
ಇಂದು ಶಿಕ್ಷಣವೆಂಬುದು ವಾಣಿಜ್ಯೀಕರಣವಾಗಿದೆ, ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದುಸ್ತರವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಂತಹ ಮೆಟ್ರೊಪಾಲಿಟನ್ ನಗರಗಳಲ್ಲಿ ಎಲ್ ಕೆಜಿ ಪ್ರವೇಶಕ್ಕೆ ಲಕ್ಷಗಟ್ಟಲೆ ಡೊನೇಷನ್ ನೀಡಬೇಕಾದ ಅನಿವಾರ್ಯತೆ.
ಇಂತಹ ಪರಿಸ್ಥಿತಿಯಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್ ನ್ನು ಬೆಂಗಳೂರಿನ ಮಾರತಹಳ್ಳಿಯ ಮುನ್ನೇಕೊಳಲಿನಲ್ಲಿ ಇಸ್ರೊ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಪ್ರಸ್ತುತ ಸಮಾಜಸೇವೆಯಲ್ಲಿ ತೊಡಗಿರುವ ಕೆ ಹರೀಶ್ ಅವರು ಸ್ಥಾಪಿಸಿದರು.
ಬಡ ಮಕ್ಕಳ ಉಚಿತ ಸಿ.ಬಿ.ಎಸ್.ಇ. ಶಿಕ್ಷಣದ ಕೊರಗನ್ನು ನೀಗಿಸಲು ಮತ್ತೊಂದು ವಾಗ್ದೇವಿ ವಿಲಾಸ ಸೂಪರ್ ಸ್ಕೂಲನ್ನು ಇದೀಗ ವರ್ತೂರಿನಲ್ಲಿ ಸ್ಥಾಪಿಸಿದ್ದಾರೆ.
ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್ ವಿಶೇಷತೆಗಳು
ಸೂಪರ್ ಸ್ಕೂಲ್‍ನಲ್ಲಿ ಎಲ್ಲಾ ಬಗೆಯ ಸೌಕರ್ಯಗಳಿವೆ. ವಿಜ್ಞಾನ ಪ್ರಯೋಗಾಲಯಗಳು, ಗಣಿತ ಪ್ರಯೋಗಾಲಯ, ಗಣಕಯಂತ್ರ ವಿಭಾಗ, ಶ್ರವಣ, ದೃಶ್ಯ ವಿಭಾಗಗಳು ಸುಸಜ್ಜಿತವಾಗಿವೆ. ಮಕ್ಕಳು ಚಟುವಟಿಕೆಗಳ ಮೂಲಕ ಕಲಿಯಲು ವ್ಯವಸ್ಥೆ ಇದೆ. ಪ್ರಾಜೆಕ್ಟ್ ಮಾಡಿಸುವುದು, ಪ್ರಾತ್ಯಕ್ಷಿಕೆ, ಸಂವಾದ, ಅಭಿನಯ ಹಾಗೂ ರಸಪ್ರಶ್ನೆಗಳಂತಹ ಚಟುವಟಿಕೆ ಕೊಟ್ಟು ಮಕ್ಕಳು ಸ್ವಯಂ ಕ್ರಿಯಾಶೀಲರಾಗಲು ಪ್ರೆರೇಪಿಸುವ ವ್ಯವಸ್ಥೆ ಈ ಶಾಲೆಯಲ್ಲಿದೆ. ಮಕ್ಕಳನ್ನು ಆಟದಲ್ಲಿ ತೊಡಗಿಸಲು ವಿಶಾಲವಾದ ಮೈದಾನವಿದೆ.
ಸಾಮಾನ್ಯವಾಗಿ ಸಿ.ಬಿ.ಎಸ್.ಇ ಪಠ್ಯಕ್ರಮ ಹೊಂದಿರುವ ಶಾಲೆಯಲ್ಲಿ ಮಗು ಕಲಿಯಬೇಕೆಂದರೆ ಲಕ್ಷಾಂತರ ರೂಪಾಯಿ ಬೇಕು. ಆದರೆ ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್ ಮಾತ್ರ ಇವೆಲ್ಲಾ ಸವಲತ್ತುಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತಿದೆ. ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್‌ನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಈ ಶಾಲೆಯನ್ನು ತೆರೆಯುವ ಉದ್ದೇಶದ ಹಿಂದೆ ಮಾನವೀಯ ದೃಷ್ಟಿಕೋನವಿದೆ. ಬಡವರಲ್ಲೂ ಎಷ್ಟೋ ಮಕ್ಕಳು ಪ್ರತಿಭಾವಂತರಿರುತ್ತಾರೆ. ಆದರೆ ಸರಿಯಾದ ವೇದಿಕೆ ಅವರಿಗಿರುವುದಿಲ್ಲ. ಈ ನಿಟ್ಟಿನಲ್ಲಿ ನಾನು ಬಡ ಪ್ರತಿಭಾನ್ವಿತ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಅಭಿಲಾಷೆಯಿಂದ ಈ ಉಚಿತ ಶಿಕ್ಷಣದ ಯೋಜನೆ ಪ್ರಾರಭಿಸಿದೆ ಎನ್ನುವುದು ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಹರೀಶ್ ಅವರ ಮಾತು.
