ಬರಡು ಭೂಮಿಯಲ್ಲಿ ಅರಳಿದ ನಂದನವನ: ಕಸದ ಬುಟ್ಟಿಗೆ ಹೋಗಬೇಕಿದ್ದ ಬೀಜಗಳಿಂದ ನಿರ್ಮಾಣವಾಯ್ತು ಸುಂದರ ತೋಟ, ಗದಗ ಶಿಕ್ಷಕಿಯ ಬದುಕು ಎಲ್ಲರಿಗೂ ಸ್ಫೂರ್ತಿ..!

ಗದಗ ಜಿಲ್ಲೆಯ ಹೆಸರೂರು ಗ್ರಾಮ. ತುಂಗಭದ್ರಾ ನದಿಯ ತಟದಲ್ಲಿರುವ ಈ ಪುಟ್ಟ ಹಳ್ಳಿಯಲ್ಲಿ ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತೆ ಕಾಣುವ ಒಂದು ಮನೆ ಇದೆ. ಆದರೆ, ಆ ಮನೆಯ ಒಳಗೆ ಕಾಲಿಟ್ಟರೆ ಅದು ಮತ್ತೊಂದು ಪ್ರಪಂಚ.
The garden has more than 100 trees-- star fruit, water apple, hill amla, cocoa, various varieties of mango, pineapple, wood apple, Malaya apple, and others
ಸುಂದರ ತೋಟ ನಿರ್ಮಾಣ ಮಾಡಿರುವ ಶಿಕ್ಷಕಿ.
Updated on

ಗದಗ ಜಿಲ್ಲೆ ಎಂದರೆ ತಕ್ಷಣ ನೆನಪಿಗೆ ಬರುವುದು ಸುಡು ಬಿಸಿಲು, ಒಣ ಹವಾಮಾನ ಮತ್ತು ಬಿರು ಬೇಸಿಗೆಯ ಒಣ ಭೂಮಿ. ಆದರೆ, ಇದೇ ಗದಗ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ ಪವಾಡ ಸದೃಶ್ಯ ಪರಿಸರ ಕ್ರಾಂತಿಯೊಂದು ನಡೆದಿದೆ.

ಗದಗ ಜಿಲ್ಲೆಯ ಹೆಸರೂರು ಗ್ರಾಮ. ತುಂಗಭದ್ರಾ ನದಿಯ ತಟದಲ್ಲಿರುವ ಈ ಪುಟ್ಟ ಹಳ್ಳಿಯಲ್ಲಿ ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತೆ ಕಾಣುವ ಒಂದು ಮನೆ ಇದೆ. ಆದರೆ, ಆ ಮನೆಯ ಒಳಗೆ ಕಾಲಿಟ್ಟರೆ ಅದು ಮತ್ತೊಂದು ಪ್ರಪಂಚ. ನೂರಕ್ಕೂ ಹೆಚ್ಚು ಬಗೆಯ ಹಣ್ಣಿನ ಮರಗಳು, ಅಪರೂಪದ ಔಷಧೀಯ ಸಸ್ಯಗಳು, ದೇಶಿ ತಳಿಯ ಗೋವುಗಳು, ಸಾವಯವ ಕೃಷಿಯ ಸೊಬಗು… ಪ್ರಕೃತಿಯನ್ನು ಪ್ರೀತಿಸುವ ಯಾರೇ ಆಗಲಿ, ಈ ತೋಟಕ್ಕೆ ಕಾಲಿಟ್ಟ ಕ್ಷಣವೇ ಮಂತ್ರಮುಗ್ಧರಾಗುತ್ತಾರೆ.

ಈ ಹಸಿರು ಲೋಕವನ್ನು ನಿರ್ಮಿಸಿದವರು 63 ವರ್ಷದ ನಿವೃತ್ತ ಸರ್ಕಾರಿ ಶಿಕ್ಷಕಿ ಸುನಂದಾ ಚಿಗರಿ. ತಮ್ಮ ಬಾಲ್ಯದ ಕುತೂಹಲವನ್ನು ಜೀವನದ ಸಾಧನೆಯಾಗಿ ರೂಪಿಸಿಕೊಂಡಿರುವ ಅವರು, ಇಂದು ಗದಗ ಜಿಲ್ಲೆಯ ಹೆಮ್ಮೆಯ ಹಸಿರು ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.

ಅಡುಗೆ ಮನೆಯ ಬೀಜದಿಂದ ಆರಂಭವಾದ ಹಸಿರು ಕನಸು

ಸುನಂದಾ ಅವರಿಗಿರುವ ಕೃಷಿ ಮೇಲಿನ ಆಸಕ್ತಿ ಹೊಸದೇನಲ್ಲ. ಅವರ ತಂದೆ ಧನಂಜಯ ಚಿಗರಿ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೂ, ಕೃಷಿಯ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಿರಲಿಲ್ಲ. 1970ರ ದಶಕದಲ್ಲೇ ವಿವಿಧ ಬೆಳೆಗಳ ಬೀಜಗಳನ್ನು ಸಂಗ್ರಹಿಸಿ ಮನೆಯ ಸುತ್ತಮುತ್ತ ಬೆಳೆಸುತ್ತಿದ್ದರು.

