
ಮಡಿಕೇರಿ: ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ. ಒಂದೆಡೆ ಖಾಸಗಿ ಶಾಲೆಗಳ ಪೈಪೋಟಿ. ಇನ್ನೊಂದೆಡೆ ಮಕ್ಕಳ ದಾಖಲಾತಿ ಕೊರತೆ. ಮೂಲ ಸೌಕರ್ಯಗಳು ಇಲ್ಲದಿರುವುದರ ಜೊತೆಗೆ ಶಿಕ್ಷಕರ ಸಂಖ್ಯೆ ಗಣನಿಯವಾಗಿ ಕಡಿಮೆ ಇರುವುದು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣವಾದರೆ, ನೇರವಾಗಿ ಸರ್ಕಾರದ ಇಚ್ಛಾಶಕ್ತಿ ಇಲ್ಲದಿರುವುದು. ಕನ್ನಡ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೂವರೆಗೆ ಪ್ರವೃತ್ತರಾಗಲೇ ಇಲ್ಲ. ಇಂತಹದರ ನಡುವೆ ಸೋಮವಾರಪೇಟೆ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ.
ಇಲ್ಲಿನ ಶಾಲಾ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಭಯಾನಕ ಗುಹೆಯೊಂದು ಎದುರಾಗಲಿದ್ದು, ಹೆದರಿಕೆಯಿಂದಲೇ ಒಳಗೆ ಹೋದರೆ, ಬಾವಲಿಗಳ ಮಾದರಿಗಳು, ಜೇಡರ ಬಲೆಗಳು, ಅಸ್ಥಿ ಪಂಜರಗಳು, ಸ್ಮಾರಕಗಳು, ಇತಿಹಾಸದ ಪಳೆಯುಳಿಕೆಗಳು, ಕೃತಕ ಪ್ರಾಣಿಗಳ ಮಾದರಿಗಳು ಕಾಣ ಸಿಗುತ್ತದೆ. ಇದು ಮಕ್ಕಳಿಗೆ ರೋಮಾಂಚನ್ನುಂಟು ಮಾಡುತ್ತವೆ.
ಇನ್ನು ಗುಹೆಯು ಕೊನೆಯಾಗುತ್ತಿದಂತೆ ಆಕಾಶಕ್ಕೇರುವಂತೆ ಮೆಟ್ಟಿಲುಗಳು ಕಂಡು ಬರಲಿದ್ದು, ಒಂದೊಂದೇ ಮೆಟ್ಟಿಲೇರುತ್ತಾ ಹೋದಂತೆ ಮರದ ಮೇಲಿರುವ ತೂಗು ತೊಟ್ಟಿಲ ಪಾಠಶಾಲೆ ಕಾಣಸಿಗುತ್ತದೆ. ಪ್ರಕೃತಿಯ ಮಡಿಲಲ್ಲೇ ಪುಟ್ಟ ಪುಟ್ಟ ಮಕ್ಕಳು ತಮ್ಮ ನೆಚ್ಚಿನ ಶಿಕ್ಷಕರನ್ನು ಸುತ್ತುವರಿದು ಪ್ರಾಣಿ ಪಕ್ಷಿಗಳ ಇಂಚರದೊಂದಿಗೆ ಪಾಠ ಕಲಿಯುತ್ತಿದ್ದಾರೆ. ಇದು ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಯೂ ವಿವಿಧ ಕೀಟಗಳು, ಪಕ್ಷಿಗಳ ಗೂಡುಗಳು, ಹೂವುಗಳು ಕಂಡು ಬರಲಿದ್ದು, ಇದು ತೂಗು ತೊಟ್ಟಿಲ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಬೇಸಿಗೆ ಹಾಗೂ ಮಳೆಗಾಲದ ರಜಾ ದಿನಗಳಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಅವರು, ತಮ್ಮ ಸ್ವಂತ ಖರ್ಚಿನಲ್ಲಿ ಈ ಉಪಕ್ರಮಗಳನ್ನು ಕೈಗೊಂಡಿದ್ದಾರೆ. 70 ಸಾವಿರ ರೂ. ವೆಚ್ಚದಲ್ಲಿ 20 ಅಡಿ ಉದ್ದ, 10 ಅಡಿ ಅಗಲವಾದ ತೂಗು ತೊಟ್ಟಿಲು ನಿರ್ಮಿಸಿದ್ದಾರೆ. ಏಕಕಾಲದಲ್ಲಿ 30 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಇದು ಹೊಂದಿದೆ.