ಎರಡು ದಶಕಗಳ ಕಾಲ ಶಿಕ್ಷಣ ಕ್ಷೇತ್ರದ ಅನುಭವ ಹೊಂದಿರುವ ಕೆ. ಹರೀಶ್ ಅವರು 9 ಸಿ.ಬಿ.ಎಸ್.ಇ ಶಾಲೆಗಳನ್ನು ಹೊಂದಿದ್ದಾರೆ. ಆದರೆ ಅಲ್ಲಿ ಮಧ್ಯಮ ಮತ್ತು ಆರ್ಥಿಕವಾಗಿ ಸದೃಢವಾಗಿರುವ ವರ್ಗದ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದಾರೆ. ಶ್ರೀಮಂತ ಪೋಷಕರ ಮಕ್ಕಳೇನೋ ಎಲ್ಲಾ ಸೌಲಭ್ಯವಿರುವ ಶಾಲೆಗಳಿಗೆ ಸೇರಿ ಗುಣಮಟ್ಟದ ಶಿಕ್ಷಣ ಗಳಿಸುತ್ತಾರೆ, ಬಡವರ ಮಕ್ಕಳ ಕತೆಯೇನು ಎಂಬ ವಿಚಾರ ಅವರಿಗೆ ಬಂತಂತೆ. ತಮ್ಮ ಶಿಕ್ಷಣ ಮಾದರಿ ಬಡವರನ್ನೂ ತಲುಪಬೇಕು ಎಂಬ ಉದ್ದೇಶದಿಂದ `ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್ಸ್ ಎಜ್ಯುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ್ನು ಆರಂಭಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುತ್ತಿದ್ದಾರೆ.
ಪಠ್ಯ ಕಲಿಕೆ ಜೊತೆಗೆ ಪರಿಸರ ಪಾಠ
ಮಾರತಹಳ್ಳಿರುವ ಶಾಲಾ ಆವರಣ ವಿಶೇಷವಾಗಿದ್ದು, 84 ಪ್ರಬೇಧಗಳ 600 ಕ್ಕೂ ಹೆಚ್ಚು ಮರಗಳು ಬೆಳೆದು ನಿಂತಿವೆ. ಮರಗಳನ್ನು ಅರಸಿ ಬಂದು ನೆಲೆನಿಂತಿರುವ ವೈವಿಧ್ಯಮಯ ಹಕ್ಕಿಗಳ ಕಲರವದಿಂದ ಮಕ್ಕಳಿಗೆ ಪ್ರಕೃತಿಯ ಪಾಠ ಸಿಗುತ್ತಿದೆ. ಮಳೆನೀರು ಕೊಯ್ಲು ಮಾಡುವ ವಿಧಾನ ಹೇಳಿಕೊಡಲಾಗುತ್ತದೆ.
ಅದಕ್ಕೆ ಪೂರಕವಾಗಿ ಶಾಲೆಯಲ್ಲಿ 15 ಕ್ಕೂ ಹೆಚ್ಚು ಇಂಗುಬಾವಿಗಳಿವೆ. ಜೊತೆಗೆ ಸೌರ ವಿದ್ಯುತ್, ಕಾಗದ ಮರು ತಯಾರಿಕೆ, ವಿಜ್ಞಾನವನ ಮುಂತಾದ ಕಲಿಕಾ ಕೇಂದ್ರಗಳು ಮಕ್ಕಳಿಗೆ ಪಠ್ಯೇತರ ಚಟುವಟಿಗಳ ತಾಣಗಳಾಗಿವೆ.
ಸಾಂಪ್ರದಾಯಿಕ ಭಾರತೀಯ ಜ್ಞಾನ ಮತ್ತು ಆಧುನಿಕ ಶಿಕ್ಷಣದ ವಿಶಿಷ್ಟ ಮಿಶ್ರಣವೇ ವಾಗ್ದೇವಿ ವಿಲಾಸ್ ನ್ನು ಬೇರೆ ಶಿಕ್ಷಣ ಸಂಸ್ಥೆಗಳಿಗಿಂತ ಪ್ರತ್ಯೇಕಿಸುತ್ತದೆ. ಇಲ್ಲಿನ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಜೊತೆಗೆ ವೇದಗಳು, ಭಗವದ್ಗೀತೆ ಮತ್ತು ಆಯುರ್ವೇದ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಶಾಲೆಯ ಕ್ಯಾಂಪಸ್ ನಲ್ಲಿ ಸೌಲಭ್ಯಗಳು ಈ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಶಾಲೆಗಳನ್ನು ಕೆ. ಹರೀಶ್ ಅವರು ಸ್ಥಾಪಿಸಿದ್ದಾರೆ. ಮಾರತಹಳ್ಳಿ, ಬಿಡದಿ ಹಾಗೂ ವರ್ತೂರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದ್ದು, ಮಾಂಟೆಸ್ಸರಿ ಮತ್ತು ಕಿಂಡರ್
ಗಾರ್ಡನ್ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಹಲಸಹಳ್ಳಿಯಲ್ಲಿ ವಾಗ್ದೇವಿ ವಿಲಾಸ ಪದವಿಪೂರ್ವ ಮತ್ತು ಪದವಿ ಕಾಲೇಜು ಇದೆ. ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಲು ವಾಗ್ದೇವಿ ವಿಲಾಸ ಸಂಗೀತ ಕಲಾಮಂದಿರ ಆರಂಭಿಸಲಾಗಿದೆ.
Advertisement