ತಂದೆಯನ್ನೇ ಆದರ್ಶವಾಗಿಸಿಕೊಂಡ ಸುನಂದಾ ಅವರು, ಬಾಲ್ಯದಲ್ಲೇ ಅಡುಗೆ ಮನೆಯಲ್ಲಿದ್ದ ತರಕಾರಿ ಬೀಜಗಳನ್ನು ಎಸೆಯದೇ ಸಂಗ್ರಹಿಸಲು ಆರಂಭಿಸಿದರು. ಅವುಗಳನ್ನು ಮನೆಯ ಆವರಣದಲ್ಲಿ ಬಿತ್ತುತ್ತಿದ್ದರು. ಕೆಲವು ಬೀಜಗಳನ್ನು ಇರುವೆಗಳು ತಿನ್ನುತ್ತಿದ್ದವು, ಕೆಲವು ಮಣ್ಣಿನಲ್ಲೇ ಕೊಳೆತು ಹೋಗುತ್ತಿದ್ದವು. ಆದರೆ, ಕೆಲವು ಮಾತ್ರ ಮೊಳಕೆಯೊಡೆದು ಚಿಗುರೊಡೆಯುತ್ತಿದ್ದವು. ಇದೇ ಅವರ ಬದುಕಿನ ಮೊದಲ ಕೃಷಿಯ ಪಾಠವಾಯಿತು.

Fruit
ತೋಟದ ಮರದಲ್ಲಿ ಬೆಳೆದಿರುವ ಹಣ್ಣುಗಳು

ವಿಫಲತೆಗಳು ಅವರನ್ನು ಎಂದಿಗೂ ಹಿಂಜರಿಯುವಂತೆ ಮಾಡಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದರು. ಇದೇ ನಿರಂತರತೆಯೇ ಇಂದು ಅವರ ತೋಟವನ್ನು ಅಪರೂಪದ ಜೀವವೈವಿಧ್ಯದ ಕೇಂದ್ರವನ್ನಾಗಿ ರೂಪಿಸಿದೆ.

ಪ್ರಯೋಗಗಳ ಮೂಲಕ ಬೆಳೆದ ಹಸಿರು ಸಾಮ್ರಾಜ್ಯ

ಹದಿಹರೆಯದಲ್ಲೇ ಸೇಬು, ಮಾವಿನಂತಹ ಹಣ್ಣುಗಳನ್ನು ಬೆಳೆಸುವ ಪ್ರಯೋಗಕ್ಕೆ ಕೈಹಾಕಿದ ಸುನಂದಾ ಅವರಿಗೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಬಳಿಕ ಬೇವು, ಸಾವಯವ ಗೊಬ್ಬರ ಮತ್ತು ಅಡುಗೆ ಮನೆಯ ತ್ಯಾಜ್ಯವನ್ನು ಮಣ್ಣಿಗೆ ಸೇರಿಸಿ ನೈಸರ್ಗಿಕ ಪೋಷಕಾಂಶ ಒದಗಿಸಿದರು. ಇದರ ಫಲವಾಗಿ ಗಿಡಗಳು ಉತ್ತಮವಾಗಿ ಬೆಳೆಯತೊಡಗಿದವು.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಅವಧಿಯಲ್ಲೂ ಅವರ ಸಂಶೋಧನೆ ನಿಲ್ಲಲಿಲ್ಲ. ಬೀಜ ಸಂಸ್ಕರಣೆ, ಮೊಳಕೆ ಪ್ರಕ್ರಿಯೆ, ಮಣ್ಣಿನ ಗುಣ, ಹವಾಮಾನ, ಸಾವಯವ ಗೊಬ್ಬರ ಬಳಕೆ ಸೇರಿದಂತೆ ಅನೇಕ ವಿಷಯಗಳನ್ನು ಸ್ವತಃ ಅಧ್ಯಯನ ಮಾಡಿದರು. ಪ್ರಯೋಗಗಳ ಮೂಲಕವೇ ಅವರು ತಮ್ಮದೇ ಆದ ಕೃಷಿ ಜ್ಞಾನವನ್ನು ಬೆಳೆಸಿಕೊಂಡರು.

