಇಷ್ಟಪಟ್ಟರೆ, ಅದು ನನಗೆ ಸಿಕ್ಕ ದೊಡ್ಡ ಪ್ರತಿಫಲವಾಗಿದೆ ಎಂದು ಯೋಗಿರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com