
ನಾಗ್ಪುರ: ಪಾನಿಪುರಿ ಅಥವಾ ಗೋಲ್ಗಪ್ಪ ಯಾರಿಗೆ ಇಷ್ಟವಿಲ್ಲ ಹೇಳಿ.. ಪ್ರಮುಖ ಸ್ಟ್ರೀಟ್ ಫುಡ್ ಗಳ ಪಟ್ಟಿಯಲ್ಲಿ ಅಗ್ರಮಾನ್ಯ ಸ್ಥಾನದಲ್ಲಿ ಬರುವ ಮಸಾಲೆಯುಕ್ತ ಖಾರದ ನೀರು, ಆಲೂಗಡ್ಡೆ ಮತ್ತು ಕಡಲೆಗಳಿಂದ ತುಂಬಿದ ಗರಿಗರಿಯಾದ, ಟೊಳ್ಳಾದ ಪೂರಿಗಳು ಆಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಪಾನಿಪುರಿ ಜೀವನ ಪರ್ಯಂತ ಸಿಕ್ಕರೆ....
ಹೌದು... ಮಹಾರಾಷ್ಟ್ರದ ಪಾನಿಪುರಿ ಮಾರಾಟಗಾರ ಇಂತಹುದೊಂದು ಆಫರ್ ನೀಡುತ್ತಿದ್ದು, ಜೀವನ ಪರ್ಯಂತ ಪಾನಿಪುರಿ ಸವಿಯುವ ದೊಡ್ಡ ಆಫರ್ ನೀಡಿದ್ದಾನೆ. ಮಹಾರಾಷ್ಟ್ರದ ನಾಗ್ಪುರದ ಆರೆಂಜ್ ನಗರದಲ್ಲಿರುವ ಪಾನಿಪುರಿ ಮಾರಾಟಗಾರ ವಿಜಯ್ ಮೇವಾಲಾಲ್ ಗುಪ್ತಾ ತನ್ನ ಗ್ರಾಹಕರಿಗೆ ಹಲವು ವಿಶೇಷ ಆಫರ್ ಗಳನ್ನು ನೀಡಿದ್ದು, ಗ್ರಾಹಕರು 99 ಸಾವಿರ ರೂ ಪಾವತಿಸಿದರೆ ಅವರಿಗೆ ಜೀವನಪರ್ಯಂತ ಅನ್ಲಿಮಿಟೆಡ್ ಪಾನಿಪುರಿ ನೀಡುತ್ತಿದ್ದಾರೆ.
ಇದರ ಜೊತೆ ವಿಜಯ್ ಮೇವಾಲಾಲ್ ಗುಪ್ತಾ ತನ್ನ ಅಂಗಡಿಯಲ್ಲಿ ಯಾವುದೇ ಗ್ರಾಹಕ ಒಂದೇ ಬಾರಿಗೆ 151 ಪಾನಿ ಪೂರಿಗಳನ್ನು ತಿಂದರೆ ಅವರಿಗೆ 21 ಸಾವಿರ ರೂ ಬಹುಮಾನ ಕೂಡ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಇಷ್ಟಕ್ಕೂ ಏನಿದು 99 ಸಾವಿರ ರೂಗಳ ಆಫರ್
ಇನ್ನು ತನ್ನ ಅಂಗಡಿಯ 99 ಸಾವಿರ ರೂಗಳ ಆಫರ್ ಬಗ್ಗೆ ಮಾಹಿತಿ ನೀಡಿರುವ ವಿಜಯ್ ಮೇವಾಲಾಲ್ ಗುಪ್ತಾ, 'ಯಾವುದೇ ಗ್ರಾಹಕ 99 ಸಾವಿರ ರೂ ನೀಡಿ ನೊಂದಾಯಿಸಿಕೊಂಡರೆ ಅಂತಹ ಗ್ರಾಹಕರು ಜೀವನಪರ್ಯಂತ ಅನ್ ಲಿಮಿಟೆಡ್ ಪಾನಿಪುರಿ ತಿನ್ನಬಹುದು.