The garden has more than 100 trees-- star fruit, water apple, hill amla, cocoa, various varieties of mango, pineapple, wood apple, Malaya apple, and others
ಕಲೆಗೆ ಧರ್ಮದ ಬೇಲಿ ಇಲ್ಲ: ಎಂಎ ಮೋಹಿನಿಯಾಟ್ಟಂನಲ್ಲಿ first rank ಪಡೆದ Muslim ಯುವತಿ, ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಜಮ್ಷೀನಾ ಜಮಾಲ್ ಯಶೋಗಾಥೆ..!

ಒಂದೇ ತೋಟದಲ್ಲಿ ನೂರಕ್ಕೂ ಹೆಚ್ಚು ಹಣ್ಣಿನ ಮರಗಳು...

ಇಂದು ಸುನಂದಾ ಅವರ ತೋಟದಲ್ಲಿ ನೂರಕ್ಕೂ ಹೆಚ್ಚು ಬಗೆಯ ಹಣ್ಣಿನ ಮರಗಳಿವೆ. ಅವುಗಳಲ್ಲಿ ಪ್ರಮುಖವಾಗಿ, ನಕ್ಷತ್ರ ಹಣ್ಣು (ಸ್ಟಾರ್ ಫ್ರೂಟ್), ನೀರಿನ ಸೇಬು, ಬೆಟ್ಟದ ನೆಲ್ಲಿಕಾಯಿ, ಕೋಕೋ, ಅನಾನಸ್, ಮರದ ಸೇಬು (ವುಡ್ ಆಪಲ್), ಲಯ ಸೇಬು, ವಿವಿಧ ತಳಿಯ ಮಾವಿನ ಮರಗಳು, ಹಾಗೂ ಹಲವಾರು ಔಷಧೀಯ ಸಸ್ಯಗಳು ಬೆಳೆದಿವೆ.

ಈ ಎಲ್ಲವೂ ಯಾವುದೇ ರಾಸಾಯನಿಕ ಗೊಬ್ಬರಗಳ ಅವಲಂಬನೆ ಇಲ್ಲದೆ, ಹೆಚ್ಚಾಗಿ ಸಾವಯವ ಪದ್ಧತಿಯಲ್ಲಿ ಬೆಳೆದಿರುವುದು ವಿಶೇಷ.

ಮಾರಾಟವಲ್ಲ... ಹಂಚುವುದರಲ್ಲೇ ಸಂತೋಷ

ತೋಟದ ಹಣ್ಣುಗಳಿಗೆ ಸಾಕಷ್ಟು ಬೇಡಿಕೆ ಇದೆ. ಹಲವರು ಖರೀದಿಸಲು ಮುಂದಾಗುತ್ತಾರೆ. ಆದರೆ. ಸುನಂದಾ ಅವರ ಉತ್ತರ ಒಂದೇ. "ನನ್ನ ತೋಟದ ಹಣ್ಣುಗಳು ಮಾರಾಟಕ್ಕಲ್ಲ. ಸಂಬಂಧಿಕರು, ಸ್ನೇಹಿತರು, ಮನೆಗೆ ಬರುವ ಅತಿಥಿಗಳು ಮತ್ತು ಮಕ್ಕಳಿಗೆ ಹಂಚುವುದು ನನಗೆ ಹೆಚ್ಚು ಸಂತೋಷ ನೀಡುತ್ತದೆ. ಎಲ್ಲ ಬಗೆಯ ಹಣ್ಣುಗಳನ್ನು ಜನ ಸವಿಯಬೇಕು ಎಂಬುದು ನನ್ನ ಆಸೆ ಎಂದು ಸುನಂದಾ ಅವರು ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ಪ್ರಯೋಗಾಲಯ

ಇತ್ತೀಚೆಗೆ ಹೆಸರೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸುನಂದಾ ಅವರ ತೋಟಕ್ಕೆ ಭೇಟಿ ನೀಡಿದ್ದರು. ಗಂಟೆಗಟ್ಟಲೆ ತೋಟದಲ್ಲಿ ಸುತ್ತಾಡಿದ ಮಕ್ಕಳು, ಪ್ರತಿಯೊಂದು ಮರ, ಅದರ ವೈಶಿಷ್ಟ್ಯ ಹಾಗೂ ಔಷಧೀಯ ಗುಣಗಳ ಬಗ್ಗೆ ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದರು. ಅವರಿಗೆ ತೋಟದ ಪ್ರತಿಯೊಂದು ಗಿಡದ ಕಥೆಯನ್ನೂ ಸುನಂದಾ ತಾಳ್ಮೆಯಿಂದ ವಿವರಿಸಿದರು.

ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಈ ತೋಟವನ್ನು "ಜೀವವೈವಿಧ್ಯದ ನೈಸರ್ಗಿಕ ಪ್ರಯೋಗಾಲಯ" ಎಂದು ಕರೆದಿದ್ದಾರೆ.

