
ಬೆಂಗಳೂರು: ಹಲವು ವರ್ಷಗಳ ಹಿಂದೆ, ತನ್ನ ತಾಯಿ ಋತುಚಕ್ರದ ವೇಳೆ ಅಧಿಕ ರಕ್ತಸ್ರಾವದಿಂದ ಮತ್ತು ತನ್ನ ತಂದೆ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡುತ್ತಿದ್ದ 10 ವರ್ಷದ ಪುಟ್ಟ ಬಾಲಕ ಮುಂದೊಂದು ದಿನ ತಾನು ಖ್ಯಾತ ಲ್ಯಾಪರೊಸ್ಕೋಪಿಕ್ ಸರ್ಜನ್ ಆಗುತ್ತೇನೆ ಎಂದು ಊಹಿಸಿರಲಿಕ್ಕಿಲ್ಲ. ಅವರು ಜೀವನದಲ್ಲಿ ಅನುಭವಿಸಿದ ಕಷ್ಟಗಳು ಮುಂದೆ ಅದೇ ಕಷ್ಟಗಳನ್ನು ಇತರರು ಸಹಿಸಬಾರದು ಎಂದು ಬಯಸುತ್ತಿತ್ತು.
ಈಗ ವೈದ್ಯಕೀಯ ನಿರ್ದೇಶಕ ಮತ್ತು ಮುಖ್ಯ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕರಾಗಿರುವ ಡಾ ರಮೇಶ್ ಬಿ ಅವರು ತುಮಕೂರು ಜಿಲ್ಲೆಯ ಸಂತೆಮಾವತೂರಿನ ಸಣ್ಣ ಹಳ್ಳಿಯಲ್ಲಿ ರೈತ ಕುಟುಂಬದಿಂದ ಬಂದವರು.
ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿದ ನಾನು ನನ್ನ ಜೀವನವನ್ನು ಹೊಲಗಳಲ್ಲಿ ಕಳೆಯುವುದೆಂದಾಗಿತ್ತು. ಆದರೆ ಚಿಕ್ಕಂದಿನಿಂದಲೂ ಋತುಸ್ರಾವ, ಗರ್ಭಾವಸ್ಥೆ, ಹೆರಿಗೆಯ ನಂತರ ನಮ್ಮೂರಿನ ಮಹಿಳೆಯರು ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡಿ ನನ್ನ ಗ್ರಾಮದ ಜನರಿಗೆ ಸೂಕ್ತ ವೈದ್ಯಕೀಯ ನೆರವಿನ ಅವಶ್ಯಕತೆಯಿದೆ ಎಂದು ಗೊತ್ತಾಗಿತ್ತು. ಶಾಲೆ ಮುಗಿಸಿ ಮನೆಗೆ ಬಂದು ಕೃಷಿ ಮಾಡುವುದರ ಜೊತೆಗೆ, ಮೈಲುಗಟ್ಟಲೆ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ ಕಷ್ಟಪಡುತ್ತಿರುವ ಜನರನ್ನು ನೋಡಿ ವೈದ್ಯನಾಗಬೇಕೆಂದು ಬಯಸುತ್ತಿದ್ದೆ ಎಂದು ಬಾಲ್ಯ ಜೀವನ ಬಗ್ಗೆ ನೆನಪಿಸಿಕೊಂಡರು.
10 ಕಿ.ಮೀ ದೂರದ ಕುಣಿಗಲ್ ಗೆ ಹೋಗಿ ಓದುವಾಗ ನನ್ನ ಮನಸ್ಸಿನಲ್ಲಿದ್ದ ಉದ್ದೇಶ, ಗುರಿ ಸ್ಪಷ್ಟವಾಗಿತ್ತು. ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುವುದು ಮತ್ತು ನನ್ನ ಸಮುದಾಯಕ್ಕೆ ಸಹಾಯ ಮಾಡುವುದಾಗಿತ್ತು ಎನ್ನುತ್ತಾರೆ ಡಾ ರಮೇಶ್.
1988 ರಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದ ನಂತರ ಎಲ್ಲ ಪರಿಸ್ಥಿತಿ ಸರಿಯಾಗುತ್ತದೆ ಎಂದು ಭಾವಿಸುತ್ತಿರುವಾಗ ಒಂದು ಕಿವಿ ಶ್ರವಣಶಕ್ತಿ ಕಳೆದುಕೊಂಡಿತು. ಕುಟುಂಬವು ಎದುರಿಸುತ್ತಿದ್ದ ಆರ್ಥಿಕ ಹೊರೆಯಿಂದ ಶಿಕ್ಷಣಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ ಎಂದು ಭಾವಿಸಿ ಕಿವಿಯ ಶಸ್ತ್ರಚಿಕಿತ್ಸೆ ಆಗ ಮಾಡಿಸಿಕೊಂಡಿರಲಿಲ್ಲ.