ಇದರ ಜೊತೆಗೆ 20 ಅಡಿ ಉದ್ದ, 3 ಅಡಿ ಅಗಲ ಹಾಗೂ 6 ಅಡಿ ಎತ್ತರದ ಗುಹೆಯನ್ನೂ ನಿರ್ಮಿಸಿದ್ದಾರೆ. ಬೆಳಕು-ನೆರಳು, ಬಾವಲಿಗಳು, ಜೇಡರ ಬಲೆ, ಅಸ್ಥಿಪಂಜರ, ಸ್ಮಾರಕಗಳು, ಇತಿಹಾಸದ ಪಳೆಯುಳಿಕೆಗಳು, ಅಚ್ಚರಿ ಮೂಡಿಸುವ ಶಬ್ದಗಳು, ಕೃತಕ ಪ್ರಾಣಿಗಳ ಮಾದರಿಗಳು ಈ ಗುಹೆ ಒಳಗೆ ಇದ್ದು ಮಕ್ಕಳಿಗೆ ಸಾಹಸದ ರೋಮಾಂಚನ ನೀಡುತ್ತಿದೆ,
ಇದಲ್ಲದೆ, ಶಾಲೆಯಲ್ಲಿ ಜಿಪ್ ಲೈನ್, ರೋಪ್ ವಾಕ್, ಸ್ವಿಮ್ಮಿಂಗ್ ಪೂಲ್, ಮೃಗಾಲಯ ಕೂಡ ಇದ್ದು, ಮದು ಮಕ್ಕಳನ್ನು ಆಕರ್ಷಿಸುತ್ತಿದೆ.
ಈ ಪುಟ್ಟ ಶಾಲೆಯಲ್ಲಿ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲಾಗಿದ್ದು, ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಪ್ರಯೋಗಾಲಯ ಮಕ್ಕಳ ಮನೋಮಟ್ಟಕ್ಕೆ ನಿಲುಕುವ ಗ್ರಂಥಾಲಯ, ಪ್ರತಿ ತರಗತಿ ಕೋಣೆಗಳಲ್ಲಿ ಕಲಿಕೋಪಕರಣಗಳೂ ಕಂಡು ಬರುತ್ತದೆ.
ಸರ್ಕಾರಿ ಶಾಲೆ ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಿರುವುದಕ್ಕೆ ಇಲ್ಲಿನ ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಸಿಎಸ್ ಅವರ ಪರಿಶ್ರಮ ಅಡಗಿದೆ.
ಕಲಿಕೆಯನ್ನು ಆಸಕ್ತಿದಾಯಕವಾಗಿಸುವ ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗಳಿಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಪ್ರತಿ ವರ್ಷ ಶಾಲಾ ಆವರಣದಲ್ಲಿ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸತೀಶ್ ಅವರು ಹೇಳಿದ್ದಾರೆ.
ಈ ವರ್ಷ ಮಕ್ಕಳ ಸಾಹಸ ಮನೋಭಾವ ಉತ್ತೇಜಿಸುವ ಉದ್ದೇಶದಿಂದ ಗುಹೆ ಮತ್ತು ಹೊಂಗೆ ಮರದ ಮೇಲೆ 20 ಅಡಿ ಎತ್ತರದಲ್ಲಿ ತೂಗು ತೊಟ್ಟಿಲು ನಿರ್ಮಿಸಲಾಗಿದ್ದು, ಇದೀಗ ಇದು ವಿದ್ಯಾರ್ಥಿಗಳ ಕುತೂಹಲದ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರ ಈ ಪ್ರಯತ್ನಕ್ಕೆ ಹಲವು ಮೆಚ್ಚುಗೆ ಹಾಗೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
Advertisement