"ಪಠ್ಯಪುಸ್ತಕದಲ್ಲಿ ಓದುವುದಕ್ಕಿಂತ ಮಕ್ಕಳು ನೇರವಾಗಿ ಪ್ರಕೃತಿಯ ನಡುವೆ ಕಲಿತರೆ ಅದರ ಪರಿಣಾಮ ಹೆಚ್ಚು. ಇಲ್ಲಿ ಅವರಿಗೆ ಹಣ್ಣುಗಳು, ಔಷಧೀಯ ಸಸ್ಯಗಳು, ಪಶುಸಂಗೋಪನೆ, ಸಾವಯವ ಕೃಷಿ ಎಲ್ಲವೂ ಒಂದೇ ಸ್ಥಳದಲ್ಲಿ ಕಾಣಲು ಸಿಕ್ಕಿತು.

ದೇಶಿ ಗೋವುಗಳು, ವಿಶೇಷ ಚಹಾ ಮತ್ತು ಪ್ರಕೃತಿ ಬದುಕು

ಸುನಂದಾ ಅವರ ಮನೆಯಲ್ಲಿ ಕೇವಲ ಹಣ್ಣಿನ ಮರಗಳಷ್ಟೇ ಅಲ್ಲ, ಹಳ್ಳಿಕಾರ್ ಮತ್ತು ಗಿರ್ ತಳಿಯ ದೇಶಿ ಗೋವುಗಳನ್ನೂ ಸಾಕಲಾಗಿದೆ. ಜೊತೆಗೆ ಅಸ್ಸಾಂನ ವಿಶೇಷ ಎಲೆಗಳಿಂದ ತಯಾರಿಸುವ ಚಹಾವನ್ನೂ ಅತಿಥಿಗಳಿಗೆ ನೀಡುತ್ತಾರೆ.

ವಿದ್ಯಾರ್ಥಿಗಳ ಮನಸೆಳೆದ ಹಸಿರು ತೋಟ

ತೋಟಕ್ಕೆ ಭೇಟಿ ನೀಡಿದ ವಿದ್ಯಾರ್ಥಿನಿಯರಾದ ಹುಳಿಗೆಮ್ಮ ಜುಟ್ಲನ್ನವರ ಮತ್ತು ಶ್ರೇಯಾ ನರಸನಾಯಕರ ಅಭಿಪ್ರಾಯವೂ ವಿಶೇಷ.

ಹೊರಗಿನಿಂದ ನೋಡಿದರೆ ಇದು ಸಾಮಾನ್ಯ ಮನೆಯಂತೆ ಕಾಣುತ್ತದೆ. ಆದರೆ ಒಳಗೆ ಬಂದಾಗ ನೂರಾರು ಹಣ್ಣಿನ ಮರಗಳು, ಔಷಧೀಯ ಸಸ್ಯಗಳು ಕಂಡು ಅಚ್ಚರಿಯಾಯಿತು. ಪ್ರತಿಯೊಂದು ಗಿಡದ ಬಗ್ಗೆ ಸುನಂದಾ ಶಿಕ್ಷಕಿ ವಿವರಿಸಿದ ರೀತಿ ನಮಗೆ ಹೊಸ ಅನುಭವ ನೀಡಿತು ಎಂದು ಸಂತಸ ಹಂಚಿಕೊಂಡಿದ್ದಾರೆ.

ಇಂದಿನ ಕಾಲದಲ್ಲಿ ಕಾಂಕ್ರೀಟ್ ಕಾಡುಗಳ ನಡುವೆ ಹಸಿರು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸುನಂದಾ ಚಿಗರಿ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ದೊಡ್ಡ ಜಮೀನು, ಅಪಾರ ಹಣ ಅಥವಾ ಆಧುನಿಕ ತಂತ್ರಜ್ಞಾನವಿಲ್ಲದಿದ್ದರೂ, ಆಸಕ್ತಿ, ತಾಳ್ಮೆ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯಿಂದ ಒಂದು ಮನೆ ಆವರಣವನ್ನೇ ಜೀವವೈವಿಧ್ಯದ ಸ್ವರ್ಗವನ್ನಾಗಿ ರೂಪಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಅವರ ತೋಟ ಕೇವಲ ಹಣ್ಣುಗಳ ತೋಟವಲ್ಲ; ಅದು ಪ್ರಕೃತಿಯನ್ನು ಪ್ರೀತಿಸುವ ಮನಸ್ಸಿನ ಫಲ, ಜೀವವೈವಿಧ್ಯದ ಜೀವಂತ ಪಾಠಶಾಲೆ ಮತ್ತು ಮುಂದಿನ ಪೀಳಿಗೆಗೆ ಹಸಿರು ಸಂಸ್ಕೃತಿಯನ್ನು ಪರಿಚಯಿಸುವ ಮುಕ್ತ ವಿಶ್ವವಿದ್ಯಾಲಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com