ಇದಕ್ಕೆ ಯಾವುದೇ ಹೆಚ್ಚುವರಿ ವೆಚ್ಚ ಹೇರುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಜನರು ಪಾನಿ ಪುರಿ ಮೇಲೆ ಮಾಡುವ ವಾರ್ಷಿಕ ಖರ್ಚುಗಳನ್ನು ಗಮನಿಸಿದರೆ, ನನ್ನ ಕೊಡುಗೆ ಸಾಕಷ್ಟು ವೆಚ್ಚ-ಪರಿಣಾಮಕಾರಿ ಎಂದು ವಿಜಯ್ ನಂಬಿದ್ದಾರೆ.
ಅಂತೆಯೇ ತಮ್ಮ ಅಂಗಡಿಯ ಆಫರ್ ಗಳನ್ನು ವಿವರಿಸಿರುವ ವಿಜಯ್, "ನಮ್ಮಲ್ಲಿ ರೂ. 1 ರಿಂದ ರೂ. 99,000 ವರೆಗಿನ ಕೊಡುಗೆಗಳಿವೆ. ಇದು ಒಂದು ದಿನದ ಡೀಲ್‌ಗಳಿಂದ ಹಿಡಿದು ಜೀವಮಾನದ ಯೋಜನೆಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ಇಬ್ಬರು ಜನರು ಈಗಾಗಲೇ ರೂ. 99,000 ಕೊಡುಗೆಯನ್ನು ಪಡೆದುಕೊಂಡಿದ್ದಾರೆ. ಭವಿಷ್ಯದಲ್ಲಿ ನನ್ನ ಗ್ರಾಹಕರನ್ನು ಹಣದುಬ್ಬರದಿಂದ ರಕ್ಷಿಸಲು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.
ಕುಂಭಮೇಳ ಕೊಡುಗೆ
ಇದೇ ವೇಳೆ ಕುಂಭಮೇಳ ಆಫರ್ ಅನ್ನು ಕೂಡ ಬಿಡುಗಡೆ ಮಾಡಿರುವ ವಿಜಯ್, 'ಗೋಲ್ಗಪ್ಪ'ವನ್ನು ಕೇವಲ ರೂ. 1 ಗೆ ಮಾರಾಟ ಮಾಡುವ ವಿಶಿಷ್ಟ ಕೊಡುಗೆಯನ್ನು ಸಹ ಪರಿಚಯಿಸಿದ್ದಾರೆ. "ಒಂದೇ ಬಾರಿಗೆ 40 ಪಾನಿ ಪುರಿಗಳನ್ನು ತಿನ್ನಬಹುದಾದವರಿಗೆ ಈ ರೂ. 1 ಕೊಡುಗೆ" ಎಂದು ಅವರು ಹೇಳಿದರು.
ಮಹಾರಾಷ್ಟ್ರ ಸರ್ಕಾರದ ನೇರ ನಗದು ವರ್ಗಾವಣೆ ಯೋಜನೆಯಾದ ಲಾಡ್ಲಿ ಬೆಹೆನಾ ಯೋಜನೆಯ ಫಲಾನುಭವಿಗಳಿಗೆ ವಿಜಯ್ ಅವರಿಂದ ವಿಶೇಷ ಕೊಡುಗೆಯೂ ಇದ್ದು, ಈ ಒಪ್ಪಂದದಡಿಯಲ್ಲಿ, ಅವರು ಕೇವಲ ರೂ. 60 ಕ್ಕೆ ಒಂದೇ ಬಾರಿಗೆ ಅನಿಯಮಿತ ಪಾನಿ ಪುರಿಗಳನ್ನು ತಿನ್ನಬಹುದು ಎಂದು ಹೇಳಿದ್ದಾರೆ.
ಒಟ್ಟಾರೆ ವಿಜಯ್ ಅವರ ನವೀನ ವ್ಯವಹಾರ ಮಾದರಿಯು ಗ್ರಾಹಕರನ್ನು ಆಕರ್ಷಿಸುವುದಲ್ಲದೆ ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ವ್ಯಾಪಕ ವೈರಲ್ ಆಗುತ್ತಿದೆ.
Advertisement