1993 ಮತ್ತು 1994 ರ ನಡುವೆ, ಡಾಕ್ಟರ್ ಆಫ್ ಮೆಡಿಸಿನ್ (MD), ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಡಿಪ್ಲೊಮಾ (DGO), ಮತ್ತು ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್ಸ್ (FCPS) ನ ಫೆಲೋಶಿಪ್ ನ್ನು ಪೂರ್ಣಗೊಳಿಸಿದೆ. ಎಂಬಿಬಿಎಸ್ ಮುಗಿಸಿದ ನಂತರ, ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಒಡಹುಟ್ಟಿದವರ ಶಿಕ್ಷಣಕ್ಕೆ ಸಹಾಯ ಮಾಡಲು ಉತ್ತರ ಕೇರಳದ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡೆನು. ಕೆಲಸ ಮಾಡುತ್ತಾ ಎಂಡಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡೆನು ಎನ್ನುತ್ತಾರೆ ರಮೇಶ್.
ಓದು ಜೊತೆಗೆ ಕೆಲಸ ನಿಜಕ್ಕೂ ಕಷ್ಟವಾಗಿತ್ತು. ಮುಂಬೈನ ಸೇಥ್ ಜಿಎಸ್ ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಡಿಗಾಗಿ ಮೆರಿಟ್ ಸೀಟ್ ಪಡೆದುಕೊಂಡಾಗ ನನ್ನ ಕಠಿಣ ಪರಿಶ್ರಮವು ಫಲ ನೀಡಿತು ಎಂದು ಡಾ ರಮೇಶ್ ಆ ಸವಾಲಿನ ವರ್ಷಗಳ ಬಗ್ಗೆ ಹೇಳುತ್ತಾರೆ.
ಎಂಡಿ ಮುಗಿಸಿದ ನಂತರ, ಕೇರಳದ ಗ್ರಾಮಾಂತರ ಪ್ರದೇಶದ ಮಿಷನರಿ ಆಸ್ಪತ್ರೆಗೆ ಸೇರಿಕೊಂಡು ಅಲ್ಲಿ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದೆನು. ಈ ಸಮಯದಲ್ಲಿ, ಕೇರಳದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಭೇಟಿಯಾದ ಸ್ನೇಹಿತನಿಂದ ಕಾರನ್ನು ಬಾಡಿಗೆಗೆ ಪಡೆದು ಲ್ಯಾಪರೊಸ್ಕೋಪಿಕ್ ಉಪಕರಣಗಳನ್ನು ಸಾಗಿಸಲು ಮತ್ತು ಉಚಿತ ಶಸ್ತ್ರಚಿಕಿತ್ಸೆ ಮಾಡಲು ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣಿಸಿದೆನು. ಅಲ್ಲಿ ವೈದ್ಯಕೀಯ ನಿರ್ದೇಶಕರಾಗಿ, ಮುಖ್ಯ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕರಾಗಿ ಸೇವೆ ಮುಂದುವರಿಸಿದೆನು ಎಂದು ಶಿಕ್ಷಣ ಮತ್ತು ವೃತ್ತಿಯ ಆರಂಭ ದಿನಗಳ ಬಗ್ಗೆ ಹೇಳುತ್ತಾರೆ.
ಡಾ ರಮೇಶ್ ಅವರು ತಮ್ಮ ತಂಡದೊಂದಿಗೆ ಕರ್ನಾಟಕದಾದ್ಯಂತ ಸಂಚರಿಸಿದ್ದಾರೆ. ಉಪಕರಣಗಳನ್ನು ಸಾಗಿಸಲು, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ಉತ್ತೇಜಿಸಲು, ಸಾರ್ವಜನಿಕರಿಗೆ ಶಿಕ್ಷಣ ನೀಡಲು ಮತ್ತು ವೈದ್ಯರಿಗೆ ತರಬೇತಿ ನೀಡಲು ಮೊಬೈಲ್ ಘಟಕವನ್ನು ಬಳಸಿದರು. ಹಲವಾರು ಲ್ಯಾಪರೊಸ್ಕೋಪಿಕ್ ಟ್ಯೂಬೆಕ್ಟಮಿ ಶಿಬಿರಗಳನ್ನು ನಡೆಸಿದರು, ಇಂತಹ ಸೇವೆಗಳ ಹೆಚ್ಚುತ್ತಿರುವ ಅಗತ್ಯವನ್ನು ಗುರುತಿಸಿ, 2004 ರಲ್ಲಿ, ಕರ್ನಾಟಕದಲ್ಲಿ ಸಂಪೂರ್ಣ ಸುಸಜ್ಜಿತ ಲ್ಯಾಪರೊಸ್ಕೋಪಿ ಕೇಂದ್ರವನ್ನು ಸ್ಥಾಪಿಸಿದರು, ಸಮಾಜದ ಎಲ್ಲಾ ವರ್ಗಗಳಿಗೆ ಸುಧಾರಿತ ಆರೈಕೆಯನ್ನು ಪ್ರವೇಶಿಸುವಂತೆ ಮಾಡಿದರು.
ಈಗ ಆಲ್ಟಿಯಸ್ ಆಸ್ಪತ್ರೆ ಸರಪಳಿಯ ಸಂಸ್ಥಾಪಕ ಡಾ ರಮೇಶ್, ಇದುವರೆಗೆ ಸರಿಸುಮಾರು ಒಂದು ಲಕ್ಷ ಸ್ತ್ರೀರೋಗಶಾಸ್ತ್ರದ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು ಮತ್ತು 9,000 ಲ್ಯಾಪರೊಸ್ಕೋಪಿಕ್ ಗರ್ಭಕಂಠ ಚಿಕಿತ್ಸೆಗಳನ್ನು ಮಾಡಿದ್ದಾರೆ. 3D ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿದ ಮೊದಲ ಶಸ್ತ್ರಚಿಕಿತ್ಸಕರಾಗಿದ್ದರು. ಈ ಸುಧಾರಿತ ತಂತ್ರದಲ್ಲಿ ಸುಮಾರು 2,000 ಸ್ತ್ರೀರೋಗತಜ್ಞರಿಗೆ ತರಬೇತಿ ನೀಡಿದ್ದಾರೆ.
ಡಾ.ರಮೇಶ್ ಅವರು ತಾವು ಬೆಳೆದ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಜಮೀನು ನೀಡಿ ಕಳೆದ 10 ವರ್ಷಗಳಿಂದ ಅದರ ಅಗತ್ಯತೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಅದೇ ಸ್ಥಳದಲ್ಲಿ ವಾರಕ್ಕೊಮ್ಮೆ ಕಾರ್ಯನಿರ್ವಹಿಸುವ ಕ್ಲಿನಿಕ್ ನ್ನು ಸ್ಥಾಪಿಸಿ ರೋಗಿಗಳಿಗೆ ಉಚಿತ ಔಷಧಿಗಳನ್ನು ನೀಡುತ್ತಿದ್ದರು.
ಡಾ ರಮೇಶ್ ಅವರು ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಉಚಿತ ಸಮಾಲೋಚನೆಗಳು ಮತ್ತು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ತುಮಕೂರಿನ ನಿವಾಸಿ ಸೇತು ರಾಜ್ ಅವರು ಸುಮಾರು ಒಂಬತ್ತು ವರ್ಷಗಳ ಹಿಂದಿನ ತಮ್ಮ ಮಗಳಿಗೆ ಚಿಕಿತ್ಸೆಯನ್ನು ಸ್ನೇಹಿತ ಡಾ.ರಮೇಶ್ ಕೊಡಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ. ಆ ದಿನದಿಂದ ಡಾ.ರಮೇಶ ಭೇಟಿಯಾದಾಗಲೆಲ್ಲ ನನ್ನ ಮಗಳು ಲಕ್ಷ್ಮಿ ಹೇಗಿದ್ದಾಳೆ ಎಂದು ಕೇಳುತ್ತಾರೆ. 100 ಜನರು ಕಾಯುತ್ತಿದ್ದರೂ ಸಹ, ಅವರು ಯಾವಾಗಲೂ ತಮ್ಮ ಹಿಂದಿನ ರೋಗಿಗಳನ್ನು ಪರೀಕ್ಷಿಸಲು ಸಮಯ ತೆಗೆದುಕೊಳ್ಳುತ್ತಾರೆ ಎಂದು ಸೇತು ಹೇಳುತ್ತಾರೆ.
Advertisement